Sunday, September 28, 2014

ಹೀಗೊಂದು ನೆನಪು

                   ಕೆಲವು ವರ್ಷಗಳ ಹಿಂದೆ ETV ಅವರು 'ಸಿರಿಗಂಧ' ಎಂಬ ರಸಪ್ರಶ್ನೆ ಕಾರ್ಯಕ್ರಮ ಬಿತ್ತರಿಸುತ್ತಿದ್ದರು . ಸಂಜೀವ್ ಕುಲಕರ್ಣಿ ಅದರ ನಿರೂಪಕರು .  ನಮ್ಮ ಸಂಸ್ಥೆಯಿಂದ ೩ ತಂಡಗಳು ಭಾಗವಹಿಸಿದ್ದೆವು .  ೧೦ ಗಂಟೆಗೆ ಹಾಜರಾಗಬೇಕಿತ್ತು . ಹಾಗಾಗಿ , ಅಂದು ಆಫೀಸಿಗೆ ರಜೆ ಹಾಕಿದ್ದೆ . ಮನೆಯವರು ಕಾರ್ಯನಿಮಿತ್ತ ಚೆನ್ನೈಗೆ ಹೋಗಿದ್ದರು . ಮನೆಯಲ್ಲಿ ನನ್ನ ಅತ್ತೆಯವರಿದ್ದರು . ಬೆಳಿಗ್ಗೆ ಎದ್ದ ಕೂಡಲೇ ಮೊದಲು ಕಂಡಿದ್ದು ಅವರೇ .  "ಅಯ್ಯೋ ಬೆಳಿಗ್ಗೆದ್ದು ನನ್ನ ಮುಖ ಯಾಕೆ ನೋಡಿದೆ ? ಅದೇನೋ  ಸ್ಪರ್ಧೆಗೆ ಬೇರೆ ಹೋಗಬೇಕು ಅಂತಿದ್ದೆ . ಹೋಗಿ ಮೊದಲು ದೇವರ ಪಟ ನೋಡು " ಅಂದರು ( ನಮ್ಮ ಮಾವನವರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದರು ) .  ನಾನು "ಅಮ್ಮೋ ಜೀವನದಲ್ಲಿ ಏನೇನೆಲ್ಲ ಅನುಭವಿಸಿದವರು ನೀವು . ಮುತ್ತಿನಂಥ ಮಗನನ್ನು ನನಗಾಗಿ ಹೆತ್ತವರು ನೀವು . ಹೀಗೆಲ್ಲ ಮಾತಾಡಬೇಡಿ . ನಿಮ್ಮನ್ನೇ ಮೊದಲು ನೋಡಿದ್ದೀನಲ್ಲ , ಇವತ್ತು ಖಂಡಿತಾ ನನಗೆ ಬಹುಮಾನ ಸಿಗುತ್ತೆ ನೋಡ್ತಿರಿ " ಅಂದೆ .  ಅವರು ನಕ್ಕು ಸುಮ್ಮನಾದರು .

                  Studio ತಲುಪಿದಾಗ ಇನ್ನೂ ಸಮಯವಿತ್ತು . ನನ್ನ ಸಹೋದ್ಯೋಗಿ ಹಾಗೂ ಈ ಸ್ಪರ್ಧೆಗೆ ನನ್ನ ಜೊತೆಗಾತಿಯಾಗಿ  ಬಂದಿದ್ದವಳು ಕನ್ನಡದಲ್ಲಿ ಎಂ . ಎ ಮಾಡಿದ್ದ ಕಾರಣ ಇತರ ಎರಡು ತಂಡಗಳಲ್ಲಿ ಬಂದಿದ್ದ ಹುಡುಗರಿಗೆ ಅವಳನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಆಸೆಯಿತ್ತು . ನನ್ನಲ್ಲಿ ಕೇಳುತ್ತಿದ್ದರು "ಅವರನ್ನು ನಮ್ಮ ತಂಡಕ್ಕೆ ಕಳಿಸಿ" ಎಂದು . "ಧಾರಾಳವಾಗಿ ಕರೆದುಕೊಳ್ಳಿ  . ನನಗೆ ಯಾರೇ ಜೊತೆಯಾಗಿ ಬಂದರೂ ಸಂತೋಷ"  ಅಂದೆ .  ಇದ್ದದ್ದು ಕರ್ನಾಟಕದ ಕುರಿತು ರಸಪ್ರಶ್ನೆ ಕಾರ್ಯಕ್ರಮ .  ಅದಕ್ಕೆ ೨ ವಾರ ಮೊದಲು BHELನವರು ನಡೆಸುವ ರಾಜ್ಯ ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆಗೆ ಹೋಗಿ , ೫ ಅಂಕಗಳಿಂದ ಮೂರನೇ ಸ್ಥಾನ ಕಳೆದುಕೊಂಡಿದ್ದೆನಾದರೂ,  ತಯಾರಿ ಚೆನ್ನಾಗೇ ಮಾಡಿದ್ದೆ . ಹಾಗಾಗಿ ಈ ಕಾರ್ಯಕ್ರಮವೂ ಚೆನ್ನಾಗಿಯೇ ಆಗುತ್ತದೆಂಬ ನಂಬಿಕೆ ಇತ್ತು .  ಜೊತೆಗಾರರು ಯಾರೇ ಬಂದರೂ , ತೊಂದರೆಯಿಲ್ಲವೆಂದು  ಸುಮ್ಮನಿದ್ದೆ . ಆದರೆ ನನ್ನ ಸ್ನೇಹಿತೆ ತಾನೇ ಅವರಿಗೆಲ್ಲ "ಇಲ್ಲ . ನಾವಿಬ್ಬರೇ ತಂಡವಾಗಿ ಭಾಗವಹಿಸುತ್ತೇವೆ " ಎಂದಳು .  ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ ಅದು . 

                ಅದುವರೆಗೂ ದೂರದರ್ಶನದಲ್ಲಿ ಬಣ್ಣಬಣ್ಣದ ಸೆಟ್ ನೋಡಿ ಬೆರಗಾಗುತ್ತಿದ್ದ ನಾನು , ವಾಸ್ತವದಲ್ಲಿ ಸೆಟ್ ಹೇಗಿರುತ್ತದೆ ಎಂದು ನೋಡಿ , 'ಎಂಥಾ ಭ್ರಮೆ ' ಎಂದುಕೊಂಡಿದ್ದೆ .  ಸಂಜೀವ್ ಕುಲಕರ್ಣಿ ಅವರು "ಓಹೋ ಮಹಿಳಾ ತಂಡ ಬಲು ಗಟ್ಟಿ" ಎಂದು ತಮಾಷೆ ಮಾಡುತ್ತಿದ್ದರು .  ರಸಪ್ರಶ್ನೆ ಕಾರ್ಯಕ್ರಮ ಸೊಗಸಾಗಿದ್ದರೂ, ಆ hotseatನಲ್ಲಿ ಕೂರುವ ಅನುಭವ ಮಾತ್ರ ಮರೆಯಲಾಗದು .  ನಮ್ಮ ತಂಡವೇ ಮುಂದಿದ್ದರೂ ಸಹ , ನನಗೆ ಅತಿ ಹೆಚ್ಚು ಅಂಕ ಗಳಿಸಬೇಕು ಎಂಬ ಆಸೆ . ಪಕ್ಕದಲ್ಲಿ ಇದ್ದ ಹುಡುಗರ ತಂಡ " ನಮಗೂ ಒಂದೆರಡು ಉತ್ತರ ಹೇಳಿಕೊಡಿ " ಎನ್ನುತ್ತಿದ್ದರು.  ಕಡೆಯ ಸುತ್ತಿನಲ್ಲಿ ಪದಬಂಧ ಇತ್ತು .  ಸುಳಿವುಗಳನ್ನು ಸಂಜೀವ್ ಅವರು ನೀಡುತ್ತಿದ್ದರು . ನಮ್ಮ ತಂಡಕ್ಕೆ ಪ್ರಶ್ನೆ ಬಂದಿದ್ದು "ಶಿವರಾಮ ಕಾರಂತರ ಕಾದಂಬರಿಗಳಲ್ಲೊಂದು " ಎಂಬುದು .  ನನಗೆ ಗಾಬರಿಯಲ್ಲಿ ಉತ್ತರವೇ ಹೊಳೆಯುತ್ತಿಲ್ಲ :) . ಇನ್ನೇನು ಸಮಯ ಮುಗಿಯುತ್ತ ಬಂತು ಎನ್ನುವಾಗ ಹೊಳೆಯಿತು "ಮೈಮನಗಳ ಸುಳಿಯಲ್ಲಿ " ಎಂದು .  ಸಂಜೀವ್ ಕುಲಕರ್ಣಿ ಅವರು ಬಹಳ ಸಂತೋಷ ಪಟ್ಟರು . "ನಿಜಕ್ಕೂ ಕಷ್ಟದ ಪ್ರಶ್ನೆಯಾಗಿತ್ತು . ನಿಮಗೆ ಉತ್ತರ ಹೊಳೆದದ್ದು ನನಗೆ ಖುಷಿಯಾಯಿತು" ಎಂದರು .  ನನಗೂ ಸಖತ್ ಖುಷಿ . ಬಹುಮಾನ ಗಳಿಸಿದ್ದಕ್ಕಲ್ಲ . ಆ ಪ್ರಶ್ನೆಗೆ ಉತ್ತರಿಸಿದ್ದಕ್ಕೆ . ಕಾರಣ ಇಷ್ಟೇ .  ವಯಸ್ಸಾದ ನನ್ನ ಅತ್ತೆಯವರಿಗೆ ಪುಸ್ತಕದ ಹುಚ್ಚು . ಈ ಪುಸ್ತಕ ಓದಬೇಕು ಎಂದಿದ್ದರು ಅವರು . ನನಗೆ ಉತ್ತರ ಹೊಳೆಯಲು ಕಾರಣ ಸಹ ಇದೇ ಆಗಿತ್ತು . ಮೊದಲ ಬಹುಮಾನ ಗಳಿಸಿದ್ದಕ್ಕೆ ನನಗಿಂತಲೂ ಹೆಚ್ಚು ಖುಷಿ ಪಟ್ಟವರು ನನ್ನತ್ತೆ .  ಆಗ ಹೇಳಿದೆ " ಬೆಳಿಗ್ಗೆ ಎದ್ದಾಗ ನಿಮ್ಮನ್ನು ನೋಡಿದ್ದಕ್ಕೆ ಮೊದಲ ಬಹುಮಾನ ಬಂತು ನೋಡಿ " .

               ಮತ್ತೆಂದೂ ನನ್ನತ್ತೆ ಆ ಮಾತು ಹೇಳಲಿಲ್ಲ . ಬೇರೆಲ್ಲ ವಿಚಾರಗಳಲ್ಲಿ ಪ್ರಗತಿಪರ ಮನೋಭಾವ ಹೊಂದಿದ್ದ ಅವರು , ಅದ್ಯಾಕೋ ಈ ವಿಷಯದಲ್ಲಿ ಮಾತ್ರ ಬಹಳ ಹಿಂಜರಿದಿದ್ದರು ಅಷ್ಟು ಕಾಲ .  ETV  ರಸಪ್ರಶ್ನೆ ಕಾರ್ಯಕ್ರಮದ ದೆಸೆಯಿಂದ ಇದೊಂದು ಮೂಢ ನಂಬಿಕೆಗೆ ಮುಕ್ತಿ ದೊರಕಿತ್ತು ಅವರ ಮನಸಲ್ಲಿ .

- ತಾರಾ ಶೈಲೇಂದ್ರ
 

Tuesday, September 9, 2014

ಮಸ್ಸೊಪ್ಪಿನ ಪುರಾಣ


                                            ಮಸ್ಸೊಪ್ಪಿನ  ಪುರಾಣ 
                                            

           ನನಗಾಗ ೧೩ ವರ್ಷ . ಮನೆಯ ಬೇರೆ ಕೆಲಸಗಳನ್ನು ಕಲಿತಿದ್ದರೂ , ಅಡಿಗೆ ಮಾಡುವುದನ್ನು ಕಲಿತಿರಲಿಲ್ಲ . ಅಜ್ಜಿ ಮನೆಯಲ್ಲಿ ರಜೆಯ ಮಜಾ ಅನುಭವಿಸಲು ಹೋಗಿದ್ದೆ. ನನ್ನ ಅಜ್ಜಿ ಬಹಳ ಮುದ್ದು ಮಾಡುತ್ತಿದ್ದರೂ  ಸಹ,ಕೆಲಸದ ವಿಷಯದಲ್ಲಿ ಭಾರಿ ಬಿಗಿ.  ಸ್ವಲ್ಪ ದಿನ ಅವರು ತಿಂಡಿ , ಅಡಿಗೆ ಮಾಡುವಾಗ ಪಕ್ಕದಲ್ಲಿದ್ದು ನೋಡುತ್ತಿದ್ದೆ.  ನಂತರ ಶುರುವಾಯ್ತು ಅಜ್ಜಿಯ ವರಾತ . ಹೆಣ್ಣು ಮಕ್ಕಳು ಅಡಿಗೆ ಕಲಿಯಬೇಕು ಎಂದು .  ನಾನೂ ಸಹ ಹೂಂಗುಡುತ್ತಿದ್ದರೂ , ಯಾವತ್ತು ಪ್ರಯತ್ನ ಮಾಡಿರಲಿಲ್ಲ . ಒಂದು ದಿನ ಅಜ್ಜಿ ಇದ್ದಕ್ಕಿದ್ದಂತೆ ' ಮಗಾ ಇವತ್ತು ಅಡಿಗೆ ನೀನೆ ಮಾಡು' ಎನ್ನಬೇಕೆ ?
ಅಜ್ಜಿ ಮನೆಯಲ್ಲಿ ಸೌದೆ ಒಲೆಯಲ್ಲಿ ಅಡಿಗೆ ಮಾಡುತ್ತಿದ್ದುದು . ಹೊಸದಾಗಿ ಒಂದು pump stove ಕೊಂಡು ತಂದಿದ್ದರೂ ಸಹ, ಅದು ಸಿಡಿಯಬಹುದೆಂಬ ಭಯದಲ್ಲಿ ನನ್ನನ್ನು ಅದರ ಹತ್ತಿರ ಸುಳಿಯಗೊಡುತ್ತಿರಲಿಲ್ಲ .  'ಅವ್ವಾ ಮಸ್ಸೊಪ್ಪು ಮಾಡೋದು ಹೇಗೆ ಹೇಳಿಕೊಡಿ'  ಅಂದಿದ್ದಕ್ಕೆ ಅವರು 'ಅಮ್ಮ ಹೇಗೆ ಮಾಡ್ತಾಳೋ ಹಂಗೇಯಾ ' ಅಂದುಬಿಟ್ಟರು . ಸರಿ ,
ಸೊಪ್ಪು ಬಿಡಿಸಿ, ತೊಳೆದು , ಬೇಳೆಯೊಟ್ಟಿಗೆ ಹಾಕಿ ಬೇಯಿಸಿದೆ . ಅದನ್ನು ಬಸಿಯಲು ಹೋಗಿ, ಕೈ ಮೇಲೆ ಸ್ವಲ್ಪ ಚೆಲ್ಲಿಕೊಂಡು ಅಡಿಗೆಯ ಮೊದಲ ಬಿಸಿಯ ಅನುಭವವಾಯ್ತು . ಆಮೇಲೆ ಒರಳುಕಲ್ಲಿನಲ್ಲಿ ತೆಂಗಿನಕಾಯಿ, ಪುಡಿ, ಈರುಳ್ಳಿ , ಹಸಿಮೆಣಸಿನಕಾಯಿ ರುಬ್ಬಿಕೊಂಡೆ.  ರುಬ್ಬಿದ್ದನ್ನು ಒಗ್ಗರಣೆಗೆ ಹಾಕಿ, ಉಪ್ಪು, ಹುಳಿ ಬೆರೆಸಿ, ಕುದಿಸಿದೆ . ಅಜ್ಜಿ ಬಂದು , ನೋಡಿ ಹೋದರೇ ಹೊರತು , ಎನೂ ಹೇಳಲಿಲ್ಲ . ಊಟಕ್ಕೆ ಕುಳಿತಾಗ , ಬಿಸಿ ಅನ್ನದ ಮೇಲೆ ಘಮಘಮಿಸುವ ತುಪ್ಪ ಹಾಕಿಕೊಂಡು, ಮಸ್ಸೊಪ್ಪು  ಹಾಕಿ ಕಲಸಿ ಬಾಯಿಗಿಟ್ಟರೆ, ಆಹಾ ಎಂಥ ಮಜಾ ಅಂತೀರಿ .  ಖಾರ ನೆತ್ತಿಗೇರಿ ಕುಣಿದಾಡುವಂತೆ ಆಗಿತ್ತು . ಆಮೇಲೆ ಅಜ್ಜಿಯ enquiry ಶುರು 'ಹೆಂಗೆ ಮಾಡಿದೆ ಹೇಳು ' ಎಂದು . ನಾನೂ ಎಲ್ಲವನ್ನು ಹೇಳಿದೆ - ಮುಂಗೈಯ ಮೇಲೆ ಕಟ್ಟು ಸುರಿಸಿಕೊಂಡದ್ದನ್ನು ಬಿಟ್ಟು . ಅಮೇಲೆ ತಿಳೀತು ನಾನು ಮಾಡಿದ್ದ ಅವಾಂತರ . ಸೊಪ್ಪು , ಬೇಳೆ ಬೇಯಿಸಿ, ಬಸಿದ ಕಟ್ಟನ್ನು  ಹೊರಗೆ ಚೆಲ್ಲಿದ್ದೆ ಹಹಹಹ .

     ಅಜ್ಜಿ ಮತ್ತೆ ಮುಂಗೈಗೆ ತುಪ್ಪ ಸವರಿ , ಸಮಾಧಾನ ಮಾಡಿ , ಹೆಣ್ಣು ಮಕ್ಕಳು ಅಡಿಗೆ ಕಲಿತಿರಬೇಕು ಎಂದು ಬುದ್ಧಿ ಹೇಳಿದರು . ಹಾಗಾಗಿ , ೧೩ ವರ್ಷಕ್ಕೆ ಅಡಿಗೆ ಮಾಡಲು ಶುರು ಮಾಡಿದೆ .  ಇವತ್ತಿಗೂ ನನ್ನ ಮೊದಲ ಅಡಿಗೆಯ ಅನುಭವ ಮರೆಯಲಾಗಿಲ್ಲ .

Saturday, September 6, 2014

ವಿದಾಯ (poem)


ಸಂತಸದ ದಿನಗಳವು  ಕಾಡಿಹುದು ನೆನಪು
 ತಣಿಯದು  ಎಂದೆಂದೂ ಸ್ನೇಹದ ಬಿಸುಪು
ದೂರಪಯಣಕೆ ಹೊರಟವನ ಕಳುಹಬಂದವಳು ನಾನು
ಸುರಿಸಿದೆ  ಮಾತಿನಲಿ ಸವಿಜೇನ ನೀನು.
ಬಾಳ  ಬಂಡಿಯಲಿ ಪಯಣಿಗರು ನಾವು
ಬದಲಾಗಬಹುದಷ್ಟೆ ನಾವಿಳಿಯುವ ತಾವು
ತಿಳಿದಿದೆ  ನೋವಿನ ಹಾದಿಯದು ದುರ್ಗಮ
ಆತ್ಮಬಲ ಒಂದಿದ್ದರೆ ಎಲ್ಲವೂ ಸುಗಮ .
ಗೊಂಬೆಗಳು ನಾವು , ಸೂತ್ರಧಾರಿ ಅವನು
ತನ್ನ  ಮನಬಂದಂತೆ ನಮ್ಮ ಆಡಿಸುವವನು
ಇಬ್ಬರೂ  ಬಲ್ಲೆವು ಆಂತರ್ಯದ ನೋವ
ಆದರೂ ಮೊಗದಲಿ ನಸುನಗೆಯ ಭಾವ.
ತುಂಬಿದೆ ಎದೆಯಲಿ ಸೂತಕದ ಛಾಯೆ
ಫಲಿಸಲಿಲ್ಲ ಯತ್ನ , ವಿಧಿಯದೀ ಮಾಯೆ
ಉಸಿರ  ತೊರೆಯಲು  ಅನುವಾಯ್ತು ಕಾಯ
ನಿನಗಿದೋ ಗೆಳೆಯ ಅಂತಿಮ ವಿದಾಯ.

- ತಾರಾ ಶೈಲೇಂದ್ರ

Wednesday, September 3, 2014

ಕುಮಟಾದಲ್ಲಿ ೧೨ ಗಂಟೆಗಳು

                                                             

ಹೆಚ್ಚೂ ಕಡಿಮೆ  ೨ ತಿಂಗಳುಗಳಿಂದ  ಪ್ರತಿ ಬಾರಿ ಫೋನ್ ಮಾಡಿದಾಗ , ಪ್ರಿಯಾ ನೆನಪು ಮಾಡುತ್ತಿದ್ದ ವಿಷಯ ಸ್ವಸ್ತಿ ಬಳಗದ ಸಮ್ಮಿಲನ ಹಾಗೂ 'ಮಳೆ ಮಾರುವ ಹುಡುಗ' ಪುಸ್ತಕದ ಲೋಕಾರ್ಪಣೆ . ಖಂಡಿತ ಸಮಯ ಮಾಡಿಕೊಂಡು ಬರಬೇಕು ಎನ್ನುವ ಅವರ ಪ್ರೀತಿಯ ಒತ್ತಾಯಕ್ಕೆ 'ನೋಡುವ, ಮೊದಲು ದಿನಾಂಕ ನಿಗದಿಪಡಿಸಿ ತಿಳಿಸಿ' ಎನ್ನುತ್ತಿದ್ದೆನಾದರೂ ನಾನು ಹೋಗಲಾಗುವುದು ಎಂಬ ವಿಶ್ವಾಸ ನನಗೇ ಇರಲಿಲ್ಲ .

ಕಳೆದ ಬಾರಿ ಪ್ರಿಯಾ ಫೋನ್ ಮಾಡಿದಾಗ , ಮನೆಯವರನ್ನು ಕೇಳಿದೆ - 'ಒಂದೆರಡು ದಿನ ಸಾಗರ , ಸಿಗಂದೂರು ಚೌಡೇಶ್ವರಿ ದೇವಸ್ಥಾನ, ಕುಮುಟಾ ಸುತ್ತಿ ಬರೋಣ , ಈ ಸಮಾರಂಭಕ್ಕೆ ಹೋಗುವ ಆಸೆ " ಅಂತ . ಅವರೂ ಒಪ್ಪಿದರು. ಆದರೆ ನಂತರ ಕಾರಣಾಂತರಗಳಿಂದ   ಮನೆಯವರು ಯಾರೂ ಬರಲಾಗದು ಎಂದಾಗ ನಿರಾಸೆಯಾಯಿತು.  ಕಡೆಗೆ ಯಜಮಾನರು "ನೀನೊಬ್ಬಳೆ ಹೋಗಿ ಬಾ " ಎಂದರು .  ನಂತರ ನೋಡಿದರೆ , ಟಿಕೆಟ್ ಸಿಗುತ್ತಿಲ್ಲ . ವಿನಾಯಕ್ ಭಟ್ ಅಲಿಯಾಸ್ ಖುಷಿ ವಿನು ಫೋನ್ ಮಾಡಿ "ಅಕ್ಕಾ ಬರ್ತಿದ್ದೀ ತಾನೇ?" ಎನ್ನುವಾಗ ಟಿಕೆಟ್ ಸಿಗುತ್ತಿಲ್ಲವೆಂದೆ . ಪಾಪ , ನಂತರ ಅವನೇ ಸುತ್ತಿ , ನನಗೆ ಟಿಕೆಟ್ ಕಾದಿರಿಸಿದ.  ಪ್ರಿಯಾಗೆ ಬರಲಾಗದೆಂದು ಹೇಳಿ ಆಗಿತ್ತು. ಹಾಗಾಗಿ ವಿನಾಯಕ್ ಭಟ್ ಗೆ ಹೇಳಿದೆ 'ಪ್ರಿಯಕ್ಕಂಗೆ ಹೇಳೋದು ಬೇಡ , ಇದು ಸರ್ಪ್ರೈಸ್ ಆಗಿರಲಿ ' ಎಂದು . ಆದರೆ ಅವನು ಕಳ್ಳ , ಗುಟ್ಟು ಬಿಟ್ಟು ಕೊಟ್ಟಿರಬೇಕು . ಪುನಃ ಪ್ರಿಯಾ ಅವರ ಫೋನ್ " ಏನು ನಿರ್ಧಾರ ಮಾಡಿದ್ರಿ ?   ಬಂದಿದ್ದರೆ ಚೆನ್ನಿತ್ತು " ಎಂದು . ಕಡೆಗೆ 'ಬರುವ ಯೋಚನೆ ಇದೆ , ನೋಡುವ ' ಎಂದೆ . 

 ಮನೆಯಲ್ಲಿ ಸ್ವಲ್ಪ ಆತಂಕ ಇತ್ತು . ಒಬ್ಬಳನ್ನೇ ಅಷ್ಟು ದೂರ , ಅದೂ ರಾತ್ರಿ ಬಸ್ ನಲ್ಲಿ ಹೇಗೆ ಕಳಿಸೋದು ? ಆ ಕಡೆ ನಕ್ಸಲೈಟ್ ರ ಕಾಟ ಏನಾದರೂ ಇದೆಯಾ  ? ಪ್ರಿಯಾ ಅವರೊಬ್ಬರೇ ಪರಿಚಯ . ಅವರಿಗೆ ನನ್ನನ್ನು ಬೆಳಿಗ್ಗೆ ಪಿಕ್ ಮಾಡಲಿಕ್ಕೆ ಸಮಯ ಸಿಗುತ್ತಾ ಇತ್ಯಾದಿ ಇತ್ಯಾದಿ . ಕಡೆಗೆ ವಿನಾಯಕ್ ಭಟ್ ನನ್ನನ್ನು ಬೆಳಿಗ್ಗೆ ಮೊದಲು ಅವರ ಮನೆಗೆ ಕರೆದುಕೊಂಡು ಹೋಗಿ, ನಂತರ ಕಾರ್ಯಕ್ರಮಕ್ಕೆ ಕರೆತರುವುದು ಎಂದಾಯ್ತು .  ಹೊರಡುವ ಹಿಂದಿನ ದಿನದಿಂದಲೇ ಪ್ರಿಯಾ ಹಾಗೂ ವಿನಾಯಕ್ ಫೋನ್ 'ಎಲ್ಲಾ ಸಿದ್ಧ ತಾನೇ ? ಎನೂ ಯೋಚನೆ ಮಾಡುವಷ್ಟಿಲ್ಲ . ನಾವು ನಿಮ್ಮ ಬಸ್ ನಿಲ್ದಾಣ ತಲುಪುವ ಮೊದಲೇ ಅಲ್ಲಿ ಹಾಜರು' ಎಂದು . ಪುನಃ ಬಸ್ ಹತ್ತಿದ ಮೇಲೆ ಫೋನ್ , ಮಧ್ಯೆ ಫೋನ್ ನಾನು ಎಲ್ಲಿರುವೆ ಎಂದು ತಿಳಿದುಕೊಳ್ಳಲು . ಬಸ್ ನಲ್ಲಿ ಅಚಾನಕ್ ಆಗಿ ಸಾಯೀಶ್ ಭಂಡಾರಿಯ ಭೇಟಿ . ಖುಷಿ ಆಯ್ತು . ಅವರು ಸಾಗರದಲ್ಲಿ ಇಳಿದರೂ ಸಹ , 'ಅಕ್ಕಾ ಫೋನ್ ಮಾಡಿ ಅವರು ಬಂದಿದ್ದಾರಾ ತಿಳಿದುಕೊಳ್ಳಿ ' ಎಂದು ಕಾಳಜಿ ತೋರಿದರು .  ಅಂತೂ ಇಂತೂ ಬೆಳಿಗ್ಗೆ ೭.೩೦ ಕ್ಕೆ ಬಸ್ ಇಳಿದಾಗ ವಿನಾಯಕ್ ಭಟ್ ರೈನ್ ಕೋಟ್ ಹಿಡಿದು ನಿಂತಿದ್ದ "ಏನೇ ಅಕ್ಕಾ ? ಇಷ್ಟು ಹೊತ್ತಾ ಬರೂದು " ಎನ್ನುತ್ತಾ .

ಅಲ್ಲಿಂದ ಅವನ ಊರಾದ  ಬ್ರಹ್ಮೂರಿಗೆ ಹೋಗಿ, ಅವನ ಆಯಿ, ದೊಡ್ಡ ಆಯಿ ಎಲ್ಲರ ಪ್ರೀತಿಯಲ್ಲಿ ಮಿಂದು , ಅವನೇ ಮಾಡಿಕೊಟ್ಟ ಚಪಾತಿ ತಿಂದು , ಕಾರ್ಯಕ್ರಮಕ್ಕೆ ಬಂದೆವು . ಶ್ರೀ ಕರಣಂ ಪವನ್ ಪ್ರಸಾದ್ , 'ಮಳೆ ಮಾರುವ ಹುಡುಗ' ಕಥಾಸಂಕಲನದ  ಕರ್ತೃ ಶ್ರೀ ಕರ್ಕಿ ಕೃಷ್ಣ ಮೂರ್ತಿ , ಶ್ರೀ ವಸಂತಕುಮಾರ್ ಪೆರ್ಲ , ಮತ್ತು ಶ್ರೀ ಶ್ರೀಧರ ಬಳಗಾರರ ಮಾತುಗಳನ್ನು ಕೇಳುವ ಸೌಭಾಗ್ಯ ಒದಗಿತು . ಕಾರ್ಯಕ್ರಮದ ನಂತರ ಊಟ , ನಂತರ ಸ್ವಸ್ತಿ ಬಳಗದ ಸದಸ್ಯರ ಕಿರು ಪರಿಚಯ , ಭೈರಪ್ಪನವರ ಕೃತಿಗಳಲ್ಲಿ  ಮಾನವೀಯ ಸಂಬಂಧಗಳು ಹಾಗೂ ಸಂವೇದನೆಗಳು ಎಂಬ ವಿಷಯದ ಬಗ್ಗೆ ಚರ್ಚೆ ಸೊಗಸಾಗಿತ್ತು . ಕಾರ್ಯಕ್ರಮದ ದೆಸೆಯಿಂದ ಗಾಯತ್ರಿ ಸಚಿನ್ ಹಾಗೂ ಸುಧಾ ಅವರ ಮುಖತಃ ಭೇಟಿ ಕೂಡ ಖುಷಿ ಕೊಟ್ಟಿತು .  ಅಲ್ಲಿಂದ ಪ್ರಿಯಾ ಭಟ್ ಮನೆಗೆ ಹೋದೆವು . ಅಲ್ಲೂ ಸಹ ನಗು, ಹರಟೆ , ರುಚಿಯಾದ ಊಟ ಎಲ್ಲ ಮುಗಿದು, ರಾತ್ರಿ ೭.೩೦ಕ್ಕೆ ನಮ್ಮನ್ನು ಬೀಳ್ಕೊಡಲು ಬಂದರು ಪ್ರಿಯಾ ಭಟ್ , ಮಹಾಬಲೇಶ್ವರ ಭಟ್  ಹಾಗೂ ವಿನಾಯಕ್ ಭಟ್ ಅಲಿಯಾಸ್ ಖುಷಿ ವಿನು .

ಬಸ್ ಹತ್ತುವವರೆಗೂ 'ಅಕ್ಕಾ ಹೋಗಲೆಬೇಕಾ' ಎನ್ನುತ್ತಿದ್ದ ವಿನಾಯಕ್ ಭಟ್ ಹನಿಗಣ್ಣಾಗಿದ್ದು ಕಂಡು ನಾನೂ ಸಹ ಭಾವುಕಳಾಗಿದ್ದು ನಿಜ . ನೂರೆಂಟು ನೆನಪು, ಹತ್ತಾರು ಜನರ ಪ್ರೀತಿ , ಸ್ನೇಹ ಹೊತ್ತು ಬೆಂಗಳೂರಿನ ಕಡೆಗೆ ಹೊರಟಾಗ , ಈ ಎಲ್ಲಾ ಜನರ ಒಂದೇ ಪ್ರಶ್ನೆ 'ಪುನಃ ಬರುವುದು ಯಾವಾಗ ?' ನನ್ನ ಮನದಲ್ಲೂ ಈಗ ಅದೇ ಪ್ರಶ್ನೆ - 'ಇವರೆಲ್ಲರನ್ನೂ ಪುನಃ ನೋಡುವುದು ಯಾವಾಗ ?'

- ತಾರಾ ಶೈಲೇಂದ್ರ