ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಾಡಿದ್ದ ಲಚ್ಚಿ ಮುಂಬಾಗಿಲ ಕಡೆಗೆ ದೃಷ್ಟಿ ನೆಟ್ಟಿದ್ದಳು . ದಿನಕರ ಮನೆಯನ್ನು ಮಾರುದ್ದ ಬೆಳಗಿದ್ದ . ಅವಳ ಸೇವೆಗೆಂದು ನಿಂತಿದ್ದ ದಾದಿ , ಇದನ್ನು ನೋಡಿ " ಓ ಮಗನ ದಾರಿ ಕಾಯುತ್ತಿದ್ದೀರಾ? ಅವರು ಬೆಂಗಳೂರಿನಿಂದ ಹೊರಟು ಇಲ್ಲಿ ಬರುವುದಕ್ಕೆ ೩ ತಾಸಾದರೂ ಬೇಕು . ಏಳಿ , ಎದ್ದು ಕಾಫಿ ಕುಡಿದು, ಸ್ನಾನ, ಪೂಜೆ, ತಿಂಡಿ ಮುಗಿಸಿ. ಅಷ್ಟರಲ್ಲಿ ನಿಮ್ಮ ಮಗ ಅರ್ಧ ದಾರಿ ಬಂದಿರ್ತಾರೆ" ಅಂದಳು . ಲಚ್ಚಿ "ಹೌದು , ಎಷ್ಟೋ ವರ್ಷಗಳ ಮೇಲೆ ಮಗ ಬರುತ್ತಿದ್ದಾನೆ " ಅನ್ನುತ್ತಾ ಲಗುಬಗೆಯಿಂದ ಎದ್ದು, ಅಡಿಗೆಯ ಶಾಂತಳನ್ನು ಕರೆದು "ಇವತ್ತು ಹಬ್ಬದಡಿಗೆ ಮಾಡು. ಅದಾ, ಇದಾ ಅಂತ ಕೇಳಬೇಡ . ಏನಾದರೂ ಮಾಡು. ಆದರೆ ಮರೆಯದೆ ಹೋಳಿಗೆ ಮಾಡು. ಶಂಕರನಿಗೆ ಬಲು ಪ್ರಿಯವಾದದ್ದು ಅದು. ಇವತ್ತು ಹಾಲು, ತುಪ್ಪ ಹಾಕ್ಕೊಂಡು ತಿಂದು ಸಂತೃಪ್ತಿ ಆಗಲಿ . ಅವನು ಅಮೇರಿಕಾದಲ್ಲಿ ಹೋಳಿಗೆ ತಿನ್ನೋದು ಅಷ್ಟರಲ್ಲೇ ಇದೆ " ಅಂದಳು .
ಲಚ್ಚಿ ಕಾಫಿ ಕುಡಿದು, ಸ್ನಾನ ಮಾಡಿ , ದೇವರ ಮನೆ ಹೊಕ್ಕು, ಹೂಬತ್ತಿ ಹಾಕಿ, ತುಪ್ಪದ ದೀಪ ಹಚ್ಚಿ, ದೇವರ ಪಟಕ್ಕೆ ನಮಸ್ಕಾರ ಮಾಡಿ, ತನ್ನ ಮಗ ಊರಿಗೆ ಬರುವಂತೆ ಕರುಣಿಸಿದ್ದಕ್ಕೆ ಕೋಟಿ ವಂದನೆ ಹೇಳುತ್ತಾ ಅಡ್ಡ ಬಿದ್ದಳು . ಶಾಂತಾ ಕೊಟ್ಟ ಅವಲಕ್ಕಿ ಉಪ್ಪಿಟ್ಟನ್ನು ಕೋಳಿಯಂತೆ ಕೆದಕಿ, ತಿಂದ ಶಾಸ್ತ್ರ ಮಾಡಿ, ಎದ್ದಳು. ದೇಹ ಜಡತೆ ಯಿಂದ ಕೂಡಿದ್ದರೂ , ಅವಳ ಮನಸ್ಸು ಪ್ರಪ್ಹುಲ್ಲವಾಗಿತ್ತು . ಹಾಗೆ ನೋಡಿದರೆ, ಲಚ್ಚಿಗೆ ಖಾಯಿಲೆಯೇನೂ ಇರಲಿಲ್ಲ. ಆದರೆ ಮನೋರೋಗಕ್ಕೆ ಮದ್ದಿಲ್ಲವಲ್ಲ. ಹಾಗೆಯೇ ಸೋಫಾಗೆ ಒರಗಿದ ಅವಳು ಗತಕಾಲಕ್ಕೆ ಜಾರಿದಳು.
ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಲಚ್ಚಿ , ಪುಟ್ಟ ಶಂಕರನೊಂದಿಗೆ ಅಣ್ಣನ ಮನೆ ಸೇರಿದ್ದಳು. ಅಣ್ಣ , ಅತ್ತಿಗೆ ಅವಳನ್ನು ಚೆನ್ನಾಗಿಯೇ ನೋಡಿ ಕೊಂಡರು. ಶಂಕರನಿಗಿಂತ ೩ ವರ್ಷ ಕಿರಿಯಳಾದ ಮೈತ್ರಿ ಸಹ ಅವನೊಂದಿಗೆ ಹೊಂದಿಕೊಂಡಳು . ಶಂಕರ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದಾಗ, ಅಣ್ಣ ಅವನನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿ, ಹಾಸ್ಟೆಲ್, ಮನೆಪಾಠದ ವ್ಯವಸ್ಥೆಯನ್ನೂ ಮಾಡಿ, "ಇನ್ನೇನು ಚಿಂತೆ ಇಲ್ಲ ಲಚ್ಚಿ, ನಿನ್ನ ಮಗ ಚೆನ್ನಾಗಿ ಓದಿ, ಮುಂದೆ ಬರುತ್ತಾನೆ. ಅವನ ಯೋಚನೆ ಬಿಟ್ಟು ನಿರಾಳವಾಗಿರು ಅಂದಿದ್ದ . ಶಂಕರ ಪಿ.ಯು.ಸಿ. ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆದು, ಇಂಜಿನಿಯರಿಂಗ್ ಸೇರಿಕೊಂಡ. ಅಲ್ಲೂ ಚಿನ್ನದ ಪದಕ ಪಡೆದು, ಹೆಮ್ಮೆಯಿಂದ ಅಮ್ಮನಿಗೆ ತೋರಿಸಿ, ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೆರಿಕಾಗೆ ಹೋಗಬೇಕೆಂಬ ಆಸೆ ತೋಡಿಕೊಂಡ. ಲಚ್ಚಿ ಅಣ್ಣನ ಸಲಹೆ ಕೇಳಿದಾಗ, ಅವನೂ ಸಹ ಪ್ರೋತ್ಸಾಹ ನೀಡಿದ . ಜೊತೆಗೆ ತಂಗಿಯ ಬಳಿ ಮೈತ್ರಿ-ಶಂಕರರ ಮದುವೆಯ ವಿಷಯವನ್ನೂ ಪ್ರಸ್ತಾಪಿಸಿದ. ಮೈತ್ರಿ ಸುಶೀಲೆ, ಮಗನಿಗೆ ಅನುರೂಪ ಜೋಡಿ ಎಂದು ಲಚ್ಚಿಗೆ ತಿಳಿದಿದ್ದರೂ ಸಹ, ಮಗನ ಮನಸ್ಸಿನಲ್ಲೇನಿದೆಯೋ ತಿಳಿದುಕೊಳ್ಳೋಣ ಅಂದುಕೊಂಡು ಶಂಕರನನ್ನು ಕೇಳಿದಳು. ಅವಳಾಸೆಯಂತೆ ಶಂಕರ ಒಪ್ಪಿದ. ಮೈತ್ರಿ ಮೊದಲಿಂದಲೂ ಬಲ್ಲ ಹುಡುಗಿ ಎಂಬುದು ಒಂದು ಕಾರಣವಾದರೆ, ವಿದೇಶದಲ್ಲಿನ ವ್ಯಾಸಂಗಕ್ಕೆ ಮಾವ ಸಹಾಯ ಮಾಡುತ್ತಾರೆ ಎಂಬ ಹಿರಿಯಾಸೆಯೂ ಇತ್ತು. ಅಂತೂ ಎಲ್ಲರ ಆಸೆಯಂತೆ ಮದುವೆ ನಡೆದು, ಲಚ್ಚಿ ಅಡಿಗೆಗೆ ಸಹಾಯವಾಗುವುದೆಂದು ಕಟ್ಟಿಕೊಟ್ಟ ಎಲ್ಲ ವಿಧದ ಪುಡಿಗಳನ್ನು ತೆಗೆದುಕೊಂಡು , ನವ ವಧೂ ವರರು ಅಮೆರಿಕಾಗೆ ಹಾರಿ, ಕ್ಯಾಲಿಫೋರ್ನಿಯಾ ದಲ್ಲಿ ಸಂಸಾರ ಹೂಡಿದರು. ಮೈತ್ರಿ ಶಂಕರನ ಓದಿಗೆ ಧಕ್ಕೆ ಬಾರದಂತೆ, ಅಲ್ಲಿ ಇಲ್ಲಿ ಸುತ್ತಬೇಕೆಂದು ಅವನನ್ನು ಕಾಡದೆ , ಎಚ್ಚರಿಕೆ ವಹಿಸಿದಳು . ಪರಿಣಾಮವಾಗಿ ಅವನ ಹೆಚ್ಚಿನ ವ್ಯಾಸಂಗ ಉತ್ತಮವಾಗಿ ಮುಗಿದು, ಅವನಿಗೆ ಅಲ್ಲೇ ಒಳ್ಳೆಯ ಕೆಲಸವೂ ಸಿಕ್ಕಿತು.
ಇದರೊಂದಿಗೆ ಲಚ್ಚಿಗೆ ಮಗ-ಸೊಸೆ ಹಿಂದಿರುಗಿ, ಹತ್ತಿರದಲ್ಲೇ ಎಲ್ಲಾದರೂ ಇರಬಹುದು ಅನ್ನೋ ತನ್ನ ಆಸೆ ಕೈಗೂಡುವ ಸಾಧ್ಯತೆ ಕಡಿಮೆಯೇನೋ ಅನಿಸತೊಡಗಿತು. ಮೈತ್ರಿ ಗರ್ಭಿಣಿ ಎಂದು ತಿಳಿದಾಗ ಅವಳ ಜೊತೆ ಯಾರೂ ಇಲ್ಲವಲ್ಲ ಎಂದು ಚಡಪಡಿಸಿದಳು. . ಕಡೆಗೆ ಅತ್ತಿಗೆ ಹರಿಣಿ, "ಅಕ್ಕ ನೀವ್ಯಾಕೆ ಒಂದೆರಡು ತಿಂಗಳ ಮಟ್ಟಿಗೆ ಅಲ್ಲಿ ಹೋಗಿ ಇರಬಾರದು ? ನಿಮಗೂ ಸಮಾಧಾನ, ಮೈತ್ರಿಗೂ ಅನುಕೂಲ " ಅಂದಳು . ಮನಸೊಪ್ಪದಿದ್ದರೂ, ಲಚ್ಚಿ ಅಣ್ಣನೊಂದಿಗೆ ಬೆಂಗಳೂರಿಗೆ ಹೊರಟು ನಿಂತಳು . ವಿಮಾನವಿರಲಿ, ಬೆಂಗಳೂರಿನ ರಸ್ತೆಗಳನ್ನೇ ನೋಡದ ಅವಳು ಮಗ-ಸೊಸೆಯನ್ನು ನೋಡುವ ಆಸೆಯಿಂದ ಎಲ್ಲಕ್ಕೂ ಸಿದ್ಧಳಾಗಿದ್ದಳು . ಅಣ್ಣ ಹೇಳಿದಂತೆ ಅವಳು ಅಮೇರಿಕಾದ ವಿಮಾನ ನಿಲ್ದಾಣದಲ್ಲಿ ಇಳಿದಾಗ , ಜನರ ಗುಂಪಿನಲ್ಲಿ ತನ್ನನ್ನು ಎದುರುಗೊಳ್ಳಲು ಕಾಯುತ್ತಿರುವ ಶಂಕರನನ್ನು ಕಂಡಾಗ , ತಬ್ಬಿ, ಮುದ್ದಾಡಬೇಕು ಅನಿಸಿದರೂ, ಅವನ ಮುಖದಲ್ಲಿ ಯಾವ ಭಾವನೆಯೂ ಕಾಣಲಿಲ್ಲವಾದ್ದರಿಂದ ತೆಪ್ಪಗಾದಳು. ಮನೆ ಸೇರಿದ ನಂತರವೂ, ಶಂಕರ ಹೆಚ್ಚೇನೂ ಮಾತನಾಡಲು ಆಸಕ್ತಿ ತೋರಿಸಲಿಲ್ಲ. ಮೈತ್ರಿಯನ್ನು ಕೇಳಿದಾಗ ಅವಳು "ಅಯ್ಯೋ ಅತ್ತೆ, ಅವರು ಇತ್ತೀಚಿಗೆ ಹಾಗೇ. ಏನೋ ಆಕಾಶ ತಲೆ ಮೇಲೆ ಬಿದ್ದವರಂತೆ ಆಡ್ತಾರೆ. ಮೇಲಧಿಕಾರಿ ಅಮೇರಿಕಾದವರು . ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರೂ ಏನಾದರು ಕೊಂಕು ಹುಡುಕುತ್ತಾರೆ. ಅದೂ ಅಲ್ಲದೆ, ಈ ದೇಶದಲ್ಲಿ ನಾವು ಭಾರತೀಯರು ಎಷ್ಟೇ ಬುದ್ಧಿವಂತರಾದರೂ , ಉನ್ನತ ಹುದ್ದೆಗಳಿಗೆ ನಮಗೆ ಬಡ್ತಿ ಸಿಗುವುದಿಲ್ಲ. ಇಲ್ಲಿಯ ವ್ಯವಸ್ಥೆ ಎಷ್ಟು ಕೆಟ್ಟದ್ದೆಂದರೆ , ನಮ್ಮಂಥವರಿಗೆ ಪ್ರತಿಯೊಂದಕ್ಕೂ ಸಾಲ ಕೊಟ್ಟು, ಕಂತಿನಲ್ಲಿ ಸಾಲ ತೀರಿಸುವಂತೆ ಮಾಡಿ, ಒಟ್ಟಿನಲ್ಲಿ, ನಮ್ಮನ್ನು ಶಾಶ್ವತ ಸಾಲಗಾರರನ್ನಾಗಿ ಮಾಡುತ್ತದೆ. ಅದೂ ಅಲ್ಲದೆ , ನಮ್ಮ ಸಂಸ್ಕೃತಿಯನ್ನು ಇವರು ಮೆಚ್ಚುವ ಸೋಗು ಹಾಕಿದರೂ, ನಮ್ಮನ್ನು ಸದಾ ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಯೇ ನೋಡುತ್ತಾರೆ. ಇದರಿಂದ ತಪ್ಪಿಸಿಕೊಳ್ಳಲು ನಮ್ಮವರು ಅವರಂತೆಯೇ ವೇಷ-ಭೂಷಣ, ಕಡೆಗೆ ಅವರಂತೆಯೇ ಆಚಾರ-ವಿಚಾರಗಳನ್ನು ರೂಢಿಸಿಕೊಳ್ಳುತ್ತಾರೆ. ಇದರಿಂದ ನಮ್ಮ ಕುರಿತು ಅವರ ಅಭಿಪ್ರಾಯ ಬದಲಾಗದಿದ್ದರೂ, ನಮ್ಮವರಿಗೊಂದು ರೀತಿಯ ಭ್ರಾಂತು" ಅಂದಳು . ಲಚ್ಚಿ " ಮತ್ತೆ ಇಲ್ಯಾಕೆ ಇರಬೇಕು? ನಡೀರಿ ಬೆಂಗಳೂರಿಗೆ ಹೋಗಿ ಒಂದು ಕೆಲಸ ಹುಡುಕಿ. ಎಲ್ಲರೂ ಆರಾಮವಾಗಿರಬಹುದು" ಅಂದಳು . ಹೇಗೋ ಒಂದೂವರೆ ತಿಂಗಳಿದ್ದ ಲಚ್ಚಿಗೆ ಬೇಸರವಾಗತೊಡಗಿತು. ಮಗನೊಂದಿಗೆ ಹೇಳಿದಾಗ "ಆಯ್ತಮ್ಮ. ವ್ಯವಸ್ಥೆ ಮಾಡ್ತೀನಿ " ಅಂದನೆ ಹೊರತು, ಮತ್ತೇನೂ ಮಾತಾಡಲಿಲ್ಲ . ಅವಳು ಮಗನನ್ನು ಕೂರಿಸಿಕೊಂಡು , ಕಕ್ಕುಲತೆಯಿಂದ "ಏನೋ ಶಂಕರ ನಿನ್ನ ಅವಸ್ಥೆ? ನಡಿ ಎಲ್ಲರೂ ವಾಪಸ್ ಹೋಗೋಣ" ಅಂದಾಗ , ಅವನು "ಸಮಯ ಬಂದಾಗ ನಾವೂ ಬರ್ತೇವಿ. ಈಗ ನೀವು ಹೊರಡಿ " ಅಂದ ..
ಅಮೇರಿಕಾದಿಂದ ಹಿಂದಿರುಗಿದ ಮೇಲೆ, ಫೋನಿನಲ್ಲಿ ಮಾತಾಡುತ್ತಿದ್ದರೂ, ಲಚ್ಚಿಗೆ ಸಮಾಧಾನವಿರಲಿಲ್ಲ. ಬರುಬರುತ್ತಾ ಶಂಕರನ ಫೋನ್ ಬರುವುದೂ ಸಹ ಕಡಿಮೆಯಾಯಿತು. ಲಚ್ಚಿಗೆ ಮನೋರೋಗ ಹತ್ತಿತು. ಮಗ-ಸೊಸೆ ಹತ್ತಿರ ಇರಬೇಕೆಂಬ ಹಂಬಲ ಹೆಚ್ಚಾಯಿತು. ಹೀಗಿರುವಾಗ, ಲಚ್ಚಿ ಬಚ್ಚಲಲ್ಲಿ ಜಾರಿ ಬಿದ್ದುದೇ ನೆಪವಾಗಿ, ಹಾಸಿಗೆ ಹಿಡಿದಳು. ಶಂಕರನಿಗೆ ಅಣ್ಣ ವಿಷಯ ತಿಳಿಸಿದರು. ಶಂಕರ ಲಚ್ಚಿಗೆ ಫೋನ್ ಮಾಡಿ, "ಅಮ್ಮ ನೀವು ಡಾಕ್ಟರು ಹೇಗೆ ಹೇಳ್ತಾರೋ ಹಾಗೆ ಸರಿಯಾಗಿ ಔಷಧಿ ತೊಗೊಬೇಕು. ಚೆನ್ನಾಗಿ ಊಟ ಮಾಡಿ " ಎಂದು ಉಪಚಾರದ ಮಾತಾಡಿದ . ಅವಳಿಗೆ ಬೇಕಾದ್ದು ಮಗನ ಸಾಮೀಪ್ಯ ಎಂದು ಅವನಿಗೆ ಅರ್ಥ ಮಾಡಿಸುವುದಾದರೂ ಹೇಗೆ ? ತೀರಾ ಹಂಬಲಿಸಲು ಶುರು ಮಾಡಿದಾಗ , ಅಣ್ಣ ಶಂಕರನಿಗೆ ಫೋನ್ ಮಾಡಿ ಒಂದು ವಾರದ ಮಟ್ಟಿಗಾದರೂ ಸರಿ ಬಂದು ಹೋಗಲು ತಿಳಿಸಿದ . ಅವನಿಗೂ ವೀಸಾ ಅವಧಿ ವಿಸ್ತರಿಸಬೇಕಾಗಿತ್ತು. "ವಾರದ ಮಟ್ಟಿಗೆ ಬರುತ್ತೇನೆ . ಆದರೆ ೨-೩ ದಿನ ಚೆನ್ನೈಗೆ ಹೋಗಬೇಕಾಗುತ್ತೆ ವೀಸಾಗೆ . ಮತ್ತೆ ಬೆಂಗಳೂರಿನ ಆಫೀಸಿನಲ್ಲೂ ಕೆಲಸ ಇದೆ. ನೋಡುವ ಹೇಗಾಗುತ್ತೆ ಅಂತ " ಅಂದ . ಲಚ್ಚಿಗೆ ರಾತ್ರಿಯಷ್ಟೇ ತಿಳಿದಿದ್ದು ಮಗ ಬರುತ್ತಾನೆ ಅಂತ .
ತನ್ನ ಯೋಚನಾಲಹರಿಯಿಂದ ಹೊರಬಂದ ಲಚ್ಚಿ ಅಡಿಗೆಮನೆಯ ತಯಾರಿ ನೋಡಲು ಹೋದಳು. ಒಗ್ಗರಣೆ ಘಾಟಿಗೆ ಕೆಮ್ಮುವಂತಾಗಿ , ನೀರು ಕುಡಿದು, ಸೆಕೆ ತಾಳಲಾರೆನೆಂದು ನೆಲದ ಮೇಲೆ ಚಾಪೆ, ದಿಂಬು ಹಾಕಿಕೊಂಡು ಉರುಳಿಕೊಂಡಳು . ಊಟವನ್ನೂ ಮಾಡದೆ ಕಾಯುತ್ತಿದ್ದ ಲಚ್ಚಿಗೆ ಮುಸ್ಸಂಜೆಯಾಗಿದ್ದು ತಿಳಿದಿದ್ದು ಗಂಗೆ-ಗೌರಿ ಮನೆಗೆ ಹಿಂದಿರುಗಿದಾಗಲೇ . ಕಣ್ಣಲ್ಲಿ ನೀರಾಡಿದರೂ , ಏನೂ ಮಾತಾಡದೆ ಮುಂಬಾಗಿಲನ್ನು ನೋಡುತ್ತಾ ಸುಮ್ಮನೆ ಮಲಗಿದ್ದಳು ಲಚ್ಚಿ. ಕತ್ತಲಾಗುವ ಸಮಯದಲ್ಲಿ ಹೊರಗೆ ಕಾರು ನಿಂತ ಸದ್ದು ಕೇಳಿತು . ಶಂಕರ ಚಾಲಕನಿಗೆ "ನೀನು ಮುಂದೆ ಹೋಗಿ , ಗಾಡಿ ತಿರುಗಿಸಿಕೊಂಡು ಬಾ. ಅಷ್ಟರಲ್ಲಿ ನಾನು ಎಲ್ಲರನ್ನೂ ಮಾತಾಡಿಸಿ ಬರ್ತೀನಿ . ಪುನಃ ಬೆಂಗಳೂರಿಗೆ ಹೋಗೋದಿದೆ " ಅಂತ ಹೇಳಿ ಅವಸರದಲ್ಲಿ ಎಲ್ಲರನ್ನು ಕೂಗುತ್ತಾ ಒಳ ಬಂದ . ಎಲ್ಲರೂ ಬಂದು ಎದುರಿಗೆ ನಿಂತರೂ , ಲಚ್ಚಿ ಮಾತ್ರ ಮಲಗಿದ್ದಲ್ಲಿಂದ ಏಳಲಿಲ್ಲ . ಶಾಂತಾ ಹತ್ತಿರ ಬಂದು ಅವಳನ್ನು ಎಬ್ಬಿಸಲು ಪ್ರಯತ್ನಿಸಿದಾಗ ಕಂಡಿದ್ದು ಮುಂಬಾಗಿಲ ಕಡೆಗೇ ಕಣ್ಣು ನೆಟ್ಟು ಪ್ರಾಣ ಬಿಟ್ಟಿದ್ದ ಲಚ್ಚಿ. ಶಂಕರನಿಗೆ ಅಮ್ಮ ತಾನು ಬರುವ ಮೊದಲೇ ಪ್ರಾಣ ಬಿಟ್ಟಿದ್ದಳೊ ಅಥವಾ ಚಾಲಕನೊಂದಿಗಿನ ತನ್ನ ಸಂಭಾಷಣೆ ಕೇಳಿ ಆಘಾತವಾಗಿ ಪ್ರಾಣ ಬಿಟ್ಟಳೋ ಎಂಬುದು ಪ್ರಶ್ನೆಯಾಗಿ ಕಾಡತೊಡಗಿತು.
- ತಾರಾ ಶೈಲೇಂದ್ರ