Monday, November 9, 2015

ದಿವಿನಾದ ದೀಪಾವಳಿ

                                           
                                                    ದಿವಿನಾದ ದೀಪಾವಳಿ

                                                 ದೀಪಂ ಜ್ಯೋತಿ ಪರಬ್ರಹ್ಮ
                                                 ದೀಪಂ ಜ್ಯೋತಿ ಜನಾರ್ಧನಃ
                                                 ದೀಪೋ ಮೇ ಹರತೋ ಪಾಪಂ                      
                                                 ದೀಪಂ ಜ್ಯೋತಿ ನಮೋಸ್ತುತೇ


                                     ಕತ್ತಲೆಯಿಂದ   ಬೆಳಕಿನೆಡೆಗೆ , ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆವುದೇ ದೀಪಾವಳಿ ಹಬ್ಬದ ಆಶಯ . ಕರ್ನಾಟಕದಲ್ಲಿ ನೀರು ತುಂಬುವ ಹಬ್ಬದೊಂದಿಗೆ ಶುರುವಾಗುವ ದೀಪಾವಳಿಯ ಸಂಭ್ರಮ  ಕಡೆಗೆ ಉತ್ಥಾನ ದ್ವಾದಶಿಯಂದು ತುಳಸಿಪೂಜೆ (ಕಿರುದೀಪಾವಳಿ)ಯಂದು ಕೊನೆಗೊಳ್ಳುತ್ತದೆ   .  ದೀಪಗಳ ಸಾಲು ಮನಮೋಹಕವಾಗಿರುತ್ತದೆ .  ಸತ್ಯದ, ಧರ್ಮದ ವಿಜಯವೆಂದೂ  ಈ ಹಬ್ಬ ಆಚರಿಸಲ್ಪಡುತ್ತದೆ . ಅಮಾವಾಸ್ಯೆಯ ಹಿಂದಿನ ದಿನ ನರಕಚತುರ್ದಶಿ , ಹಾಗೂ ಅಮಾವಾಸ್ಯೆಯ ಮಾರನೆಯ ದಿನ ಬಲಿಪಾಡ್ಯಮಿ ಎಂದೂ ಆಚರಿಸುತ್ತೇವೆ .

ಕೃಷ್ಣ ಪಕ್ಷದ ೧೩ನೇ ದಿನವಾದ ನೀರು ತುಂಬುವ ಹಬ್ಬದಂದು ಅಭ್ಯಂಜನ ಮಾಡಿ , ಮನೆಯಲ್ಲಿರುವ ಹಂಡೆ , ಬಿಂದಿಗೆಗಳನ್ನು ತಿಕ್ಕಿ , ಹೊಳೆಯುವಂತೆ ತೊಳೆದು , ನೀರು ತುಂಬಿ , ಅವಕ್ಕೆ ಪೂಜೆ ಮಾಡಿ , ಹಬ್ಬದಡುಗೆ ಮಾಡಿ ಉಣ್ಣುತ್ತೇವೆ .

ಪುರಾಣಗಳು ಹೇಳುವಂತೆ ನರಕಾಸುರ ಎಂಬ ದಾನವನು ಬ್ರಹ್ಮನಿಂದ ' ತನ್ನ ತಾಯಿಯಾದ ಭೂದೇವಿಯಿಂದ ಮಾತ್ರ ತನಗೆ ಸಾವು ಬರುವಂತೆ ವರ ಪಡೆದಿರುತ್ತಾನೆ . ಅವನ ತಾಯಿಯಾದ ಭೂದೇವಿಯೂ ಸಹ ವಿಷ್ಣುವಿನಿಂದ ' ತಾನು ಬಯಸಿದಾಗ ಮಾತ್ರ ತನ್ನ ಮಗನಿಗೆ ಸಾವು ಬರಬೇಕು ' ಎಂಬ ವರ ಪಡೆದಿರುತ್ತಾಳೆ .

ವರ ಪಡೆದ ತನಗೆ ಸಾವು ಬರಲಾರದೆಂದು ನರಕಾಸುರನು ಅಟ್ಟಹಾಸದಿಂದ ಮೆರೆಯುತ್ತಾ ೧೬೦೦೦ ಮಹಿಳೆಯರನ್ನು ಲಪಟಾಯಿಸಿ ಸೆರೆಯಲ್ಲಿಡುತ್ತಾನೆ. ದೇವೇಂದ್ರ ಹಾಗೂ ಇತರ ದೇವತೆಗಳ ಆಗ್ರಹದಿಂದ ಶ್ರೀಕೃಷ್ಣನು ಪ್ರಿಯಸತಿ ಸತ್ಯಭಾಮೆ ಹಾಗೂ ಗರುಡನೊಡಗೂಡಿ ನರಕಾಸುರನ ವಿರುದ್ಧ ಸಮರಕ್ಕಿಳಿಯುತ್ತಾನೆ .  ಆ ದಾನವ ವೀರ ಕೃಷ್ಣನಿಗೆ ಸರಿಸಾಟಿಯಾಗಿ ಯುದ್ಧ ಮಾಡುತ್ತಾ ತನ್ನ ಶಕ್ತಿ ಆಯುಧವನ್ನು ಕೃಷ್ಣನೆಡೆಗೆ ಎಸೆದಾಗ, ಅವನು ಸ್ಮೃತಿ ತಪ್ಪಿ ಬಿದ್ದವನಂತೆ ನಟಿಸುತ್ತಾನೆ. ಆಗ ಜೊತೆಗಿದ್ದ ಸತ್ಯಭಾಮೆಯೂ ಸೇರಿ, ನರಕಾಸುರನನ್ನು ಸಂಹರಿಸುತ್ತಾಳೆ  . ಸತ್ಯಭಾಮೆಯು ವಿಷ್ಣುವಿನ ಹೆಂಡತಿ ಭೂದೇವಿಯ ಅವತಾರವಾದ್ದರಿಂದ, ನರಕಾಸುರನನ್ನು ಅವನು ಪಡೆದ ವರದಂತೆಯೇ  ಸಂಹರಿಸುತ್ತಾಳೆ , ಇದು ನರಕಚತುರ್ದಶಿಯೆಂದು  ಆಚರಿಸಲ್ಪಡುತ್ತದೆ   .

ಕರ್ನಾಟಕದಲ್ಲಿ ನಾ ಕಂಡಂತೆ ಕೆಲವು ವರ್ಷಗಳ ಹಿಂದೆ ಅಮಾವಾಸ್ಯೆಯಂದು ಲಕ್ಷ್ಮಿಪೂಜೆ  ಮಾಡುತ್ತಿರಲಿಲ್ಲ . ಈಗ ಬಹಳ ಜನ ಅಮಾವಾಸ್ಯೆಯ ಸಂಜೆ ಈ ಪೂಜೆ ಮಾಡುತ್ತಾರೆ .

ವಿಷ್ಣು ವಾಮನನ ಅವತಾರದಲ್ಲಿ ಬಲಿಚಕ್ರವರ್ತಿಯನ್ನು ಸಂಹರಿಸುವ ಸಮಯದಲ್ಲಿ ಮನೆಮನೆಗಳಲ್ಲಿ ಅವನ ನೆನಪಲ್ಲಿ ದೀಪ ಬೆಳಗಿ ಸ್ವಾಗತಿಸುವಂತೆ ವರ ನೀಡಿದನೆಂದು  ಪ್ರತೀತಿ . ಹಾಗಾಗಿ ಪಾಡ್ಯದಂದು ಬಲಿಪಾಡ್ಯಮಿ ಎಂದು ಆಚರಿಸುತ್ತೇವೆ . ಅಂದು ಸಂಜೆ  ರೈತಾಪಿ ಜನರು ಗೋವರ್ಧನ ಪೂಜೆ ಮಾಡುತ್ತಾರೆ . ಸೆಗಣಿಯಿಂದ ಗೋವರ್ಧನಗಿರಿಯಂತೆ ಆಕಾರ ಮಾಡಿ , ಅದಕ್ಕೆ ಚೆಂಡು ಹೂವು , ಚಂದನ ಇಟ್ಟು ಮನೆಯ ಬಾಗಿಲುಗಳಿಗೆ, ತುಳಸಿಕಟ್ಟೆಗೆ ಇಡುತ್ತಾರೆ .   ತಲೆಬಾಗಿಲ ಬಳಿ ನಾಲ್ಕು ಮೂಲಗಳಲ್ಲಿ ಹಾಗೂ ಮಧ್ಯೆ ಸೆಗಣಿಯ ಗಿರಿಯಾಕಾರವನ್ನಿಟ್ಟು , ಸುತ್ತಲೂ ಸೆಗಣಿಯಿಂದ ಕೋಟೆಯಂತೆ ಕಟ್ಟಿ ,  ಹಾಲನ್ನು ಮಧ್ಯೆ ಇರುವ ಗಿರಿಯಾಕಾರಕ್ಕೆ ಹುಯ್ಯುತ್ತಾ 'ಬಲೀಂದ್ರ ನ ರಾಜ್ಯ ಹೊನ್ನೋ  ಹೊನ್ನು '  ಎಂದು ಹಾಲು ಕೋಡಿಯಾಗಿ ಹರಿಯುವಂತೆ ಹುಯ್ದು ಸಮೃದ್ಧಿಯನ್ನು ಹಾರೈಸುತ್ತಾರೆ .

ಕಜ್ಜಾಯ , ಹೋಳಿಗೆ , ಚಕ್ಕುಲಿ ಮಾಡಿ ಸವಿಯುತ್ತಾ , ಸಂಜೆ ದೀಪಗಳನ್ನು ಸಾಲುಸಾಲಾಗಿ ಹಚ್ಚಿ , ಅಂಧಕಾರವನ್ನು ತೊಲಗಿಸುತ್ತೇವೆ .  ಪಟಾಕಿ ಸಿಡಿಸುವುದೂ ಒಂದು ಸಂಭ್ರಮ. ಆದರೆ ಈಗ ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ಜನರು ಎಚ್ಚೆತ್ತು ವಾಯುಮಾಲಿನ್ಯ, ಶಬ್ದಮಾಲಿನ್ಯ ಕಡಿಮೆ ಮಾಡಲು ಹಾಗೂ ಪಟಾಕಿ ತಯಾರಿಸುವ ಮಕ್ಕಳನ್ನು ಬಾಲಕಾರ್ಮಿಕರಾಗುವುದನ್ನು ತಪ್ಪಿಸಲು , ವಿವೇಚನೆಯುಳ್ಳ ನಾವು ಪಟಾಕಿ ಸಿಡಿಸುವುದನ್ನು ನಿಲ್ಲಿಸಿ , ಬೆಳಕಿನ ಹಬ್ಬವನ್ನು  ಶಾಂತಿ , ಸಮೃದ್ಧಿ ಹಾಗೂ ಪ್ರೀತಿ ಬೆಳೆಸುವ ಕುಟುಂಬದ ಹಬ್ಬವಾಗಿ ಆಚರಿಸೋಣ .


-  ತಾರಾ ಶೈಲೇಂದ್ರ