ಸಂತಸದ ದಿನಗಳವು ಕಾಡಿಹುದು ನೆನಪು
ತಣಿಯದು ಎಂದೆಂದೂ ಸ್ನೇಹದ ಬಿಸುಪು
ದೂರಪಯಣಕೆ ಹೊರಟವನ ಕಳುಹಬಂದವಳು ನಾನು
ಸುರಿಸಿದೆ ಮಾತಿನಲಿ ಸವಿಜೇನ ನೀನು.
ಬಾಳ ಬಂಡಿಯಲಿ ಪಯಣಿಗರು ನಾವು
ಬದಲಾಗಬಹುದಷ್ಟೆ ನಾವಿಳಿಯುವ ತಾವು
ತಿಳಿದಿದೆ ನೋವಿನ ಹಾದಿಯದು ದುರ್ಗಮ
ಆತ್ಮಬಲ ಒಂದಿದ್ದರೆ ಎಲ್ಲವೂ ಸುಗಮ .
ಗೊಂಬೆಗಳು ನಾವು , ಸೂತ್ರಧಾರಿ ಅವನು
ತನ್ನ ಮನಬಂದಂತೆ ನಮ್ಮ ಆಡಿಸುವವನು
ಇಬ್ಬರೂ ಬಲ್ಲೆವು ಆಂತರ್ಯದ ನೋವ
ಆದರೂ ಮೊಗದಲಿ ನಸುನಗೆಯ ಭಾವ.
ತುಂಬಿದೆ ಎದೆಯಲಿ ಸೂತಕದ ಛಾಯೆ
ಫಲಿಸಲಿಲ್ಲ ಯತ್ನ , ವಿಧಿಯದೀ ಮಾಯೆ
ಉಸಿರ ತೊರೆಯಲು ಅನುವಾಯ್ತು ಕಾಯ
ನಿನಗಿದೋ ಗೆಳೆಯ ಅಂತಿಮ ವಿದಾಯ.
- ತಾರಾ ಶೈಲೇಂದ್ರ
No comments:
Post a Comment