ಯಾರಿಗೆ ಹೇಗೋ ಏನೋ ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ನನ್ನ ಅಪ್ಪನಿಗೇ ಮೊದಲ ಸ್ಥಾನ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಅಪ್ಪನೇ ಮೊದಲ ಹೀರೋ. ( ಇದು ಗಂಡು ಮಕ್ಕಳಿಗೂ ಅನ್ವಯಿಸುತ್ತದಾದರೂ , ಕೆಲವು ವರ್ಷಗಳ ನಂತರ ಅವರೇ ಹೀರೋಗಳಾಗುತ್ತಾರಲ್ಲ 😊 ).
ಅದೇನೋ ಅಜ್ಜಿಯನ್ನು ಬಿಟ್ಟರೆ ಹೆಚ್ಚು ಹಚ್ಚಿಕೊಂಡಿದ್ದು ಅಪ್ಪನನ್ನೇ . ಇದರಿಂದ ನಮ್ಮಮ್ಮನಿಗೆ ಹೇಗನಿಸಿರಬಹುದೆಂದು ತಿಳಿಯಲು ಸುಮಾರು ಕಾಲವಾಯ್ತು ಬಿಡಿ. ಬಿದ್ದರೆ ಎತ್ತಲು, ಹೊರಗೆ ಕರೆದೊಯ್ಯಲು ಎಲ್ಲಕ್ಕೂ ಅಪ್ಪನೇ ಬೇಕು. 14-15 ವರ್ಷದವಳಾದರೂ ಯಾರು ಇರಲಿ, ಬಿಡಲಿ ಅಪ್ಪನ ತೊಡೆ ಏರಿಕೊಂಡೇ ಕೂರುತ್ತಿದ್ದೆ. ನಮ್ಮಪ್ಪನಿಗೂ ನಾನೆಂದರೆ ಆಗಸದಷ್ಟು ಪ್ರೀತಿ. ಆಗಲೂ, ಈಗಲೂ ಯಾರಾದರೂ ಸಿಕ್ಕರೆ 'ನನ್ನ ಮಗಳೂ...' ಎಂದು ಶುರು ಮಾಡುತ್ತಾರೆ.
ಮಧ್ಯಮ ವರ್ಗದ ಎಲ್ಲಾ ಮನೆಗಳಲ್ಲಿ ಇರುವಂತೆ ಕಟ್ಟುನಿಟ್ಟು, ಸಂಪ್ರದಾಯ ಪಾಲನೆ, ನ್ಯಾಯ, ನೀತಿ, ನಿಷ್ಠೆಯ ಪಾಠದ ಉಚ್ಚಾರ, ಪುನರುಚ್ಚಾರ. ಜೀವನದಲ್ಲಿ ಆದರ್ಶ ವ್ಯಕ್ತಿಯಾಗಲು ಹೇಗಿರಬೇಕೆಂಬ ಶಿಕ್ಷಣಕ್ಕೇ ಮಹತ್ವ. ಬೇರೆ ಮಕ್ಕಳಂತೆ ಸದಾ ಬಣ್ಣಬಣ್ಣದ ಆಟಿಕೆ, ದಿರಿಸುಗಳನ್ನು ನನಗೆ ಉಡುಗೊರೆಯಾಗಿ ಬರಲಿಲ್ಲ. ಆದರೆ ಅನುಪಮಾ ನಿರಂಜನರ 'ದಿನಕ್ಕೊಂದು ಕಥೆ' , 'ಭಾರತ-ಭಾರತಿ', 'ರಾಮಾಯಣ' , 'ಮಹಾಭಾರತ' , 'ಚಂದಮಾಮ', 'ಬಾಲಮಿತ್ರ' ಇತ್ಯಾದಿಗಳಿಗೆ ಬರವಿರಲಿಲ್ಲ.
ಸಮಯ ಪರಿಪಾಲನೆ, ಜೀವನದ ಉನ್ನತ ಮೌಲ್ಯಗಳನ್ನು ತಾವು ಪಾಲಿಸಿ, ಅದರ ಮೂಲಕ ನಮಗೆ ಮಾದರಿಯಾದವರು ನನ್ನಪ್ಪ. ಒಂದೇ ಕೊರಗೆಂದರೆ ವೈದ್ಯೆಯಾಗಬೇಕೆಂಬ ನನ್ನ ಆಸೆಯ ಬಳ್ಳಿಯನ್ನು ಅವರು ಕಿತ್ತೆಸೆದದ್ದು. ( ಆಗ ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸಿದರೆ ಮದುವೆ ಮಾಡುವುದು ಕಷ್ಟ ಎಂಬ ಕಾರಣ ಒಂದಾದರೆ , ಮತ್ತೊಂದು, ಬರುವ ಒಂದು ಸಂಬಳದಲ್ಲಿ 3 ಮಕ್ಕಳನ್ನೂ, ಬೆನ್ನಿಗೆ ಬಿದ್ದವರನ್ನೂ ಓದಿಸಲು, ಮದುವೆ ಮಾಡಲು ತಗುಲುವ ಖರ್ಚು ).
ಅಪ್ಪ HALನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ 2ನೆಯ ಪಾಳಿ ಇದ್ದಾಗ ಅಪ್ಪ , ಅಮ್ಮ ಇಬ್ಬರೂ ನಮಗೆ ಶಾಲೆಯ ಬಳಿ ಊಟ ತಂದು , ತಿನ್ನಿಸುತ್ತಿದ್ದರು. ನಾನು ಕಾಲೇಜಿನಲ್ಲಿ ಕಲಿಯುವಾಗಲೂ ತಂದು ಕೊಡುತ್ತಿದ್ದರು.
ಓದು ಮುಗಿಸಿ ಕೆಲಸ ದೊರಕಿದಾಗ ನೋಡಬೇಕಿತ್ತು ನನ್ನಪ್ಪನ ಖುಷಿ. ವಿದ್ಯಾರ್ಥಿ ಜೀವನದಿಂದಲೂ ಬೆಳಿಗ್ಗೆ 4.30 ಇಂದ 4.45ರೊಳಗೆ ಏಳುವ ಅಭ್ಯಾಸ ನನಗೆ. ಬಿ.ಇ.ಎಲ್ ನಲ್ಲಿ ಮೊದಲ ಪಾಳಿಗೆ ಅಂದರೆ ಬೆಳಿಗ್ಗೆ 5.35ರ ಬಸ್ ಗೆ ಹೋಗಬೇಕಿತ್ತು. ಅಪ್ಪ ನನ್ನನ್ನು ಎಬ್ಬಿಸುವಾಗ ಮುದ್ದು ಮಾಡಿಯೇ ಎಬ್ಬಿಸುತ್ತಿದ್ದುದು. 4.30ಗೇ ಎದ್ದು ಬಾಯ್ಲರ್ ಗೆ ನೀರು ತುಂಬಿಸಿ, ನೀರು ಕಾದ ಮೇಲೆ ನನ್ನನ್ನು ಎಬ್ಬಿಸುತ್ತಿದ್ದರು.
ಸಂಜೆ 4 ಗಂಟೆಗೆ ಮನೆಗೆ ಬಂದ ಕೂಡಲೇ ಅಪ್ಪನಿಗೆ ಇಡೀ ದಿನದ ವರದಿ ಒಪ್ಪಿಸುತ್ತಿದ್ದೆ. ಇದು ಈಗಲೂ ಚಾಲ್ತಿಯಲ್ಲಿದೆ. ರಾತ್ರಿ ಬೇಗನೆ ಊಟ ಮಾಡಿ ಮಲಗಬೇಕಿತ್ತು. ನನಗೆ ನಿದ್ದೆಯ ಅವಶ್ಯಕತೆ ಇದೆಯೆಂಬ ಸಹಜ ಕಾಳಜಿ ಅವರಿಗೆ. ಹಾಗಾಗಿ ನನ್ನ ಅಣ್ಣ,ತಮ್ಮ ದೂರದರ್ಶನದಲ್ಲಿ ವಿಂಬಲ್ಡನ್ ಪಂದ್ಯಗಳನ್ನು ನೋಡಬೇಕೆಂದರೆ ನನ್ನ ಒಪ್ಪಿಗೆ ಬೇಕಿತ್ತು 😀.
ಶಾಲೆಯಲ್ಲಿದ್ದಾಗ ರಾಷ್ಟ್ರ ಮಟ್ಟದ ಕ್ರೀಡಾಕೂಟವೊಂದರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮೊದಲ ಅವಕಾಶ ಬಂದಾಗ ಅಪ್ಪ ಕಳಿಸಲು ಬಿಲ್ಕುಲ್ ಒಪ್ಪಲಿಲ್ಲ. ಕಡೆಗೆ ಸ್ನೇಹಿತರು, ನನ್ನ ಕೋಚ್ ಮನೆಗೆ ಬಂದು ಒಪ್ಪಿಸಿದರು. ನಂತರ ಕಾಲೇಜಿನಲ್ಲಿ ಶಿವರಾಮ್ ಎಂಬ ಪ್ರಾಂಶುಪಾಲರು ಅವರನ್ನು ಒಪ್ಪಿಸಿದ್ದರು. ಅಪ್ಪನಿಗೆ ಆತಂಕ ಮಗಳೆಲ್ಲೂ ಹೊರಗೆ ಹೋಗಿ ರೂಢಿಯಿಲ್ಲ. ನೆರೆ ರಾಜ್ಯದಲ್ಲಿ ಹೇಗೋ ಏನೋ ಎಂದು. ಆದರೆ ನನಗೆ ಎಂದೂ ತೊಂದರೆಯಾಗಲಿಲ್ಲ. ನನಗಿಂತ ಹಿರಿಯ ಸ್ನೇಹಿತರೆಲ್ಲ ಮಗುವಂತೆಯೇ ನೋಡಿಕೊಳ್ಳುತ್ತಿದ್ದರು.
ಒಬ್ಬಳೇ ಮಗಳೆಂದು ಅಪ್ಪ, ಅಮ್ಮ ಮನೆಗೆಲಸದಲ್ಲಿ ಯಾವ ರಿಯಾಯಿತಿಯೂ ತೋರಿಸುತ್ತಿರಲಿಲ್ಲ. ಬೆಳಿಗ್ಗೆ ತರಬೇತಿ ಶಿಬಿರಕ್ಕೆ 6 ಗಂಟೆಗೆ ಹೋಗುವಷ್ಟರಲ್ಲಿ ಮನೆಗೆಲಸ ಮುಗಿಸಿ ಹೋಗಬೇಕಿತ್ತು. ಹಾಗಾಗಿ ಸಮಯಪಾಲನೆ ಕಲಿತೆ. ಆಗ ಬಯ್ದುಕೊಂಡರೂ ನಂತರ ಯೋಚಿಸುತ್ತಿದ್ದೆ , ಕೆಲಸ ಕಲಿತರೆ ಮುಂದೆ ನನಗೇ ಅನುಕೂಲ ಎಂದು.
ನಂತರ ಮದುವೆಯ ಯೋಚನೆ ಬಂದಾಗ ಅಪ್ಪನಿಗೆ ಮಗಳು ಕಣ್ಣ ಮುಂದೆಯೇ ಇರಬೇಕೆಂಬಾಸೆ. ಹೆಚ್ಚೆಂದರೆ 2 ಬೀದಿ ಆಚೆ ಮನೆ ಇರಬೇಕೆಂಬ ಇಚ್ಛೆ.
ಕೆಲಸ ಸಿಕ್ಕಾಗ ಆರ್ಥಿಕವಾಗಿ ನಾನು ಸ್ವಾವಲಂಬಿಯಾದೆ ಎಂದು ಖುಷಿಯಾದರೂ ನಂತರ ಮನೆಯ ಒಳ-ಹೊರಗೆ ಕೆಲಸ ಮಾಡಿಕೊಂಡು, ಮಕ್ಕಳ ಬೆಳವಣಿಗೆಯ ಕಡೆ ಗಮನ ಹರಿಸಬೇಕಾಗಿ ಬಂದಿದ್ದರಿಂದ, ಆಯಾಸ ಆಗುತ್ತಿದ್ದುದು ಸಹಜ. ಅಪ್ಪನಿಗೆ ಈಗ ಮಗಳನ್ನು ನೋಡಿದರೆ ಕರುಳು ಹಿಂಡಿದಂತಾಗುತ್ತಿತ್ತು. ಪ್ರತಿದಿನ ಒಂದೇ ಬೋಧನೆ ' ಸರಿಯಾಗಿ ತಿನ್ನು. ಆರೋಗ್ಯ ನೋಡಿಕೋ. ಹಕ್ಕಿಯಂತೆ ತಿಂದರೆ ಶಕ್ತಿ ಬರ್ತದಾ' ಎಂದು.
ಈಗ ಮಕ್ಕಳೂ ದೊಡ್ಡವರಾಗಿದ್ದಾರೆ. ಎರಡೂ ಕಡೆ ಕೆಲಸದ ಹೊರೆ ಇದ್ದೇ ಇದೆ. ಈಗ ಅಪ್ಪನಿಗೆ ಬೆಳಿಗ್ಗೆ ಹೋಗಿ ರಾತ್ರಿ ಸುಸ್ತಾಗಿ ಬರುವ ನನ್ನನ್ನು ನೋಡಲಾಗುತ್ತಿಲ್ಲ. ಇದೆಂಥ ಕೆಲಸ? ಬಿಟ್ಟು ನೆಮ್ಮದಿಯಾಗಿ ಮನೆಯಲ್ಲಿರು ಎನ್ನುತ್ತಾರೆ. ನನಗೂ ಸುಸ್ತಾಗಿದ್ದರೂ ಅಪ್ಪ ಹೆಗಲ ಮೇಲೆ ಕೈ ಹಾಕಿ 'ಏನಪ್ಪಾ? ಸುಸ್ತಾಗ್ತಿದೆಯಾ?' ಎಂದ ಕೂಡಲೇ ಆಯಾಸವೆಲ್ಲ ಮಾಯವಾಗುತ್ತದೆ.
ಅಮ್ಮ ಎಷ್ಟೇ ಪ್ರೀತಿ, ಮಮತೆ ತೋರಿದರೂ ನನಗೆ ನನ್ನಪ್ಪನ ಮೇಲೇ ಪ್ರೀತಿ ಹೆಚ್ಚು. ಫೋನ್ ಮಾಡಿದರೂ ಸಹ ಅಮ್ಮನೊಂದಿಗೆ ಔಪಚಾರಿಕ ಮಾತಾದರೆ ಅಪ್ಪನೊಂದಿಗೆ ಗಂಟೆಗಟ್ಟಲೆ ಹರಟೆ, ನಗು. ನನ್ನಮ್ಮನಿಗೆ ಕೆಲವೊಮ್ಮೆ ಹೊಟ್ಟೆಕಿಚ್ಚಾಗುವಷ್ಟು. ಅಪ್ಪನನ್ನು ಕರೆಯಿರಿ ಎಂದರೆ 'ಅದೇನು ಅಪ್ಪ-ಮಕ್ಕಳ ಮಾತು?. ಮೊದಲು ನನ್ನ ಜೊತೆ ಮಾತಾಡು' ಎನ್ನುವಷ್ಟು 😂😂.
ಮದುವೆಯಾಗಿ 25 ವರ್ಷಗಳಾದರೂ ನನ್ನ ಅಪ್ಪ ಈಗಲೂ ಸಂಜೆ 7 ಗಂಟೆಗೆ ಕರೆ ಮಾಡುತ್ತಾರೆ. ಮನೆ ತಲುಪಿದ್ದೇನೆಯೋ ಇಲ್ಲವೋ ತಿಳಿಯಲು. ಸಂಜೆ ಎಲ್ಲಾದರೂ ಸ್ನೇಹಿತರ ಜೊತೆ ಹೋಗಬೇಕೆಂದರೆ matchfixing ಮಾಡಬೇಕು. ನನ್ನ ಪತಿ ' ಎಲ್ಲೋ ಹೋಗಿದ್ದಾಳೆ ಅಣ್ಣ. ಬರ್ತಾಳೆ ಬಿಡಿ' ಎಂದರೂ ಮನೆ ತಲುಪುವವರೆಗೆ ಕರೆ ಮಾಡುತ್ತಲೇ ಇರುತ್ತಾರೆ.
ಕೆಲವರಿಗೆ ಇವೆಲ್ಲ ಕಿರಿಕಿರಿ ಎನಿಸಬಹುದು. ಆದರೆ ನನಗೆ ಅವರ ಪ್ರತಿ ನಡೆ-ನುಡಿಯ ಹಿಂದೆ ಕಾಣುವುದು ಅವರ ಅಂತಃಕರಣ.
- ತಾರಾ ಶೈಲೇಂದ್ರ
No comments:
Post a Comment