Saturday, June 7, 2014

೨೦೦೯ರಲ್ಲಿ ನಮ್ಮ ಸಂಸ್ಥೆಯ ಕನ್ನಡ ಸಾಹಿತ್ಯ ಕೂಟವು ಹೊರತರುವ 'ಸಾಹಿತ್ಯ ಮಾಲೆ'ಯ ಪ್ರಧಾನ ಸಂಪಾದಕಿಯಾಗಿ ಶ್ರೀ ಜಯಂತ್ ಕಾಯ್ಕಿಣಿಯವರನ್ನು ಸಂದರ್ಶಿಸಿದಾಗಕವಿ , ಕತೆಗಾರ , ಅಂಕಣಕಾರ , ನಾಟಕಕಾರ , ಚಲನಚಿತ್ರಗಳ ಗೀತೆಕಾರ ,ಸಂಭಾಷಣೆ ಗಾರ. ಶ್ರೀ ಜಯಂತ ಕಾಯ್ಕಿಣಿ 

  


ಜಯಂತ್ ಕಾಯ್ಕಿಣಿ ಅವರ ಅಭಿಮಾನಿಯಾಗಿದ್ದ ನಾನು ಈ-ಟಿವಿಯಲ್ಲಿ ಕುವೆಂಪು ಹಾಗೂ ಶಿವರಾಮ ಕಾರಂತರ ಕುರಿತು ಅವರು ಕಾರ್ಯಕ್ರಮ ನಿರೂಪಿಸಿದ ರೀತಿ ನೋಡಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ . ನಂತರ ಬಂದ  ಅವರ ಚಿತ್ರಗೀತೆಗಳು  - ಮುಂಗಾರು ಮಳೆ, ಮಿಲನ, ಗೆಳೆಯ  (ಚಲನಚಿತ್ರಗಳು) ಅವರನ್ನು ಸಾಹಿತಿಯಾಗಷ್ಟೇ  ಅಲ್ಲದೆ, ಚಿತ್ರ-ಸಾಹಿತಿಯಾಗಿ ಜಯಂತ್ ಕಾಯ್ಕಿಣಿ ಜನಸಾಮಾನ್ಯರಿಗೆ ಚಿರಪರಿಚಿತರಾದರು.  ಇಂಥ ಯಶಸ್ವಿ ವ್ಯಕ್ತಿಯನ್ನು ನಮ್ಮ ಸಂಸ್ಥೆಯ ಕನ್ನಡ ಸಾಹಿತ್ಯ ಕೂಟವು ಪ್ರತಿ ವರ್ಷ ಹೊರತರುವ 'ಸಾಹಿತ್ಯಮಾಲೆ'ಗೆ  ಸಂದರ್ಶಿಸಿದರೆ ಹೇಗೆ ಎಂಬ ಯೋಚನೆ ಬಂದ ಕೂಡಲೇ ಕಾರ್ಯೋನ್ಮುಖಳಾದೆ .

     ಯಾವುದೇ ಹಮ್ಮು-ಬಿಮ್ಮುಗಳಿಲ್ಲದ, ಸರಳ, ಸಜ್ಜನಿಕೆಯ ಭಾವಜೀವಿಯ ಅಂತರಾಳದ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ :

ಪ್ರಶ್ನೆ     :        ತಮ್ಮ ಹೆತ್ತವರು, ಬಾಲ್ಯ, ವಿದ್ಯಾಭ್ಯಾಸದ ಬಗ್ಗೆ ತಿಳಿಸಿ

ಉತ್ತರ  :        ನಾನು ಉತ್ತರ ಕರ್ನಾಟಕದ ಗೋಕರ್ಣದಲ್ಲಿ ೧೯೫೫ರಲ್ಲಿ ತಂದೆ ಗೌರೀಶ್ ಕಾಯ್ಕಿಣಿ , ತಾಯಿ ಶಾಂತಾ ಅವರ ಏಕೈಕ ಪುತ್ರನಾಗಿ ಜನಿಸಿದೆ. ತಂದೆ ಲೇಖಕರು, ಸಾಹಿತಿಗಳು . ತಾಯಿ ಸಾಮಾಜಿಕ ಕಾರ್ಯಕರ್ತೆ. ಅಘನಾಶಿನಿ ತೀರದ ತದಡಿ  ಗ್ರಾಮದ ಅಜ್ಜನ ಮನೆಯಲ್ಲಿ ಬಹುಪಾಲು ಬಾಲ್ಯ ಕಳೆದದ್ದು.  ಗೋಕರ್ಣದ ಚಲನಶೀಲತೆ, ಸಮುದ್ರ, ಚತುಶೃಂಗ ಪರ್ವತಗಳು , ನದೀತೀರ ಹಾಗೂ ನಂತರದ ನನ್ನ ಮುಂಬೈ ಜೀವನ ನನ್ನ ಬರವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿ ನನ್ನ ಮನೋಭೂಮಿಕೆಯನ್ನು ರೂಪಿಸಿದವು. .

ಪ್ರಶ್ನೆ     :        ತಮ್ಮ ತಂದೆ ಮಾರ್ಕ್ಸ್ ಸಿದ್ಧಾಂತದಲ್ಲಿ ನಂಬಿಕೆ ಇದ್ದವರು. ಅವರ ಪ್ರಭಾವ ತಮ್ಮ ಮೇಲೆ ಎಷ್ಟಿತ್ತು?

ಉತ್ತರ  :        ನನ್ನ ತಂದೆ ಸಿದ್ಧಾಂತಿ ಅಲ್ಲ. ಸಾಮಾನ್ಯವಾಗಿ ಬುದ್ಧಿಜೀವಿಗಳು ಎಂದರೆ ಒಣ ಸಿದ್ಧಾಂತಗಳನ್ನು ಇಟ್ಟುಕೊಂಡವರು ಎಂಬ ಭಾವನೆ ಇದೆ. ಆದರೆ ನನ್ನ ತಂದೆ ಮಾನವೀಯತೆಯನ್ನು ಹೊಂದಿದ್ದರು . ನಾನು ಅವರ ಸಿದ್ಧಾಂತಗಳನ್ನು ಓದಿಲ್ಲ. ಆದರೆ ಜೀವನದಲ್ಲಿ ಅವರೇ ನನಗೆ ದೊಡ್ಡ ಆದರ್ಶ. ಗೋಕರ್ಣದಂಥ ಕರ್ಮಠ  ಕ್ಷೇತ್ರದಲ್ಲಿ ರೂಢಿಗತವಾಗಿ ಬಂದಂಥ ಗೊಡ್ಡು ಸಂಪ್ರದಾಯಗಳನ್ನು ಬಿತ್ತುವ ಸಾಧ್ಯತೆಗಳಿರುತ್ತವೆ . ಆದರೆ ನನ್ನ ತಂದೆ ಮಮತೆ ಹಾಗೂ ಸಮತೆ ಸಾಹಿತ್ಯದ ಜೀವಾಳ ಎಂದು ನಂಬಿದವರು . ಅಧ್ಯಾಪಕರಾಗಿ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿ ಬೆಳೆಸಿದವರು.

ಪ್ರಶ್ನೆ     :       ತಾವು ಮೂಲತಃ Biochemist ಆಗಿದ್ದು , ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಹೇಗೆ ?

ಉತ್ತರ  :        ವಿಜ್ಞಾನ ಹಾಗೂ ಸಾಹಿತ್ಯ ಬೇರೆ ಎಂಬ ಕಲ್ಪನೆ ತಪ್ಪು .
                   ಕುವೆಂಪು ಅವರು QUANTUM PHYSICS ಓದಿದವರು .
                   ಬೇಂದ್ರೆಯವರ ಗ್ರಂಥಾಲಯದ ೧೩,೦೦೦ ಪುಸ್ತಕಗಳಲ್ಲಿ ೧೦,೦೦೦ ವಿಜ್ಞಾನಕ್ಕೆ ಸಂಬಂಧಿಸಿದವು .
                   ಯಶವಂತ್ ಚಿತ್ತಾಲರು ಒಬ್ಬ Polymer Chemist.
                   ಪೂರ್ಣಚಂದ್ರ ತೇಜಸ್ವಿಯವರು ಒಬ್ಬ ಸಸ್ಯಶಾಸ್ತ್ರಜ್ಞರು
                   ಕಾರಂತರು ನಡೆದಾಡುವ ವಿಜ್ಞಾನ ವಿಶ್ವಕೋಶ ಎನಿಸಿಕೊಂಡವರು
                   ನಿಸಾರ್ ಅಹ್ಮದ್ ಅವರು  Geologist  ಆಗಿದ್ದವರು .
                ನಾವು ಮಕ್ಕಳಲ್ಲಿ ವಿಜ್ಞಾನ ಓದಿದವ  ಬುದ್ಧಿವಂತ , ಕಲೆ ಓದಿದವ  ದಡ್ಡ ಎಂಬ ತಪ್ಪು ಅಭಿಪ್ರಾಯ   ಬೆಳೆಸಿ,                 ದಾರಿ  ತಪ್ಪಿಸಿದ್ದೇವೆ. ವಿಜ್ಞಾನ ಮತ್ತು ಕಲೆ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು.

ಪ್ರಶ್ನೆ     :   ತಾವು ಎಂದಾದರೂ ಚಲನಚಿತ್ರಗೀತೆಗಳನ್ನು ಬರೆಯಬಹುದು ಎಂದು ನೆನೆಸಿದ್ದಿರಾ?

ಉತ್ತರ  :   ಚಲನಚಿತ್ರಗೀತೆಗಳು  ಇತ್ತೀಚೆಗೆ ಬರೆದಂಥವು . ಆದರೆ ಎಲ್ಲ ಪ್ರಕಾರದ ಸಾಹಿತ್ಯ ರಚನೆ ಒಟ್ಟಾಗಿ ಸಾಗುತ್ತಿರುತ್ತವೆ . ನನ್ನೆಲ್ಲಾ ಆಸಕ್ತಿಗಳಿಗೆ ಒಟ್ಟಾಗಿ ನೀರೆರೆದು ಪೂಜಿಸಿ, ಪೋಷಿಸುತ್ತೇನೆ . ಕಥೆ, ಕವನ, ನಾಟಕ, ಪ್ರಬಂಧ, ಅಂಕಣ ಎಂದು ವಿವಿಧ ಸಾಹಿತ್ಯ ರಚಿಸುತ್ತಿದ್ದ ನನಗೆ ಚಲನಚಿತ್ರಗೀತೆಗಳ ಬಗ್ಗೆ ಒಂದು ರೀತಿ ಉಡಾಫೆ ಇತ್ತು . ಅದೇನು? ಯಾರು ಬೇಕಾದರೂ ಬರೆಯಬಹುದು ಎಂದುಕೊಂಡಿದ್ದೆ . ಆದರೆ 'ಚಿಗುರಿದ ಕನಸು'  ಚಿತ್ರದ ಗೀತೆ ಬರೆಯುವಾಗಲೇ ಅರಿವಿಗೆ ಬಂದಿದ್ದು, ಅದಕ್ಕೆ ಬೇರೆಯೇ ಕೌಶಲ್ಯ ಬೇಕು ಎಂದು . ದೊಡ್ಡ ಸವಾಲು ಏನೆಂದರೆ ಸಂಯೋಜಿಸಿದ ರಾಗಕ್ಕೆ  ನಾವು ಗೀತೆಯನ್ನು ರಚಿಸಬೇಕಾಗುತ್ತದೆ. ರಾಗ ಸಂಯೋಜನೆ ಚೆನ್ನಾಗಿದ್ದಷ್ಟೂ ಗೀತೆ ರಚನೆ ಕಷ್ಟವಾಗುತ್ತದೆ. ಮತ್ತೆ ಚಿತ್ರಗೀತೆಯ ಪ್ರಧಾನ ಅಂಶ ಪ್ರೀತಿ . ಅದರ ಬಗ್ಗೆ ಬರೆಯುವುದು ಸುಲಭವಲ್ಲ . ಒಲವು, ಚೆಲುವು , ನಲಿವು , ಹಸಿರು, ಉಸಿರು.. ಮುಂದೆ? ಪದಗಳು ಸಿಗೋದು ಕಷ್ಟ .

ಪ್ರಶ್ನೆ     : ಗೀತೆ ಬರೆಯುವಾಗ ನಟ, ಗಾಯಕ ಇಂಥವರೇ ಆಗಿರಬೇಕೆಂಬ ನಿರೀಕ್ಷೆ ಇರುತ್ತದೆಯೇ?

ಉತ್ತರ  :  ಹಾಗೇನಿಲ್ಲ. ಹಾಡು ಬರೆಯುವಾಗ ನಮಗೆ ಏನೇನೋ ಭಾವನೆಗಳು ಉಕ್ಕುತ್ತಿರುತ್ತವೆ. ಆದರೆ ಕಥೆಗೆ ತಕ್ಕಂತೆ ನಿಯಂತ್ರಣ, ಚಿತ್ರ, ಕಥೆ, ಸನ್ನಿವೇಶ ಹಾಗೂ ಪಾತ್ರದ ಹಿನ್ನೆಲೆ ನೋಡಿಕೊಂಡು ಬರೆಯಬೇಕು. ಉದಾಹರಣೆಗೆ ಪ್ರೀತಿಯ ಬಗ್ಗೆ ಬರೆಯುವುದಾದರೆ, ಪ್ರೀತಿ ಮೊದಲನೆಯದಾ? ಏಕಮುಖ ಪ್ರೀತಿನಾ? ಹೆಣ್ಣಿನ ಪ್ರೀತಿ, ಗಂಡಿನ ಪ್ರೀತಿ, ಎಷ್ಟನೆಯದು ಹೀಗೆ ಎಲ್ಲವನ್ನೂ ನೋಡಿಕೊಂಡು ಚಿತ್ರಗೀತೆ ರಚಿಸುವುದು ದೊಡ್ಡ ಕಲೆ. ಹಾಗಾಗಿ ನನಗೆ ಚಿ. ಉದಯಶಂಕರ, ಹಂಸಲೇಖ, ವಿ.ಮನೋಹರ್ ಇವರನ್ನೆಲ್ಲ ಕಂಡರೆ ಅಪಾರ ಗೌರವ . ಮತ್ತೆ ಒಂದು ಒಳ್ಳೆಯ ಹಾಡಿನ ನಂತರ ಒಂದು ಮಾನಸಿಕ ಒತ್ತಡ ಇರುತ್ತದೆ. ಅದರಿಂದ ಬಿಡುಗಡೆ ಪಡೆಯಬೇಕಾದರೆ, ಮನಸ್ಸು ಶಾಂತವಾಗಿರಬೇಕು . ಹಾಡು ಸರಳವಾಗಿರಬೇಕು . ಸ್ವಲ್ಪ ಹೊಸತನದಿಂದ ಕೂಡಿರಬೇಕು .

ಪ್ರಶ್ನೆ     :   ತಮ್ಮ ಹಾಡುಗಳಲ್ಲಿ ಪ್ರಕೃತಿಯ ವರ್ಣನೆ ಹೆಚ್ಚು. ಇದಕ್ಕೆ ತಾವು ಬೆಳೆದ ಪರಿಸರ ಕಾರಣವೇ?

ಉತ್ತರ  :   ಅದೊಂದೇ ಅಲ್ಲ. ನನ್ನ ೫೫ ವರ್ಷದ ಪ್ರಯಾಣದ ಅನುಭವವಿರುತ್ತದೆ. ಮಳೆ, ಮೋಡ, ಆಕಾಶ ಎಲ್ಲದರೊಂದಿಗೂ   ಬಾಲ್ಯದ ಅನುಭವ ಬೆಸೆದುಕೊಂಡಿರುತ್ತದೆ .

ಪ್ರಶ್ನೆ     :   ತಮ್ಮ ಬರವಣಿಗೆಯ ಓಘ ಹೇಗೆ? ಸಂಗೀತದ ಹಿನ್ನೆಲೆ ಏನಾದರೂ ಇದೆಯೇ?

ಉತ್ತರ  :    ಒಂದು ಹೊಸ ಯೋಚನೆ ಬಂದರೆ ಸಾಕು. ಮತ್ತೆಲ್ಲ ನಿಮ್ಮ ರಂಗೋಲಿ ಬಿಡಿಸಿದ ಹಾಗೆ. ಆದರೆ ರಾಗಗಳನ್ನು ತುಂಬಾ ಕೇಳಿರಬೇಕು. ಇಲ್ಲದಿದ್ದರೆ ಬರವಣಿಗೆ ಕೃತಕವಾಗಿ ಬಿಡುತ್ತದೆ. ಸಂಗೀತದ ಹಿನ್ನೆಲೆ ಏನೂ ಇಲ್ಲ . ನಾನೂ ಚಿತ್ರಗೀತೆಗಳನ್ನು ಕೇಳುತ್ತಾ ಬೆಳೆದವನು.

ಪ್ರಶ್ನೆ     :   ಮುಂಗಾರು ಮಳೆಯ ಯಶಸ್ವೀ ಹಾಡುಗಳಿಂದ ಇಂದಿನ ಯುವಜನತೆ ಕನ್ನಡ ಹಾಡುಗಳನ್ನು ಗುನುಗುನಿಸಲು, PVRನಲ್ಲಿ ಕುಳಿತು ಕನ್ನಡ ಚಿತ್ರ ನೋಡುವಂತೆ ಮಾಡಿದ ತಾವು ಒಂದು ಹೊಸ ಅಲೆ ಪ್ರಾರಂಭ ಮಾಡಿದಿರಿ. ಒಂದು ಹೊಸ ಹಾದಿ ತೋರಿದಿರಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?


ಉತ್ತರ  :    ಬಹಳ ಖುಷಿಯಾಗಿದೆ. ಹೊಸ ತಲೆಮಾರಿನ, ಅದರಲ್ಲೂ ಆಂಗ್ಲ ಮಾಧ್ಯಮದಲ್ಲಿ ಓದಿದ ಮಕ್ಕಳು ಕನ್ನಡ ಹಾಡುಗಳನ್ನು ಮೆಚ್ಚಿದ್ದು ಒಂದು ರೀತಿಯ ಖುಷಿ . ಇಂಥ ಕ್ರಾಂತಿಯನ್ನು ನಿಮ್ಮ ಕನ್ನಡ ಅಭಿವೃದ್ಧಿ ಇಲಾಖೆಯಾಗಲಿ, ಕನ್ನಡ ಪ್ರಾಧಿಕಾರವಾಗಲಿ, ಸಾಹಿತ್ಯ ಪರಿಷತ್ತಾಗಲಿ  ಅಥವಾ ರಾಜ್ಯೋತ್ಸವದಂದು ಮಾತ್ರ ಧ್ವಜ ಹಾರಿಸಿ , ಉದ್ದುದ್ದ ಭಾಷಣಗಳನ್ನು ಬಿಗಿದು ಕನ್ನಡ ಪ್ರೇಮ ತೋರಿಸುವವರಿಂದಾಗಲಿ  ತರಲಾಗುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ .  ಅದಕ್ಕಾಗೇ ನನಗೆ 'ಮಿಲನ', 'ಮುಂಗಾರು ಮಳೆ' , 'ಗಾಳಿಪಟ' ಚಿತ್ರಗಳ ತಂಡ ಬಹಳ ಆತ್ಮೀಯ . ನಾನು 'ಅಕ್ಕ' ಸಮ್ಮೇಳನಕ್ಕೆಂದು ಅಮೇರಿಕ, ಇಂಗ್ಲೆಂಡ್ ಗಳಿಗೆ ಹೋದಾಗ , ಕಾರುಗಳಲ್ಲಿ ಮುಂಗಾರುಮಳೆಯ ಹಾಡುಗಳನ್ನು ಕೇಳುತ್ತಿದ್ದರು . ಹೀಗೆ ಮಾಡುವಂತಾಗಿದ್ದು  ಸಹ ಒಂದು ರೀತಿಯ ಕನ್ನಡದ ಸೇವೆ . ಮತ್ತೆ , ಬರೀ ಹಾಡುಗಳಿಂದಲೇ ಚಿತ್ರ ಓಡುವುದಿಲ್ಲ . ಚಿತ್ರ ಕೂಡ ಚೆನ್ನಾಗಿರಬೇಕು . ಮುಂಗಾರು  ಮಳೆಯ ನಂತರ ಸುಮಾರು ೧೨೦ ಹಾಡುಗಳನ್ನು ಬರೆದೆ . ಅದರಲ್ಲಿ ೩೦ ಹಾಡುಗಳು ಜನಪ್ರಿಯವಾಗಲಿಲ್ಲ .  ಆ ಹಾಡುಗಳನ್ನು ಪುನಃ ಬಳಸಲೂ ಆಗುವುದಿಲ್ಲ . ಮೊದಲು ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿದವರಿಗೆಲ್ಲ ಹಾಡು ಬರೆದು ಕೊಟ್ಟೆ . ಈಗ ಸ್ವಲ್ಪ ಯೋಚನೆ ಮಾಡಿ , ಚಿತ್ರ ಯಶಸ್ವಿಯಾಗಬಹುದು ಎನಿಸಿದರೆ ಬರೆಯುತ್ತೇನೆ .

ಪ್ರಶ್ನೆ     :  ಇತ್ತೀಚೆಗೆ ಕನ್ನಡಿಗರಿಗೆ ಅವಕಾಶ ನೀಡದೆ , ಹಿಂದಿ ಗಾಯಕರನ್ನು ಕರೆತಂದು ಹಾಡಿಸುವ ಪರಿಪಾಠ ಹೆಚ್ಚಾಗಿದೆ . ನಿಮ್ಮ ಅನಿಸಿಕೆ ಏನು?

ಉತ್ತರ  :    ಹಾಗೇನಿಲ್ಲ . ಒಂದು ಚಿತ್ರದಲ್ಲಿ ೬ ಹಾಡುಗಳಿದ್ದರೆ , ೨ ಮಾತ್ರ ಹೊರಗಿನವರು ಹಾಡಿರುತ್ತಾರೆ . ಬಾಕಿ ೪ ಹಾಡುಗಳನ್ನು ಕನ್ನಡಿಗರೇ ಹಾಡಿರುತ್ತಾರೆ . ಆದರೆ ನೀವು ಅದನ್ನು ಕೇಳುತ್ತಿಲ್ಲ .


ಪ್ರಶ್ನೆ     :    ಆದರೆ ಅದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆಯಲ್ಲ ? ಪರಭಾಷಾ ಗಾಯಕರ ಉಚ್ಛಾರಣೆ ಸ್ಪಷ್ಟವಾಗಿರುವುದಿಲ್ಲ ಕೆಲವೊಮ್ಮೆ . 

ಉತ್ತರ  :     ಇಲ್ಲಿಯವರ ಉಚ್ಛಾರಣೆ ಏನು ಚೆನ್ನಾಗಿರುತ್ತೆ ಅಂತೀರಿ? ದುರದೃಷ್ಟವಶಾತ್ ಇಲ್ಲಿನ ಕಾನ್ವೆಂಟ್ ಕನ್ನಡಿಗರಿಗೆ ಊಟ ಆಯ್ತಾ, ತಿಂಡಿ ಆಯ್ತಾ , ಹೋಗ್ತೀನಿ, ಬರ್ತೀನಿ, ಅನ್ನೋ ಸಾಮಾನ್ಯ ಕನ್ನಡ ಬಿಟ್ಟರೆ, ಸಾಹಿತ್ಯಕ ಕನ್ನಡದ ಗಂಧವೇ ಇಲ್ಲ . ಹಾಡುಗಳು ಬರೆಯಲ್ಪಡುವ ಕನ್ನಡವೇ ಬೇರೆ . ಇವರಿಗೆ ಅಲ್ಪಪ್ರಾಣ , ಮಹಾಪ್ರಾಣ ಗೊತ್ತಿಲ್ಲ . ಆದರೂ ತಾನು ಕನ್ನಡಿಗ , ತನಗೆ ಬಂದೇ ಬರುತ್ತದೆ ಅನ್ನೋ ಒಂದು ಸಣ್ಣ ಅಹಂಕಾರ ಇರುತ್ತದೆ. ಧ್ವನಿಮುದ್ರಣದ ಸಮಯದಲ್ಲಿ ಕವಿ, ನಿರ್ದೇಶಕ, ಯಾರನ್ನೂ ಕೇಳುವ ಗೋಜಿಗೇ ಹೋಗದೆ , ಸೀದಾ ಹಾಡಲಿಕ್ಕೆ ಹೋಗ್ತಾರೆ . ಹಾಡಿಗೆ ಸಂಬಂಧಿಸಿದಂತೆ ಇವರೂ, ಅವರೂ ಹೊಸಬರು . ಆದರೆ ಅವರಿಗೆ ಅದರ ಅರಿವು ಇದೆ. ಹಾಗಾಗಿ ಸಾಕಷ್ಟು ಪರಿಶ್ರಮ ವಹಿಸಿ ಹಾಡುತ್ತಾರೆ . ಅವರಿಗೆ ಇದು ಗೊತ್ತು . ಇದು ನನ್ನ ಭಾಷೆಯಲ್ಲವೆಂದು . ಹಾಗಾಗಿ , ಪ್ರತಿ ಪದದ ಅರ್ಥ , ಭಾವವನ್ನು ನಮ್ಮಿಂದ ತಿಳಿದುಕೊಂಡು ಹಾಡುತ್ತಾರೆ .  ಪಿ.ಬಿ.ಶ್ರೀನಿವಾಸ್ , ಪಿ.ಸುಶೀಲ , ಎಸ್. ಜಾನಕಿ , ಎಸ.ಪಿ.ಬಾಲಸುಬ್ರಹ್ಮಣ್ಯಂ ಇವರೆಲ್ಲ ಕನ್ನಡಿಗರೆ? ಇವರೆಲ್ಲ ತಮ್ಮ ಗಾಯನದ ಮೂಲಕ ನಮ್ಮ ಹೃದಯವನ್ನಾಳಿಬಿಟ್ಟರು. ನೋಡಿ, ನಾವು ಗೊಡ್ಡಾಗಿ ಅಭಿಮಾನ ತೋರಬಾರದು .


ಪ್ರಶ್ನೆ     : ಅಂದರೆ, ಗುಣಕ್ಕೆ ಮಾತ್ಸರ್ಯವಿರಬಾರದು ಅಂತೀರಾ?

ಉತ್ತರ  :  ಹೌದು .  ಭೀಮಸೇನ್ ಜೋಶಿ, ಮಲ್ಲಿಕಾರ್ಜುನ್ ಮನ್ಸೂರ್ ಕನ್ನಡಿಗರು . ಮಹಾರಾಷ್ಟ್ರದಲ್ಲಿ ಪ್ರಖ್ಯಾತರಾದರು . ಕಿಶೋರ್ ಕುಮಾರ್,   ಹೇಮಂತ್ ಕುಮಾರ್ ಬಂಗಾಲಿಗಳು . ಭೂಪೇನ್ ಹಜಾರಿಕಾ ಈಶಾನ್ಯದವರು . ಹಿಂದಿ ಹಾಡುಗಳಿಂದ ಜನಪ್ರಿಯರಾದವರು .  ಕೇಳುಗರು ಹೊಸದನ್ನು ಬಯಸುತ್ತಾರೆ . ಎಸ.ಪಿ. ಯವರು ಜನಪ್ರಿಯರಾದ ನಂತರ , ಬೇರೆಯವರು ಅವರನ್ನೇ ಅನುಸರಿಸಿದರು . ಹಾಗಾಗಿ ಯಶಸ್ವಿಯಾಗಲಿಲ್ಲ . ಉದಾಹರಣೆಗೆ ಸೋನು ನಿಗಮ್ ಯಾಕೆ ಇಷ್ಟ ಆದ ಅಂದರೆ , ಅವನ ಹಾಡುಗಾರಿಕೆ ಡಾ. ರಾಜ್ ಕುಮಾರ್ ಅವರಂತೆ ಇದೆ. ಆದರೆ ಇದೂ ಸಹ ಬಹಳ ಕಾಲ ಇರುವುದಿಲ್ಲ . ಸ್ವಲ್ಪ ಸಮಯದ ನಂತರ ಜನರಿಗೆ ಮತ್ತೊಬ್ಬ ಹೊಸಬ ಇಷ್ಟವಾಗಬಹುದು . ಇದೂ ಸಹ ಬದಲಾಗುವ  ಫ್ಯಾಷನ್ , ಊಟದ ರುಚಿ ಇದ್ದ ಹಾಗೆ . ಈಗ ಎಲ್ಲರೂ ಉತ್ತರ ಭಾರತದ ಊಟ ಇಷ್ಟ ಪಡ್ತಿಲ್ವ ಹಾಗೆ . ಈ ಅಂಶ ಎಲ್ಲ ಕ್ಷೇತ್ರಗಳಲ್ಲೂ ಪ್ರಧಾನ ಪಾತ್ರ ವಹಿಸುತ್ತೆ .


ಪ್ರಶ್ನೆ     :  ತಮ್ಮ ಮೆಚ್ಚಿನ ಸಾಹಿತಿ ಯಾರು ?

ಉತ್ತರ  :  ಬೆರಳಿಟ್ಟು ಹೇಳುವುದು ಕಷ್ಟ . ನೂರಾರು ಜನ ಇದ್ದಾರೆ . ಹಿರಿಯರಲ್ಲಿ ಕಾರಂತರು , ಬೇಂದ್ರೆ , ಕುವೆಂಪು ಮತ್ತೆ ನವ್ಯ ಮಾರ್ಗದ  ತೇಜಸ್ವಿ ,  ಅನಂತ ಮೂರ್ತಿ , ಎ.ಕೆ. ರಾಮಾನುಜಂ , ಯಶವಂತ ಚಿತ್ತಾಲ , ಶಾಂತಿನಾಥ ದೇಸಾಯಿ , ಪಿ. ಲಂಕೇಶ್ , ಕಂಬಾರರು , ಹೊಸದಾಗಿ ಪ್ರತಿಭಾ ನಂದಕುಮಾರ್ , ಎಚ್.ಎಸ್ . ಶಿವಪ್ರಕಾಶ್ , ವಿ. ಎಸ್. ಮಂಜುನಾಥ್ ಹೀಗೆ ಅನೇಕರು ಇಷ್ಟ .  ಕನ್ನಡದಲ್ಲಿ ಅದ್ಭುತ ಸಾಹಿತ್ಯ ಇದೆ . ಯುವಜನರು ಅದನ್ನು ಓದುವಂತೆ  ಮಾಡುವುದು ನಮ್ಮ ಜವಾಬ್ದಾರಿ .


ಪ್ರಶ್ನೆ     :  ನಿಮ್ಮ ಎಲ್ಲಾ ಹಾಡುಗಳಲ್ಲಿ ಭಾವನೆಗಳ ತಾಕಲಾಟವಿರುತ್ತದೆ . ನಿಜ ಜೀವನದಲ್ಲೂ ಸಹ ನೀವು ಭಾವನಾಜೀವಿಯೇ?

ಉತ್ತರ  :  ಇರಲೇಬೇಕಲ್ಲ . ಮೂಲತಃ ಮನುಷ್ಯ ಭಾವನಾಜೀವಿ . ನಿರ್ಜೀವ ವಸ್ತುಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಮನುಷ್ಯ ಜೀವಂತ ವ್ಯಕ್ತಿಗಳೊಂದಿಗೆ ಹೊಂದಿಕೊಳ್ಳುವುದಿಲ್ಲ . ಬಹಳ ಸ್ವಾರ್ಥಿಯಾಗುತ್ತಾನೆ . ಹಿಂದೆ ತಾಯ್ತಂದೆಯರು ಮಕ್ಕಳ ಜೀವನದಲ್ಲಿ ಪ್ರವೇಶ ಮಾಡುತ್ತಿರಲಿಲ್ಲ . ಬಡತನ ಇತ್ತು . ಅವರು ದುಡಿಯಲು ಹೋದರೆ , ಮಕ್ಕಳು ನದಿ, ಗುಡ್ಡ , ಬಯಲು, ಬೆಟ್ಟ ಸುತ್ತಿಕೊಂಡು ಹಾಯಾಗಿರುತ್ತಿದ್ದರು .  ಈಗ ಪಾಲಕರು ಊಟಕ್ಕೆ ಕುಳಿತಾಗ ತಮ್ಮ ಮನಸ್ಸಿನ ಕಸವನ್ನು ಮಕ್ಕಳ ತಲೆಗೆ ತುಂಬುತ್ತಾರೆ . ಎಷ್ಟೇ ವಿದ್ಯಾವಂತರಾದರೂ , ಸುಸಂಸ್ಕೃತರು ಎನಿಸಿಕೊಂಡರೂ ಸಹ ಮತ್ತೊಬ್ಬರನ್ನು ಜಾತೀಯತೆಯ ದೃಷ್ಟಿಯಿಂದ ನೋಡುತ್ತಾರೆ . ಮನೆಯಲ್ಲಿ ಹೆಂಡತಿಯನ್ನು ಸಮಾನವಾಗಿ ಕಾಣುವುದಿಲ್ಲ . ಮಕ್ಕಳೊಂದಿಗೆ ತನ್ನ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ . ಹೆಂಗಸರಿಗೆ ಮಾತು ಯಾಕೆ ಅನ್ನುತ್ತಾನೆ . ಹೆಣ್ಣು-ತಾಯಿ . ಅವರ ಮಾತು ಕೇಳಿದರೆ ಜಗತ್ತೇ ಉದ್ಧಾರ ಆಗ್ತಿತ್ತು . ಈಗ ನೋಡಿ . ಅವನೂ ಉದ್ಧಾರ ಆಗಲ್ಲ . ಮಕ್ಕಳೂ ಸಹ ಬಹಳ ನೋವಿನಿಂದ ಬೆಳೆಯುತ್ತಾರೆ . ಅವರು ಸರ್ವಾಧಿಕಾರಿಯಂತೆ ಮೆರೆಯುವ , ತಾಯಿಯನ್ನು ಗೌರವಿಸದ ತಂದೆಯನ್ನು ದ್ವೇಷಿಸುತ್ತಾರೆ . ಮಕ್ಕಳಲ್ಲಿ ಸಮತೆಯನ್ನು ಬೆಳೆಸಬೇಕು . ಆದರೆ ಈಗ ನಾವು ಮಕ್ಕಳಿಂದ ಕಲಿಯಬೇಕಾಗಿದೆ .

ಪ್ರಶ್ನೆ     :  ಮಹಿಳಾ ಮೀಸಲಾತಿಯ ಬಗ್ಗೆ ನಿಮ್ಮ ಅಭಿಪ್ರಾಯ ?

ಉತ್ತರ  :  ಸಮಾಜದಲ್ಲಿ ಮಹಿಳೆಗೆ ಸಮಾನತೆ ದೊರಕಿಸಿಕೊಡುವಲ್ಲಿ ಮೀಸಲಾತಿ ಒಂದು ಹೆಜ್ಜೆ . ನಾನು ಮೀಸಲಾತಿಯ ಪರ . ಹೆಣ್ಣುಮಕ್ಕಳೆಲ್ಲರೂ ವಿದ್ಯಾವಂತರಾಗಬೇಕು . ಮಹಿಳೆಯರೂ ಸಹ ಮುಖ್ಯವಾಹಿನಿಗೆ ಬರುವಂತಾಗಬೇಕು . ಮೀಸಲಾತಿ ಇಲ್ಲದೆ ಮಹಿಳೆಯ ಉದ್ಧಾರ ಸಾಧ್ಯವಿಲ್ಲ .


ಪ್ರಶ್ನೆ     :  ತಮಗೆ ತಮ್ಮ ಮುಂಬೈ ಜೀವನ ಬಹಳ ಆಪ್ತವಾಗಳು ಕಾರಣ? ಮತ್ತೆ ಸಮಾಜಕ್ಕೆ ನಿಮ್ಮ ಸಂದೇಶ ಏನು?

ಉತ್ತರ  :  ಮುಂಬೈ ಜೀವನ ಏಕೆ ಆಪ್ತ ಎಂದರೆ , ಅಲ್ಲೊಂದು ಮುಕ್ತ ಭಾವ ಇದೆ. ಗಂಡು-ಹೆಣ್ಣೆಂಬ ಭೇದ ಇಲ್ಲ. ಮಹಿಳೆಯರಿಗೆ, ವೃದ್ಧರಿಗೆ , ಕಾಯಕಕ್ಕೆ ಗೌರವ ಇದೆ . ಉಪಯೋಗಿಸುವ ಭಾಷೆ ಏಕವಚನವಾದರೂ , ನಾವೆಲ್ಲರೂ ಒಂದೇ ಎಂಬ ಭಾವ ಇದೆ. ಆದರೆ ಇಲ್ಲಿ ಕಾಯಕವಿಲ್ಲದೇ ದುಡ್ಡು ಮಾಡುವುದು ಹೇಗೆ ಅನ್ನೋದೇ ಜೀವನದ ಮುಖ್ಯ ಉದ್ದೇಶ ಆಗಿಬಿಟ್ಟಿದೆ . ಇಲ್ಲಿ ಮಕ್ಕಳನ್ನು ಹಣ ಮಾಡುವ ಯಂತ್ರ ಎಂದು ತಿಳಿದಿದ್ದಾರೆ . ಎಲ್ಲರಿಗೂ ತಮ್ಮ ಮಕ್ಕಳು ಸಿ.ಇ.ಟಿ. ಬರೆಯಬೇಕು, ಕ್ಯಾಂಪಸ್ ಸೆಲೆಕ್ಷನ್ ಆಗಬೇಕು , ೫೦ ಸಾವಿರ ಸಂಬಳ ತೊಗೋಬೇಕು  - ಹೀಗೆ , ಸದಾ ದುಡ್ಡಿನ ಹಿಂದೆ  ಹೋಗುವ ಹುನ್ನಾರ . ಸಂಬಂಧಗಳಿಗೆ ಬೆಲೆ ಇಲ್ಲ . ಮಕ್ಕಳಿಗೆ ಜೀವನದ
 ಉನ್ನತ ಮೌಲ್ಯಗಳು , ಸಂಸ್ಕೃತಿಯನ್ನು ಕೊಡದಿದ್ದರೆ , ಕಡೆಗೆ ಮಕ್ಕಳಿಂದ ನೋವನ್ನು ಅನುಭವಿಸಬೇಕಾಗುತ್ತದೆ . ಈಗ ನೋಡಿ . ಇವೆಲ್ಲದರ ಪರಿಣಾಮ ಧೂಮಪಾನ, ವಿವಾಹ ವಿಚ್ಛೇದನಗಳು, ವೃದ್ಧಾಶ್ರಮಗಳು ಎಲ್ಲವೂ ಹೆಚ್ಚಿವೆ . ಮನಸ್ಸಿನ ನೆಮ್ಮದಿ ಕಡಿಮೆ ಆಗಿದೆ . ಬಡತನ ಇದ್ದಾಗಲೇ ಸಂತೋಷ ಹೆಚ್ಚು . ತಾಯ್ತಂದೆಯರಿಗೆ ಹೇಳುವುದಿಷ್ಟೇ - ಮಕ್ಕಳನ್ನು ಅವರ ಪಾಡಿಗೆ ಅವರಿಗೆ ಆಸಕ್ತಿ ಇರುವ ವಿಷಯಗಳನ್ನು ಓದಲು ಬಿಡಿ .

ಪ್ರಶ್ನೆ     :  ಕೆಲವರು ಸಾಹಿತ್ಯ ಸೃಷ್ಟಿಗೆ  ಬೇರೆ ಊರುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ತಮ್ಮ ಬರವಣಿಗೆ ಹೇಗೆ ?

ಉತ್ತರ  :   ನನಗೆ ಹಾಗೇನಿಲ್ಲ. ಎಲ್ಲಿ ಬೇಕಾದರೂ ಬರೆಯುತ್ತೇನೆ . ಇತ್ತೀಚೆಗೆ ಹಾಡುಗಳನ್ನು ಬರೆಯುವಾಗ ಮಾತ್ರ ನನ್ನ ರೂಮ್ ನಲ್ಲಿ ಒಬ್ಬನೇ ಕುಳಿತು ಟ್ಯೂನ್ ಕೇಳ್ತೀನಿ . ಉಳಿದಂತೆ ಸಾಧಾರಣವಾಗಿ ಗೌಜು ಗದ್ದಲ ಇದ್ದಷ್ಟೂ ಹೆಚ್ಚಿಗೆ ಬರೆಯುತ್ತೀನಿ ,

ಪ್ರಶ್ನೆ     :  ತಮ್ಮ ಸಾಹಿತ್ಯ ಕೃಷಿಗೆ ಸ್ಫೂರ್ತಿ ಯಾರು?ನಿಮ್ಮ ತಂದೆಯೇ?

ಉತ್ತರ  :  ತಂದೆ ಒಬ್ಬ ವ್ಯಕ್ತಿಯಾಗಿ ಸ್ಫೂರ್ತಿ . ಅವರು ಅಷ್ಟು ಸರಳ . ಆಗಿನ ಕಾಲದಲ್ಲಿ ಎಲ್ಲ ಶಿಕ್ಷಕರೂ ಜ್ಞಾನ ಹಂಚಿಕೊಳ್ತಾನೇ  ಬದುಕಿದವರು . ಉದಾಹರಣೆಗೆ ಕಾರಂತರು, ಬೇಂದ್ರೆ , ಕುವೆಂಪು . ಒಂದು ವಿಷಯ ಗೊತ್ತಾ ? ಚಿಕ್ಕಂದಿನಿಂದ ತಂದೆಯನ್ನು  ಸಂದರ್ಶಿಸಲು ಬೇಕಾದಷ್ಟು ಜನ ಬರ್ತಿದ್ರು . ಸಮಾರಂಭಗಳಿಗೆ ಹೋದರೆ ಉದ್ದುದ್ದ ಭಾಷಣಗಳು ಬೇಸರ ತರಿಸುತ್ತಿದ್ದವು . ಹಾಗಾಗಿ ನಾನು ಸಾಹಿತಿ ಆಗದೇ ಇರುವ ಲಕ್ಷಣಗಳೇ ಇದ್ದವು . ಆದರೆ ಏನೋ ಓದುವಾಗ ಒಂದು ಸಂಚಲನ ಉಂಟಾಯ್ತಲ್ಲ , ಹಾಗಾಗಿ ಸಾಹಿತಿಯಾದೆ .

ಪ್ರಶ್ನೆ     :  ಈಗ ನಿಮ್ಮ ಹಾಡುಗಳು ಅತಿ ಹೆಚ್ಚು ಜನಪ್ರಿಯವಾಗಿವೆ . ಜಯಂತ್ ಕಾಯ್ಕಿಣಿ ಯವರ ಛಾಪು ಒತ್ತಿಯಾಗಿದೆ . ಮುಂದೆ ಹೊಸ ಪ್ರಯೋಗ ಮಾಡುವ ಆಸೆ ಇದೆಯಾ?

ಉತ್ತರ  :  ಇಲ್ಲ. ನನಗೆ ನನ್ನ ಮಿತಿಗಳು ಗೊತ್ತಿವೆ . ನನಗೆ ಪಾರ್ಟಿ ಹಾಡುಗಳನ್ನು ಬರೆಯಲಾಗುವುದಿಲ್ಲ . ಕೆಲವರು ಎಲ್ಲ ರೀತಿಯ ಹಾಡುಗಳನ್ನು ಲೀಲಾಜಾಲವಾಗಿ ಬರೆಯುತ್ತಾರೆ . ಉದಾಹರಣೆಗೆ ನಾಗೇಂದ್ರಪ್ರಸಾದ್, ಕಲ್ಯಾಣ್, ಹಂಸಲೇಖ , ಹೃದಯಶಿವ , ಕವಿರಾಜ್ , ರಾಮ್ ನಾರಾಯಣ್ ....


ಪ್ರಶ್ನೆ     :  ಮುಂಗಾರು ಮಳೆಯ ನಂತರ ಚಿತ್ರರಂಗದಲ್ಲಿ ತಮಗೆ ಬೇಡಿಕೆ ಹೆಚ್ಚಿದೆ . ಹೇಗನಿಸುತ್ತಿದೆ ?

ಉತ್ತರ  :  ಬಹುಶಃ ನನ್ನ ವಯಸ್ಸಿನ ಕಾರಣಕ್ಕೋ  ಏನೋ ಪ್ರೀತಿಯಿಂದ , ಗೌರವದಿಂದ ಕಾಣುತ್ತಾರೆ . ಈಗೀಗ ನಿರ್ಮಾಪಕರಿಗೆ ಏನೋ ವಿಶೇಷತೆ ಇರಬೇಕು ಅನಿಸತೊಡಗಿದೆ . ಆದರೆ ಹಣದ ಹೊಳೆಯೇನೂ ಹರಿದು ಬರುತ್ತಿಲ್ಲ . ೨೩ ವರ್ಷಗಳ ಮುಂಬೈ ಜೀವನದ ನಂತರ ಬರೆದೇ ಬದುಕಬೇಕೆಂದು ಇಲ್ಲಿಗೆ ಬಂದವನು ನಾನು . ಇಲ್ಲಿ ಒಬ್ಬ ಲೇಖಕನಿಗೆ ಸಿಗುವ ಹಣ ಬಹಳ ಕಡಿಮೆ . ಇಲ್ಲಿ ಯಾವುದೇ ಕರಾರು ಇಲ್ಲ. ಎಲ್ಲವೂ ನಂಬಿಕೆಯ ಮೇಲೆ ನಿಂತಿದೆ .

ಪ್ರಶ್ನೆ     :  ಇದುವರೆಗಿನ ತಮ್ಮ ಸಾಧನೆ ತೃಪ್ತಿ ಕೊಟ್ಟಿದೆಯಾ?

ಉತ್ತರ  :   ಖಂಡಿತ ಇಲ್ಲ. ಇನ್ನೂ ಹೆಚ್ಚು ಓದಬೇಕು , ಕಲಿಯಬೇಕು , ಬರೆಯಬೇಕು . ಪ್ರತಿ ದಿನ ಒಂದು ಹೊಸ ಸವಾಲನ್ನೊಡ್ಡುತ್ತದೆ.  'ಅನಿಸುತಿದೆ' ಹಾಡು ಬರೆಯುವಾಗ 'ಪ್ರೀತಿ' ಅನ್ನೋ ಶಬ್ದ ಬಳಸದೆ ಹಾಡು ಬರೆಯಬೇಕು ಅನ್ನಿಸಿತ್ತು .


ಪ್ರಶ್ನೆ     :  ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎನ್ನುತ್ತಾರೆ. ನೀವೇನಂತೀರಿ ?

ಉತ್ತರ  :   ಹೌದು . ಹಿಂದೆ , ಮುಂದೆ , ಅಕ್ಕ, ಪಕ್ಕ ಎಲ್ಲ ಕಡೆ ಇರುತ್ತಾಳೆ . ನನಗೆ ನನ್ನ ತಾಯಿ, ಪತ್ನಿ ಇದ್ದಾರೆ . ಅವಳು ನನ್ನ ಪತ್ನಿಯಷ್ಟೇ ಅಲ್ಲ. ನನ್ನ ಬಾಳ ಗೆಳತಿ . ನನ್ನ ಹೋರಾಟದ ಬದುಕಿನಲ್ಲಿ ನನಗೆ ಆಸರೆಯಾಗಿ ನಿಂತವಳು .

ಪ್ರಶ್ನೆ     :  ಈಗ ಎಫ಼್. ಎಂ ವಾಹಿನಿಗಳು  ೨೪ ಗಂಟೆ  ಹಾಡುಗಳನ್ನು ಪ್ರಸಾರ ಮಾಡುತ್ತಿರುತ್ತವೆ . ಇದರಿಂದ ತಮ್ಮ ಜನಪ್ರಿಯತೆ ಇನ್ನೂ ಹೆಚ್ಚುತ್ತದೆ ಅಲ್ವೇ?

ಉತ್ತರ  :  ಖಂಡಿತ ಇಲ್ಲ. ಈ ವಾಹಿನಿಯವರು ಗೀತೆಯ ರಚನೆಕಾರರ ಹೆಸರನ್ನಾಗಲಿ  , ಸಂಗೀತ ನಿರ್ದೇಶಕನ ಹೆಸರನ್ನಾಗಲಿ  ಪ್ರಸಾರ ಮಾಡುವುದಿಲ್ಲ . ಅವರವರ ಹೆಸರುಗಳನ್ನಷ್ಟೇ ಹೇಳಿಕೊಳ್ಳುತ್ತಿರುತ್ತಾರೆ . 'ಜಿಂಕೆಮರಿನಾ' ಹಾಡು ಅಷ್ಟು ಜನಪ್ರಿಯವಾಯ್ತಲ್ಲ . ಅದನ್ನು ಬರೆದವರು ಯಾರು ಅನ್ನೋದು ನನಗೆ ತಿಳಿದಿದ್ದು ಒಂದೂವರೆ ವರ್ಷಗಳ ನಂತರ . ಎಫ್.ಎಂ. ವಾಹಿನಿಯವರು ನಮ್ಮ ಹಾಡುಗಳನ್ನು ಪ್ರಸಾರ ಮಾಡಿ ಹಣ ಮಾಡುತ್ತಿರುವುದರಿಂದ ನಮ್ಮ ಚಿತ್ರಕ್ಕೆ , ಗೀತೆಗಳಿಗೆ ಪ್ರಚಾರ ನೀಡುವುದು  ಅವರ ನೈತಿಕ ಹೊಣೆ . ಇದನ್ನು ನಾವ್ಯಾರೂ ಬಲವಂತವಾಗಿ ಹೇಳಲಾಗುವುದಿಲ್ಲ . ಫಿಲ್ಮ್  ಛೇಂಬರ್ ನವರು ಈ ಕೆಲಸ ಮಾಡಬೇಕು .

ಪ್ರಶ್ನೆ     :  ತಮ್ಮನ್ನು ಅತಿ ಚಿಕ್ಕ ವಯಸ್ಸಿಗೇ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ . ಏನೆನಿಸುತ್ತದೆ ?

ಉತ್ತರ  :  ಮುಜುಗರ ಎನಿಸುತ್ತದೆ . ಒಂದು ಒಳ್ಳೆಯ ಕವಿತೆಯಿಂದ ಸಿಗುವ ಆನಂದ ಯಾವ ಪ್ರಶಸ್ತಿಯಿಂದಲೂ  ಸಿಗುವುದಿಲ್ಲ .

ಕೊನೆಯದಾಗಿ   ತಮ್ಮ ಬಿಡುವಿಲ್ಲದ ಕೆಲಸ  ಕಾರ್ಯಗಳ ಮಧ್ಯೆ ನಮಗಾಗಿ ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ  ಅನಂತ ಧನ್ಯವಾದಗಳು . ತಮ್ಮ ಸಾಹಿತ್ಯ ಸೇವೆ ಮತ್ತಷ್ಟು ಪ್ರಕಾಶಿಸಲೆಂದು ಹಾರೈಸುತ್ತೇನೆ  . ನಮಸ್ಕಾರ . ----    ತಾರಾ ಶೈಲೇಂದ್ರ  

No comments:

Post a Comment