Saturday, May 28, 2016

ಅಪ್ಪನೆಂಬ ಅಂತಃಕರಣ



ಯಾರಿಗೆ ಹೇಗೋ ಏನೋ ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ನನ್ನ ಅಪ್ಪನಿಗೇ ಮೊದಲ ಸ್ಥಾನ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಅಪ್ಪನೇ ಮೊದಲ ಹೀರೋ. ( ಇದು ಗಂಡು ಮಕ್ಕಳಿಗೂ ಅನ್ವಯಿಸುತ್ತದಾದರೂ , ಕೆಲವು ವರ್ಷಗಳ ನಂತರ ಅವರೇ ಹೀರೋಗಳಾಗುತ್ತಾರಲ್ಲ 😊 ).

ಅದೇನೋ ಅಜ್ಜಿಯನ್ನು ಬಿಟ್ಟರೆ ಹೆಚ್ಚು ಹಚ್ಚಿಕೊಂಡಿದ್ದು ಅಪ್ಪನನ್ನೇ . ಇದರಿಂದ ನಮ್ಮಮ್ಮನಿಗೆ ಹೇಗನಿಸಿರಬಹುದೆಂದು ತಿಳಿಯಲು ಸುಮಾರು ಕಾಲವಾಯ್ತು ಬಿಡಿ. ಬಿದ್ದರೆ ಎತ್ತಲು, ಹೊರಗೆ ಕರೆದೊಯ್ಯಲು ಎಲ್ಲಕ್ಕೂ ಅಪ್ಪನೇ ಬೇಕು. 14-15 ವರ್ಷದವಳಾದರೂ ಯಾರು ಇರಲಿ, ಬಿಡಲಿ ಅಪ್ಪನ ತೊಡೆ ಏರಿಕೊಂಡೇ ಕೂರುತ್ತಿದ್ದೆ. ನಮ್ಮಪ್ಪನಿಗೂ ನಾನೆಂದರೆ ಆಗಸದಷ್ಟು ಪ್ರೀತಿ. ಆಗಲೂ, ಈಗಲೂ ಯಾರಾದರೂ ಸಿಕ್ಕರೆ 'ನನ್ನ ಮಗಳೂ...' ಎಂದು ಶುರು ಮಾಡುತ್ತಾರೆ. 

ಮಧ್ಯಮ ವರ್ಗದ ಎಲ್ಲಾ ಮನೆಗಳಲ್ಲಿ ಇರುವಂತೆ ಕಟ್ಟುನಿಟ್ಟು, ಸಂಪ್ರದಾಯ ಪಾಲನೆ, ನ್ಯಾಯ, ನೀತಿ, ನಿಷ್ಠೆಯ ಪಾಠದ ಉಚ್ಚಾರ, ಪುನರುಚ್ಚಾರ. ಜೀವನದಲ್ಲಿ ಆದರ್ಶ ವ್ಯಕ್ತಿಯಾಗಲು ಹೇಗಿರಬೇಕೆಂಬ ಶಿಕ್ಷಣಕ್ಕೇ ಮಹತ್ವ. ಬೇರೆ ಮಕ್ಕಳಂತೆ ಸದಾ ಬಣ್ಣಬಣ್ಣದ ಆಟಿಕೆ, ದಿರಿಸುಗಳನ್ನು ನನಗೆ ಉಡುಗೊರೆಯಾಗಿ ಬರಲಿಲ್ಲ. ಆದರೆ ಅನುಪಮಾ ನಿರಂಜನರ 'ದಿನಕ್ಕೊಂದು ಕಥೆ' , 'ಭಾರತ-ಭಾರತಿ', 'ರಾಮಾಯಣ' , 'ಮಹಾಭಾರತ' , 'ಚಂದಮಾಮ', 'ಬಾಲಮಿತ್ರ' ಇತ್ಯಾದಿಗಳಿಗೆ ಬರವಿರಲಿಲ್ಲ.

ಸಮಯ ಪರಿಪಾಲನೆ, ಜೀವನದ ಉನ್ನತ ಮೌಲ್ಯಗಳನ್ನು ತಾವು ಪಾಲಿಸಿ, ಅದರ ಮೂಲಕ ನಮಗೆ ಮಾದರಿಯಾದವರು ನನ್ನಪ್ಪ. ಒಂದೇ ಕೊರಗೆಂದರೆ ವೈದ್ಯೆಯಾಗಬೇಕೆಂಬ ನನ್ನ ಆಸೆಯ ಬಳ್ಳಿಯನ್ನು ಅವರು ಕಿತ್ತೆಸೆದದ್ದು. ( ಆಗ ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸಿದರೆ ಮದುವೆ ಮಾಡುವುದು ಕಷ್ಟ ಎಂಬ ಕಾರಣ ಒಂದಾದರೆ , ಮತ್ತೊಂದು, ಬರುವ ಒಂದು ಸಂಬಳದಲ್ಲಿ 3 ಮಕ್ಕಳನ್ನೂ, ಬೆನ್ನಿಗೆ ಬಿದ್ದವರನ್ನೂ ಓದಿಸಲು, ಮದುವೆ ಮಾಡಲು ತಗುಲುವ ಖರ್ಚು ).

ಅಪ್ಪ HALನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ 2ನೆಯ ಪಾಳಿ ಇದ್ದಾಗ ಅಪ್ಪ , ಅಮ್ಮ ಇಬ್ಬರೂ ನಮಗೆ ಶಾಲೆಯ ಬಳಿ ಊಟ ತಂದು , ತಿನ್ನಿಸುತ್ತಿದ್ದರು. ನಾನು ಕಾಲೇಜಿನಲ್ಲಿ ಕಲಿಯುವಾಗಲೂ ತಂದು ಕೊಡುತ್ತಿದ್ದರು.

ಓದು ಮುಗಿಸಿ ಕೆಲಸ ದೊರಕಿದಾಗ ನೋಡಬೇಕಿತ್ತು ನನ್ನಪ್ಪನ ಖುಷಿ. ವಿದ್ಯಾರ್ಥಿ ಜೀವನದಿಂದಲೂ ಬೆಳಿಗ್ಗೆ 4.30 ಇಂದ 4.45ರೊಳಗೆ ಏಳುವ ಅಭ್ಯಾಸ ನನಗೆ. ಬಿ.ಇ.ಎಲ್ ನಲ್ಲಿ ಮೊದಲ ಪಾಳಿಗೆ ಅಂದರೆ ಬೆಳಿಗ್ಗೆ 5.35ರ ಬಸ್ ಗೆ ಹೋಗಬೇಕಿತ್ತು. ಅಪ್ಪ ನನ್ನನ್ನು ಎಬ್ಬಿಸುವಾಗ ಮುದ್ದು ಮಾಡಿಯೇ ಎಬ್ಬಿಸುತ್ತಿದ್ದುದು. 4.30ಗೇ ಎದ್ದು ಬಾಯ್ಲರ್ ಗೆ ನೀರು ತುಂಬಿಸಿ, ನೀರು ಕಾದ ಮೇಲೆ ನನ್ನನ್ನು ಎಬ್ಬಿಸುತ್ತಿದ್ದರು.

ಸಂಜೆ 4 ಗಂಟೆಗೆ ಮನೆಗೆ ಬಂದ ಕೂಡಲೇ ಅಪ್ಪನಿಗೆ ಇಡೀ ದಿನದ ವರದಿ ಒಪ್ಪಿಸುತ್ತಿದ್ದೆ. ಇದು ಈಗಲೂ ಚಾಲ್ತಿಯಲ್ಲಿದೆ. ರಾತ್ರಿ ಬೇಗನೆ ಊಟ ಮಾಡಿ ಮಲಗಬೇಕಿತ್ತು. ನನಗೆ ನಿದ್ದೆಯ ಅವಶ್ಯಕತೆ ಇದೆಯೆಂಬ ಸಹಜ ಕಾಳಜಿ ಅವರಿಗೆ. ಹಾಗಾಗಿ ನನ್ನ ಅಣ್ಣ,ತಮ್ಮ ದೂರದರ್ಶನದಲ್ಲಿ ವಿಂಬಲ್ಡನ್ ಪಂದ್ಯಗಳನ್ನು ನೋಡಬೇಕೆಂದರೆ ನನ್ನ ಒಪ್ಪಿಗೆ ಬೇಕಿತ್ತು 😀.

ಶಾಲೆಯಲ್ಲಿದ್ದಾಗ ರಾಷ್ಟ್ರ ಮಟ್ಟದ ಕ್ರೀಡಾಕೂಟವೊಂದರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮೊದಲ ಅವಕಾಶ ಬಂದಾಗ ಅಪ್ಪ ಕಳಿಸಲು ಬಿಲ್ಕುಲ್ ಒಪ್ಪಲಿಲ್ಲ. ಕಡೆಗೆ ಸ್ನೇಹಿತರು, ನನ್ನ ಕೋಚ್ ಮನೆಗೆ ಬಂದು ಒಪ್ಪಿಸಿದರು. ನಂತರ ಕಾಲೇಜಿನಲ್ಲಿ ಶಿವರಾಮ್ ಎಂಬ ಪ್ರಾಂಶುಪಾಲರು ಅವರನ್ನು ಒಪ್ಪಿಸಿದ್ದರು. ಅಪ್ಪನಿಗೆ ಆತಂಕ ಮಗಳೆಲ್ಲೂ ಹೊರಗೆ ಹೋಗಿ ರೂಢಿಯಿಲ್ಲ. ನೆರೆ ರಾಜ್ಯದಲ್ಲಿ ಹೇಗೋ ಏನೋ ಎಂದು.  ಆದರೆ ನನಗೆ ಎಂದೂ ತೊಂದರೆಯಾಗಲಿಲ್ಲ. ನನಗಿಂತ ಹಿರಿಯ ಸ್ನೇಹಿತರೆಲ್ಲ ಮಗುವಂತೆಯೇ ನೋಡಿಕೊಳ್ಳುತ್ತಿದ್ದರು.
ಒಬ್ಬಳೇ ಮಗಳೆಂದು ಅಪ್ಪ, ಅಮ್ಮ ಮನೆಗೆಲಸದಲ್ಲಿ ಯಾವ ರಿಯಾಯಿತಿಯೂ ತೋರಿಸುತ್ತಿರಲಿಲ್ಲ. ಬೆಳಿಗ್ಗೆ ತರಬೇತಿ ಶಿಬಿರಕ್ಕೆ 6 ಗಂಟೆಗೆ ಹೋಗುವಷ್ಟರಲ್ಲಿ ಮನೆಗೆಲಸ ಮುಗಿಸಿ ಹೋಗಬೇಕಿತ್ತು. ಹಾಗಾಗಿ ಸಮಯಪಾಲನೆ ಕಲಿತೆ. ಆಗ ಬಯ್ದುಕೊಂಡರೂ ನಂತರ ಯೋಚಿಸುತ್ತಿದ್ದೆ , ಕೆಲಸ ಕಲಿತರೆ ಮುಂದೆ ನನಗೇ ಅನುಕೂಲ ಎಂದು.

ನಂತರ ಮದುವೆಯ ಯೋಚನೆ ಬಂದಾಗ ಅಪ್ಪನಿಗೆ ಮಗಳು ಕಣ್ಣ ಮುಂದೆಯೇ ಇರಬೇಕೆಂಬಾಸೆ. ಹೆಚ್ಚೆಂದರೆ 2 ಬೀದಿ ಆಚೆ ಮನೆ ಇರಬೇಕೆಂಬ ಇಚ್ಛೆ.
ಕೆಲಸ ಸಿಕ್ಕಾಗ ಆರ್ಥಿಕವಾಗಿ ನಾನು ಸ್ವಾವಲಂಬಿಯಾದೆ ಎಂದು ಖುಷಿಯಾದರೂ ನಂತರ ಮನೆಯ ಒಳ-ಹೊರಗೆ ಕೆಲಸ ಮಾಡಿಕೊಂಡು, ಮಕ್ಕಳ ಬೆಳವಣಿಗೆಯ ಕಡೆ ಗಮನ ಹರಿಸಬೇಕಾಗಿ ಬಂದಿದ್ದರಿಂದ, ಆಯಾಸ ಆಗುತ್ತಿದ್ದುದು ಸಹಜ.  ಅಪ್ಪನಿಗೆ ಈಗ ಮಗಳನ್ನು ನೋಡಿದರೆ ಕರುಳು ಹಿಂಡಿದಂತಾಗುತ್ತಿತ್ತು.  ಪ್ರತಿದಿನ ಒಂದೇ ಬೋಧನೆ ' ಸರಿಯಾಗಿ ತಿನ್ನು. ಆರೋಗ್ಯ ನೋಡಿಕೋ. ಹಕ್ಕಿಯಂತೆ ತಿಂದರೆ ಶಕ್ತಿ ಬರ್ತದಾ' ಎಂದು.

ಈಗ ಮಕ್ಕಳೂ ದೊಡ್ಡವರಾಗಿದ್ದಾರೆ.  ಎರಡೂ ಕಡೆ ಕೆಲಸದ ಹೊರೆ ಇದ್ದೇ ಇದೆ. ಈಗ ಅಪ್ಪನಿಗೆ ಬೆಳಿಗ್ಗೆ ಹೋಗಿ ರಾತ್ರಿ ಸುಸ್ತಾಗಿ ಬರುವ ನನ್ನನ್ನು ನೋಡಲಾಗುತ್ತಿಲ್ಲ. ಇದೆಂಥ ಕೆಲಸ? ಬಿಟ್ಟು ನೆಮ್ಮದಿಯಾಗಿ ಮನೆಯಲ್ಲಿರು ಎನ್ನುತ್ತಾರೆ. ನನಗೂ ಸುಸ್ತಾಗಿದ್ದರೂ ಅಪ್ಪ ಹೆಗಲ ಮೇಲೆ ಕೈ ಹಾಕಿ 'ಏನಪ್ಪಾ? ಸುಸ್ತಾಗ್ತಿದೆಯಾ?' ಎಂದ ಕೂಡಲೇ ಆಯಾಸವೆಲ್ಲ ಮಾಯವಾಗುತ್ತದೆ.

ಅಮ್ಮ ಎಷ್ಟೇ ಪ್ರೀತಿ, ಮಮತೆ ತೋರಿದರೂ ನನಗೆ ನನ್ನಪ್ಪನ ಮೇಲೇ ಪ್ರೀತಿ ಹೆಚ್ಚು. ಫೋನ್ ಮಾಡಿದರೂ ಸಹ ಅಮ್ಮನೊಂದಿಗೆ ಔಪಚಾರಿಕ ಮಾತಾದರೆ ಅಪ್ಪನೊಂದಿಗೆ ಗಂಟೆಗಟ್ಟಲೆ ಹರಟೆ, ನಗು. ನನ್ನಮ್ಮನಿಗೆ ಕೆಲವೊಮ್ಮೆ ಹೊಟ್ಟೆಕಿಚ್ಚಾಗುವಷ್ಟು. ಅಪ್ಪನನ್ನು ಕರೆಯಿರಿ ಎಂದರೆ 'ಅದೇನು ಅಪ್ಪ-ಮಕ್ಕಳ ಮಾತು?. ಮೊದಲು ನನ್ನ ಜೊತೆ ಮಾತಾಡು' ಎನ್ನುವಷ್ಟು 😂😂.

ಮದುವೆಯಾಗಿ 25 ವರ್ಷಗಳಾದರೂ ನನ್ನ ಅಪ್ಪ ಈಗಲೂ ಸಂಜೆ 7 ಗಂಟೆಗೆ ಕರೆ ಮಾಡುತ್ತಾರೆ. ಮನೆ ತಲುಪಿದ್ದೇನೆಯೋ ಇಲ್ಲವೋ ತಿಳಿಯಲು.  ಸಂಜೆ ಎಲ್ಲಾದರೂ ಸ್ನೇಹಿತರ ಜೊತೆ ಹೋಗಬೇಕೆಂದರೆ matchfixing ಮಾಡಬೇಕು. ನನ್ನ ಪತಿ ' ಎಲ್ಲೋ ಹೋಗಿದ್ದಾಳೆ ಅಣ್ಣ. ಬರ್ತಾಳೆ ಬಿಡಿ' ಎಂದರೂ ಮನೆ ತಲುಪುವವರೆಗೆ ಕರೆ ಮಾಡುತ್ತಲೇ ಇರುತ್ತಾರೆ.

ಕೆಲವರಿಗೆ ಇವೆಲ್ಲ ಕಿರಿಕಿರಿ ಎನಿಸಬಹುದು. ಆದರೆ ನನಗೆ ಅವರ ಪ್ರತಿ ನಡೆ-ನುಡಿಯ ಹಿಂದೆ ಕಾಣುವುದು ಅವರ ಅಂತಃಕರಣ.

-  ತಾರಾ ಶೈಲೇಂದ್ರ

Monday, November 9, 2015

ದಿವಿನಾದ ದೀಪಾವಳಿ

                                           
                                                    ದಿವಿನಾದ ದೀಪಾವಳಿ

                                                 ದೀಪಂ ಜ್ಯೋತಿ ಪರಬ್ರಹ್ಮ
                                                 ದೀಪಂ ಜ್ಯೋತಿ ಜನಾರ್ಧನಃ
                                                 ದೀಪೋ ಮೇ ಹರತೋ ಪಾಪಂ                      
                                                 ದೀಪಂ ಜ್ಯೋತಿ ನಮೋಸ್ತುತೇ


                                     ಕತ್ತಲೆಯಿಂದ   ಬೆಳಕಿನೆಡೆಗೆ , ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆವುದೇ ದೀಪಾವಳಿ ಹಬ್ಬದ ಆಶಯ . ಕರ್ನಾಟಕದಲ್ಲಿ ನೀರು ತುಂಬುವ ಹಬ್ಬದೊಂದಿಗೆ ಶುರುವಾಗುವ ದೀಪಾವಳಿಯ ಸಂಭ್ರಮ  ಕಡೆಗೆ ಉತ್ಥಾನ ದ್ವಾದಶಿಯಂದು ತುಳಸಿಪೂಜೆ (ಕಿರುದೀಪಾವಳಿ)ಯಂದು ಕೊನೆಗೊಳ್ಳುತ್ತದೆ   .  ದೀಪಗಳ ಸಾಲು ಮನಮೋಹಕವಾಗಿರುತ್ತದೆ .  ಸತ್ಯದ, ಧರ್ಮದ ವಿಜಯವೆಂದೂ  ಈ ಹಬ್ಬ ಆಚರಿಸಲ್ಪಡುತ್ತದೆ . ಅಮಾವಾಸ್ಯೆಯ ಹಿಂದಿನ ದಿನ ನರಕಚತುರ್ದಶಿ , ಹಾಗೂ ಅಮಾವಾಸ್ಯೆಯ ಮಾರನೆಯ ದಿನ ಬಲಿಪಾಡ್ಯಮಿ ಎಂದೂ ಆಚರಿಸುತ್ತೇವೆ .

ಕೃಷ್ಣ ಪಕ್ಷದ ೧೩ನೇ ದಿನವಾದ ನೀರು ತುಂಬುವ ಹಬ್ಬದಂದು ಅಭ್ಯಂಜನ ಮಾಡಿ , ಮನೆಯಲ್ಲಿರುವ ಹಂಡೆ , ಬಿಂದಿಗೆಗಳನ್ನು ತಿಕ್ಕಿ , ಹೊಳೆಯುವಂತೆ ತೊಳೆದು , ನೀರು ತುಂಬಿ , ಅವಕ್ಕೆ ಪೂಜೆ ಮಾಡಿ , ಹಬ್ಬದಡುಗೆ ಮಾಡಿ ಉಣ್ಣುತ್ತೇವೆ .

ಪುರಾಣಗಳು ಹೇಳುವಂತೆ ನರಕಾಸುರ ಎಂಬ ದಾನವನು ಬ್ರಹ್ಮನಿಂದ ' ತನ್ನ ತಾಯಿಯಾದ ಭೂದೇವಿಯಿಂದ ಮಾತ್ರ ತನಗೆ ಸಾವು ಬರುವಂತೆ ವರ ಪಡೆದಿರುತ್ತಾನೆ . ಅವನ ತಾಯಿಯಾದ ಭೂದೇವಿಯೂ ಸಹ ವಿಷ್ಣುವಿನಿಂದ ' ತಾನು ಬಯಸಿದಾಗ ಮಾತ್ರ ತನ್ನ ಮಗನಿಗೆ ಸಾವು ಬರಬೇಕು ' ಎಂಬ ವರ ಪಡೆದಿರುತ್ತಾಳೆ .

ವರ ಪಡೆದ ತನಗೆ ಸಾವು ಬರಲಾರದೆಂದು ನರಕಾಸುರನು ಅಟ್ಟಹಾಸದಿಂದ ಮೆರೆಯುತ್ತಾ ೧೬೦೦೦ ಮಹಿಳೆಯರನ್ನು ಲಪಟಾಯಿಸಿ ಸೆರೆಯಲ್ಲಿಡುತ್ತಾನೆ. ದೇವೇಂದ್ರ ಹಾಗೂ ಇತರ ದೇವತೆಗಳ ಆಗ್ರಹದಿಂದ ಶ್ರೀಕೃಷ್ಣನು ಪ್ರಿಯಸತಿ ಸತ್ಯಭಾಮೆ ಹಾಗೂ ಗರುಡನೊಡಗೂಡಿ ನರಕಾಸುರನ ವಿರುದ್ಧ ಸಮರಕ್ಕಿಳಿಯುತ್ತಾನೆ .  ಆ ದಾನವ ವೀರ ಕೃಷ್ಣನಿಗೆ ಸರಿಸಾಟಿಯಾಗಿ ಯುದ್ಧ ಮಾಡುತ್ತಾ ತನ್ನ ಶಕ್ತಿ ಆಯುಧವನ್ನು ಕೃಷ್ಣನೆಡೆಗೆ ಎಸೆದಾಗ, ಅವನು ಸ್ಮೃತಿ ತಪ್ಪಿ ಬಿದ್ದವನಂತೆ ನಟಿಸುತ್ತಾನೆ. ಆಗ ಜೊತೆಗಿದ್ದ ಸತ್ಯಭಾಮೆಯೂ ಸೇರಿ, ನರಕಾಸುರನನ್ನು ಸಂಹರಿಸುತ್ತಾಳೆ  . ಸತ್ಯಭಾಮೆಯು ವಿಷ್ಣುವಿನ ಹೆಂಡತಿ ಭೂದೇವಿಯ ಅವತಾರವಾದ್ದರಿಂದ, ನರಕಾಸುರನನ್ನು ಅವನು ಪಡೆದ ವರದಂತೆಯೇ  ಸಂಹರಿಸುತ್ತಾಳೆ , ಇದು ನರಕಚತುರ್ದಶಿಯೆಂದು  ಆಚರಿಸಲ್ಪಡುತ್ತದೆ   .

ಕರ್ನಾಟಕದಲ್ಲಿ ನಾ ಕಂಡಂತೆ ಕೆಲವು ವರ್ಷಗಳ ಹಿಂದೆ ಅಮಾವಾಸ್ಯೆಯಂದು ಲಕ್ಷ್ಮಿಪೂಜೆ  ಮಾಡುತ್ತಿರಲಿಲ್ಲ . ಈಗ ಬಹಳ ಜನ ಅಮಾವಾಸ್ಯೆಯ ಸಂಜೆ ಈ ಪೂಜೆ ಮಾಡುತ್ತಾರೆ .

ವಿಷ್ಣು ವಾಮನನ ಅವತಾರದಲ್ಲಿ ಬಲಿಚಕ್ರವರ್ತಿಯನ್ನು ಸಂಹರಿಸುವ ಸಮಯದಲ್ಲಿ ಮನೆಮನೆಗಳಲ್ಲಿ ಅವನ ನೆನಪಲ್ಲಿ ದೀಪ ಬೆಳಗಿ ಸ್ವಾಗತಿಸುವಂತೆ ವರ ನೀಡಿದನೆಂದು  ಪ್ರತೀತಿ . ಹಾಗಾಗಿ ಪಾಡ್ಯದಂದು ಬಲಿಪಾಡ್ಯಮಿ ಎಂದು ಆಚರಿಸುತ್ತೇವೆ . ಅಂದು ಸಂಜೆ  ರೈತಾಪಿ ಜನರು ಗೋವರ್ಧನ ಪೂಜೆ ಮಾಡುತ್ತಾರೆ . ಸೆಗಣಿಯಿಂದ ಗೋವರ್ಧನಗಿರಿಯಂತೆ ಆಕಾರ ಮಾಡಿ , ಅದಕ್ಕೆ ಚೆಂಡು ಹೂವು , ಚಂದನ ಇಟ್ಟು ಮನೆಯ ಬಾಗಿಲುಗಳಿಗೆ, ತುಳಸಿಕಟ್ಟೆಗೆ ಇಡುತ್ತಾರೆ .   ತಲೆಬಾಗಿಲ ಬಳಿ ನಾಲ್ಕು ಮೂಲಗಳಲ್ಲಿ ಹಾಗೂ ಮಧ್ಯೆ ಸೆಗಣಿಯ ಗಿರಿಯಾಕಾರವನ್ನಿಟ್ಟು , ಸುತ್ತಲೂ ಸೆಗಣಿಯಿಂದ ಕೋಟೆಯಂತೆ ಕಟ್ಟಿ ,  ಹಾಲನ್ನು ಮಧ್ಯೆ ಇರುವ ಗಿರಿಯಾಕಾರಕ್ಕೆ ಹುಯ್ಯುತ್ತಾ 'ಬಲೀಂದ್ರ ನ ರಾಜ್ಯ ಹೊನ್ನೋ  ಹೊನ್ನು '  ಎಂದು ಹಾಲು ಕೋಡಿಯಾಗಿ ಹರಿಯುವಂತೆ ಹುಯ್ದು ಸಮೃದ್ಧಿಯನ್ನು ಹಾರೈಸುತ್ತಾರೆ .

ಕಜ್ಜಾಯ , ಹೋಳಿಗೆ , ಚಕ್ಕುಲಿ ಮಾಡಿ ಸವಿಯುತ್ತಾ , ಸಂಜೆ ದೀಪಗಳನ್ನು ಸಾಲುಸಾಲಾಗಿ ಹಚ್ಚಿ , ಅಂಧಕಾರವನ್ನು ತೊಲಗಿಸುತ್ತೇವೆ .  ಪಟಾಕಿ ಸಿಡಿಸುವುದೂ ಒಂದು ಸಂಭ್ರಮ. ಆದರೆ ಈಗ ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ಜನರು ಎಚ್ಚೆತ್ತು ವಾಯುಮಾಲಿನ್ಯ, ಶಬ್ದಮಾಲಿನ್ಯ ಕಡಿಮೆ ಮಾಡಲು ಹಾಗೂ ಪಟಾಕಿ ತಯಾರಿಸುವ ಮಕ್ಕಳನ್ನು ಬಾಲಕಾರ್ಮಿಕರಾಗುವುದನ್ನು ತಪ್ಪಿಸಲು , ವಿವೇಚನೆಯುಳ್ಳ ನಾವು ಪಟಾಕಿ ಸಿಡಿಸುವುದನ್ನು ನಿಲ್ಲಿಸಿ , ಬೆಳಕಿನ ಹಬ್ಬವನ್ನು  ಶಾಂತಿ , ಸಮೃದ್ಧಿ ಹಾಗೂ ಪ್ರೀತಿ ಬೆಳೆಸುವ ಕುಟುಂಬದ ಹಬ್ಬವಾಗಿ ಆಚರಿಸೋಣ .


-  ತಾರಾ ಶೈಲೇಂದ್ರ

Tuesday, March 17, 2015

                            ಅವ್ವ
                       

ಇಂದು ಯಾಕೋ ತುಂಬಾ ನೆನಪಾಗ್ತಿದ್ದಾರೆ ನನ್ನ 'ಅವ್ವ' ( ನನ್ನ ಅಜ್ಜಿ ).
ನನ್ನ ಮಾವ 9 ತಿಂಗಳ ನನ್ನನ್ನು ಎತ್ತಿಕೊಂಡು ಅಮ್ಮನಿಗೆ ' ನಮ್ಮನೇಲಿ ಸ್ವಲ್ಪ ದಿನ ಇರಲಿ ' ಎನ್ನುತ್ತಾ ಕರೆದೊಯ್ದು ಸಾಕಿದರು .  ಇನ್ನೂ ಮದುವೆಯಾಗಿರದ ಚಿಕ್ಕಿ , ಅಜ್ಜಿ, ಮಾವಂದಿರು , ಅತ್ತೆಯರು , ಅವರ ಮಕ್ಕಳು ಎಲ್ಲರ ಕಣ್ಮಣಿಯಾಗಿ ಬೆಳೆದ ನನಗೆ ನನ್ನ 'ಅವ್ವ' ಅತ್ಯಂತ ಪ್ರೀತಿಯ ವ್ಯಕ್ತಿಯಾಗಿದ್ದರು .

ಮಾರುದ್ದದ ಕೂದಲಿಗೆ ಮಿಳ್ಳೆ  ಬೆಚ್ಚನೆಯ ಎಣ್ಣೆಯನ್ನು ಹಚ್ಚಿ , ಗಿರಿಗಿರಿದು 4 ಕಾಲಿನ ಜಡೆ ಹಾಕಿ , ಮುಂಗುರುಳ ತೀಡಿ , ಹೂವು ಮುಡಿಸುತ್ತಿದ್ದ ಅವ್ವ , ಸೀಗೆಕಾಯಿ , ಅಂಟುವಾಳದ ಕಾಯಿ ಬೇಯಿಸಿದ ನೀರಿನಲ್ಲಿ ತಲೆ ತೊಳೆದು , ಹಂಡೆ ನೀರನ್ನು ಮೊಗೆಮೊಗೆದು ಎರೆದು , ಮಲೆನಾಡ ಗಾಳಿಯಿಂದಾಗಿ ಶೀತವಾಗಬಾರದೆಂದು ಸಾಂಬ್ರಾಣಿ ಹೊಗೆ ಹಾಕಿ ಕೂದಲೊಣಗಿಸಿ ,  ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನಿಸುತ್ತಿದ್ದ ಅವ್ವ,
'ಅಡುಗೆ ಹೇಳಿಕೊಟ್ಟು ಬರುವಂಥದ್ದಲ್ಲ ,  ನೀನೆ ಸ್ವಂತ ಪ್ರಯತ್ನದಿಂದ ಕಲಿಯಬೇಕು ' ಎನ್ನುತ್ತಿದ್ದ ಅವ್ವ ,  ಹಾಡು ಹಸೆ ಕಲಿಯದ ಹೆಣ್ಣುಮಕ್ಕಳು ನಿರ್ಗಂಧ ಕುಸುಮದಂತೆ ಎನ್ನುತ್ತಿದ್ದ ಅವ್ವ,  ನಂತರ , ಬೆಂಗಳೂರಿಗೆ ಬಂದು ವಿದ್ಯಾರ್ಥಿ ಜೀವನ ಮುಗಿಸಿ ,  ಕೆಲಸಕ್ಕೆ ಸೇರಿದರೂ , ಬೇಸಿಗೆ ರಜೆಗೆ , ದಸರಾ ರಜೆಗೆ ಬರಲೇಬೇಕೆಂದು ತಾಕೀತು ಮಾಡುತ್ತಿದ್ದ ಅವ್ವ, ಹಾಸಿಗೆಯ ಮೇಲೆ ಅವರದೇ ನೂಲಿನ ಸೀರೆಯಿಂದ ತಾವೇ ಹೊಲಿಯುತ್ತಿದ್ದ ಕೌದಿ ಹಾಸಿ ,  ಬೆಚ್ಚನೆಯ ಪ್ರೀತಿಯ ಅನುಭವ ಕೊಟ್ಟ ಅವ್ವ, ರಾತ್ರಿ ನಿದ್ದೆಯಲ್ಲಿ ಅಕಸ್ಮಾತ್ ಸೀನಿದರೆ , ನನಗರಿವಿಲ್ಲದೆ ಹಸಿ ಈರುಳ್ಳಿಯನ್ನು ನನ್ನ ಅಂಗಾಲಿಗೆ ತಿಕ್ಕುತ್ತಿದ್ದ ಅವ್ವ , ಯಾವುದೋ ಹೊಸ ರುಚಿ ಪ್ರಯೋಗ ಮಾಡಲೆಂದು ಸರಿ ರಾತ್ರಿಯಲ್ಲಿ ಎಬ್ಬಿಸಿ ಕೂರಿಸಿಕೊಳ್ಳುತ್ತಿದ್ದ ಅವ್ವ , ಅಪ್ಪ - ಅಮ್ಮ ನನಗೆ ಗದರಲೂ ಬಿಡದೆ , ನನ್ನ ಕೆಂಪು ಕೋಟೆಯಾಗಿದ್ದ ನನ್ನವ್ವ ,

ಇಳಿ ವಯಸ್ಸಿನಲ್ಲಿ ಒಬ್ಬಂಟಿಯಾದರೂ ,  ತನ್ನ ನೇಮ , ನಿಷ್ಠೆಗಳನ್ನು ಬಿಡದೆ ,  ಶನಿವಾರದಂದು ಆ ಶ್ರೀನಿವಾಸನನ್ನೂ , ಸೋಮವಾರದಂದು ಧರ್ಮಸ್ಥಳದ ಮಂಜುನಾಥನನ್ನೂ , ಬೇಲೂರಿನ ಚೆನ್ನಕೇಶವನನ್ನು ಧರೆಗಿಳಿವಂತೆ ಪೂಜಿಸುತ್ತಿದ್ದ ನನ್ನವ್ವ , 'ನಿನ್ನ ಮದುವೆಯನ್ನು ನೋಡದೆ ನಾನು ಹೋಗುವವಳಲ್ಲ ' ಎನ್ನುತ್ತಿದ್ದ ನನ್ನವ್ವ , ನನ್ನ ಮೊದಲ ಸಂಬಳದಲ್ಲಿ ಸೀರೆ ತಂದು ಕೊಟ್ಟಾಗ ಅಪ್ಪಿ ಮುದ್ದಾಡಿದ್ದ ನನ್ನವ್ವ , ಕಡೆಗೂ ನನ್ನ ಹುಟ್ಟುಹಬ್ಬದಂದೇ ನಮ್ಮನ್ನಗಲಿ ಮರೆಯದ ನೆನಪಾಗಿ ಉಳಿದುಬಿಟ್ಟಿದ್ದಾರೆ .

ಎಷ್ಟೋ ವರ್ಷಗಳು ಹುಟ್ಟುಹಬ್ಬವನ್ನು ಯಾರಿಗೂ ಹೇಳದೇ ಸುಮ್ಮನಿದ್ದ ನಾನು , ಅಣ್ಣ ಹೇಳಿದಂತೆ ' ಅವ್ವ ಇದ್ದಿದ್ದರೆ ' ಸದಾ ಖುಷಿಯಿಂದಿರು ' ಎಂದು ಹಾರೈಸುತ್ತಿದ್ದರೆಂದುಕೊಂಡು ನಗುವುದನ್ನು ಅಭ್ಯಸಿಸಿಕೊಂಡರೂ , ಅಂದು ಎಂದಿಗಿಂತಲೂ ಅವರನ್ನು ನೆನೆಯುತ್ತೇನೆ . ಬಹುಶಃ ನನಗೆ ಅತ್ಯಂತ ಪ್ರೀತಿಪಾತ್ರರಾದವರು ವಿವಿಧ ಕಾರಣಗಳಿಗೆ ನನ್ನಿಂದ ದೂರವಾಗುತ್ತಾರೋ ಏನೋ . ಕೆಲವು ಸಲ ಯಾರನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಕಮಲದೆಲೆಯ ಮೇಲಿನ ನೀರಿನ ಹನಿಯಂತೆ ಇದ್ದುಬಿಡಬೇಕೆನಿಸುತ್ತದೆ .

- ತಾರಾ ಶೈಲೇಂದ್ರ

Wednesday, November 19, 2014

ಪುರುಷರೇ ಇದು ನಿಮಗಾಗಿ

                                                                                                                                     

   ಮೊನ್ನೆ ಸ್ನೇಹಿತರೊಬ್ಬರು ಹೇಳುತ್ತಿದ್ದರು " ಜೀವಾವಧಿ ಶಿಕ್ಷೆಯ ಅರ್ಧ ಭಾಗ ಪೂರೈಸಿದ ಖುಷಿಗೆ ನಾಳೆ ರಜೆ ಬರೆದಿದ್ದೀನಿ " ಅಂತ . ಅರೆ ಹಾಗಂದ್ರೆ ಏನು ಅಂತ ಆಶ್ಚರ್ಯ ಆಯ್ತು . ಅಮೇಲೆ ತಿಳೀತು ಮರುದಿನ ಅವರ ವಿವಾಹ ವಾರ್ಷಿಕೋತ್ಸವ ( ೭ ನೆಯದು). "ಅದಕ್ಯಾಕ್ರೀ ಜೀವಾವಧಿ ಶಿಕ್ಷೆ ಅಂತೀರಿ ?" ಅಂದಿದ್ದಕ್ಕೆ "ಎಲ್ಲ ನೊಂದ ಗಂಡಸರ ಡೈಲಾಗ್ ರೀ ಇದು " ಅನ್ನಬೇಕೆ ಆಸಾಮಿ :) .

ಅದಾದ ಮೇಲೆ ನನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದೆ . ಅವನೂ ಸಹ ಹೀಗೇ  ಮಾತನಾಡಿದ .  ನಂತರ ನನಗೆ "ಅವರು ಹೇಳಿದ್ದು ನಿಜವಿರಬಹುದೇ ? ಬರೀ ಸ್ತ್ರೀ ಶೋಷಣೆಯ ಬಗ್ಗೆ ಮಾತನಾಡುವ ನಾವು ಪುರುಷಶೋಷಣೆಯ ಬಗ್ಗೆ ಹರಿಸಿಲ್ಲವೇಕೆ ?" ಅನಿಸಿತು .  ಹಾಗೆಯೇ ಅನೇಕ ಮಿತ್ರರನ್ನು ಕೇಳುತ್ತಾ ಹೋಗುವಾಗ ಬಗೆಬಗೆಯ ಅನುಭವಗಳು ಕೇಳಿ ಬಂದವು .  ಅವುಗಳಲ್ಲಿ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ  :೪

೧.  ಒಬ್ಬನ ಪತ್ನಿಗೆ ಶನಿವಾರ, ಭಾನುವಾರ ಮನೆಯಲ್ಲಿ ಅಡುಗೆ ಮಾಡಲಾಗುವುದಿಲ್ಲ . ಕಾರಣ ? ಸೋಮವಾರದಿಂದ ಶುಕ್ರವಾರದವರೆಗೆ ಅಡುಗೆಮನೆಯಲ್ಲಿ ದುಡಿಯುವುದರಿಂದ ಶನಿವಾರ, ಭಾನುವಾರ ಅಡುಗೆಮನೆಗೆ ಬೀಗವಂತೆ . ಅವನು ವಾರವಿಡೀ ಕ್ಯಾಂಟೀನ್ ನಲ್ಲಿ ತಿಂದಿರುತ್ತಾನೆ . ರಜೆಯ ದಿನಗಳಲ್ಲಿ ಮನೆಯ ಊಟ ಬೇಕು ಅನಿಸುತ್ತದಂತೆ . ಅದೂ ಅಲ್ಲದೆ , ಮೂರು ಹೊತ್ತೂ ಹೊರಗೆ ತಿನ್ನುವುದು ಬೇಸರದ ಸಂಗತಿ ಹೌದು . ಜೊತೆಗೆ ಹಣವೂ ದಂಡ . ಒಬ್ಬರ ಸಂಬಳದಲ್ಲಿ ಬೆಂಗಳೂರಿನಲ್ಲಿ ಜೀವನ ಮಾಡುವ ಕಷ್ಟ ಅನುಭವಿಸಿದವರಿಗೇ ಗೊತ್ತು . ತಿಂಗಳ ಕೊನೆಗೆ ಅವನ ಪರದಾಟ ನೋಡಲಾಗದು .

೨. ಇನ್ನೊಬ್ಬನ ಪತ್ನಿ ಸಂಶಯ ಸ್ವಭಾವದವಳು . ಮನೆ ತಲುಪುವುದು ಸ್ವಲ್ಪ ತಡವಾದರೆ ,  "ಎಲ್ಲಿಗೆ ಹೋಗಿದ್ರಿ ? ಯಾರ ಜೊತೆ ಹೋಗಿದ್ರಿ ? " ಇತ್ಯಾದಿ ಪ್ರಶ್ನೆಗಳು . ಪಾಪ ಅವನು ಗಡ್ಡ ಬೋಳಿಸಿದರೆ , "ಯಾರನ್ನು ನೋಡೋಕೆ ಹೋಗ್ತಿದ್ದೀರಿ ? ಎನೋ ಪ್ರೋಗ್ರಾಮ್ ಇರಬೇಕು .  ನನಗೇನಾದ್ರು ನೀವು ಹಾಗೆ ಹೀಗೆ ಅಂತ ಗೊತ್ತಾದ್ರೆ , ತವರು ಮನೆಗೆ ಹೋಗ್ತೀನಿ " ಅಂತ ಹೆದರಿಸ್ತಾಳಂತೆ .  ಒಂದು ದಿನ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಭಯಂಕರ ಮಳೆ . ಇವನು ಹೆಂಡತಿಗೆ ಫೋನ್ ಮಾಡಿದರೆ, ನಂಬದೆ , ಮೊಬೈಲ್ನಲ್ಲಿ ಚಿತ್ರ ತೆಗೆದು ಕಳಿಸಲಿಕ್ಕೆ ಹೇಳಿದಳಂತೆ .  ಇದಲ್ವಾ ವರಸೆ ? :)  ಹಾಳಾದ ಧಾರಾವಾಹಿಗಳ ಪ್ರಭಾವ ಇರಬೇಕು .

೩. ಮತ್ತೊಬ್ಬರ ಕಥೆ ಅಲ್ಲಾ ವ್ಯಥೆ ಕೇಳಬೇಕು ನೀವು .  ಪತಿಯ ಮೊಬೈಲ್ ನ ಪಾಸ್ವರ್ಡ್ ಬೇಕಂತೆ . ಕೊಡದಿದ್ರೆ ಗಲಾಟೆ . ಕೊಟ್ಟರೆ , ಯಾರು ಯಾರಿಗೆ ಎಷ್ಟು ಹೊತ್ತಿಗೆ ಕರೆ ಹೋಗಿದೆ, ಎಷ್ಟು ಕರೆನ್ಸಿ  ಖರ್ಚಾಗಿದೆ ? Facebook, whatsapp  ಎಲ್ಲಾ ನಿಮಗ್ಯಾಕೆ ಇತ್ಯಾದಿ ಇತ್ಯಾದಿ ತಲೆ ಚಿಟ್ಟು ಹಿಡಿಸುವ ಪ್ರಶ್ನೆಗಳು .  ಸ್ನೇಹಿತರೊಂದಿಗೆ ಹೊರಗೆ ಹೋದರೆ ತನ್ನ ಪತಿ ಹಾಳಾಗುವನೆಂಬ  ಭಯ ಈಕೆಗೆ .

೪.  ನನ್ನ ಕಿರಿಯ ಸಹೋದ್ಯೋಗಿಯೊಬ್ಬ ಇದ್ದಾನೆ . ಅವನ ಹೆಂಡತಿ ತನ್ನ ತಾಯಿಗೆ ಫೋನ್ ಮಾಡಿ ಇವನು ತುಂಬಾ ಚಿತ್ರಹಿಂಸೆ ಕೊಡುತ್ತಾನೆಂದು ಹೇಳುತ್ತಲೇ ಇವನಿಗೆ ಮುಖ ಮೂತಿ ನೋಡದೆ ಹೊಡೆಯುತ್ತಾಳಂತೆ . ಒಮ್ಮೆ ಮುಖ ಊದಿಕೊಂಡು ಆಸ್ಪತ್ರೆಗೆ ಹೋದರೆ , ವೈದ್ಯರಿಗೆ ಆಶ್ಚರ್ಯವಂತೆ ಹೇಗಾಯ್ತು ಇದೆಲ್ಲ ಅಂತ . ನಡೆದ ವಿಷಯ ಏನು ಅಂದ್ರೆ , ಲಟ್ಟಣಿಗೆಯಲ್ಲಿ ಮುಖಕ್ಕೆ ಬಾರಿಸಿ, ಕೈ ಬೆರಳು ಮುರಿಯುವಂತೆ ಹೊಡೆದಿದ್ದಳಂತೆ .  ಅವನು ತಿರುಗಿಸಿ ಹೊಡೆಯಲು ಹೋದರೆ ,  ಮಾಡಿಕೊಳ್ತೀನಿ ಅಂತ ಹೆದರಿಸ್ತಾಳಂತೆ .  ಅವನು ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ .

ಪಾಪ ರೀ ಗಂಡಸರು ಹೇಳಿಕೊಳ್ಳುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ . ಯಾರೋ ಹೇಳುತ್ತಿದ್ದರು " ಅಯ್ಯೋ ಮೇಡಮ್ , ಒಳ್ಳೆಯ ಹೆಂಡತಿ ಸಿಕ್ಕರೆ ಗಂಡ ಖುಷಿಯಾಗಿರ್ತಾನೆ . ಇಲ್ಲದಿದ್ದರೆ ವೇದಾಂತಿ  ಆಗುತ್ತಾನೆ " ಅಂತ . ಅಂತರರಾಷ್ಟ್ರೀಯ ಪುರುಷರ ದಿನಾಚರಣೆಯಾದ ಇಂದು (ಪಾಪ ಅವರಿಗೂ ಒಂದು ದಿನ ಇರಲಿ ಆಲ್ವಾ :)  ) , ಪತಿಯನ್ನು ಶೋಷಿಸುವ ಮಹಿಳೆಯರಲ್ಲಿ ವಿನಂತಿ " ದಯವಿಟ್ಟು ನಿಮ್ಮ ಪತಿಯ ಜೀವನವನ್ನು ನರಕ ಮಾಡಬೇಡಿ .  ಬಾಳ ಪಯಣ ಸುಗಮವಾಗಿ ಸಾಗಬೇಕಾದರೆ , ಬದುಕಿನ ಬಂಡಿಯ ಎರಡೂ ಗಾಲಿಗಳು ( ಪತಿ ಹಾಗೂ ಪತ್ನಿ ) ಸಮತೋಲನ ಕಾಯ್ದುಕೊಳ್ಳಬೇಕು.  ಏನಂತೀರಿ ?"

- ತಾರಾ ಶೈಲೇಂದ್ರ 

Sunday, September 28, 2014

ಹೀಗೊಂದು ನೆನಪು

                   ಕೆಲವು ವರ್ಷಗಳ ಹಿಂದೆ ETV ಅವರು 'ಸಿರಿಗಂಧ' ಎಂಬ ರಸಪ್ರಶ್ನೆ ಕಾರ್ಯಕ್ರಮ ಬಿತ್ತರಿಸುತ್ತಿದ್ದರು . ಸಂಜೀವ್ ಕುಲಕರ್ಣಿ ಅದರ ನಿರೂಪಕರು .  ನಮ್ಮ ಸಂಸ್ಥೆಯಿಂದ ೩ ತಂಡಗಳು ಭಾಗವಹಿಸಿದ್ದೆವು .  ೧೦ ಗಂಟೆಗೆ ಹಾಜರಾಗಬೇಕಿತ್ತು . ಹಾಗಾಗಿ , ಅಂದು ಆಫೀಸಿಗೆ ರಜೆ ಹಾಕಿದ್ದೆ . ಮನೆಯವರು ಕಾರ್ಯನಿಮಿತ್ತ ಚೆನ್ನೈಗೆ ಹೋಗಿದ್ದರು . ಮನೆಯಲ್ಲಿ ನನ್ನ ಅತ್ತೆಯವರಿದ್ದರು . ಬೆಳಿಗ್ಗೆ ಎದ್ದ ಕೂಡಲೇ ಮೊದಲು ಕಂಡಿದ್ದು ಅವರೇ .  "ಅಯ್ಯೋ ಬೆಳಿಗ್ಗೆದ್ದು ನನ್ನ ಮುಖ ಯಾಕೆ ನೋಡಿದೆ ? ಅದೇನೋ  ಸ್ಪರ್ಧೆಗೆ ಬೇರೆ ಹೋಗಬೇಕು ಅಂತಿದ್ದೆ . ಹೋಗಿ ಮೊದಲು ದೇವರ ಪಟ ನೋಡು " ಅಂದರು ( ನಮ್ಮ ಮಾವನವರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದರು ) .  ನಾನು "ಅಮ್ಮೋ ಜೀವನದಲ್ಲಿ ಏನೇನೆಲ್ಲ ಅನುಭವಿಸಿದವರು ನೀವು . ಮುತ್ತಿನಂಥ ಮಗನನ್ನು ನನಗಾಗಿ ಹೆತ್ತವರು ನೀವು . ಹೀಗೆಲ್ಲ ಮಾತಾಡಬೇಡಿ . ನಿಮ್ಮನ್ನೇ ಮೊದಲು ನೋಡಿದ್ದೀನಲ್ಲ , ಇವತ್ತು ಖಂಡಿತಾ ನನಗೆ ಬಹುಮಾನ ಸಿಗುತ್ತೆ ನೋಡ್ತಿರಿ " ಅಂದೆ .  ಅವರು ನಕ್ಕು ಸುಮ್ಮನಾದರು .

                  Studio ತಲುಪಿದಾಗ ಇನ್ನೂ ಸಮಯವಿತ್ತು . ನನ್ನ ಸಹೋದ್ಯೋಗಿ ಹಾಗೂ ಈ ಸ್ಪರ್ಧೆಗೆ ನನ್ನ ಜೊತೆಗಾತಿಯಾಗಿ  ಬಂದಿದ್ದವಳು ಕನ್ನಡದಲ್ಲಿ ಎಂ . ಎ ಮಾಡಿದ್ದ ಕಾರಣ ಇತರ ಎರಡು ತಂಡಗಳಲ್ಲಿ ಬಂದಿದ್ದ ಹುಡುಗರಿಗೆ ಅವಳನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಆಸೆಯಿತ್ತು . ನನ್ನಲ್ಲಿ ಕೇಳುತ್ತಿದ್ದರು "ಅವರನ್ನು ನಮ್ಮ ತಂಡಕ್ಕೆ ಕಳಿಸಿ" ಎಂದು . "ಧಾರಾಳವಾಗಿ ಕರೆದುಕೊಳ್ಳಿ  . ನನಗೆ ಯಾರೇ ಜೊತೆಯಾಗಿ ಬಂದರೂ ಸಂತೋಷ"  ಅಂದೆ .  ಇದ್ದದ್ದು ಕರ್ನಾಟಕದ ಕುರಿತು ರಸಪ್ರಶ್ನೆ ಕಾರ್ಯಕ್ರಮ .  ಅದಕ್ಕೆ ೨ ವಾರ ಮೊದಲು BHELನವರು ನಡೆಸುವ ರಾಜ್ಯ ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆಗೆ ಹೋಗಿ , ೫ ಅಂಕಗಳಿಂದ ಮೂರನೇ ಸ್ಥಾನ ಕಳೆದುಕೊಂಡಿದ್ದೆನಾದರೂ,  ತಯಾರಿ ಚೆನ್ನಾಗೇ ಮಾಡಿದ್ದೆ . ಹಾಗಾಗಿ ಈ ಕಾರ್ಯಕ್ರಮವೂ ಚೆನ್ನಾಗಿಯೇ ಆಗುತ್ತದೆಂಬ ನಂಬಿಕೆ ಇತ್ತು .  ಜೊತೆಗಾರರು ಯಾರೇ ಬಂದರೂ , ತೊಂದರೆಯಿಲ್ಲವೆಂದು  ಸುಮ್ಮನಿದ್ದೆ . ಆದರೆ ನನ್ನ ಸ್ನೇಹಿತೆ ತಾನೇ ಅವರಿಗೆಲ್ಲ "ಇಲ್ಲ . ನಾವಿಬ್ಬರೇ ತಂಡವಾಗಿ ಭಾಗವಹಿಸುತ್ತೇವೆ " ಎಂದಳು .  ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ ಅದು . 

                ಅದುವರೆಗೂ ದೂರದರ್ಶನದಲ್ಲಿ ಬಣ್ಣಬಣ್ಣದ ಸೆಟ್ ನೋಡಿ ಬೆರಗಾಗುತ್ತಿದ್ದ ನಾನು , ವಾಸ್ತವದಲ್ಲಿ ಸೆಟ್ ಹೇಗಿರುತ್ತದೆ ಎಂದು ನೋಡಿ , 'ಎಂಥಾ ಭ್ರಮೆ ' ಎಂದುಕೊಂಡಿದ್ದೆ .  ಸಂಜೀವ್ ಕುಲಕರ್ಣಿ ಅವರು "ಓಹೋ ಮಹಿಳಾ ತಂಡ ಬಲು ಗಟ್ಟಿ" ಎಂದು ತಮಾಷೆ ಮಾಡುತ್ತಿದ್ದರು .  ರಸಪ್ರಶ್ನೆ ಕಾರ್ಯಕ್ರಮ ಸೊಗಸಾಗಿದ್ದರೂ, ಆ hotseatನಲ್ಲಿ ಕೂರುವ ಅನುಭವ ಮಾತ್ರ ಮರೆಯಲಾಗದು .  ನಮ್ಮ ತಂಡವೇ ಮುಂದಿದ್ದರೂ ಸಹ , ನನಗೆ ಅತಿ ಹೆಚ್ಚು ಅಂಕ ಗಳಿಸಬೇಕು ಎಂಬ ಆಸೆ . ಪಕ್ಕದಲ್ಲಿ ಇದ್ದ ಹುಡುಗರ ತಂಡ " ನಮಗೂ ಒಂದೆರಡು ಉತ್ತರ ಹೇಳಿಕೊಡಿ " ಎನ್ನುತ್ತಿದ್ದರು.  ಕಡೆಯ ಸುತ್ತಿನಲ್ಲಿ ಪದಬಂಧ ಇತ್ತು .  ಸುಳಿವುಗಳನ್ನು ಸಂಜೀವ್ ಅವರು ನೀಡುತ್ತಿದ್ದರು . ನಮ್ಮ ತಂಡಕ್ಕೆ ಪ್ರಶ್ನೆ ಬಂದಿದ್ದು "ಶಿವರಾಮ ಕಾರಂತರ ಕಾದಂಬರಿಗಳಲ್ಲೊಂದು " ಎಂಬುದು .  ನನಗೆ ಗಾಬರಿಯಲ್ಲಿ ಉತ್ತರವೇ ಹೊಳೆಯುತ್ತಿಲ್ಲ :) . ಇನ್ನೇನು ಸಮಯ ಮುಗಿಯುತ್ತ ಬಂತು ಎನ್ನುವಾಗ ಹೊಳೆಯಿತು "ಮೈಮನಗಳ ಸುಳಿಯಲ್ಲಿ " ಎಂದು .  ಸಂಜೀವ್ ಕುಲಕರ್ಣಿ ಅವರು ಬಹಳ ಸಂತೋಷ ಪಟ್ಟರು . "ನಿಜಕ್ಕೂ ಕಷ್ಟದ ಪ್ರಶ್ನೆಯಾಗಿತ್ತು . ನಿಮಗೆ ಉತ್ತರ ಹೊಳೆದದ್ದು ನನಗೆ ಖುಷಿಯಾಯಿತು" ಎಂದರು .  ನನಗೂ ಸಖತ್ ಖುಷಿ . ಬಹುಮಾನ ಗಳಿಸಿದ್ದಕ್ಕಲ್ಲ . ಆ ಪ್ರಶ್ನೆಗೆ ಉತ್ತರಿಸಿದ್ದಕ್ಕೆ . ಕಾರಣ ಇಷ್ಟೇ .  ವಯಸ್ಸಾದ ನನ್ನ ಅತ್ತೆಯವರಿಗೆ ಪುಸ್ತಕದ ಹುಚ್ಚು . ಈ ಪುಸ್ತಕ ಓದಬೇಕು ಎಂದಿದ್ದರು ಅವರು . ನನಗೆ ಉತ್ತರ ಹೊಳೆಯಲು ಕಾರಣ ಸಹ ಇದೇ ಆಗಿತ್ತು . ಮೊದಲ ಬಹುಮಾನ ಗಳಿಸಿದ್ದಕ್ಕೆ ನನಗಿಂತಲೂ ಹೆಚ್ಚು ಖುಷಿ ಪಟ್ಟವರು ನನ್ನತ್ತೆ .  ಆಗ ಹೇಳಿದೆ " ಬೆಳಿಗ್ಗೆ ಎದ್ದಾಗ ನಿಮ್ಮನ್ನು ನೋಡಿದ್ದಕ್ಕೆ ಮೊದಲ ಬಹುಮಾನ ಬಂತು ನೋಡಿ " .

               ಮತ್ತೆಂದೂ ನನ್ನತ್ತೆ ಆ ಮಾತು ಹೇಳಲಿಲ್ಲ . ಬೇರೆಲ್ಲ ವಿಚಾರಗಳಲ್ಲಿ ಪ್ರಗತಿಪರ ಮನೋಭಾವ ಹೊಂದಿದ್ದ ಅವರು , ಅದ್ಯಾಕೋ ಈ ವಿಷಯದಲ್ಲಿ ಮಾತ್ರ ಬಹಳ ಹಿಂಜರಿದಿದ್ದರು ಅಷ್ಟು ಕಾಲ .  ETV  ರಸಪ್ರಶ್ನೆ ಕಾರ್ಯಕ್ರಮದ ದೆಸೆಯಿಂದ ಇದೊಂದು ಮೂಢ ನಂಬಿಕೆಗೆ ಮುಕ್ತಿ ದೊರಕಿತ್ತು ಅವರ ಮನಸಲ್ಲಿ .

- ತಾರಾ ಶೈಲೇಂದ್ರ
 

Tuesday, September 9, 2014

ಮಸ್ಸೊಪ್ಪಿನ ಪುರಾಣ


                                            ಮಸ್ಸೊಪ್ಪಿನ  ಪುರಾಣ 
                                            

           ನನಗಾಗ ೧೩ ವರ್ಷ . ಮನೆಯ ಬೇರೆ ಕೆಲಸಗಳನ್ನು ಕಲಿತಿದ್ದರೂ , ಅಡಿಗೆ ಮಾಡುವುದನ್ನು ಕಲಿತಿರಲಿಲ್ಲ . ಅಜ್ಜಿ ಮನೆಯಲ್ಲಿ ರಜೆಯ ಮಜಾ ಅನುಭವಿಸಲು ಹೋಗಿದ್ದೆ. ನನ್ನ ಅಜ್ಜಿ ಬಹಳ ಮುದ್ದು ಮಾಡುತ್ತಿದ್ದರೂ  ಸಹ,ಕೆಲಸದ ವಿಷಯದಲ್ಲಿ ಭಾರಿ ಬಿಗಿ.  ಸ್ವಲ್ಪ ದಿನ ಅವರು ತಿಂಡಿ , ಅಡಿಗೆ ಮಾಡುವಾಗ ಪಕ್ಕದಲ್ಲಿದ್ದು ನೋಡುತ್ತಿದ್ದೆ.  ನಂತರ ಶುರುವಾಯ್ತು ಅಜ್ಜಿಯ ವರಾತ . ಹೆಣ್ಣು ಮಕ್ಕಳು ಅಡಿಗೆ ಕಲಿಯಬೇಕು ಎಂದು .  ನಾನೂ ಸಹ ಹೂಂಗುಡುತ್ತಿದ್ದರೂ , ಯಾವತ್ತು ಪ್ರಯತ್ನ ಮಾಡಿರಲಿಲ್ಲ . ಒಂದು ದಿನ ಅಜ್ಜಿ ಇದ್ದಕ್ಕಿದ್ದಂತೆ ' ಮಗಾ ಇವತ್ತು ಅಡಿಗೆ ನೀನೆ ಮಾಡು' ಎನ್ನಬೇಕೆ ?
ಅಜ್ಜಿ ಮನೆಯಲ್ಲಿ ಸೌದೆ ಒಲೆಯಲ್ಲಿ ಅಡಿಗೆ ಮಾಡುತ್ತಿದ್ದುದು . ಹೊಸದಾಗಿ ಒಂದು pump stove ಕೊಂಡು ತಂದಿದ್ದರೂ ಸಹ, ಅದು ಸಿಡಿಯಬಹುದೆಂಬ ಭಯದಲ್ಲಿ ನನ್ನನ್ನು ಅದರ ಹತ್ತಿರ ಸುಳಿಯಗೊಡುತ್ತಿರಲಿಲ್ಲ .  'ಅವ್ವಾ ಮಸ್ಸೊಪ್ಪು ಮಾಡೋದು ಹೇಗೆ ಹೇಳಿಕೊಡಿ'  ಅಂದಿದ್ದಕ್ಕೆ ಅವರು 'ಅಮ್ಮ ಹೇಗೆ ಮಾಡ್ತಾಳೋ ಹಂಗೇಯಾ ' ಅಂದುಬಿಟ್ಟರು . ಸರಿ ,
ಸೊಪ್ಪು ಬಿಡಿಸಿ, ತೊಳೆದು , ಬೇಳೆಯೊಟ್ಟಿಗೆ ಹಾಕಿ ಬೇಯಿಸಿದೆ . ಅದನ್ನು ಬಸಿಯಲು ಹೋಗಿ, ಕೈ ಮೇಲೆ ಸ್ವಲ್ಪ ಚೆಲ್ಲಿಕೊಂಡು ಅಡಿಗೆಯ ಮೊದಲ ಬಿಸಿಯ ಅನುಭವವಾಯ್ತು . ಆಮೇಲೆ ಒರಳುಕಲ್ಲಿನಲ್ಲಿ ತೆಂಗಿನಕಾಯಿ, ಪುಡಿ, ಈರುಳ್ಳಿ , ಹಸಿಮೆಣಸಿನಕಾಯಿ ರುಬ್ಬಿಕೊಂಡೆ.  ರುಬ್ಬಿದ್ದನ್ನು ಒಗ್ಗರಣೆಗೆ ಹಾಕಿ, ಉಪ್ಪು, ಹುಳಿ ಬೆರೆಸಿ, ಕುದಿಸಿದೆ . ಅಜ್ಜಿ ಬಂದು , ನೋಡಿ ಹೋದರೇ ಹೊರತು , ಎನೂ ಹೇಳಲಿಲ್ಲ . ಊಟಕ್ಕೆ ಕುಳಿತಾಗ , ಬಿಸಿ ಅನ್ನದ ಮೇಲೆ ಘಮಘಮಿಸುವ ತುಪ್ಪ ಹಾಕಿಕೊಂಡು, ಮಸ್ಸೊಪ್ಪು  ಹಾಕಿ ಕಲಸಿ ಬಾಯಿಗಿಟ್ಟರೆ, ಆಹಾ ಎಂಥ ಮಜಾ ಅಂತೀರಿ .  ಖಾರ ನೆತ್ತಿಗೇರಿ ಕುಣಿದಾಡುವಂತೆ ಆಗಿತ್ತು . ಆಮೇಲೆ ಅಜ್ಜಿಯ enquiry ಶುರು 'ಹೆಂಗೆ ಮಾಡಿದೆ ಹೇಳು ' ಎಂದು . ನಾನೂ ಎಲ್ಲವನ್ನು ಹೇಳಿದೆ - ಮುಂಗೈಯ ಮೇಲೆ ಕಟ್ಟು ಸುರಿಸಿಕೊಂಡದ್ದನ್ನು ಬಿಟ್ಟು . ಅಮೇಲೆ ತಿಳೀತು ನಾನು ಮಾಡಿದ್ದ ಅವಾಂತರ . ಸೊಪ್ಪು , ಬೇಳೆ ಬೇಯಿಸಿ, ಬಸಿದ ಕಟ್ಟನ್ನು  ಹೊರಗೆ ಚೆಲ್ಲಿದ್ದೆ ಹಹಹಹ .

     ಅಜ್ಜಿ ಮತ್ತೆ ಮುಂಗೈಗೆ ತುಪ್ಪ ಸವರಿ , ಸಮಾಧಾನ ಮಾಡಿ , ಹೆಣ್ಣು ಮಕ್ಕಳು ಅಡಿಗೆ ಕಲಿತಿರಬೇಕು ಎಂದು ಬುದ್ಧಿ ಹೇಳಿದರು . ಹಾಗಾಗಿ , ೧೩ ವರ್ಷಕ್ಕೆ ಅಡಿಗೆ ಮಾಡಲು ಶುರು ಮಾಡಿದೆ .  ಇವತ್ತಿಗೂ ನನ್ನ ಮೊದಲ ಅಡಿಗೆಯ ಅನುಭವ ಮರೆಯಲಾಗಿಲ್ಲ .

Saturday, September 6, 2014

ವಿದಾಯ (poem)


ಸಂತಸದ ದಿನಗಳವು  ಕಾಡಿಹುದು ನೆನಪು
 ತಣಿಯದು  ಎಂದೆಂದೂ ಸ್ನೇಹದ ಬಿಸುಪು
ದೂರಪಯಣಕೆ ಹೊರಟವನ ಕಳುಹಬಂದವಳು ನಾನು
ಸುರಿಸಿದೆ  ಮಾತಿನಲಿ ಸವಿಜೇನ ನೀನು.
ಬಾಳ  ಬಂಡಿಯಲಿ ಪಯಣಿಗರು ನಾವು
ಬದಲಾಗಬಹುದಷ್ಟೆ ನಾವಿಳಿಯುವ ತಾವು
ತಿಳಿದಿದೆ  ನೋವಿನ ಹಾದಿಯದು ದುರ್ಗಮ
ಆತ್ಮಬಲ ಒಂದಿದ್ದರೆ ಎಲ್ಲವೂ ಸುಗಮ .
ಗೊಂಬೆಗಳು ನಾವು , ಸೂತ್ರಧಾರಿ ಅವನು
ತನ್ನ  ಮನಬಂದಂತೆ ನಮ್ಮ ಆಡಿಸುವವನು
ಇಬ್ಬರೂ  ಬಲ್ಲೆವು ಆಂತರ್ಯದ ನೋವ
ಆದರೂ ಮೊಗದಲಿ ನಸುನಗೆಯ ಭಾವ.
ತುಂಬಿದೆ ಎದೆಯಲಿ ಸೂತಕದ ಛಾಯೆ
ಫಲಿಸಲಿಲ್ಲ ಯತ್ನ , ವಿಧಿಯದೀ ಮಾಯೆ
ಉಸಿರ  ತೊರೆಯಲು  ಅನುವಾಯ್ತು ಕಾಯ
ನಿನಗಿದೋ ಗೆಳೆಯ ಅಂತಿಮ ವಿದಾಯ.

- ತಾರಾ ಶೈಲೇಂದ್ರ