Wednesday, March 26, 2014

ಬೆಂಗಳೂರಿಗರ ಧಾವಂತದ ಬದುಕು (article)

 

 
"ಅಂದದೂರು ಬೆಂಗಳೂರು , ಆನಂದದ ತವರೂರು" ಎಂಬ ಹಾಡು ಜನಪ್ರಿಯ . ಹಾಗೆಯೇ ಸಿಲಿಕಾನ್ ಸಿಟಿ , ಉದ್ಯಾನನಗರಿ, ಉದ್ಯೋಗನಗರಿ ಎಂಬ ಕೀರ್ತಿಯು ಇದೆ. ಇಲ್ಲಿಯ ಹವೆ ಎಲ್ಲರಿಗು ಪ್ರಿಯ . ಆದ್ದರಿಂದಲೇ ದೇಶದ ಎಲ್ಲೆಡೆಯಿಂದ ಅಷ್ಟೇಕೆ ವಿದೇಶಗಳಿಂದಲೂ ಜನ ಇಲ್ಲಿಗೆ ವಲಸೆ ಬಂದು, ಕನ್ನಡಿಗರ ವಿಶಾಲ ಮನೋಭಾವದಿಂದ ಇಲ್ಲಿಯವರೇ ಆಗಿ ಉಳಿದುಬಿಟ್ಟಿದ್ದಾರೆ.
    ಹಿಂದೆ ಬೆಂಗಳೂರು ಆನಂದಮಯವಾಗಿಯೇ ಇತ್ತು. ಜನರೂ ಸಹ ಜೀವನೋಪಾಯಕ್ಕಾಗಿ ಉದ್ಯೋಗ ಮಾಡುತ್ತಿದ್ದರು. ಬಂದ ಸಂಬಳ ತಿಂಗಳ ಖರ್ಚು ಕಳೆದ ಮೇಲೂ ಅಲ್ಪ ಸ್ವಲ್ಪ ಉಳಿತಾಯವಾಗುತ್ತಿತ್ತು . ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ನೆಮ್ಮದಿ ಇತ್ತು. ನಾವು ಅಲ್ಪ ತೃಪ್ತರಾಗಿದ್ದೆವು. ಬರು ಬರುತ್ತಾ I .T  ಕಂಪೆನಿಗಳು ತಲೆ ಎತ್ತಿದವು . ಜನರ ಆದಾಯ ಹೆಚ್ಚಾಯಿತು . ಕೊಳ್ಳುಬಾಕತನ ಬೆಳೆಯುತ್ತಾ ಹೋಯಿತು . ಸ್ವಪ್ರತಿಷ್ಠೆ, ಪೈಪೋಟಿ ಮೇರೆ ಮೀರಿತು. ಈ ಎಲ್ಲದರ ನಡುವೆ ನಲುಗಿ ಹೋಗಿದ್ದು ಸಾಮಾನ್ಯ ಜನರ ನೆಮ್ಮದಿ . ಯಾರೋ ಏನೋ ಕೊಂಡರೆಂದು ಮಧ್ಯಮ ವರ್ಗದ ಜನರೂ ಸಹ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅನಾವಶ್ಯಕವಾಗಿ ಐಷಾರಾಮದ ಜೀವನದ ಆಸೆಗೆ ಬಿದ್ದು ಕಂತುಗಳಲ್ಲೋ, ಸಾಲ ಮಾಡಿಯಾದರೋ ಹುಚ್ಚಾಪಟ್ಟೆ ಖರೀದಿ ನಡೆಸಲಾರಂಭಿಸಿದರು . ಇವರಿಗೆ ಬೆಂಬಲವಾಗಿ ನಿಂತಿದ್ದು ಸಾಲ ನೀಡುವ ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು . ಪ್ರತಿಯೊಂದು ವಸ್ತುವಿನ ಬೆಲೆಯೂ ತುಟ್ಟಿಯಾಗಿರುವ ಈ ಕಾಲದಲ್ಲಿ ಮನೆಖರ್ಚು, ಮಕ್ಕಳ ವಿದ್ಯಾಭ್ಯಾಸದ ಖರ್ಚು , ಜೊತೆಗೆ ಈ ಸಾಲದ ಕಂತಿನ ಮರುಪಾವತಿ ಜನ ಸಾಮಾನ್ಯನನ್ನು ನಡುಗಿಸಿತು .
         
     ಸ್ತ್ರೀ ಸಬಲೀಕರಣ ಎಂದರೆ ಆರ್ಥಿಕ ಸ್ವಾವಲಂಬನೆಯಷ್ಟೇ ಎಂದು ಅನೇಕರು ನಂಬಿದರು. ಹೆಣ್ಣು ಮಕ್ಕಳೂ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮನೆಯ ಒಳ-ಹೊರಗೆ ದುಡಿಯಲು ಆರಂಭಿಸಿದರು. ಬಹಳಷ್ಟು ಮಹಿಳೆಯರು ಸ್ವ-ಉದ್ಯೋಗ ಮಾಡುತ್ತಾ ಮನೆಯನ್ನೂ ಸಂಭಾಳಿಸುತ್ತಿದ್ದಾರೆ. ಲಕ್ಷಾಂತರ ಮಹಿಳೆಯರು ಹೊರಗೆ ದುಡಿಯಲು ಹೋಗುತ್ತಾರೆ . ಅವರು ಪ್ರತಿ ನಿಮಿಷವೂ ಮಾನಸಿಕ ಒತ್ತಡದಲ್ಲಿರುತ್ತಾರೆ.  ಯಾವುದೇ ಉದ್ಯೋಗಸ್ಥ ಮಹಿಳೆಯ ದಿನಚರಿಯನ್ನು ಗಮನಿಸಿದರೆ , ಅವಳಿಗೆ ತನ್ನದು ಎಂಬ ಸಮಯ ಸಿಗುವುದು ಕಷ್ಟ . ಬೆಳಿಗ್ಗೆ ೪.೩೦-೫ ಗಂಟೆಗೆ ಎದ್ದರೆ, ರಾತ್ರಿ ಮಲಗುವ ವೇಳೆಗೆ ೧೧-೧೨ ಆಗುತ್ತದೆ. ಬೆಳಿಗ್ಗೆ ಎದ್ದು ಮನೆಕೆಲಸ , ಮಕ್ಕಳನ್ನು ಶಾಲೆಗೆ ಹೊರಡಿಸುವುದು , ಸಮಯ ಸಿಕ್ಕರೆ ತಿಂಡಿ ತಿನ್ನುವುದು . ಇಲ್ಲದಿದ್ದರೆ ಹಾಗೆಯೇ ಬಸ್ ಗಾಗಿ ಓಡುವುದು. BMTC  ಬಸ್ ಏನು ಇವರಿಗಾಗಿ ಕಾಯುತ್ತದೆಯೇ? ಬಸ್ ಸಿಗದ ದಿನ ಆಟೋ ಮೊರೆ ಹೋಗಬೇಕು . ಅವರೇನು ಸಾಮಾನ್ಯರೇ ? ನಾವು ಹೋಗಬೇಕಾದ ದಿಕ್ಕನ್ನು ಬಿಟ್ಟು, ಬೇರೆ ಎಲ್ಲಿಗಾದರೂ ಸೈ. ಇಷ್ಟೆಲ್ಲಾ ಹೆಣಗಾಡಿ ಆಫೀಸು ಸೇರಿದರೆ , ಮೇಲಧಿಕಾರಿಯ ಮೊನಚಾದ ಮಾತು, ಸಹೋದ್ಯೋಗಿಗಳ ವ್ಯಂಗ್ಯ ನುಡಿಗಳು . "ನಾವು ಪುರುಷರಿಗೆ ಸಮಾನರು , ಯಾರಿಗೇನೂ ಕಡಿಮೆ ಇಲ್ಲ ಎನ್ನುವ ನೀವು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರಬೇಕು. ಅಂದಿನ ಕೆಲಸ ಅಂದೇ ಮುಗಿಸಿ ಹೋಗಬೇಕು " ಎಂದು ಕಟಕಿಯಾಡುತ್ತಾರೆ.

      ಸಂಜೆ ಪುನಃ ಬಸ್, ಆಟೋ ಹಿಡಿದು ಮನೆ ಸೇರಿದರೆ, ೫ ನಿಮಿಷ ಕೂರುವಷ್ಟು ಮನಸ್ಸಿರುವುದಿಲ್ಲ. ಮನೆಕೆಲಸ, ಮಕ್ಕಳ ಓದು, ರಾತ್ರಿ ಅಡುಗೆ , ಮನೆಯವರೆಲ್ಲರ ಯೋಗಕ್ಷೇಮ - ಹೀಗೆ ಪ್ರತಿಯೊಂದು ವಿಷಯದ ಕಡೆಗೆ ಗಮನ ಹರಿಸಬೇಕಾಗುತ್ತದೆ. ಸಣ್ಣ ವಯಸ್ಸಿನ ಮಕ್ಕಳಿದ್ದು , ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲದಿದ್ದರೆ, ಆ ಮಗುವಿಗೆ ತಿಂಡಿ, ಊಟ, ನೀರು, ಹಣ್ಣು , ಆರೋಗ್ಯ ಸರಿ ಇಲ್ಲದಿದ್ದರೆ, ಔಶಧ ಸಕಲವನ್ನೂ ಜೋಡಿಸಿಕೊಂಡು "DAY CARE"ನವರಿಗೆ ಕೊಟ್ಟು , ಅಳುವ ಮಗುವನ್ನು ಅವರಿಗೆ ಒಪ್ಪಿಸಿ, ಪುನಃ ಸಂಜೆ ಮನೆಗೆ ಹಿಂದಿರುಗುವಾಗ ಮಗುವನ್ನು ಕರೆದುಕೊಂಡು ಬಂದು , ಅದಕ್ಕೆನಾದರು ತಿನ್ನಿಸಿ, ತಾನು ಉಸಿರು ಬಿಡುವಷ್ಟರಲ್ಲಿ ಹೊರೆ ಕೆಲಸ ಕಾದಿರುತ್ತದೆ. ಉದ್ಯೋಗಸ್ಥ ಮಹಿಳೆಗೆ ತಾನು ಮಕ್ಕಳಿಗೆ ಹಾಗೂ ಮನೆಯವರಿಗೆ ಸಾಕಷ್ಟು ಸಮಯ ನೀಡಲಾಗುತ್ತಿಲ್ಲ ಎಂಬ ಕೊರಗಿರುತ್ತದೆ. ಈ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿ ಅವಳು ತನ್ನ ಆರೋಗ್ಯದ ಕಡೆಗೂ ಗಮನ ಕೊಡದೆ ದುಡಿಯುತ್ತಾಳೆ. ಇದರ ಪರಿಣಾಮವಾಗಿ ನಿತ್ರಾಣ, ರಕ್ತಹೀನತೆಯಿಂದ ಬಳಲುತ್ತಾಳೆ . ಭಾರತದಲ್ಲಿ ಬಹಳಹ್ಟು ಮಹಿಳೆಯರಲ್ಲಿ ರಕ್ತಹೀನತೆ ಸಾಮಾನ್ಯವಾಗಿದೆ. ಉದ್ಯೋಗಸ್ಥ ಮಹಿಳೆಗೆ ತನ್ನ ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಮನೆಯ ಒಳ-ಹೊರಗೆ ದುಡಿಯುವ ಅವರಿಗೆ ಮನೆಯವರ ಸಹಕಾರ ಇಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ.

ಇತ್ತೀಚೆಗೆ ಮಕ್ಕಳು ಸ್ಥೂಲ ಕಾಯದವರಾಗುತ್ತಿದ್ದು, ಅತಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹದಂಥ ರೋಗಕ್ಕೆ ಬಲಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅದರ ಹಿಂದಿನ ಕಾರಣಗಳನ್ನು ಗಮನಿಸಿದರೆ, ನಮ್ಮ ಧಾವಂತದ ಬದುಕು ನಮ್ಮನ್ನು ಎತ್ತ ಸಾಗುವಂತೆ ಮಾಡುತ್ತಿದೆ ಎಂದು ತಿಳಿಯುತ್ತದೆ. ಪತಿ-ಪತ್ನಿ ಇಬ್ಬರೂ ದುಡಿಯಲು ಹೋಗಬೇಕಾದ್ದರಿಂದ ಮಕ್ಕಳ ಕಡೆಗಿನ ಗಮನ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಬೇಕರಿ ತಿಂಡಿ ತಿನ್ನುತ್ತಾ ದೂರದರ್ಶನದ ಮುಂದೆ ಕೂರುವುದು ರೂಢಿಯಾಗಿ , ಹೊರಗೆ ಆಡಲು ಹೋಗುವುದೇ ಮರೆತುಹೋಗಿದೆ . ಜೊತೆಗೆ ಗಣಕಯಂತ್ರದ ಮುಂದೆ ಆಟವಾಡುತ್ತಾ ಗಂಟೆಗಟ್ಟಲೆ ಕುಳಿತು, ಮಕ್ಕಳ ಬೊಜ್ಜು ಬೆಳೆಯುತ್ತಿದೆ . ಅದನ್ನು ಇಳಿಸಲು ಜಿಮ್ ಗಳ ಮೊರೆ ಹೋಗುತ್ತಿದ್ದಾರೆ . I.T.ನಗರಿ ಎಂದೂ ಖ್ಯಾತವಾಗಿರುವ ಬೆಂಗಳೂರು, ಟೆಕಿ ಗಳ ಬದುಕನ್ನು ನಾಶ ಮಾಡುತ್ತಿದೆ. ಬೆಳಿಗ್ಗೆ ಸೂರ್ಯ ಕಣ್ಣು ಬಿಡುವಾಗ ಮನೆ ಬಿಡುವ ಇವರು ರಾತ್ರಿ ಮನೆ ಸೇರುವ ವೇಳೆಗೆ ಚಂದ್ರನೂ ನಿದ್ದೆಗೆ ಜಾರಿರುತ್ತಾನೆ. ವಾರವಿಡೀ ಬರೀ ದುಡಿಮೆಯೆಂದೇ ನಂಬಿರುವ ಇವರು ವಾರಾಂತ್ಯದಲ್ಲಿ ಇಡೀ ವಾರದ ಮೋಜನ್ನು ಅನುಭವಿಸಬೇಕೆಂದು ಕಾತರದಿಂದ ಕಾಯುತ್ತಿರುತ್ತಾರೆ.

ಈ ಟೆಕಿ ಗಳ ಜೀವನದಲ್ಲಿ ಸಾಮಾನ್ಯವಾದ ಪದಗಳನ್ನು ನೋಡಿ - SINK (Single Income No Kids), DINK(Double Income No Kids).   ಇವರು ಬರೀ ದುಡಿಯುವುದಕ್ಕಾಗೇ ಬಾಳುವವರು . ಎಷ್ಟೋ ಮಹಿಳೆಯರು ಮಾತೃತ್ವವನ್ನು ಮುಂದೆ ಹಾಕುತ್ತಾರೆ. ಇದಕ್ಕೆ ಕಾರಣ - ಇವರಿಗೆ ಮನೆ, ಮಕ್ಕಳು, ಕೆಲಸ ಮೂರನ್ನೂ ಸಂಭಾಳಿಸುವುದು ಕಷ್ಟ ಎನಿಸಿ , ಕೆಲವು ವರ್ಷ ಬರೀ ಹಣ ಸಂಪಾದನೆ ಮಾಡಿ, ಅಮೇಲೆ ಮಗುವನ್ನು ಹೆರಬಹುದು ಎಂಬ ಭಾವನೆ ಇರುತ್ತದೆ. ಜೊತೆಗೆ ತಮ್ಮ ಮಗುವನ್ನು ತಮ್ಮ ಸ್ವಂತ ಮನೆಗೆ, ಅದರಲ್ಲೂ ಪ್ರತಿಯೊಂದು ಐಷಾರಾಮ ಇರುವ ಮನೆಗೇ ಸ್ವಾಗತಿಸಬೇಕೆಂಬ ಬಯಕೆ ಇರುತ್ತದೆ. ಆದರೆ ಸೃಷ್ಟಿ ನಿಯಮ ಯಾರಿಗೆ ಕಾಯುತ್ತದೆ? ಮಾತೃತ್ವ ಮುಂದೂಡುವ ಕೆಲವು ಮಹಿಳೆಯರಿಗೆ ಅವರಿಗೆ ಬೇಕೆಂದಾಗ ಮಕ್ಕಳ ಭಾಗ್ಯ ಇರುವುದಿಲ್ಲ . ಇದರಿಂದ ಮಾನಸಿಕ ಒತ್ತಡ , ಮನೆಯಲ್ಲಿ ಕಿರಿಕಿರಿ, ಆರೋಗ್ಯ ಹಾಳು ಹಾಗೂ ಅನೇಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ , ನೆಮ್ಮದಿ ಕಳೆದುಕೊಳ್ಳುತ್ತಾರೆ.

ಈ ಟೆಕಿ ಗಳ ಪ್ರಧಾನ ಸಮಸ್ಯೆ ಅನಾರೋಗ್ಯ. ದಿನವಿಡೀ ಗಣಕಯಂತ್ರದ ಮುಂದೆ ಕೂರುವ ಇವರಿಗೆ ಬೆನ್ನು ನೋವು, ಸ್ನಾಯುಗಳ ಸೆಳೆತ , ಕಣ್ಣುರಿ, ತಲೆ ಸಿಡಿತ ಇತ್ಯಾದಿ ಕಾಣಿಸಿಕೊಳ್ಳುತ್ತವೆ. ಯಾವುದೇ ವ್ಯಾಯಾಮವಿಲ್ಲದ ಕಾರಣ ಬೊಜ್ಜು ಬೆಳೆಯುತ್ತದೆ. ಅದರಿಂದಾಗಿ ಅನೇಕ ಖಾಯಿಲೆಗಳು ಬೇಡದ ಅತಿಥಿಗಳಾಗಿ ಬರುತ್ತವೆ. ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವ ಯುವಜನತೆಯಿಂದಾಗಿ ಮನೆಯಲ್ಲಿ ಆಂತರಿಕ ಕಲಹಗಳು ಹೆಚ್ಚಾಗಿವೆ. ವಿವಾಹ ವಿಚ್ಛೇದನಗಳು, ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಿವೆ.

    ಈಗಂತೂ ಬೆಂಗಳೂರಿನಲ್ಲಿ ದಿನದ ೨೪ ಗಂಟೆಗಳೂ ವಾಹನದ ದಟ್ಟಣೆಯಿದ್ದು , ಮನೆ ಸೇರಿದರೆ ಸಾಕಪ್ಪಾ ಎಂದು ಪ್ರತಿಯೊಬ್ಬರೂ ಧಾವಂತದಲ್ಲಿರುತ್ತಾರೆ.  ಕೆಟ್ಟ ರಸ್ತೆಗಳಿಂದ ಅಪಘಾತಗಳೂ ಹೆಚ್ಚಿವೆ. ಆಗಾಗ ಆಗಮಿಸುವ ಅತಿಥಿಗಣ್ಯರು,  ಮಂತ್ರಿ ವರೇಣ್ಯರಿಗಾಗಿ ಗಂಟೆಗಟ್ಟಲೆ ಸಂಚಾರ ತಡೆಗಳಿದ್ದು ಜನರ ತಾಳ್ಮೆಯನ್ನು ಪರೀಕ್ಷಿಸುತ್ತವೆ. ಧಿಡೀರ್ ಮುಷ್ಕರಗಳಿಂದ ಬಸ್, ಆಟೋ ಗಳಿಲ್ಲದೆ , ಕೆಲವು ಬಾರಿ ಮನೆಗೆ ನಡೆದೇ ಹೋಗಬೇಕಾದ ಸಂದರ್ಭಗಳು ಬರುತ್ತವೆ . ಬೆಂಗಳೂರಿನಲ್ಲಿರುವ ಅನೇಕ ಮೇಲುಸೇತುವೆಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ದುರವಸ್ಥೆಯಲ್ಲಿರುವುದಲ್ಲದೆ, ವಾಹನ ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡುವ ಬದಲಿಗೆ ಹೆಚ್ಚು ಮಾಡುತ್ತಿವೆ. ಜನರಲ್ಲಿ ಸಹನೆ, ತಾಳ್ಮೆ , ಮಾನವೀಯತೆ ಮರೆಯಾಗುತ್ತಿದೆ ಎಂಬುದಕ್ಕೆ ನಿದರ್ಶನವೆಂದರೆ ತುರ್ತು ಪರಿಸ್ಥಿತಿಯಲ್ಲಿಯೂ ಸಹ ಆಂಬುಲೆನ್ಸ್ ಗೆ ದಾರಿ ಮಾಡಿ ಕೊಡದಿರುವುದು. ಅದರ ಘಂಟೆಯ ಸದ್ದು ಕೇಳುತ್ತಿದ್ದರೂ ಸಹ ಕೆಲ ವಾಹನ ಚಾಲಕರು ದಾರಿಯೇ ಬಿಡುವುದಿಲ್ಲ. ಮತ್ತೆ ಕೆಲವರು ಮುಂದಿರುವ ವಾಹನಗಳು ಆಂಬುಲೆನ್ಸ್ ಗೆ ದಾರಿ ಮಾಡಿ ಕೊಟ್ಟರೆ, ಇವರೂ ಸಹ ಅದರ ಹಿಂದೆಯೇ ನುಗ್ಗುವ ಆತುರ ತೋರುತ್ತಾರೆ.
   
  ವಾಹನ ನಿಲುಗಡೆಯೋ ಬೆಂಗಳೂರಿಗರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ . ಎಲ್ಲೇ ಹೋಗಬೇಕೆಂದರೂ , ಮೊದಲು ನಿಲುಗಡೆಗೆ ಅವಕಾಶವಿದೆಯೇ ಎಂದು ನೋಡಿ , ನಂತರ ಹೋಗಬೇಕು. ಕೆಲವು ಬಾರಿ ನಿಲುಗಡೆ ಪ್ರದೇಶದಿಂದ ಬಹಳ ದೂರ ನಡೆದು ಹೋಗಬೇಕು. ನಿಲುಗಡೆ ಶುಲ್ಕ ವಸೂಲಿ ಮಾಡುವ ಜನ ನಮ್ಮ ವಾಹನವನ್ನು ಕಾಯಬೇಕೆಂಬ ನಿಯಮವೇನೂ ಇಲ್ಲ. ಶುಲ್ಕ ವಸೂಲಿಯಷ್ಟೇ ಅವರ ಕೆಲಸ. ಉಳಿದಂತೆ ವಾಹನ ನಮ್ಮ ಜವಾಬ್ದಾರಿ . ಒಟ್ಟಿನಲ್ಲಿ ಬೆಂಗಳೂರು ಮುಂಬಯಿ ಮಾದರಿಯ ಮಹಾನಗರಿ ಆಗುತ್ತಿರುವ ಲಕ್ಷಣಗಳು ಕಾಣುತ್ತಿವೆ.

ಬೆಂಗಳೂರಿನ ಜ್ವಲಂತ ಸಮಸ್ಯೆ ಎಂದರೆ ನೀರು ಪೂರೈಕೆ . ಬೇಸಿಗೆಯಲ್ಲಂತೂ ನಲ್ಲಿಯಲ್ಲಿ ನೀರಿನ ಬದಲು ಬರೀ ಗಾಳಿ ಬರುತ್ತದೆ. ಕೆಲವು ಕಡೆ ಕಲುಷಿತ ನೀರು ಸರಬರಾಜು ಆಗುತ್ತಿದೆ. ಮತ್ತೆ ಕೆಲವೆಡೆ ನೀರಿನಲ್ಲಿ ಹುಳುಗಳು ಕಂಡಿವೆ. ಆದರೆ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ದಿವ್ಯ ಮೌನ ತಾಳುತ್ತದೆ. ಇಂಥ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭಯ ಇದ್ದರೂ ಮುಂಜಾಗರೂಕತೆ ವಹಿಸುವುದಿಲ್ಲ.

  ಈಗೀಗ ಗಗನಕ್ಕೇರುತ್ತಿರುವ ಬೆಲೆಗಳು , ಅದರಿಂದಾಗಿ ಹೆಚ್ಚುತ್ತಿರುವ ಹಣದ ಅವಶ್ಯಕತೆ, ಅದರಿಂದ ಹೆಚ್ಚಿನ ದುಡಿತ , ಹೆಚ್ಹೆಚ್ಚು ಮಾನಸಿಕ ಒತ್ತಡ ಇವೆಲ್ಲದರಿಂದ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಂಗಳೂರಿಗರ ಜೀವನದ ಮಟ್ಟ ಕುಸಿಯುತ್ತಿದೆ. ತಾವು ಪ್ರೀತಿಸುವ ಹವ್ಯಾಸಗಳಿಗೆ ಸಮಯ ಹೊಂದಿಸಲು ಕಷ್ಟ ಪಡುವಂತಾಗಿದೆ. ಕುಟುಂಬದ ಜವಾಬ್ದಾರಿ ಹಾಗೂ ವೃತ್ತಿ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಹಗ್ಗದ ಮೇಲೆ ನಡೆಯುವಂತೆ ಆಗಿದೆ.  ಮೆಟ್ರೋ ಯೋಜನೆ ಸಂಪೂರ್ಣ ಯಶಸ್ವಿಯಾದರೆ, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಮಾಲಿನ್ಯ ಕಡಿಮೆಯಾಗಿ, ಆರೋಗ್ಯವೂ ಸುಧಾರಿಸುತ್ತದೆ. ಆದರೆ ವ್ಯಕ್ತಿಯ ಮಾನಸಿಕ ಆರೋಗ್ಯ ಮಾತ್ರ ಅವನು ತೆಗೆದುಕೊಳ್ಳುವ ನಿರ್ಧಾರಗಳು ಹಾಗೂ ಜೀವನದಲ್ಲಿ ತನಗೆ ಏನು ಮುಖ್ಯ ಹಾಗೂ ಅವಶ್ಯಕ ಎಂಬ ಸತ್ಯವನ್ನು ಅರಿತು ನಡೆಯುವುದರ ಮೇಲೆ ಅವಲಂಬಿಸಿದೆ.


- ತಾರಾ ಶೈಲೇಂದ್ರ
     

8 comments:

 1. bengalooru bagge irodannella helibittiddira good one :)

  ReplyDelete
  Replies
  1. Dhanyavaadagalu Anusha. Sheershikene bengaloorigara dhaavantada baduku :-)

   Delete
 2. sundaravagide Tara ! koneya saalu thumba chennagide Tara ..naavu namma nirdaragalannu thegedu kondaru bereyavaru adara suttha kathe kattuthare haagu comment madthare ..anthavara sahasavasa kammi madabeku :)

  ReplyDelete
  Replies
  1. mathomme odidare odabekenisuthade Tara :) mane yalli sahakara irabeku ..nija illavaadare kashta vaguthade

   Delete
  2. aapicina othada thadiyabahudu ..maneyalli sahakara /sahakara iddare :)

   Delete
  3. Yaara sahavaasanu kadime maadodu bekilla Nagashree. We need to Learn to live with practical difficulties. Itz not impossible. Yes you are right. Am fortunate to have a great n understanding family especially my hubby n parents. Otherwise I would be nowhere. They are my pillars of moral support n I would always acknowledge that. As long as we keep smiling, v can get thro' any situation.

   Delete
 3. Cannot agree more. Very true.

  ReplyDelete
 4. Thanks Anil for your response n ur bindaas comment on FB n also ur patience to go thro' the whole article. Never realised it got so long until I read it myself.

  ReplyDelete