Wednesday, November 19, 2014

ಪುರುಷರೇ ಇದು ನಿಮಗಾಗಿ

                                                                                                                                     

   ಮೊನ್ನೆ ಸ್ನೇಹಿತರೊಬ್ಬರು ಹೇಳುತ್ತಿದ್ದರು " ಜೀವಾವಧಿ ಶಿಕ್ಷೆಯ ಅರ್ಧ ಭಾಗ ಪೂರೈಸಿದ ಖುಷಿಗೆ ನಾಳೆ ರಜೆ ಬರೆದಿದ್ದೀನಿ " ಅಂತ . ಅರೆ ಹಾಗಂದ್ರೆ ಏನು ಅಂತ ಆಶ್ಚರ್ಯ ಆಯ್ತು . ಅಮೇಲೆ ತಿಳೀತು ಮರುದಿನ ಅವರ ವಿವಾಹ ವಾರ್ಷಿಕೋತ್ಸವ ( ೭ ನೆಯದು). "ಅದಕ್ಯಾಕ್ರೀ ಜೀವಾವಧಿ ಶಿಕ್ಷೆ ಅಂತೀರಿ ?" ಅಂದಿದ್ದಕ್ಕೆ "ಎಲ್ಲ ನೊಂದ ಗಂಡಸರ ಡೈಲಾಗ್ ರೀ ಇದು " ಅನ್ನಬೇಕೆ ಆಸಾಮಿ :) .

ಅದಾದ ಮೇಲೆ ನನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದೆ . ಅವನೂ ಸಹ ಹೀಗೇ  ಮಾತನಾಡಿದ .  ನಂತರ ನನಗೆ "ಅವರು ಹೇಳಿದ್ದು ನಿಜವಿರಬಹುದೇ ? ಬರೀ ಸ್ತ್ರೀ ಶೋಷಣೆಯ ಬಗ್ಗೆ ಮಾತನಾಡುವ ನಾವು ಪುರುಷಶೋಷಣೆಯ ಬಗ್ಗೆ ಹರಿಸಿಲ್ಲವೇಕೆ ?" ಅನಿಸಿತು .  ಹಾಗೆಯೇ ಅನೇಕ ಮಿತ್ರರನ್ನು ಕೇಳುತ್ತಾ ಹೋಗುವಾಗ ಬಗೆಬಗೆಯ ಅನುಭವಗಳು ಕೇಳಿ ಬಂದವು .  ಅವುಗಳಲ್ಲಿ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ  :೪

೧.  ಒಬ್ಬನ ಪತ್ನಿಗೆ ಶನಿವಾರ, ಭಾನುವಾರ ಮನೆಯಲ್ಲಿ ಅಡುಗೆ ಮಾಡಲಾಗುವುದಿಲ್ಲ . ಕಾರಣ ? ಸೋಮವಾರದಿಂದ ಶುಕ್ರವಾರದವರೆಗೆ ಅಡುಗೆಮನೆಯಲ್ಲಿ ದುಡಿಯುವುದರಿಂದ ಶನಿವಾರ, ಭಾನುವಾರ ಅಡುಗೆಮನೆಗೆ ಬೀಗವಂತೆ . ಅವನು ವಾರವಿಡೀ ಕ್ಯಾಂಟೀನ್ ನಲ್ಲಿ ತಿಂದಿರುತ್ತಾನೆ . ರಜೆಯ ದಿನಗಳಲ್ಲಿ ಮನೆಯ ಊಟ ಬೇಕು ಅನಿಸುತ್ತದಂತೆ . ಅದೂ ಅಲ್ಲದೆ , ಮೂರು ಹೊತ್ತೂ ಹೊರಗೆ ತಿನ್ನುವುದು ಬೇಸರದ ಸಂಗತಿ ಹೌದು . ಜೊತೆಗೆ ಹಣವೂ ದಂಡ . ಒಬ್ಬರ ಸಂಬಳದಲ್ಲಿ ಬೆಂಗಳೂರಿನಲ್ಲಿ ಜೀವನ ಮಾಡುವ ಕಷ್ಟ ಅನುಭವಿಸಿದವರಿಗೇ ಗೊತ್ತು . ತಿಂಗಳ ಕೊನೆಗೆ ಅವನ ಪರದಾಟ ನೋಡಲಾಗದು .

೨. ಇನ್ನೊಬ್ಬನ ಪತ್ನಿ ಸಂಶಯ ಸ್ವಭಾವದವಳು . ಮನೆ ತಲುಪುವುದು ಸ್ವಲ್ಪ ತಡವಾದರೆ ,  "ಎಲ್ಲಿಗೆ ಹೋಗಿದ್ರಿ ? ಯಾರ ಜೊತೆ ಹೋಗಿದ್ರಿ ? " ಇತ್ಯಾದಿ ಪ್ರಶ್ನೆಗಳು . ಪಾಪ ಅವನು ಗಡ್ಡ ಬೋಳಿಸಿದರೆ , "ಯಾರನ್ನು ನೋಡೋಕೆ ಹೋಗ್ತಿದ್ದೀರಿ ? ಎನೋ ಪ್ರೋಗ್ರಾಮ್ ಇರಬೇಕು .  ನನಗೇನಾದ್ರು ನೀವು ಹಾಗೆ ಹೀಗೆ ಅಂತ ಗೊತ್ತಾದ್ರೆ , ತವರು ಮನೆಗೆ ಹೋಗ್ತೀನಿ " ಅಂತ ಹೆದರಿಸ್ತಾಳಂತೆ .  ಒಂದು ದಿನ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಭಯಂಕರ ಮಳೆ . ಇವನು ಹೆಂಡತಿಗೆ ಫೋನ್ ಮಾಡಿದರೆ, ನಂಬದೆ , ಮೊಬೈಲ್ನಲ್ಲಿ ಚಿತ್ರ ತೆಗೆದು ಕಳಿಸಲಿಕ್ಕೆ ಹೇಳಿದಳಂತೆ .  ಇದಲ್ವಾ ವರಸೆ ? :)  ಹಾಳಾದ ಧಾರಾವಾಹಿಗಳ ಪ್ರಭಾವ ಇರಬೇಕು .

೩. ಮತ್ತೊಬ್ಬರ ಕಥೆ ಅಲ್ಲಾ ವ್ಯಥೆ ಕೇಳಬೇಕು ನೀವು .  ಪತಿಯ ಮೊಬೈಲ್ ನ ಪಾಸ್ವರ್ಡ್ ಬೇಕಂತೆ . ಕೊಡದಿದ್ರೆ ಗಲಾಟೆ . ಕೊಟ್ಟರೆ , ಯಾರು ಯಾರಿಗೆ ಎಷ್ಟು ಹೊತ್ತಿಗೆ ಕರೆ ಹೋಗಿದೆ, ಎಷ್ಟು ಕರೆನ್ಸಿ  ಖರ್ಚಾಗಿದೆ ? Facebook, whatsapp  ಎಲ್ಲಾ ನಿಮಗ್ಯಾಕೆ ಇತ್ಯಾದಿ ಇತ್ಯಾದಿ ತಲೆ ಚಿಟ್ಟು ಹಿಡಿಸುವ ಪ್ರಶ್ನೆಗಳು .  ಸ್ನೇಹಿತರೊಂದಿಗೆ ಹೊರಗೆ ಹೋದರೆ ತನ್ನ ಪತಿ ಹಾಳಾಗುವನೆಂಬ  ಭಯ ಈಕೆಗೆ .

೪.  ನನ್ನ ಕಿರಿಯ ಸಹೋದ್ಯೋಗಿಯೊಬ್ಬ ಇದ್ದಾನೆ . ಅವನ ಹೆಂಡತಿ ತನ್ನ ತಾಯಿಗೆ ಫೋನ್ ಮಾಡಿ ಇವನು ತುಂಬಾ ಚಿತ್ರಹಿಂಸೆ ಕೊಡುತ್ತಾನೆಂದು ಹೇಳುತ್ತಲೇ ಇವನಿಗೆ ಮುಖ ಮೂತಿ ನೋಡದೆ ಹೊಡೆಯುತ್ತಾಳಂತೆ . ಒಮ್ಮೆ ಮುಖ ಊದಿಕೊಂಡು ಆಸ್ಪತ್ರೆಗೆ ಹೋದರೆ , ವೈದ್ಯರಿಗೆ ಆಶ್ಚರ್ಯವಂತೆ ಹೇಗಾಯ್ತು ಇದೆಲ್ಲ ಅಂತ . ನಡೆದ ವಿಷಯ ಏನು ಅಂದ್ರೆ , ಲಟ್ಟಣಿಗೆಯಲ್ಲಿ ಮುಖಕ್ಕೆ ಬಾರಿಸಿ, ಕೈ ಬೆರಳು ಮುರಿಯುವಂತೆ ಹೊಡೆದಿದ್ದಳಂತೆ .  ಅವನು ತಿರುಗಿಸಿ ಹೊಡೆಯಲು ಹೋದರೆ ,  ಮಾಡಿಕೊಳ್ತೀನಿ ಅಂತ ಹೆದರಿಸ್ತಾಳಂತೆ .  ಅವನು ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ .

ಪಾಪ ರೀ ಗಂಡಸರು ಹೇಳಿಕೊಳ್ಳುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ . ಯಾರೋ ಹೇಳುತ್ತಿದ್ದರು " ಅಯ್ಯೋ ಮೇಡಮ್ , ಒಳ್ಳೆಯ ಹೆಂಡತಿ ಸಿಕ್ಕರೆ ಗಂಡ ಖುಷಿಯಾಗಿರ್ತಾನೆ . ಇಲ್ಲದಿದ್ದರೆ ವೇದಾಂತಿ  ಆಗುತ್ತಾನೆ " ಅಂತ . ಅಂತರರಾಷ್ಟ್ರೀಯ ಪುರುಷರ ದಿನಾಚರಣೆಯಾದ ಇಂದು (ಪಾಪ ಅವರಿಗೂ ಒಂದು ದಿನ ಇರಲಿ ಆಲ್ವಾ :)  ) , ಪತಿಯನ್ನು ಶೋಷಿಸುವ ಮಹಿಳೆಯರಲ್ಲಿ ವಿನಂತಿ " ದಯವಿಟ್ಟು ನಿಮ್ಮ ಪತಿಯ ಜೀವನವನ್ನು ನರಕ ಮಾಡಬೇಡಿ .  ಬಾಳ ಪಯಣ ಸುಗಮವಾಗಿ ಸಾಗಬೇಕಾದರೆ , ಬದುಕಿನ ಬಂಡಿಯ ಎರಡೂ ಗಾಲಿಗಳು ( ಪತಿ ಹಾಗೂ ಪತ್ನಿ ) ಸಮತೋಲನ ಕಾಯ್ದುಕೊಳ್ಳಬೇಕು.  ಏನಂತೀರಿ ?"

- ತಾರಾ ಶೈಲೇಂದ್ರ 

Sunday, September 28, 2014

ಹೀಗೊಂದು ನೆನಪು

                   ಕೆಲವು ವರ್ಷಗಳ ಹಿಂದೆ ETV ಅವರು 'ಸಿರಿಗಂಧ' ಎಂಬ ರಸಪ್ರಶ್ನೆ ಕಾರ್ಯಕ್ರಮ ಬಿತ್ತರಿಸುತ್ತಿದ್ದರು . ಸಂಜೀವ್ ಕುಲಕರ್ಣಿ ಅದರ ನಿರೂಪಕರು .  ನಮ್ಮ ಸಂಸ್ಥೆಯಿಂದ ೩ ತಂಡಗಳು ಭಾಗವಹಿಸಿದ್ದೆವು .  ೧೦ ಗಂಟೆಗೆ ಹಾಜರಾಗಬೇಕಿತ್ತು . ಹಾಗಾಗಿ , ಅಂದು ಆಫೀಸಿಗೆ ರಜೆ ಹಾಕಿದ್ದೆ . ಮನೆಯವರು ಕಾರ್ಯನಿಮಿತ್ತ ಚೆನ್ನೈಗೆ ಹೋಗಿದ್ದರು . ಮನೆಯಲ್ಲಿ ನನ್ನ ಅತ್ತೆಯವರಿದ್ದರು . ಬೆಳಿಗ್ಗೆ ಎದ್ದ ಕೂಡಲೇ ಮೊದಲು ಕಂಡಿದ್ದು ಅವರೇ .  "ಅಯ್ಯೋ ಬೆಳಿಗ್ಗೆದ್ದು ನನ್ನ ಮುಖ ಯಾಕೆ ನೋಡಿದೆ ? ಅದೇನೋ  ಸ್ಪರ್ಧೆಗೆ ಬೇರೆ ಹೋಗಬೇಕು ಅಂತಿದ್ದೆ . ಹೋಗಿ ಮೊದಲು ದೇವರ ಪಟ ನೋಡು " ಅಂದರು ( ನಮ್ಮ ಮಾವನವರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದರು ) .  ನಾನು "ಅಮ್ಮೋ ಜೀವನದಲ್ಲಿ ಏನೇನೆಲ್ಲ ಅನುಭವಿಸಿದವರು ನೀವು . ಮುತ್ತಿನಂಥ ಮಗನನ್ನು ನನಗಾಗಿ ಹೆತ್ತವರು ನೀವು . ಹೀಗೆಲ್ಲ ಮಾತಾಡಬೇಡಿ . ನಿಮ್ಮನ್ನೇ ಮೊದಲು ನೋಡಿದ್ದೀನಲ್ಲ , ಇವತ್ತು ಖಂಡಿತಾ ನನಗೆ ಬಹುಮಾನ ಸಿಗುತ್ತೆ ನೋಡ್ತಿರಿ " ಅಂದೆ .  ಅವರು ನಕ್ಕು ಸುಮ್ಮನಾದರು .

                  Studio ತಲುಪಿದಾಗ ಇನ್ನೂ ಸಮಯವಿತ್ತು . ನನ್ನ ಸಹೋದ್ಯೋಗಿ ಹಾಗೂ ಈ ಸ್ಪರ್ಧೆಗೆ ನನ್ನ ಜೊತೆಗಾತಿಯಾಗಿ  ಬಂದಿದ್ದವಳು ಕನ್ನಡದಲ್ಲಿ ಎಂ . ಎ ಮಾಡಿದ್ದ ಕಾರಣ ಇತರ ಎರಡು ತಂಡಗಳಲ್ಲಿ ಬಂದಿದ್ದ ಹುಡುಗರಿಗೆ ಅವಳನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಆಸೆಯಿತ್ತು . ನನ್ನಲ್ಲಿ ಕೇಳುತ್ತಿದ್ದರು "ಅವರನ್ನು ನಮ್ಮ ತಂಡಕ್ಕೆ ಕಳಿಸಿ" ಎಂದು . "ಧಾರಾಳವಾಗಿ ಕರೆದುಕೊಳ್ಳಿ  . ನನಗೆ ಯಾರೇ ಜೊತೆಯಾಗಿ ಬಂದರೂ ಸಂತೋಷ"  ಅಂದೆ .  ಇದ್ದದ್ದು ಕರ್ನಾಟಕದ ಕುರಿತು ರಸಪ್ರಶ್ನೆ ಕಾರ್ಯಕ್ರಮ .  ಅದಕ್ಕೆ ೨ ವಾರ ಮೊದಲು BHELನವರು ನಡೆಸುವ ರಾಜ್ಯ ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆಗೆ ಹೋಗಿ , ೫ ಅಂಕಗಳಿಂದ ಮೂರನೇ ಸ್ಥಾನ ಕಳೆದುಕೊಂಡಿದ್ದೆನಾದರೂ,  ತಯಾರಿ ಚೆನ್ನಾಗೇ ಮಾಡಿದ್ದೆ . ಹಾಗಾಗಿ ಈ ಕಾರ್ಯಕ್ರಮವೂ ಚೆನ್ನಾಗಿಯೇ ಆಗುತ್ತದೆಂಬ ನಂಬಿಕೆ ಇತ್ತು .  ಜೊತೆಗಾರರು ಯಾರೇ ಬಂದರೂ , ತೊಂದರೆಯಿಲ್ಲವೆಂದು  ಸುಮ್ಮನಿದ್ದೆ . ಆದರೆ ನನ್ನ ಸ್ನೇಹಿತೆ ತಾನೇ ಅವರಿಗೆಲ್ಲ "ಇಲ್ಲ . ನಾವಿಬ್ಬರೇ ತಂಡವಾಗಿ ಭಾಗವಹಿಸುತ್ತೇವೆ " ಎಂದಳು .  ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ ಅದು . 

                ಅದುವರೆಗೂ ದೂರದರ್ಶನದಲ್ಲಿ ಬಣ್ಣಬಣ್ಣದ ಸೆಟ್ ನೋಡಿ ಬೆರಗಾಗುತ್ತಿದ್ದ ನಾನು , ವಾಸ್ತವದಲ್ಲಿ ಸೆಟ್ ಹೇಗಿರುತ್ತದೆ ಎಂದು ನೋಡಿ , 'ಎಂಥಾ ಭ್ರಮೆ ' ಎಂದುಕೊಂಡಿದ್ದೆ .  ಸಂಜೀವ್ ಕುಲಕರ್ಣಿ ಅವರು "ಓಹೋ ಮಹಿಳಾ ತಂಡ ಬಲು ಗಟ್ಟಿ" ಎಂದು ತಮಾಷೆ ಮಾಡುತ್ತಿದ್ದರು .  ರಸಪ್ರಶ್ನೆ ಕಾರ್ಯಕ್ರಮ ಸೊಗಸಾಗಿದ್ದರೂ, ಆ hotseatನಲ್ಲಿ ಕೂರುವ ಅನುಭವ ಮಾತ್ರ ಮರೆಯಲಾಗದು .  ನಮ್ಮ ತಂಡವೇ ಮುಂದಿದ್ದರೂ ಸಹ , ನನಗೆ ಅತಿ ಹೆಚ್ಚು ಅಂಕ ಗಳಿಸಬೇಕು ಎಂಬ ಆಸೆ . ಪಕ್ಕದಲ್ಲಿ ಇದ್ದ ಹುಡುಗರ ತಂಡ " ನಮಗೂ ಒಂದೆರಡು ಉತ್ತರ ಹೇಳಿಕೊಡಿ " ಎನ್ನುತ್ತಿದ್ದರು.  ಕಡೆಯ ಸುತ್ತಿನಲ್ಲಿ ಪದಬಂಧ ಇತ್ತು .  ಸುಳಿವುಗಳನ್ನು ಸಂಜೀವ್ ಅವರು ನೀಡುತ್ತಿದ್ದರು . ನಮ್ಮ ತಂಡಕ್ಕೆ ಪ್ರಶ್ನೆ ಬಂದಿದ್ದು "ಶಿವರಾಮ ಕಾರಂತರ ಕಾದಂಬರಿಗಳಲ್ಲೊಂದು " ಎಂಬುದು .  ನನಗೆ ಗಾಬರಿಯಲ್ಲಿ ಉತ್ತರವೇ ಹೊಳೆಯುತ್ತಿಲ್ಲ :) . ಇನ್ನೇನು ಸಮಯ ಮುಗಿಯುತ್ತ ಬಂತು ಎನ್ನುವಾಗ ಹೊಳೆಯಿತು "ಮೈಮನಗಳ ಸುಳಿಯಲ್ಲಿ " ಎಂದು .  ಸಂಜೀವ್ ಕುಲಕರ್ಣಿ ಅವರು ಬಹಳ ಸಂತೋಷ ಪಟ್ಟರು . "ನಿಜಕ್ಕೂ ಕಷ್ಟದ ಪ್ರಶ್ನೆಯಾಗಿತ್ತು . ನಿಮಗೆ ಉತ್ತರ ಹೊಳೆದದ್ದು ನನಗೆ ಖುಷಿಯಾಯಿತು" ಎಂದರು .  ನನಗೂ ಸಖತ್ ಖುಷಿ . ಬಹುಮಾನ ಗಳಿಸಿದ್ದಕ್ಕಲ್ಲ . ಆ ಪ್ರಶ್ನೆಗೆ ಉತ್ತರಿಸಿದ್ದಕ್ಕೆ . ಕಾರಣ ಇಷ್ಟೇ .  ವಯಸ್ಸಾದ ನನ್ನ ಅತ್ತೆಯವರಿಗೆ ಪುಸ್ತಕದ ಹುಚ್ಚು . ಈ ಪುಸ್ತಕ ಓದಬೇಕು ಎಂದಿದ್ದರು ಅವರು . ನನಗೆ ಉತ್ತರ ಹೊಳೆಯಲು ಕಾರಣ ಸಹ ಇದೇ ಆಗಿತ್ತು . ಮೊದಲ ಬಹುಮಾನ ಗಳಿಸಿದ್ದಕ್ಕೆ ನನಗಿಂತಲೂ ಹೆಚ್ಚು ಖುಷಿ ಪಟ್ಟವರು ನನ್ನತ್ತೆ .  ಆಗ ಹೇಳಿದೆ " ಬೆಳಿಗ್ಗೆ ಎದ್ದಾಗ ನಿಮ್ಮನ್ನು ನೋಡಿದ್ದಕ್ಕೆ ಮೊದಲ ಬಹುಮಾನ ಬಂತು ನೋಡಿ " .

               ಮತ್ತೆಂದೂ ನನ್ನತ್ತೆ ಆ ಮಾತು ಹೇಳಲಿಲ್ಲ . ಬೇರೆಲ್ಲ ವಿಚಾರಗಳಲ್ಲಿ ಪ್ರಗತಿಪರ ಮನೋಭಾವ ಹೊಂದಿದ್ದ ಅವರು , ಅದ್ಯಾಕೋ ಈ ವಿಷಯದಲ್ಲಿ ಮಾತ್ರ ಬಹಳ ಹಿಂಜರಿದಿದ್ದರು ಅಷ್ಟು ಕಾಲ .  ETV  ರಸಪ್ರಶ್ನೆ ಕಾರ್ಯಕ್ರಮದ ದೆಸೆಯಿಂದ ಇದೊಂದು ಮೂಢ ನಂಬಿಕೆಗೆ ಮುಕ್ತಿ ದೊರಕಿತ್ತು ಅವರ ಮನಸಲ್ಲಿ .

- ತಾರಾ ಶೈಲೇಂದ್ರ
 

Tuesday, September 9, 2014

ಮಸ್ಸೊಪ್ಪಿನ ಪುರಾಣ


                                            ಮಸ್ಸೊಪ್ಪಿನ  ಪುರಾಣ 
                                            

           ನನಗಾಗ ೧೩ ವರ್ಷ . ಮನೆಯ ಬೇರೆ ಕೆಲಸಗಳನ್ನು ಕಲಿತಿದ್ದರೂ , ಅಡಿಗೆ ಮಾಡುವುದನ್ನು ಕಲಿತಿರಲಿಲ್ಲ . ಅಜ್ಜಿ ಮನೆಯಲ್ಲಿ ರಜೆಯ ಮಜಾ ಅನುಭವಿಸಲು ಹೋಗಿದ್ದೆ. ನನ್ನ ಅಜ್ಜಿ ಬಹಳ ಮುದ್ದು ಮಾಡುತ್ತಿದ್ದರೂ  ಸಹ,ಕೆಲಸದ ವಿಷಯದಲ್ಲಿ ಭಾರಿ ಬಿಗಿ.  ಸ್ವಲ್ಪ ದಿನ ಅವರು ತಿಂಡಿ , ಅಡಿಗೆ ಮಾಡುವಾಗ ಪಕ್ಕದಲ್ಲಿದ್ದು ನೋಡುತ್ತಿದ್ದೆ.  ನಂತರ ಶುರುವಾಯ್ತು ಅಜ್ಜಿಯ ವರಾತ . ಹೆಣ್ಣು ಮಕ್ಕಳು ಅಡಿಗೆ ಕಲಿಯಬೇಕು ಎಂದು .  ನಾನೂ ಸಹ ಹೂಂಗುಡುತ್ತಿದ್ದರೂ , ಯಾವತ್ತು ಪ್ರಯತ್ನ ಮಾಡಿರಲಿಲ್ಲ . ಒಂದು ದಿನ ಅಜ್ಜಿ ಇದ್ದಕ್ಕಿದ್ದಂತೆ ' ಮಗಾ ಇವತ್ತು ಅಡಿಗೆ ನೀನೆ ಮಾಡು' ಎನ್ನಬೇಕೆ ?
ಅಜ್ಜಿ ಮನೆಯಲ್ಲಿ ಸೌದೆ ಒಲೆಯಲ್ಲಿ ಅಡಿಗೆ ಮಾಡುತ್ತಿದ್ದುದು . ಹೊಸದಾಗಿ ಒಂದು pump stove ಕೊಂಡು ತಂದಿದ್ದರೂ ಸಹ, ಅದು ಸಿಡಿಯಬಹುದೆಂಬ ಭಯದಲ್ಲಿ ನನ್ನನ್ನು ಅದರ ಹತ್ತಿರ ಸುಳಿಯಗೊಡುತ್ತಿರಲಿಲ್ಲ .  'ಅವ್ವಾ ಮಸ್ಸೊಪ್ಪು ಮಾಡೋದು ಹೇಗೆ ಹೇಳಿಕೊಡಿ'  ಅಂದಿದ್ದಕ್ಕೆ ಅವರು 'ಅಮ್ಮ ಹೇಗೆ ಮಾಡ್ತಾಳೋ ಹಂಗೇಯಾ ' ಅಂದುಬಿಟ್ಟರು . ಸರಿ ,
ಸೊಪ್ಪು ಬಿಡಿಸಿ, ತೊಳೆದು , ಬೇಳೆಯೊಟ್ಟಿಗೆ ಹಾಕಿ ಬೇಯಿಸಿದೆ . ಅದನ್ನು ಬಸಿಯಲು ಹೋಗಿ, ಕೈ ಮೇಲೆ ಸ್ವಲ್ಪ ಚೆಲ್ಲಿಕೊಂಡು ಅಡಿಗೆಯ ಮೊದಲ ಬಿಸಿಯ ಅನುಭವವಾಯ್ತು . ಆಮೇಲೆ ಒರಳುಕಲ್ಲಿನಲ್ಲಿ ತೆಂಗಿನಕಾಯಿ, ಪುಡಿ, ಈರುಳ್ಳಿ , ಹಸಿಮೆಣಸಿನಕಾಯಿ ರುಬ್ಬಿಕೊಂಡೆ.  ರುಬ್ಬಿದ್ದನ್ನು ಒಗ್ಗರಣೆಗೆ ಹಾಕಿ, ಉಪ್ಪು, ಹುಳಿ ಬೆರೆಸಿ, ಕುದಿಸಿದೆ . ಅಜ್ಜಿ ಬಂದು , ನೋಡಿ ಹೋದರೇ ಹೊರತು , ಎನೂ ಹೇಳಲಿಲ್ಲ . ಊಟಕ್ಕೆ ಕುಳಿತಾಗ , ಬಿಸಿ ಅನ್ನದ ಮೇಲೆ ಘಮಘಮಿಸುವ ತುಪ್ಪ ಹಾಕಿಕೊಂಡು, ಮಸ್ಸೊಪ್ಪು  ಹಾಕಿ ಕಲಸಿ ಬಾಯಿಗಿಟ್ಟರೆ, ಆಹಾ ಎಂಥ ಮಜಾ ಅಂತೀರಿ .  ಖಾರ ನೆತ್ತಿಗೇರಿ ಕುಣಿದಾಡುವಂತೆ ಆಗಿತ್ತು . ಆಮೇಲೆ ಅಜ್ಜಿಯ enquiry ಶುರು 'ಹೆಂಗೆ ಮಾಡಿದೆ ಹೇಳು ' ಎಂದು . ನಾನೂ ಎಲ್ಲವನ್ನು ಹೇಳಿದೆ - ಮುಂಗೈಯ ಮೇಲೆ ಕಟ್ಟು ಸುರಿಸಿಕೊಂಡದ್ದನ್ನು ಬಿಟ್ಟು . ಅಮೇಲೆ ತಿಳೀತು ನಾನು ಮಾಡಿದ್ದ ಅವಾಂತರ . ಸೊಪ್ಪು , ಬೇಳೆ ಬೇಯಿಸಿ, ಬಸಿದ ಕಟ್ಟನ್ನು  ಹೊರಗೆ ಚೆಲ್ಲಿದ್ದೆ ಹಹಹಹ .

     ಅಜ್ಜಿ ಮತ್ತೆ ಮುಂಗೈಗೆ ತುಪ್ಪ ಸವರಿ , ಸಮಾಧಾನ ಮಾಡಿ , ಹೆಣ್ಣು ಮಕ್ಕಳು ಅಡಿಗೆ ಕಲಿತಿರಬೇಕು ಎಂದು ಬುದ್ಧಿ ಹೇಳಿದರು . ಹಾಗಾಗಿ , ೧೩ ವರ್ಷಕ್ಕೆ ಅಡಿಗೆ ಮಾಡಲು ಶುರು ಮಾಡಿದೆ .  ಇವತ್ತಿಗೂ ನನ್ನ ಮೊದಲ ಅಡಿಗೆಯ ಅನುಭವ ಮರೆಯಲಾಗಿಲ್ಲ .

Saturday, September 6, 2014

ವಿದಾಯ (poem)


ಸಂತಸದ ದಿನಗಳವು  ಕಾಡಿಹುದು ನೆನಪು
 ತಣಿಯದು  ಎಂದೆಂದೂ ಸ್ನೇಹದ ಬಿಸುಪು
ದೂರಪಯಣಕೆ ಹೊರಟವನ ಕಳುಹಬಂದವಳು ನಾನು
ಸುರಿಸಿದೆ  ಮಾತಿನಲಿ ಸವಿಜೇನ ನೀನು.
ಬಾಳ  ಬಂಡಿಯಲಿ ಪಯಣಿಗರು ನಾವು
ಬದಲಾಗಬಹುದಷ್ಟೆ ನಾವಿಳಿಯುವ ತಾವು
ತಿಳಿದಿದೆ  ನೋವಿನ ಹಾದಿಯದು ದುರ್ಗಮ
ಆತ್ಮಬಲ ಒಂದಿದ್ದರೆ ಎಲ್ಲವೂ ಸುಗಮ .
ಗೊಂಬೆಗಳು ನಾವು , ಸೂತ್ರಧಾರಿ ಅವನು
ತನ್ನ  ಮನಬಂದಂತೆ ನಮ್ಮ ಆಡಿಸುವವನು
ಇಬ್ಬರೂ  ಬಲ್ಲೆವು ಆಂತರ್ಯದ ನೋವ
ಆದರೂ ಮೊಗದಲಿ ನಸುನಗೆಯ ಭಾವ.
ತುಂಬಿದೆ ಎದೆಯಲಿ ಸೂತಕದ ಛಾಯೆ
ಫಲಿಸಲಿಲ್ಲ ಯತ್ನ , ವಿಧಿಯದೀ ಮಾಯೆ
ಉಸಿರ  ತೊರೆಯಲು  ಅನುವಾಯ್ತು ಕಾಯ
ನಿನಗಿದೋ ಗೆಳೆಯ ಅಂತಿಮ ವಿದಾಯ.

- ತಾರಾ ಶೈಲೇಂದ್ರ

Wednesday, September 3, 2014

ಕುಮಟಾದಲ್ಲಿ ೧೨ ಗಂಟೆಗಳು

                                                             

ಹೆಚ್ಚೂ ಕಡಿಮೆ  ೨ ತಿಂಗಳುಗಳಿಂದ  ಪ್ರತಿ ಬಾರಿ ಫೋನ್ ಮಾಡಿದಾಗ , ಪ್ರಿಯಾ ನೆನಪು ಮಾಡುತ್ತಿದ್ದ ವಿಷಯ ಸ್ವಸ್ತಿ ಬಳಗದ ಸಮ್ಮಿಲನ ಹಾಗೂ 'ಮಳೆ ಮಾರುವ ಹುಡುಗ' ಪುಸ್ತಕದ ಲೋಕಾರ್ಪಣೆ . ಖಂಡಿತ ಸಮಯ ಮಾಡಿಕೊಂಡು ಬರಬೇಕು ಎನ್ನುವ ಅವರ ಪ್ರೀತಿಯ ಒತ್ತಾಯಕ್ಕೆ 'ನೋಡುವ, ಮೊದಲು ದಿನಾಂಕ ನಿಗದಿಪಡಿಸಿ ತಿಳಿಸಿ' ಎನ್ನುತ್ತಿದ್ದೆನಾದರೂ ನಾನು ಹೋಗಲಾಗುವುದು ಎಂಬ ವಿಶ್ವಾಸ ನನಗೇ ಇರಲಿಲ್ಲ .

ಕಳೆದ ಬಾರಿ ಪ್ರಿಯಾ ಫೋನ್ ಮಾಡಿದಾಗ , ಮನೆಯವರನ್ನು ಕೇಳಿದೆ - 'ಒಂದೆರಡು ದಿನ ಸಾಗರ , ಸಿಗಂದೂರು ಚೌಡೇಶ್ವರಿ ದೇವಸ್ಥಾನ, ಕುಮುಟಾ ಸುತ್ತಿ ಬರೋಣ , ಈ ಸಮಾರಂಭಕ್ಕೆ ಹೋಗುವ ಆಸೆ " ಅಂತ . ಅವರೂ ಒಪ್ಪಿದರು. ಆದರೆ ನಂತರ ಕಾರಣಾಂತರಗಳಿಂದ   ಮನೆಯವರು ಯಾರೂ ಬರಲಾಗದು ಎಂದಾಗ ನಿರಾಸೆಯಾಯಿತು.  ಕಡೆಗೆ ಯಜಮಾನರು "ನೀನೊಬ್ಬಳೆ ಹೋಗಿ ಬಾ " ಎಂದರು .  ನಂತರ ನೋಡಿದರೆ , ಟಿಕೆಟ್ ಸಿಗುತ್ತಿಲ್ಲ . ವಿನಾಯಕ್ ಭಟ್ ಅಲಿಯಾಸ್ ಖುಷಿ ವಿನು ಫೋನ್ ಮಾಡಿ "ಅಕ್ಕಾ ಬರ್ತಿದ್ದೀ ತಾನೇ?" ಎನ್ನುವಾಗ ಟಿಕೆಟ್ ಸಿಗುತ್ತಿಲ್ಲವೆಂದೆ . ಪಾಪ , ನಂತರ ಅವನೇ ಸುತ್ತಿ , ನನಗೆ ಟಿಕೆಟ್ ಕಾದಿರಿಸಿದ.  ಪ್ರಿಯಾಗೆ ಬರಲಾಗದೆಂದು ಹೇಳಿ ಆಗಿತ್ತು. ಹಾಗಾಗಿ ವಿನಾಯಕ್ ಭಟ್ ಗೆ ಹೇಳಿದೆ 'ಪ್ರಿಯಕ್ಕಂಗೆ ಹೇಳೋದು ಬೇಡ , ಇದು ಸರ್ಪ್ರೈಸ್ ಆಗಿರಲಿ ' ಎಂದು . ಆದರೆ ಅವನು ಕಳ್ಳ , ಗುಟ್ಟು ಬಿಟ್ಟು ಕೊಟ್ಟಿರಬೇಕು . ಪುನಃ ಪ್ರಿಯಾ ಅವರ ಫೋನ್ " ಏನು ನಿರ್ಧಾರ ಮಾಡಿದ್ರಿ ?   ಬಂದಿದ್ದರೆ ಚೆನ್ನಿತ್ತು " ಎಂದು . ಕಡೆಗೆ 'ಬರುವ ಯೋಚನೆ ಇದೆ , ನೋಡುವ ' ಎಂದೆ . 

 ಮನೆಯಲ್ಲಿ ಸ್ವಲ್ಪ ಆತಂಕ ಇತ್ತು . ಒಬ್ಬಳನ್ನೇ ಅಷ್ಟು ದೂರ , ಅದೂ ರಾತ್ರಿ ಬಸ್ ನಲ್ಲಿ ಹೇಗೆ ಕಳಿಸೋದು ? ಆ ಕಡೆ ನಕ್ಸಲೈಟ್ ರ ಕಾಟ ಏನಾದರೂ ಇದೆಯಾ  ? ಪ್ರಿಯಾ ಅವರೊಬ್ಬರೇ ಪರಿಚಯ . ಅವರಿಗೆ ನನ್ನನ್ನು ಬೆಳಿಗ್ಗೆ ಪಿಕ್ ಮಾಡಲಿಕ್ಕೆ ಸಮಯ ಸಿಗುತ್ತಾ ಇತ್ಯಾದಿ ಇತ್ಯಾದಿ . ಕಡೆಗೆ ವಿನಾಯಕ್ ಭಟ್ ನನ್ನನ್ನು ಬೆಳಿಗ್ಗೆ ಮೊದಲು ಅವರ ಮನೆಗೆ ಕರೆದುಕೊಂಡು ಹೋಗಿ, ನಂತರ ಕಾರ್ಯಕ್ರಮಕ್ಕೆ ಕರೆತರುವುದು ಎಂದಾಯ್ತು .  ಹೊರಡುವ ಹಿಂದಿನ ದಿನದಿಂದಲೇ ಪ್ರಿಯಾ ಹಾಗೂ ವಿನಾಯಕ್ ಫೋನ್ 'ಎಲ್ಲಾ ಸಿದ್ಧ ತಾನೇ ? ಎನೂ ಯೋಚನೆ ಮಾಡುವಷ್ಟಿಲ್ಲ . ನಾವು ನಿಮ್ಮ ಬಸ್ ನಿಲ್ದಾಣ ತಲುಪುವ ಮೊದಲೇ ಅಲ್ಲಿ ಹಾಜರು' ಎಂದು . ಪುನಃ ಬಸ್ ಹತ್ತಿದ ಮೇಲೆ ಫೋನ್ , ಮಧ್ಯೆ ಫೋನ್ ನಾನು ಎಲ್ಲಿರುವೆ ಎಂದು ತಿಳಿದುಕೊಳ್ಳಲು . ಬಸ್ ನಲ್ಲಿ ಅಚಾನಕ್ ಆಗಿ ಸಾಯೀಶ್ ಭಂಡಾರಿಯ ಭೇಟಿ . ಖುಷಿ ಆಯ್ತು . ಅವರು ಸಾಗರದಲ್ಲಿ ಇಳಿದರೂ ಸಹ , 'ಅಕ್ಕಾ ಫೋನ್ ಮಾಡಿ ಅವರು ಬಂದಿದ್ದಾರಾ ತಿಳಿದುಕೊಳ್ಳಿ ' ಎಂದು ಕಾಳಜಿ ತೋರಿದರು .  ಅಂತೂ ಇಂತೂ ಬೆಳಿಗ್ಗೆ ೭.೩೦ ಕ್ಕೆ ಬಸ್ ಇಳಿದಾಗ ವಿನಾಯಕ್ ಭಟ್ ರೈನ್ ಕೋಟ್ ಹಿಡಿದು ನಿಂತಿದ್ದ "ಏನೇ ಅಕ್ಕಾ ? ಇಷ್ಟು ಹೊತ್ತಾ ಬರೂದು " ಎನ್ನುತ್ತಾ .

ಅಲ್ಲಿಂದ ಅವನ ಊರಾದ  ಬ್ರಹ್ಮೂರಿಗೆ ಹೋಗಿ, ಅವನ ಆಯಿ, ದೊಡ್ಡ ಆಯಿ ಎಲ್ಲರ ಪ್ರೀತಿಯಲ್ಲಿ ಮಿಂದು , ಅವನೇ ಮಾಡಿಕೊಟ್ಟ ಚಪಾತಿ ತಿಂದು , ಕಾರ್ಯಕ್ರಮಕ್ಕೆ ಬಂದೆವು . ಶ್ರೀ ಕರಣಂ ಪವನ್ ಪ್ರಸಾದ್ , 'ಮಳೆ ಮಾರುವ ಹುಡುಗ' ಕಥಾಸಂಕಲನದ  ಕರ್ತೃ ಶ್ರೀ ಕರ್ಕಿ ಕೃಷ್ಣ ಮೂರ್ತಿ , ಶ್ರೀ ವಸಂತಕುಮಾರ್ ಪೆರ್ಲ , ಮತ್ತು ಶ್ರೀ ಶ್ರೀಧರ ಬಳಗಾರರ ಮಾತುಗಳನ್ನು ಕೇಳುವ ಸೌಭಾಗ್ಯ ಒದಗಿತು . ಕಾರ್ಯಕ್ರಮದ ನಂತರ ಊಟ , ನಂತರ ಸ್ವಸ್ತಿ ಬಳಗದ ಸದಸ್ಯರ ಕಿರು ಪರಿಚಯ , ಭೈರಪ್ಪನವರ ಕೃತಿಗಳಲ್ಲಿ  ಮಾನವೀಯ ಸಂಬಂಧಗಳು ಹಾಗೂ ಸಂವೇದನೆಗಳು ಎಂಬ ವಿಷಯದ ಬಗ್ಗೆ ಚರ್ಚೆ ಸೊಗಸಾಗಿತ್ತು . ಕಾರ್ಯಕ್ರಮದ ದೆಸೆಯಿಂದ ಗಾಯತ್ರಿ ಸಚಿನ್ ಹಾಗೂ ಸುಧಾ ಅವರ ಮುಖತಃ ಭೇಟಿ ಕೂಡ ಖುಷಿ ಕೊಟ್ಟಿತು .  ಅಲ್ಲಿಂದ ಪ್ರಿಯಾ ಭಟ್ ಮನೆಗೆ ಹೋದೆವು . ಅಲ್ಲೂ ಸಹ ನಗು, ಹರಟೆ , ರುಚಿಯಾದ ಊಟ ಎಲ್ಲ ಮುಗಿದು, ರಾತ್ರಿ ೭.೩೦ಕ್ಕೆ ನಮ್ಮನ್ನು ಬೀಳ್ಕೊಡಲು ಬಂದರು ಪ್ರಿಯಾ ಭಟ್ , ಮಹಾಬಲೇಶ್ವರ ಭಟ್  ಹಾಗೂ ವಿನಾಯಕ್ ಭಟ್ ಅಲಿಯಾಸ್ ಖುಷಿ ವಿನು .

ಬಸ್ ಹತ್ತುವವರೆಗೂ 'ಅಕ್ಕಾ ಹೋಗಲೆಬೇಕಾ' ಎನ್ನುತ್ತಿದ್ದ ವಿನಾಯಕ್ ಭಟ್ ಹನಿಗಣ್ಣಾಗಿದ್ದು ಕಂಡು ನಾನೂ ಸಹ ಭಾವುಕಳಾಗಿದ್ದು ನಿಜ . ನೂರೆಂಟು ನೆನಪು, ಹತ್ತಾರು ಜನರ ಪ್ರೀತಿ , ಸ್ನೇಹ ಹೊತ್ತು ಬೆಂಗಳೂರಿನ ಕಡೆಗೆ ಹೊರಟಾಗ , ಈ ಎಲ್ಲಾ ಜನರ ಒಂದೇ ಪ್ರಶ್ನೆ 'ಪುನಃ ಬರುವುದು ಯಾವಾಗ ?' ನನ್ನ ಮನದಲ್ಲೂ ಈಗ ಅದೇ ಪ್ರಶ್ನೆ - 'ಇವರೆಲ್ಲರನ್ನೂ ಪುನಃ ನೋಡುವುದು ಯಾವಾಗ ?'

- ತಾರಾ ಶೈಲೇಂದ್ರ




 

Saturday, August 2, 2014

ಬಾಳ ಗೆಳೆಯ ( ಸ್ನೇಹಿತರ ದಿನಾಚರಣೆಯಂದು ನನ್ನ ಬಾಳ ಗೆಳೆಯನಿಗೆ )

               ಬಾಳ ಗೆಳೆಯ
                                        
ಹಾಕಿದೆ ನಾನಂದು ವರಮಾಲೆ
ಇಂದೆನಗೆ ಸಂತಸದ ಸರಮಾಲೆ .
ನನ್ನೊಡನಿರುವೆ ನೀ ಎಡವಿದಾಗ ,
ಕಾಲಿಗೆ ಕಷ್ಟಗಳು ತೊಡರಿದಾಗ .
ನಾ ನಕ್ಕಾಗ ನಗುವೆ ,
ಅತ್ತಾಗ ನೀನೂ ಹನಿಗಣ್ಣಾಗುವೆ.
ಸಹಿಸುವೆ  ನನ್ನೆದೆಯ ಆವೇಶ,
ಕೆಲವೊಮ್ಮೆ ಅಕಾರಣ ಆಕ್ರೋಶ .
ಕಾರಣವೇ ಮರೆತ ಜಗಳ
ತೋಯಿಸಿದಾಗ ನನ್ನ ಕದಪುಗಳ,
ಕಲಿತ ಬುದ್ಧಿಯನೆಲ್ಲ ವ್ಯಯಿಸಿ ,
ಪುನಃ ಕಾಡುವುದಿಲ್ಲವೆಂದು ರಮಿಸಿ ,
ಅನುನಯದ ಮಾತ ಪೋಣಿಸಿ ,
ಲೆಕ್ಕವಿಲ್ಲದಷ್ಟು ಬಾರಿ ನಗಿಸುವೆ .
ನೋವಿನಲಿ ಹಾಗೂ ನಲಿವಿನಲಿ
ನೀನಿರಲು ಸದಾ ಜೊತೆಯಲಿ
ಮನಗಳು ಬೆರೆತಿವೆ ಮಾಗಿ
ಬಾಳಪಯಣದಿ ಜೊತೆಯಾಗಿ ಸಾಗಿ

- ತಾರಾ ಶೈಲೇಂದ್ರ


                      
                                                              
 

Tuesday, July 22, 2014

ಬಾಲಕಾರ್ಮಿಕ (poem)

 
ಬಾಲಕಾರ್ಮಿಕ 
 
ಮೇಜು ಒರೆಸುವ 
ಪಾತ್ರೆ ತೊಳೆಯುವ 
ಕಸ ಗುಡಿಸುವ 
ಪುಟ್ಟ ಬಾಲಕಿಗೆ 
ತುಂಬಿದ ಹೊಟ್ಟೆ 
ಕನ್ನಡಿಯೊಳಗಿನ ಗಂಟು 
 
    ರದ್ದಿ ಹುಡುಕಲು 
    ಚಿಂದಿ ಆಯಲು 
    ಸಂದಿ-ಗೊಂದಿ 
    ಸುತ್ತುವ ಚಿಣ್ಣಗೆ 
    ಬಾಲ್ಯದ ಸೊಗಸು 
    ಹಗಲು ಕನಸು 
 
ಬೀಡಿ ಕಟ್ಟುವ 
ಊದುಬತ್ತಿ ಹೊಸೆಯುವ 
ಜೀತ ಮಾಡುವ 
ಮುದ್ದು ಮಕ್ಕಳಿಗೆ 
ಸುಖ-ಸಂತೋಷ 
ಗಗನ ಕುಸುಮ 
 
    ತನ್ನನ್ನು ಉದ್ಧರಿಸುವ 
    ಭಾಷಣ ಮಾಡುವ 
    ಸರ್ಕಾರ-ಸಂಸ್ಥೆಗಳ 
    ಆಶ್ವಾಸನೆ ಬಾಲಕಾರ್ಮಿಕನಿಗೆ 
    ನೀರ ಮೇಲಣ ಗುಳ್ಳೆ 
 
-  ತಾರಾ ಶೈಲೇಂದ್ರ 

Monday, July 21, 2014

ಒಡವೆ

               ಒಡವೆ

ಮುತ್ತೈದೆಗೆ ಒಡವೆ
ಕುಂಕುಮ, ಮೂಗುತಿ ,
ಮಾಂಗಲ್ಯ, ಬಳೆ
ಕಾಲುಂಗುರ, ಸಿಂಧೂರ .
ನಮಗೋ ಹುಚ್ಚು
ಕಂಡರೆ ಮುತ್ತು ,
ಹವಳ , ವಜ್ರ ,
ವೈಢೂರ್ಯ , ಬಂಗಾರ .
ಅನಿಸಬಹುದು ಇದು
ಬರೀ ಆಡಂಬರ , ಬಡಿವಾರ
ಆದರೆ, ಒಮ್ಮೆ ಯೋಚಿಸಿ
ಅಕ್ಕಸಾಲಿಗನಿಗೆ ಆಗಬೇಡವೆ ವ್ಯಾಪಾರ ?

- ತಾರಾ ಶೈಲೇಂದ್ರ

 

Tuesday, July 15, 2014

ನನ್ನ ಜನಕನಿಗೊಂದು ನಮನ (poem)

ಏನ ನೀಡಬಲ್ಲೆ ನಿನಗೆ ಜನಕ ?
ಕಣ್ರೆಪ್ಪೆಯಲಿಟ್ಟು ಕಾದಿರುವೆ ನನ್ನ ಈತನಕ
ಮಗುವಾಗಿದ್ದಾಗ ಹೆಗಲ ಮೇಲೆ ಹೊತ್ತು
ಪಿತೃ ಪ್ರೇಮದ ಸಂತಸದ ಸಿರಿಯನಿತ್ತು
ಬೆಳೆದಂತೆ ನನಗಾದೆ ಮಾರ್ಗದರ್ಶಕ , ದಾರ್ಶನಿಕ
ಪ್ರಪಂಚದಲೆನಗೆ ನೀ ಸತ್ಯನಿಷ್ಠೆಯ ದ್ಯೋತಕ
ನೋವಲ್ಲಿದ್ದರೂ ನಗುವ ನಿನ್ನ ಸಹನೆ-ತಾಳ್ಮೆ
ಎಲ್ಲದರಲ್ಲೂ ಅನುಕರಣೀಯ ನಿನ್ನ ಜಾಣ್ಮೆ
ಕುಟುಂಬಕ್ಕೆ ಮಾದರಿ ನಿನ್ನ ವಾತ್ಸಲ್ಯ
ಏನೇ ಆದರೂ ಕ್ಷೀಣಿಸದ ವಾಂಛಲ್ಯ
ನೀ ನನ್ನ ಜನ್ಮದಾತೆಯ ಸಹಚಾರಿ
ಅದಕೆ ಸದಾ ನಾನಿನಗೆ ಆಭಾರಿ
ಕಲಿಸಿದೆ ನನಗೆ ನ್ಯಾಯ ನೀತಿ
ಪ್ರಪಂಚದ ಎಲ್ಲಾ ರಿವಾಜು, ರೀತಿ
ಇಂದು ನೀನಾಗಿರುವೆ ಮಗುವಿನ ರೀತಿ
ನಾನೇನ ನೀಡಬಲ್ಲೆ ? ಬರೀ ಹಿಡಿಯಷ್ಟು 'ಪ್ರೀತಿ'

- ತಾರಾ ಶೈಲೇಂದ್ರ

 

ಕೃಷ್ಣಸಖಿ (poem)

                   ಕೃಷ್ಣಸಖಿ


ಮೃದುಭಾಷಿ ಸುಂದರಿ ರಾಜಕುವರಿ  ತಾ
ವರಿಸಿದಳು ಮಹಾರಾಜ ರಾಣಾ ಕುಂಭನಾ
ತೊರೆದಳು ಐಹಿಕ ಸುಖ-ಭೋಗವ
ಸೇರಿದಳು ಭಾಗವತರೊಂದಿಗೆ ದೇವಮಂದಿರವ

ಮತ್ಸರ ತಳೆದವರು ಕಳುಹಿದರು ಹಾವ
ಅದಾಯಿತು  ಪುತ್ಥಳಿಯ ಕೊರಳಿನ ಹಾರ
ಹಾಲಾಹಲವದು ಸಿಹಿ-ಸವಿಯ ಜೇನಾಯ್ತು
ಆಣಿಯ ಹಾಸು ಅರಳಿದ ಕುಸುಮದಂತಾಯ್ತು

ಬೃಂದಾವನದಿ ಹರಿಯಿತು ಅವಳ ಕೃಷ್ಣಪ್ರೇಮ
ಭವಬಂಧನ ಮರೆತು ಮನವಾಯ್ತು ನಿಷ್ಕಾಮ
ಬಂದರಾ ಅಕ್ಬರ್ ತಾನ್ಸೇನರು  ಜೊತೆಗೂಡಿ
ಸಾಧ್ವಿ ತಾನಾಗಿದ್ದಳು ಕೃಷ್ಣನ ಒಡನಾಡಿ

ಪತಿ ಬಂದನು ಜೊತೆಗಿರಲಾರೆವೇ ನಾವೆಂದು
ನುಡಿದಳಾಕೆ ಪತ್ನಿ ನಾನು ಶ್ರೀಕೃಷ್ಣನಿಗೆಂದು
ದುಃಖಿಸಿದನು  ರಾಣಾ ಸಹಿಸಲಾರದ ನೋವೆಂದು
ಅರಿತನಾಕೆ ಶ್ರೀಕೃಷ್ಣನಿಗರ್ಪಿತವಾದ ನಿರ್ಮಾಲ್ಯದ ಹೂವೆಂದು

- ತಾರಾ ಶೈಲೇಂದ್ರ


 

Wednesday, July 2, 2014

ಪದೇ ಪದೇ ನೆನಪಾದೆ ( poem)

 
 
ಪದೇ  ಪದೇ  ನೆನಪಾದೆ
 
 

ಹೀಗೆಯೇ ಮತ್ತೊಂದು ವರ್ಷ ಸಂದಿದೆ
ನಿನ್ನ ನೆನಪು ಮರುಕಳಿಸಿ ಬಂದಿದೆ
ಹೇಗೆ ಕಳೆದೆವೊ ನೀನಿರದ ಹಗಲುಗಳ ,
ನಿದ್ದೆ ಬಾರದ ನೀರಸ ಇರುಳುಗಳ
ಅಚ್ಚಳಿಯದೆ  ನಿಂತಿರುವೆ ಸಹೃದಯರ ಮನದಲ್ಲಿ
ನಿಚ್ಚಳ ಪ್ರೀತ್ಯಾದರಗಳ ಸುಂದರ ಹೂಬನದಲ್ಲಿ .
ಘಟಿಸದಿದ್ದರೆ ಚೆನ್ನಿತ್ತು ಈ ದುಃಸ್ವಪ್ನ
ಆಗಿ ಹೋದವು ಕನಸುಗಳೆಲ್ಲ ಭಗ್ನ
ಗಳಿಸಲಾರೆವು ನಾವು ನಿನ್ನಂತೆ ಜನಾನುರಾಗ
ಮುಗಿಯದು ಎಂದಿಗೂ ಸಂತಾಪ, ವಿಯೋಗ
ಬದುಕುತಿರುವೆವು ಇಲ್ಲದೆ ನಮಗೆ ಗತ್ಯಂತರ
ತಿಳಿದಿದೆ ನಮಗೆ ಶೋಕವಿದು ನಿರಂತರ
ಕಳೆಯಿತು ಕಷ್ಟದಿಂದ ವರ್ಷಗಳು ಇಪ್ಪತ್ತೆರಡು
ಕೊನರದು ಬತ್ತಿದಾ ಭಾವಗಳ ಕೊರಡು .

---  ತಾರಾ ಶೈಲೇಂದ್ರ
 

Sunday, June 29, 2014

ಮನೆ - ಮನದೊಡತಿ

               
   ಮನೆ - ಮನದೊಡತಿ















ಸೂರ್ಯನಿಗೂ ಮೊದಲು ಮನೆಯೊಡತಿಯ ಉದಯ
ಬಲು ವಿಶಾಲ  ಇವಳ ಹೃದಯ
ಮನೆಯವರಿಗೆಲ್ಲ ಕಾಫಿ , ಹಾಲು , ಟೀ
ಸಮಯಕ್ಕೆ ಒದಗಿಸುವುದು ಇವಳ ಡ್ಯೂಟಿ
ಕೆಲವರು ಹೇಳುವುದುಂಟು "ಅಡಿಗೆಯೇನು ಮಹಾ?,
ಇಂಗು, ತೆಂಗಿದ್ದರೆ ಎಲ್ಲಾ ಸುಲಭ " ಆಹಾ !!
ಇಡ್ಲಿ , ದೋಸೆ, ಚಪಾತಿ , ರೊಟ್ಟಿ
ಹೋಟೆಲ್ಗೆ ಹೋದರೆ ಎಲ್ಲಾ ತುಟ್ಟಿ
ಮನೆಯಲ್ಲೇ ಮಾಡುವಳಿವಳು ರುಚಿ-ಶುಚಿಯಾಗಿ
ಎಲ್ಲರೂ ಸವಿಯುವರು ಖುಷಿ ಖುಷಿಯಾಗಿ
ಕೆಲವರ ಊಟದಲ್ಲಿ ಗಮನಿಸಬೇಕು ಡಯೆಟ್
ಪಾತ್ರೆಗಳೊಂದಿಗೆ ಸಾಗುವುದು ಇವಳ ಡ್ಯುಯೆಟ್
ಎಲ್ಲರಿಗೂ ಬೇಕು ತಿನಿಸು ಬಗೆಬಗೆ
ಬೇಕಿಲ್ಲ ಯಾರಿಗೂ ಅಡಿಗೆಮನೆಯ ಹೊಗೆ
ತಾನೇ ಭರಿಸುವಳಿವಳು ಒಲೆಮುಂದಿನ ಧಗೆ
ಏನಾದರೂ ಮಾಸದು ಇವಳ ಹೂನಗೆ
ಇಷ್ಟಾದರೂ ಒಬ್ಬೊಬ್ಬರ ಗೊಣಗಾಟ ಇದ್ದಿದ್ದೆ
ಸುಲಭವಲ್ಲ ಈ ಗೃಹಮಂತ್ರಿಯ ಹುದ್ದೆ
ನೀವೆನ್ನದಿರಿ "ಇದೇನು ? ಅಡಿಗೆಯವಳ ರೀತಿ ?"
ಇದು ತನ್ನವರೆಡೆಗೆ ಮನದೊಡತಿಯ ಪ್ರೀತಿ

- ತಾರಾ ಶೈಲೇಂದ್ರ



Saturday, June 7, 2014

೨೦೦೯ರಲ್ಲಿ ನಮ್ಮ ಸಂಸ್ಥೆಯ ಕನ್ನಡ ಸಾಹಿತ್ಯ ಕೂಟವು ಹೊರತರುವ 'ಸಾಹಿತ್ಯ ಮಾಲೆ'ಯ ಪ್ರಧಾನ ಸಂಪಾದಕಿಯಾಗಿ ಶ್ರೀ ಜಯಂತ್ ಕಾಯ್ಕಿಣಿಯವರನ್ನು ಸಂದರ್ಶಿಸಿದಾಗ



ಕವಿ , ಕತೆಗಾರ , ಅಂಕಣಕಾರ , ನಾಟಕಕಾರ , ಚಲನಚಿತ್ರಗಳ ಗೀತೆಕಾರ ,ಸಂಭಾಷಣೆ ಗಾರ. ಶ್ರೀ ಜಯಂತ ಕಾಯ್ಕಿಣಿ



 

  


ಜಯಂತ್ ಕಾಯ್ಕಿಣಿ ಅವರ ಅಭಿಮಾನಿಯಾಗಿದ್ದ ನಾನು ಈ-ಟಿವಿಯಲ್ಲಿ ಕುವೆಂಪು ಹಾಗೂ ಶಿವರಾಮ ಕಾರಂತರ ಕುರಿತು ಅವರು ಕಾರ್ಯಕ್ರಮ ನಿರೂಪಿಸಿದ ರೀತಿ ನೋಡಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ . ನಂತರ ಬಂದ  ಅವರ ಚಿತ್ರಗೀತೆಗಳು  - ಮುಂಗಾರು ಮಳೆ, ಮಿಲನ, ಗೆಳೆಯ  (ಚಲನಚಿತ್ರಗಳು) ಅವರನ್ನು ಸಾಹಿತಿಯಾಗಷ್ಟೇ  ಅಲ್ಲದೆ, ಚಿತ್ರ-ಸಾಹಿತಿಯಾಗಿ ಜಯಂತ್ ಕಾಯ್ಕಿಣಿ ಜನಸಾಮಾನ್ಯರಿಗೆ ಚಿರಪರಿಚಿತರಾದರು.  ಇಂಥ ಯಶಸ್ವಿ ವ್ಯಕ್ತಿಯನ್ನು ನಮ್ಮ ಸಂಸ್ಥೆಯ ಕನ್ನಡ ಸಾಹಿತ್ಯ ಕೂಟವು ಪ್ರತಿ ವರ್ಷ ಹೊರತರುವ 'ಸಾಹಿತ್ಯಮಾಲೆ'ಗೆ  ಸಂದರ್ಶಿಸಿದರೆ ಹೇಗೆ ಎಂಬ ಯೋಚನೆ ಬಂದ ಕೂಡಲೇ ಕಾರ್ಯೋನ್ಮುಖಳಾದೆ .

     ಯಾವುದೇ ಹಮ್ಮು-ಬಿಮ್ಮುಗಳಿಲ್ಲದ, ಸರಳ, ಸಜ್ಜನಿಕೆಯ ಭಾವಜೀವಿಯ ಅಂತರಾಳದ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ :

ಪ್ರಶ್ನೆ     :        ತಮ್ಮ ಹೆತ್ತವರು, ಬಾಲ್ಯ, ವಿದ್ಯಾಭ್ಯಾಸದ ಬಗ್ಗೆ ತಿಳಿಸಿ

ಉತ್ತರ  :        ನಾನು ಉತ್ತರ ಕರ್ನಾಟಕದ ಗೋಕರ್ಣದಲ್ಲಿ ೧೯೫೫ರಲ್ಲಿ ತಂದೆ ಗೌರೀಶ್ ಕಾಯ್ಕಿಣಿ , ತಾಯಿ ಶಾಂತಾ ಅವರ ಏಕೈಕ ಪುತ್ರನಾಗಿ ಜನಿಸಿದೆ. ತಂದೆ ಲೇಖಕರು, ಸಾಹಿತಿಗಳು . ತಾಯಿ ಸಾಮಾಜಿಕ ಕಾರ್ಯಕರ್ತೆ. ಅಘನಾಶಿನಿ ತೀರದ ತದಡಿ  ಗ್ರಾಮದ ಅಜ್ಜನ ಮನೆಯಲ್ಲಿ ಬಹುಪಾಲು ಬಾಲ್ಯ ಕಳೆದದ್ದು.  ಗೋಕರ್ಣದ ಚಲನಶೀಲತೆ, ಸಮುದ್ರ, ಚತುಶೃಂಗ ಪರ್ವತಗಳು , ನದೀತೀರ ಹಾಗೂ ನಂತರದ ನನ್ನ ಮುಂಬೈ ಜೀವನ ನನ್ನ ಬರವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿ ನನ್ನ ಮನೋಭೂಮಿಕೆಯನ್ನು ರೂಪಿಸಿದವು. .

ಪ್ರಶ್ನೆ     :        ತಮ್ಮ ತಂದೆ ಮಾರ್ಕ್ಸ್ ಸಿದ್ಧಾಂತದಲ್ಲಿ ನಂಬಿಕೆ ಇದ್ದವರು. ಅವರ ಪ್ರಭಾವ ತಮ್ಮ ಮೇಲೆ ಎಷ್ಟಿತ್ತು?

ಉತ್ತರ  :        ನನ್ನ ತಂದೆ ಸಿದ್ಧಾಂತಿ ಅಲ್ಲ. ಸಾಮಾನ್ಯವಾಗಿ ಬುದ್ಧಿಜೀವಿಗಳು ಎಂದರೆ ಒಣ ಸಿದ್ಧಾಂತಗಳನ್ನು ಇಟ್ಟುಕೊಂಡವರು ಎಂಬ ಭಾವನೆ ಇದೆ. ಆದರೆ ನನ್ನ ತಂದೆ ಮಾನವೀಯತೆಯನ್ನು ಹೊಂದಿದ್ದರು . ನಾನು ಅವರ ಸಿದ್ಧಾಂತಗಳನ್ನು ಓದಿಲ್ಲ. ಆದರೆ ಜೀವನದಲ್ಲಿ ಅವರೇ ನನಗೆ ದೊಡ್ಡ ಆದರ್ಶ. ಗೋಕರ್ಣದಂಥ ಕರ್ಮಠ  ಕ್ಷೇತ್ರದಲ್ಲಿ ರೂಢಿಗತವಾಗಿ ಬಂದಂಥ ಗೊಡ್ಡು ಸಂಪ್ರದಾಯಗಳನ್ನು ಬಿತ್ತುವ ಸಾಧ್ಯತೆಗಳಿರುತ್ತವೆ . ಆದರೆ ನನ್ನ ತಂದೆ ಮಮತೆ ಹಾಗೂ ಸಮತೆ ಸಾಹಿತ್ಯದ ಜೀವಾಳ ಎಂದು ನಂಬಿದವರು . ಅಧ್ಯಾಪಕರಾಗಿ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿ ಬೆಳೆಸಿದವರು.

ಪ್ರಶ್ನೆ     :       ತಾವು ಮೂಲತಃ Biochemist ಆಗಿದ್ದು , ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಹೇಗೆ ?

ಉತ್ತರ  :        ವಿಜ್ಞಾನ ಹಾಗೂ ಸಾಹಿತ್ಯ ಬೇರೆ ಎಂಬ ಕಲ್ಪನೆ ತಪ್ಪು .
                   ಕುವೆಂಪು ಅವರು QUANTUM PHYSICS ಓದಿದವರು .
                   ಬೇಂದ್ರೆಯವರ ಗ್ರಂಥಾಲಯದ ೧೩,೦೦೦ ಪುಸ್ತಕಗಳಲ್ಲಿ ೧೦,೦೦೦ ವಿಜ್ಞಾನಕ್ಕೆ ಸಂಬಂಧಿಸಿದವು .
                   ಯಶವಂತ್ ಚಿತ್ತಾಲರು ಒಬ್ಬ Polymer Chemist.
                   ಪೂರ್ಣಚಂದ್ರ ತೇಜಸ್ವಿಯವರು ಒಬ್ಬ ಸಸ್ಯಶಾಸ್ತ್ರಜ್ಞರು
                   ಕಾರಂತರು ನಡೆದಾಡುವ ವಿಜ್ಞಾನ ವಿಶ್ವಕೋಶ ಎನಿಸಿಕೊಂಡವರು
                   ನಿಸಾರ್ ಅಹ್ಮದ್ ಅವರು  Geologist  ಆಗಿದ್ದವರು .
                ನಾವು ಮಕ್ಕಳಲ್ಲಿ ವಿಜ್ಞಾನ ಓದಿದವ  ಬುದ್ಧಿವಂತ , ಕಲೆ ಓದಿದವ  ದಡ್ಡ ಎಂಬ ತಪ್ಪು ಅಭಿಪ್ರಾಯ   ಬೆಳೆಸಿ,                 ದಾರಿ  ತಪ್ಪಿಸಿದ್ದೇವೆ. ವಿಜ್ಞಾನ ಮತ್ತು ಕಲೆ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು.

ಪ್ರಶ್ನೆ     :   ತಾವು ಎಂದಾದರೂ ಚಲನಚಿತ್ರಗೀತೆಗಳನ್ನು ಬರೆಯಬಹುದು ಎಂದು ನೆನೆಸಿದ್ದಿರಾ?

ಉತ್ತರ  :   ಚಲನಚಿತ್ರಗೀತೆಗಳು  ಇತ್ತೀಚೆಗೆ ಬರೆದಂಥವು . ಆದರೆ ಎಲ್ಲ ಪ್ರಕಾರದ ಸಾಹಿತ್ಯ ರಚನೆ ಒಟ್ಟಾಗಿ ಸಾಗುತ್ತಿರುತ್ತವೆ . ನನ್ನೆಲ್ಲಾ ಆಸಕ್ತಿಗಳಿಗೆ ಒಟ್ಟಾಗಿ ನೀರೆರೆದು ಪೂಜಿಸಿ, ಪೋಷಿಸುತ್ತೇನೆ . ಕಥೆ, ಕವನ, ನಾಟಕ, ಪ್ರಬಂಧ, ಅಂಕಣ ಎಂದು ವಿವಿಧ ಸಾಹಿತ್ಯ ರಚಿಸುತ್ತಿದ್ದ ನನಗೆ ಚಲನಚಿತ್ರಗೀತೆಗಳ ಬಗ್ಗೆ ಒಂದು ರೀತಿ ಉಡಾಫೆ ಇತ್ತು . ಅದೇನು? ಯಾರು ಬೇಕಾದರೂ ಬರೆಯಬಹುದು ಎಂದುಕೊಂಡಿದ್ದೆ . ಆದರೆ 'ಚಿಗುರಿದ ಕನಸು'  ಚಿತ್ರದ ಗೀತೆ ಬರೆಯುವಾಗಲೇ ಅರಿವಿಗೆ ಬಂದಿದ್ದು, ಅದಕ್ಕೆ ಬೇರೆಯೇ ಕೌಶಲ್ಯ ಬೇಕು ಎಂದು . ದೊಡ್ಡ ಸವಾಲು ಏನೆಂದರೆ ಸಂಯೋಜಿಸಿದ ರಾಗಕ್ಕೆ  ನಾವು ಗೀತೆಯನ್ನು ರಚಿಸಬೇಕಾಗುತ್ತದೆ. ರಾಗ ಸಂಯೋಜನೆ ಚೆನ್ನಾಗಿದ್ದಷ್ಟೂ ಗೀತೆ ರಚನೆ ಕಷ್ಟವಾಗುತ್ತದೆ. ಮತ್ತೆ ಚಿತ್ರಗೀತೆಯ ಪ್ರಧಾನ ಅಂಶ ಪ್ರೀತಿ . ಅದರ ಬಗ್ಗೆ ಬರೆಯುವುದು ಸುಲಭವಲ್ಲ . ಒಲವು, ಚೆಲುವು , ನಲಿವು , ಹಸಿರು, ಉಸಿರು.. ಮುಂದೆ? ಪದಗಳು ಸಿಗೋದು ಕಷ್ಟ .

ಪ್ರಶ್ನೆ     : ಗೀತೆ ಬರೆಯುವಾಗ ನಟ, ಗಾಯಕ ಇಂಥವರೇ ಆಗಿರಬೇಕೆಂಬ ನಿರೀಕ್ಷೆ ಇರುತ್ತದೆಯೇ?

ಉತ್ತರ  :  ಹಾಗೇನಿಲ್ಲ. ಹಾಡು ಬರೆಯುವಾಗ ನಮಗೆ ಏನೇನೋ ಭಾವನೆಗಳು ಉಕ್ಕುತ್ತಿರುತ್ತವೆ. ಆದರೆ ಕಥೆಗೆ ತಕ್ಕಂತೆ ನಿಯಂತ್ರಣ, ಚಿತ್ರ, ಕಥೆ, ಸನ್ನಿವೇಶ ಹಾಗೂ ಪಾತ್ರದ ಹಿನ್ನೆಲೆ ನೋಡಿಕೊಂಡು ಬರೆಯಬೇಕು. ಉದಾಹರಣೆಗೆ ಪ್ರೀತಿಯ ಬಗ್ಗೆ ಬರೆಯುವುದಾದರೆ, ಪ್ರೀತಿ ಮೊದಲನೆಯದಾ? ಏಕಮುಖ ಪ್ರೀತಿನಾ? ಹೆಣ್ಣಿನ ಪ್ರೀತಿ, ಗಂಡಿನ ಪ್ರೀತಿ, ಎಷ್ಟನೆಯದು ಹೀಗೆ ಎಲ್ಲವನ್ನೂ ನೋಡಿಕೊಂಡು ಚಿತ್ರಗೀತೆ ರಚಿಸುವುದು ದೊಡ್ಡ ಕಲೆ. ಹಾಗಾಗಿ ನನಗೆ ಚಿ. ಉದಯಶಂಕರ, ಹಂಸಲೇಖ, ವಿ.ಮನೋಹರ್ ಇವರನ್ನೆಲ್ಲ ಕಂಡರೆ ಅಪಾರ ಗೌರವ . ಮತ್ತೆ ಒಂದು ಒಳ್ಳೆಯ ಹಾಡಿನ ನಂತರ ಒಂದು ಮಾನಸಿಕ ಒತ್ತಡ ಇರುತ್ತದೆ. ಅದರಿಂದ ಬಿಡುಗಡೆ ಪಡೆಯಬೇಕಾದರೆ, ಮನಸ್ಸು ಶಾಂತವಾಗಿರಬೇಕು . ಹಾಡು ಸರಳವಾಗಿರಬೇಕು . ಸ್ವಲ್ಪ ಹೊಸತನದಿಂದ ಕೂಡಿರಬೇಕು .

ಪ್ರಶ್ನೆ     :   ತಮ್ಮ ಹಾಡುಗಳಲ್ಲಿ ಪ್ರಕೃತಿಯ ವರ್ಣನೆ ಹೆಚ್ಚು. ಇದಕ್ಕೆ ತಾವು ಬೆಳೆದ ಪರಿಸರ ಕಾರಣವೇ?

ಉತ್ತರ  :   ಅದೊಂದೇ ಅಲ್ಲ. ನನ್ನ ೫೫ ವರ್ಷದ ಪ್ರಯಾಣದ ಅನುಭವವಿರುತ್ತದೆ. ಮಳೆ, ಮೋಡ, ಆಕಾಶ ಎಲ್ಲದರೊಂದಿಗೂ   ಬಾಲ್ಯದ ಅನುಭವ ಬೆಸೆದುಕೊಂಡಿರುತ್ತದೆ .

ಪ್ರಶ್ನೆ     :   ತಮ್ಮ ಬರವಣಿಗೆಯ ಓಘ ಹೇಗೆ? ಸಂಗೀತದ ಹಿನ್ನೆಲೆ ಏನಾದರೂ ಇದೆಯೇ?

ಉತ್ತರ  :    ಒಂದು ಹೊಸ ಯೋಚನೆ ಬಂದರೆ ಸಾಕು. ಮತ್ತೆಲ್ಲ ನಿಮ್ಮ ರಂಗೋಲಿ ಬಿಡಿಸಿದ ಹಾಗೆ. ಆದರೆ ರಾಗಗಳನ್ನು ತುಂಬಾ ಕೇಳಿರಬೇಕು. ಇಲ್ಲದಿದ್ದರೆ ಬರವಣಿಗೆ ಕೃತಕವಾಗಿ ಬಿಡುತ್ತದೆ. ಸಂಗೀತದ ಹಿನ್ನೆಲೆ ಏನೂ ಇಲ್ಲ . ನಾನೂ ಚಿತ್ರಗೀತೆಗಳನ್ನು ಕೇಳುತ್ತಾ ಬೆಳೆದವನು.

ಪ್ರಶ್ನೆ     :   ಮುಂಗಾರು ಮಳೆಯ ಯಶಸ್ವೀ ಹಾಡುಗಳಿಂದ ಇಂದಿನ ಯುವಜನತೆ ಕನ್ನಡ ಹಾಡುಗಳನ್ನು ಗುನುಗುನಿಸಲು, PVRನಲ್ಲಿ ಕುಳಿತು ಕನ್ನಡ ಚಿತ್ರ ನೋಡುವಂತೆ ಮಾಡಿದ ತಾವು ಒಂದು ಹೊಸ ಅಲೆ ಪ್ರಾರಂಭ ಮಾಡಿದಿರಿ. ಒಂದು ಹೊಸ ಹಾದಿ ತೋರಿದಿರಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?


ಉತ್ತರ  :    ಬಹಳ ಖುಷಿಯಾಗಿದೆ. ಹೊಸ ತಲೆಮಾರಿನ, ಅದರಲ್ಲೂ ಆಂಗ್ಲ ಮಾಧ್ಯಮದಲ್ಲಿ ಓದಿದ ಮಕ್ಕಳು ಕನ್ನಡ ಹಾಡುಗಳನ್ನು ಮೆಚ್ಚಿದ್ದು ಒಂದು ರೀತಿಯ ಖುಷಿ . ಇಂಥ ಕ್ರಾಂತಿಯನ್ನು ನಿಮ್ಮ ಕನ್ನಡ ಅಭಿವೃದ್ಧಿ ಇಲಾಖೆಯಾಗಲಿ, ಕನ್ನಡ ಪ್ರಾಧಿಕಾರವಾಗಲಿ, ಸಾಹಿತ್ಯ ಪರಿಷತ್ತಾಗಲಿ  ಅಥವಾ ರಾಜ್ಯೋತ್ಸವದಂದು ಮಾತ್ರ ಧ್ವಜ ಹಾರಿಸಿ , ಉದ್ದುದ್ದ ಭಾಷಣಗಳನ್ನು ಬಿಗಿದು ಕನ್ನಡ ಪ್ರೇಮ ತೋರಿಸುವವರಿಂದಾಗಲಿ  ತರಲಾಗುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ .  ಅದಕ್ಕಾಗೇ ನನಗೆ 'ಮಿಲನ', 'ಮುಂಗಾರು ಮಳೆ' , 'ಗಾಳಿಪಟ' ಚಿತ್ರಗಳ ತಂಡ ಬಹಳ ಆತ್ಮೀಯ . ನಾನು 'ಅಕ್ಕ' ಸಮ್ಮೇಳನಕ್ಕೆಂದು ಅಮೇರಿಕ, ಇಂಗ್ಲೆಂಡ್ ಗಳಿಗೆ ಹೋದಾಗ , ಕಾರುಗಳಲ್ಲಿ ಮುಂಗಾರುಮಳೆಯ ಹಾಡುಗಳನ್ನು ಕೇಳುತ್ತಿದ್ದರು . ಹೀಗೆ ಮಾಡುವಂತಾಗಿದ್ದು  ಸಹ ಒಂದು ರೀತಿಯ ಕನ್ನಡದ ಸೇವೆ . ಮತ್ತೆ , ಬರೀ ಹಾಡುಗಳಿಂದಲೇ ಚಿತ್ರ ಓಡುವುದಿಲ್ಲ . ಚಿತ್ರ ಕೂಡ ಚೆನ್ನಾಗಿರಬೇಕು . ಮುಂಗಾರು  ಮಳೆಯ ನಂತರ ಸುಮಾರು ೧೨೦ ಹಾಡುಗಳನ್ನು ಬರೆದೆ . ಅದರಲ್ಲಿ ೩೦ ಹಾಡುಗಳು ಜನಪ್ರಿಯವಾಗಲಿಲ್ಲ .  ಆ ಹಾಡುಗಳನ್ನು ಪುನಃ ಬಳಸಲೂ ಆಗುವುದಿಲ್ಲ . ಮೊದಲು ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿದವರಿಗೆಲ್ಲ ಹಾಡು ಬರೆದು ಕೊಟ್ಟೆ . ಈಗ ಸ್ವಲ್ಪ ಯೋಚನೆ ಮಾಡಿ , ಚಿತ್ರ ಯಶಸ್ವಿಯಾಗಬಹುದು ಎನಿಸಿದರೆ ಬರೆಯುತ್ತೇನೆ .

ಪ್ರಶ್ನೆ     :  ಇತ್ತೀಚೆಗೆ ಕನ್ನಡಿಗರಿಗೆ ಅವಕಾಶ ನೀಡದೆ , ಹಿಂದಿ ಗಾಯಕರನ್ನು ಕರೆತಂದು ಹಾಡಿಸುವ ಪರಿಪಾಠ ಹೆಚ್ಚಾಗಿದೆ . ನಿಮ್ಮ ಅನಿಸಿಕೆ ಏನು?

ಉತ್ತರ  :    ಹಾಗೇನಿಲ್ಲ . ಒಂದು ಚಿತ್ರದಲ್ಲಿ ೬ ಹಾಡುಗಳಿದ್ದರೆ , ೨ ಮಾತ್ರ ಹೊರಗಿನವರು ಹಾಡಿರುತ್ತಾರೆ . ಬಾಕಿ ೪ ಹಾಡುಗಳನ್ನು ಕನ್ನಡಿಗರೇ ಹಾಡಿರುತ್ತಾರೆ . ಆದರೆ ನೀವು ಅದನ್ನು ಕೇಳುತ್ತಿಲ್ಲ .


ಪ್ರಶ್ನೆ     :    ಆದರೆ ಅದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆಯಲ್ಲ ? ಪರಭಾಷಾ ಗಾಯಕರ ಉಚ್ಛಾರಣೆ ಸ್ಪಷ್ಟವಾಗಿರುವುದಿಲ್ಲ ಕೆಲವೊಮ್ಮೆ . 

ಉತ್ತರ  :     ಇಲ್ಲಿಯವರ ಉಚ್ಛಾರಣೆ ಏನು ಚೆನ್ನಾಗಿರುತ್ತೆ ಅಂತೀರಿ? ದುರದೃಷ್ಟವಶಾತ್ ಇಲ್ಲಿನ ಕಾನ್ವೆಂಟ್ ಕನ್ನಡಿಗರಿಗೆ ಊಟ ಆಯ್ತಾ, ತಿಂಡಿ ಆಯ್ತಾ , ಹೋಗ್ತೀನಿ, ಬರ್ತೀನಿ, ಅನ್ನೋ ಸಾಮಾನ್ಯ ಕನ್ನಡ ಬಿಟ್ಟರೆ, ಸಾಹಿತ್ಯಕ ಕನ್ನಡದ ಗಂಧವೇ ಇಲ್ಲ . ಹಾಡುಗಳು ಬರೆಯಲ್ಪಡುವ ಕನ್ನಡವೇ ಬೇರೆ . ಇವರಿಗೆ ಅಲ್ಪಪ್ರಾಣ , ಮಹಾಪ್ರಾಣ ಗೊತ್ತಿಲ್ಲ . ಆದರೂ ತಾನು ಕನ್ನಡಿಗ , ತನಗೆ ಬಂದೇ ಬರುತ್ತದೆ ಅನ್ನೋ ಒಂದು ಸಣ್ಣ ಅಹಂಕಾರ ಇರುತ್ತದೆ. ಧ್ವನಿಮುದ್ರಣದ ಸಮಯದಲ್ಲಿ ಕವಿ, ನಿರ್ದೇಶಕ, ಯಾರನ್ನೂ ಕೇಳುವ ಗೋಜಿಗೇ ಹೋಗದೆ , ಸೀದಾ ಹಾಡಲಿಕ್ಕೆ ಹೋಗ್ತಾರೆ . ಹಾಡಿಗೆ ಸಂಬಂಧಿಸಿದಂತೆ ಇವರೂ, ಅವರೂ ಹೊಸಬರು . ಆದರೆ ಅವರಿಗೆ ಅದರ ಅರಿವು ಇದೆ. ಹಾಗಾಗಿ ಸಾಕಷ್ಟು ಪರಿಶ್ರಮ ವಹಿಸಿ ಹಾಡುತ್ತಾರೆ . ಅವರಿಗೆ ಇದು ಗೊತ್ತು . ಇದು ನನ್ನ ಭಾಷೆಯಲ್ಲವೆಂದು . ಹಾಗಾಗಿ , ಪ್ರತಿ ಪದದ ಅರ್ಥ , ಭಾವವನ್ನು ನಮ್ಮಿಂದ ತಿಳಿದುಕೊಂಡು ಹಾಡುತ್ತಾರೆ .  ಪಿ.ಬಿ.ಶ್ರೀನಿವಾಸ್ , ಪಿ.ಸುಶೀಲ , ಎಸ್. ಜಾನಕಿ , ಎಸ.ಪಿ.ಬಾಲಸುಬ್ರಹ್ಮಣ್ಯಂ ಇವರೆಲ್ಲ ಕನ್ನಡಿಗರೆ? ಇವರೆಲ್ಲ ತಮ್ಮ ಗಾಯನದ ಮೂಲಕ ನಮ್ಮ ಹೃದಯವನ್ನಾಳಿಬಿಟ್ಟರು. ನೋಡಿ, ನಾವು ಗೊಡ್ಡಾಗಿ ಅಭಿಮಾನ ತೋರಬಾರದು .


ಪ್ರಶ್ನೆ     : ಅಂದರೆ, ಗುಣಕ್ಕೆ ಮಾತ್ಸರ್ಯವಿರಬಾರದು ಅಂತೀರಾ?

ಉತ್ತರ  :  ಹೌದು .  ಭೀಮಸೇನ್ ಜೋಶಿ, ಮಲ್ಲಿಕಾರ್ಜುನ್ ಮನ್ಸೂರ್ ಕನ್ನಡಿಗರು . ಮಹಾರಾಷ್ಟ್ರದಲ್ಲಿ ಪ್ರಖ್ಯಾತರಾದರು . ಕಿಶೋರ್ ಕುಮಾರ್,   ಹೇಮಂತ್ ಕುಮಾರ್ ಬಂಗಾಲಿಗಳು . ಭೂಪೇನ್ ಹಜಾರಿಕಾ ಈಶಾನ್ಯದವರು . ಹಿಂದಿ ಹಾಡುಗಳಿಂದ ಜನಪ್ರಿಯರಾದವರು .  ಕೇಳುಗರು ಹೊಸದನ್ನು ಬಯಸುತ್ತಾರೆ . ಎಸ.ಪಿ. ಯವರು ಜನಪ್ರಿಯರಾದ ನಂತರ , ಬೇರೆಯವರು ಅವರನ್ನೇ ಅನುಸರಿಸಿದರು . ಹಾಗಾಗಿ ಯಶಸ್ವಿಯಾಗಲಿಲ್ಲ . ಉದಾಹರಣೆಗೆ ಸೋನು ನಿಗಮ್ ಯಾಕೆ ಇಷ್ಟ ಆದ ಅಂದರೆ , ಅವನ ಹಾಡುಗಾರಿಕೆ ಡಾ. ರಾಜ್ ಕುಮಾರ್ ಅವರಂತೆ ಇದೆ. ಆದರೆ ಇದೂ ಸಹ ಬಹಳ ಕಾಲ ಇರುವುದಿಲ್ಲ . ಸ್ವಲ್ಪ ಸಮಯದ ನಂತರ ಜನರಿಗೆ ಮತ್ತೊಬ್ಬ ಹೊಸಬ ಇಷ್ಟವಾಗಬಹುದು . ಇದೂ ಸಹ ಬದಲಾಗುವ  ಫ್ಯಾಷನ್ , ಊಟದ ರುಚಿ ಇದ್ದ ಹಾಗೆ . ಈಗ ಎಲ್ಲರೂ ಉತ್ತರ ಭಾರತದ ಊಟ ಇಷ್ಟ ಪಡ್ತಿಲ್ವ ಹಾಗೆ . ಈ ಅಂಶ ಎಲ್ಲ ಕ್ಷೇತ್ರಗಳಲ್ಲೂ ಪ್ರಧಾನ ಪಾತ್ರ ವಹಿಸುತ್ತೆ .


ಪ್ರಶ್ನೆ     :  ತಮ್ಮ ಮೆಚ್ಚಿನ ಸಾಹಿತಿ ಯಾರು ?

ಉತ್ತರ  :  ಬೆರಳಿಟ್ಟು ಹೇಳುವುದು ಕಷ್ಟ . ನೂರಾರು ಜನ ಇದ್ದಾರೆ . ಹಿರಿಯರಲ್ಲಿ ಕಾರಂತರು , ಬೇಂದ್ರೆ , ಕುವೆಂಪು ಮತ್ತೆ ನವ್ಯ ಮಾರ್ಗದ  ತೇಜಸ್ವಿ ,  ಅನಂತ ಮೂರ್ತಿ , ಎ.ಕೆ. ರಾಮಾನುಜಂ , ಯಶವಂತ ಚಿತ್ತಾಲ , ಶಾಂತಿನಾಥ ದೇಸಾಯಿ , ಪಿ. ಲಂಕೇಶ್ , ಕಂಬಾರರು , ಹೊಸದಾಗಿ ಪ್ರತಿಭಾ ನಂದಕುಮಾರ್ , ಎಚ್.ಎಸ್ . ಶಿವಪ್ರಕಾಶ್ , ವಿ. ಎಸ್. ಮಂಜುನಾಥ್ ಹೀಗೆ ಅನೇಕರು ಇಷ್ಟ .  ಕನ್ನಡದಲ್ಲಿ ಅದ್ಭುತ ಸಾಹಿತ್ಯ ಇದೆ . ಯುವಜನರು ಅದನ್ನು ಓದುವಂತೆ  ಮಾಡುವುದು ನಮ್ಮ ಜವಾಬ್ದಾರಿ .


ಪ್ರಶ್ನೆ     :  ನಿಮ್ಮ ಎಲ್ಲಾ ಹಾಡುಗಳಲ್ಲಿ ಭಾವನೆಗಳ ತಾಕಲಾಟವಿರುತ್ತದೆ . ನಿಜ ಜೀವನದಲ್ಲೂ ಸಹ ನೀವು ಭಾವನಾಜೀವಿಯೇ?

ಉತ್ತರ  :  ಇರಲೇಬೇಕಲ್ಲ . ಮೂಲತಃ ಮನುಷ್ಯ ಭಾವನಾಜೀವಿ . ನಿರ್ಜೀವ ವಸ್ತುಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಮನುಷ್ಯ ಜೀವಂತ ವ್ಯಕ್ತಿಗಳೊಂದಿಗೆ ಹೊಂದಿಕೊಳ್ಳುವುದಿಲ್ಲ . ಬಹಳ ಸ್ವಾರ್ಥಿಯಾಗುತ್ತಾನೆ . ಹಿಂದೆ ತಾಯ್ತಂದೆಯರು ಮಕ್ಕಳ ಜೀವನದಲ್ಲಿ ಪ್ರವೇಶ ಮಾಡುತ್ತಿರಲಿಲ್ಲ . ಬಡತನ ಇತ್ತು . ಅವರು ದುಡಿಯಲು ಹೋದರೆ , ಮಕ್ಕಳು ನದಿ, ಗುಡ್ಡ , ಬಯಲು, ಬೆಟ್ಟ ಸುತ್ತಿಕೊಂಡು ಹಾಯಾಗಿರುತ್ತಿದ್ದರು .  ಈಗ ಪಾಲಕರು ಊಟಕ್ಕೆ ಕುಳಿತಾಗ ತಮ್ಮ ಮನಸ್ಸಿನ ಕಸವನ್ನು ಮಕ್ಕಳ ತಲೆಗೆ ತುಂಬುತ್ತಾರೆ . ಎಷ್ಟೇ ವಿದ್ಯಾವಂತರಾದರೂ , ಸುಸಂಸ್ಕೃತರು ಎನಿಸಿಕೊಂಡರೂ ಸಹ ಮತ್ತೊಬ್ಬರನ್ನು ಜಾತೀಯತೆಯ ದೃಷ್ಟಿಯಿಂದ ನೋಡುತ್ತಾರೆ . ಮನೆಯಲ್ಲಿ ಹೆಂಡತಿಯನ್ನು ಸಮಾನವಾಗಿ ಕಾಣುವುದಿಲ್ಲ . ಮಕ್ಕಳೊಂದಿಗೆ ತನ್ನ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ . ಹೆಂಗಸರಿಗೆ ಮಾತು ಯಾಕೆ ಅನ್ನುತ್ತಾನೆ . ಹೆಣ್ಣು-ತಾಯಿ . ಅವರ ಮಾತು ಕೇಳಿದರೆ ಜಗತ್ತೇ ಉದ್ಧಾರ ಆಗ್ತಿತ್ತು . ಈಗ ನೋಡಿ . ಅವನೂ ಉದ್ಧಾರ ಆಗಲ್ಲ . ಮಕ್ಕಳೂ ಸಹ ಬಹಳ ನೋವಿನಿಂದ ಬೆಳೆಯುತ್ತಾರೆ . ಅವರು ಸರ್ವಾಧಿಕಾರಿಯಂತೆ ಮೆರೆಯುವ , ತಾಯಿಯನ್ನು ಗೌರವಿಸದ ತಂದೆಯನ್ನು ದ್ವೇಷಿಸುತ್ತಾರೆ . ಮಕ್ಕಳಲ್ಲಿ ಸಮತೆಯನ್ನು ಬೆಳೆಸಬೇಕು . ಆದರೆ ಈಗ ನಾವು ಮಕ್ಕಳಿಂದ ಕಲಿಯಬೇಕಾಗಿದೆ .

ಪ್ರಶ್ನೆ     :  ಮಹಿಳಾ ಮೀಸಲಾತಿಯ ಬಗ್ಗೆ ನಿಮ್ಮ ಅಭಿಪ್ರಾಯ ?

ಉತ್ತರ  :  ಸಮಾಜದಲ್ಲಿ ಮಹಿಳೆಗೆ ಸಮಾನತೆ ದೊರಕಿಸಿಕೊಡುವಲ್ಲಿ ಮೀಸಲಾತಿ ಒಂದು ಹೆಜ್ಜೆ . ನಾನು ಮೀಸಲಾತಿಯ ಪರ . ಹೆಣ್ಣುಮಕ್ಕಳೆಲ್ಲರೂ ವಿದ್ಯಾವಂತರಾಗಬೇಕು . ಮಹಿಳೆಯರೂ ಸಹ ಮುಖ್ಯವಾಹಿನಿಗೆ ಬರುವಂತಾಗಬೇಕು . ಮೀಸಲಾತಿ ಇಲ್ಲದೆ ಮಹಿಳೆಯ ಉದ್ಧಾರ ಸಾಧ್ಯವಿಲ್ಲ .


ಪ್ರಶ್ನೆ     :  ತಮಗೆ ತಮ್ಮ ಮುಂಬೈ ಜೀವನ ಬಹಳ ಆಪ್ತವಾಗಳು ಕಾರಣ? ಮತ್ತೆ ಸಮಾಜಕ್ಕೆ ನಿಮ್ಮ ಸಂದೇಶ ಏನು?

ಉತ್ತರ  :  ಮುಂಬೈ ಜೀವನ ಏಕೆ ಆಪ್ತ ಎಂದರೆ , ಅಲ್ಲೊಂದು ಮುಕ್ತ ಭಾವ ಇದೆ. ಗಂಡು-ಹೆಣ್ಣೆಂಬ ಭೇದ ಇಲ್ಲ. ಮಹಿಳೆಯರಿಗೆ, ವೃದ್ಧರಿಗೆ , ಕಾಯಕಕ್ಕೆ ಗೌರವ ಇದೆ . ಉಪಯೋಗಿಸುವ ಭಾಷೆ ಏಕವಚನವಾದರೂ , ನಾವೆಲ್ಲರೂ ಒಂದೇ ಎಂಬ ಭಾವ ಇದೆ. ಆದರೆ ಇಲ್ಲಿ ಕಾಯಕವಿಲ್ಲದೇ ದುಡ್ಡು ಮಾಡುವುದು ಹೇಗೆ ಅನ್ನೋದೇ ಜೀವನದ ಮುಖ್ಯ ಉದ್ದೇಶ ಆಗಿಬಿಟ್ಟಿದೆ . ಇಲ್ಲಿ ಮಕ್ಕಳನ್ನು ಹಣ ಮಾಡುವ ಯಂತ್ರ ಎಂದು ತಿಳಿದಿದ್ದಾರೆ . ಎಲ್ಲರಿಗೂ ತಮ್ಮ ಮಕ್ಕಳು ಸಿ.ಇ.ಟಿ. ಬರೆಯಬೇಕು, ಕ್ಯಾಂಪಸ್ ಸೆಲೆಕ್ಷನ್ ಆಗಬೇಕು , ೫೦ ಸಾವಿರ ಸಂಬಳ ತೊಗೋಬೇಕು  - ಹೀಗೆ , ಸದಾ ದುಡ್ಡಿನ ಹಿಂದೆ  ಹೋಗುವ ಹುನ್ನಾರ . ಸಂಬಂಧಗಳಿಗೆ ಬೆಲೆ ಇಲ್ಲ . ಮಕ್ಕಳಿಗೆ ಜೀವನದ
 ಉನ್ನತ ಮೌಲ್ಯಗಳು , ಸಂಸ್ಕೃತಿಯನ್ನು ಕೊಡದಿದ್ದರೆ , ಕಡೆಗೆ ಮಕ್ಕಳಿಂದ ನೋವನ್ನು ಅನುಭವಿಸಬೇಕಾಗುತ್ತದೆ . ಈಗ ನೋಡಿ . ಇವೆಲ್ಲದರ ಪರಿಣಾಮ ಧೂಮಪಾನ, ವಿವಾಹ ವಿಚ್ಛೇದನಗಳು, ವೃದ್ಧಾಶ್ರಮಗಳು ಎಲ್ಲವೂ ಹೆಚ್ಚಿವೆ . ಮನಸ್ಸಿನ ನೆಮ್ಮದಿ ಕಡಿಮೆ ಆಗಿದೆ . ಬಡತನ ಇದ್ದಾಗಲೇ ಸಂತೋಷ ಹೆಚ್ಚು . ತಾಯ್ತಂದೆಯರಿಗೆ ಹೇಳುವುದಿಷ್ಟೇ - ಮಕ್ಕಳನ್ನು ಅವರ ಪಾಡಿಗೆ ಅವರಿಗೆ ಆಸಕ್ತಿ ಇರುವ ವಿಷಯಗಳನ್ನು ಓದಲು ಬಿಡಿ .

ಪ್ರಶ್ನೆ     :  ಕೆಲವರು ಸಾಹಿತ್ಯ ಸೃಷ್ಟಿಗೆ  ಬೇರೆ ಊರುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ತಮ್ಮ ಬರವಣಿಗೆ ಹೇಗೆ ?

ಉತ್ತರ  :   ನನಗೆ ಹಾಗೇನಿಲ್ಲ. ಎಲ್ಲಿ ಬೇಕಾದರೂ ಬರೆಯುತ್ತೇನೆ . ಇತ್ತೀಚೆಗೆ ಹಾಡುಗಳನ್ನು ಬರೆಯುವಾಗ ಮಾತ್ರ ನನ್ನ ರೂಮ್ ನಲ್ಲಿ ಒಬ್ಬನೇ ಕುಳಿತು ಟ್ಯೂನ್ ಕೇಳ್ತೀನಿ . ಉಳಿದಂತೆ ಸಾಧಾರಣವಾಗಿ ಗೌಜು ಗದ್ದಲ ಇದ್ದಷ್ಟೂ ಹೆಚ್ಚಿಗೆ ಬರೆಯುತ್ತೀನಿ ,

ಪ್ರಶ್ನೆ     :  ತಮ್ಮ ಸಾಹಿತ್ಯ ಕೃಷಿಗೆ ಸ್ಫೂರ್ತಿ ಯಾರು?ನಿಮ್ಮ ತಂದೆಯೇ?

ಉತ್ತರ  :  ತಂದೆ ಒಬ್ಬ ವ್ಯಕ್ತಿಯಾಗಿ ಸ್ಫೂರ್ತಿ . ಅವರು ಅಷ್ಟು ಸರಳ . ಆಗಿನ ಕಾಲದಲ್ಲಿ ಎಲ್ಲ ಶಿಕ್ಷಕರೂ ಜ್ಞಾನ ಹಂಚಿಕೊಳ್ತಾನೇ  ಬದುಕಿದವರು . ಉದಾಹರಣೆಗೆ ಕಾರಂತರು, ಬೇಂದ್ರೆ , ಕುವೆಂಪು . ಒಂದು ವಿಷಯ ಗೊತ್ತಾ ? ಚಿಕ್ಕಂದಿನಿಂದ ತಂದೆಯನ್ನು  ಸಂದರ್ಶಿಸಲು ಬೇಕಾದಷ್ಟು ಜನ ಬರ್ತಿದ್ರು . ಸಮಾರಂಭಗಳಿಗೆ ಹೋದರೆ ಉದ್ದುದ್ದ ಭಾಷಣಗಳು ಬೇಸರ ತರಿಸುತ್ತಿದ್ದವು . ಹಾಗಾಗಿ ನಾನು ಸಾಹಿತಿ ಆಗದೇ ಇರುವ ಲಕ್ಷಣಗಳೇ ಇದ್ದವು . ಆದರೆ ಏನೋ ಓದುವಾಗ ಒಂದು ಸಂಚಲನ ಉಂಟಾಯ್ತಲ್ಲ , ಹಾಗಾಗಿ ಸಾಹಿತಿಯಾದೆ .

ಪ್ರಶ್ನೆ     :  ಈಗ ನಿಮ್ಮ ಹಾಡುಗಳು ಅತಿ ಹೆಚ್ಚು ಜನಪ್ರಿಯವಾಗಿವೆ . ಜಯಂತ್ ಕಾಯ್ಕಿಣಿ ಯವರ ಛಾಪು ಒತ್ತಿಯಾಗಿದೆ . ಮುಂದೆ ಹೊಸ ಪ್ರಯೋಗ ಮಾಡುವ ಆಸೆ ಇದೆಯಾ?

ಉತ್ತರ  :  ಇಲ್ಲ. ನನಗೆ ನನ್ನ ಮಿತಿಗಳು ಗೊತ್ತಿವೆ . ನನಗೆ ಪಾರ್ಟಿ ಹಾಡುಗಳನ್ನು ಬರೆಯಲಾಗುವುದಿಲ್ಲ . ಕೆಲವರು ಎಲ್ಲ ರೀತಿಯ ಹಾಡುಗಳನ್ನು ಲೀಲಾಜಾಲವಾಗಿ ಬರೆಯುತ್ತಾರೆ . ಉದಾಹರಣೆಗೆ ನಾಗೇಂದ್ರಪ್ರಸಾದ್, ಕಲ್ಯಾಣ್, ಹಂಸಲೇಖ , ಹೃದಯಶಿವ , ಕವಿರಾಜ್ , ರಾಮ್ ನಾರಾಯಣ್ ....


ಪ್ರಶ್ನೆ     :  ಮುಂಗಾರು ಮಳೆಯ ನಂತರ ಚಿತ್ರರಂಗದಲ್ಲಿ ತಮಗೆ ಬೇಡಿಕೆ ಹೆಚ್ಚಿದೆ . ಹೇಗನಿಸುತ್ತಿದೆ ?

ಉತ್ತರ  :  ಬಹುಶಃ ನನ್ನ ವಯಸ್ಸಿನ ಕಾರಣಕ್ಕೋ  ಏನೋ ಪ್ರೀತಿಯಿಂದ , ಗೌರವದಿಂದ ಕಾಣುತ್ತಾರೆ . ಈಗೀಗ ನಿರ್ಮಾಪಕರಿಗೆ ಏನೋ ವಿಶೇಷತೆ ಇರಬೇಕು ಅನಿಸತೊಡಗಿದೆ . ಆದರೆ ಹಣದ ಹೊಳೆಯೇನೂ ಹರಿದು ಬರುತ್ತಿಲ್ಲ . ೨೩ ವರ್ಷಗಳ ಮುಂಬೈ ಜೀವನದ ನಂತರ ಬರೆದೇ ಬದುಕಬೇಕೆಂದು ಇಲ್ಲಿಗೆ ಬಂದವನು ನಾನು . ಇಲ್ಲಿ ಒಬ್ಬ ಲೇಖಕನಿಗೆ ಸಿಗುವ ಹಣ ಬಹಳ ಕಡಿಮೆ . ಇಲ್ಲಿ ಯಾವುದೇ ಕರಾರು ಇಲ್ಲ. ಎಲ್ಲವೂ ನಂಬಿಕೆಯ ಮೇಲೆ ನಿಂತಿದೆ .

ಪ್ರಶ್ನೆ     :  ಇದುವರೆಗಿನ ತಮ್ಮ ಸಾಧನೆ ತೃಪ್ತಿ ಕೊಟ್ಟಿದೆಯಾ?

ಉತ್ತರ  :   ಖಂಡಿತ ಇಲ್ಲ. ಇನ್ನೂ ಹೆಚ್ಚು ಓದಬೇಕು , ಕಲಿಯಬೇಕು , ಬರೆಯಬೇಕು . ಪ್ರತಿ ದಿನ ಒಂದು ಹೊಸ ಸವಾಲನ್ನೊಡ್ಡುತ್ತದೆ.  'ಅನಿಸುತಿದೆ' ಹಾಡು ಬರೆಯುವಾಗ 'ಪ್ರೀತಿ' ಅನ್ನೋ ಶಬ್ದ ಬಳಸದೆ ಹಾಡು ಬರೆಯಬೇಕು ಅನ್ನಿಸಿತ್ತು .


ಪ್ರಶ್ನೆ     :  ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎನ್ನುತ್ತಾರೆ. ನೀವೇನಂತೀರಿ ?

ಉತ್ತರ  :   ಹೌದು . ಹಿಂದೆ , ಮುಂದೆ , ಅಕ್ಕ, ಪಕ್ಕ ಎಲ್ಲ ಕಡೆ ಇರುತ್ತಾಳೆ . ನನಗೆ ನನ್ನ ತಾಯಿ, ಪತ್ನಿ ಇದ್ದಾರೆ . ಅವಳು ನನ್ನ ಪತ್ನಿಯಷ್ಟೇ ಅಲ್ಲ. ನನ್ನ ಬಾಳ ಗೆಳತಿ . ನನ್ನ ಹೋರಾಟದ ಬದುಕಿನಲ್ಲಿ ನನಗೆ ಆಸರೆಯಾಗಿ ನಿಂತವಳು .

ಪ್ರಶ್ನೆ     :  ಈಗ ಎಫ಼್. ಎಂ ವಾಹಿನಿಗಳು  ೨೪ ಗಂಟೆ  ಹಾಡುಗಳನ್ನು ಪ್ರಸಾರ ಮಾಡುತ್ತಿರುತ್ತವೆ . ಇದರಿಂದ ತಮ್ಮ ಜನಪ್ರಿಯತೆ ಇನ್ನೂ ಹೆಚ್ಚುತ್ತದೆ ಅಲ್ವೇ?

ಉತ್ತರ  :  ಖಂಡಿತ ಇಲ್ಲ. ಈ ವಾಹಿನಿಯವರು ಗೀತೆಯ ರಚನೆಕಾರರ ಹೆಸರನ್ನಾಗಲಿ  , ಸಂಗೀತ ನಿರ್ದೇಶಕನ ಹೆಸರನ್ನಾಗಲಿ  ಪ್ರಸಾರ ಮಾಡುವುದಿಲ್ಲ . ಅವರವರ ಹೆಸರುಗಳನ್ನಷ್ಟೇ ಹೇಳಿಕೊಳ್ಳುತ್ತಿರುತ್ತಾರೆ . 'ಜಿಂಕೆಮರಿನಾ' ಹಾಡು ಅಷ್ಟು ಜನಪ್ರಿಯವಾಯ್ತಲ್ಲ . ಅದನ್ನು ಬರೆದವರು ಯಾರು ಅನ್ನೋದು ನನಗೆ ತಿಳಿದಿದ್ದು ಒಂದೂವರೆ ವರ್ಷಗಳ ನಂತರ . ಎಫ್.ಎಂ. ವಾಹಿನಿಯವರು ನಮ್ಮ ಹಾಡುಗಳನ್ನು ಪ್ರಸಾರ ಮಾಡಿ ಹಣ ಮಾಡುತ್ತಿರುವುದರಿಂದ ನಮ್ಮ ಚಿತ್ರಕ್ಕೆ , ಗೀತೆಗಳಿಗೆ ಪ್ರಚಾರ ನೀಡುವುದು  ಅವರ ನೈತಿಕ ಹೊಣೆ . ಇದನ್ನು ನಾವ್ಯಾರೂ ಬಲವಂತವಾಗಿ ಹೇಳಲಾಗುವುದಿಲ್ಲ . ಫಿಲ್ಮ್  ಛೇಂಬರ್ ನವರು ಈ ಕೆಲಸ ಮಾಡಬೇಕು .

ಪ್ರಶ್ನೆ     :  ತಮ್ಮನ್ನು ಅತಿ ಚಿಕ್ಕ ವಯಸ್ಸಿಗೇ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ . ಏನೆನಿಸುತ್ತದೆ ?

ಉತ್ತರ  :  ಮುಜುಗರ ಎನಿಸುತ್ತದೆ . ಒಂದು ಒಳ್ಳೆಯ ಕವಿತೆಯಿಂದ ಸಿಗುವ ಆನಂದ ಯಾವ ಪ್ರಶಸ್ತಿಯಿಂದಲೂ  ಸಿಗುವುದಿಲ್ಲ .

ಕೊನೆಯದಾಗಿ   ತಮ್ಮ ಬಿಡುವಿಲ್ಲದ ಕೆಲಸ  ಕಾರ್ಯಗಳ ಮಧ್ಯೆ ನಮಗಾಗಿ ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ  ಅನಂತ ಧನ್ಯವಾದಗಳು . ತಮ್ಮ ಸಾಹಿತ್ಯ ಸೇವೆ ಮತ್ತಷ್ಟು ಪ್ರಕಾಶಿಸಲೆಂದು ಹಾರೈಸುತ್ತೇನೆ  . ನಮಸ್ಕಾರ . 



----    ತಾರಾ ಶೈಲೇಂದ್ರ 







 

Tuesday, May 13, 2014

ಪ್ರತೀಕ್ಷೆ ( fiction)


                                                 




ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಾಡಿದ್ದ ಲಚ್ಚಿ ಮುಂಬಾಗಿಲ ಕಡೆಗೆ ದೃಷ್ಟಿ ನೆಟ್ಟಿದ್ದಳು . ದಿನಕರ ಮನೆಯನ್ನು ಮಾರುದ್ದ ಬೆಳಗಿದ್ದ . ಅವಳ ಸೇವೆಗೆಂದು ನಿಂತಿದ್ದ ದಾದಿ ,  ಇದನ್ನು ನೋಡಿ " ಓ ಮಗನ ದಾರಿ ಕಾಯುತ್ತಿದ್ದೀರಾ? ಅವರು ಬೆಂಗಳೂರಿನಿಂದ ಹೊರಟು ಇಲ್ಲಿ ಬರುವುದಕ್ಕೆ ೩ ತಾಸಾದರೂ ಬೇಕು . ಏಳಿ , ಎದ್ದು ಕಾಫಿ ಕುಡಿದು, ಸ್ನಾನ, ಪೂಜೆ, ತಿಂಡಿ ಮುಗಿಸಿ. ಅಷ್ಟರಲ್ಲಿ ನಿಮ್ಮ ಮಗ ಅರ್ಧ ದಾರಿ ಬಂದಿರ್ತಾರೆ" ಅಂದಳು . ಲಚ್ಚಿ "ಹೌದು , ಎಷ್ಟೋ ವರ್ಷಗಳ ಮೇಲೆ ಮಗ ಬರುತ್ತಿದ್ದಾನೆ " ಅನ್ನುತ್ತಾ ಲಗುಬಗೆಯಿಂದ ಎದ್ದು, ಅಡಿಗೆಯ ಶಾಂತಳನ್ನು ಕರೆದು "ಇವತ್ತು ಹಬ್ಬದಡಿಗೆ ಮಾಡು. ಅದಾ, ಇದಾ ಅಂತ ಕೇಳಬೇಡ .  ಏನಾದರೂ  ಮಾಡು. ಆದರೆ ಮರೆಯದೆ ಹೋಳಿಗೆ ಮಾಡು. ಶಂಕರನಿಗೆ ಬಲು ಪ್ರಿಯವಾದದ್ದು ಅದು. ಇವತ್ತು ಹಾಲು, ತುಪ್ಪ ಹಾಕ್ಕೊಂಡು ತಿಂದು ಸಂತೃಪ್ತಿ ಆಗಲಿ . ಅವನು ಅಮೇರಿಕಾದಲ್ಲಿ ಹೋಳಿಗೆ ತಿನ್ನೋದು ಅಷ್ಟರಲ್ಲೇ ಇದೆ " ಅಂದಳು .

  ಲಚ್ಚಿ ಕಾಫಿ ಕುಡಿದು, ಸ್ನಾನ ಮಾಡಿ , ದೇವರ ಮನೆ ಹೊಕ್ಕು,  ಹೂಬತ್ತಿ ಹಾಕಿ,   ತುಪ್ಪದ ದೀಪ ಹಚ್ಚಿ, ದೇವರ ಪಟಕ್ಕೆ ನಮಸ್ಕಾರ ಮಾಡಿ,  ತನ್ನ ಮಗ ಊರಿಗೆ ಬರುವಂತೆ ಕರುಣಿಸಿದ್ದಕ್ಕೆ ಕೋಟಿ ವಂದನೆ ಹೇಳುತ್ತಾ ಅಡ್ಡ ಬಿದ್ದಳು . ಶಾಂತಾ ಕೊಟ್ಟ ಅವಲಕ್ಕಿ ಉಪ್ಪಿಟ್ಟನ್ನು ಕೋಳಿಯಂತೆ ಕೆದಕಿ, ತಿಂದ ಶಾಸ್ತ್ರ ಮಾಡಿ, ಎದ್ದಳು.  ದೇಹ ಜಡತೆ ಯಿಂದ ಕೂಡಿದ್ದರೂ , ಅವಳ ಮನಸ್ಸು ಪ್ರಪ್ಹುಲ್ಲವಾಗಿತ್ತು . ಹಾಗೆ ನೋಡಿದರೆ, ಲಚ್ಚಿಗೆ ಖಾಯಿಲೆಯೇನೂ ಇರಲಿಲ್ಲ. ಆದರೆ ಮನೋರೋಗಕ್ಕೆ ಮದ್ದಿಲ್ಲವಲ್ಲ. ಹಾಗೆಯೇ ಸೋಫಾಗೆ ಒರಗಿದ ಅವಳು ಗತಕಾಲಕ್ಕೆ ಜಾರಿದಳು.

  ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಲಚ್ಚಿ , ಪುಟ್ಟ ಶಂಕರನೊಂದಿಗೆ ಅಣ್ಣನ ಮನೆ ಸೇರಿದ್ದಳು. ಅಣ್ಣ , ಅತ್ತಿಗೆ ಅವಳನ್ನು ಚೆನ್ನಾಗಿಯೇ ನೋಡಿ ಕೊಂಡರು. ಶಂಕರನಿಗಿಂತ ೩ ವರ್ಷ ಕಿರಿಯಳಾದ ಮೈತ್ರಿ ಸಹ ಅವನೊಂದಿಗೆ ಹೊಂದಿಕೊಂಡಳು . ಶಂಕರ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದಾಗ, ಅಣ್ಣ ಅವನನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿ, ಹಾಸ್ಟೆಲ್, ಮನೆಪಾಠದ ವ್ಯವಸ್ಥೆಯನ್ನೂ ಮಾಡಿ, "ಇನ್ನೇನು ಚಿಂತೆ ಇಲ್ಲ ಲಚ್ಚಿ, ನಿನ್ನ ಮಗ ಚೆನ್ನಾಗಿ ಓದಿ, ಮುಂದೆ ಬರುತ್ತಾನೆ. ಅವನ ಯೋಚನೆ ಬಿಟ್ಟು ನಿರಾಳವಾಗಿರು ಅಂದಿದ್ದ . ಶಂಕರ ಪಿ.ಯು.ಸಿ. ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆದು, ಇಂಜಿನಿಯರಿಂಗ್ ಸೇರಿಕೊಂಡ.  ಅಲ್ಲೂ ಚಿನ್ನದ ಪದಕ ಪಡೆದು, ಹೆಮ್ಮೆಯಿಂದ ಅಮ್ಮನಿಗೆ ತೋರಿಸಿ, ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೆರಿಕಾಗೆ ಹೋಗಬೇಕೆಂಬ ಆಸೆ ತೋಡಿಕೊಂಡ. ಲಚ್ಚಿ ಅಣ್ಣನ ಸಲಹೆ ಕೇಳಿದಾಗ, ಅವನೂ ಸಹ ಪ್ರೋತ್ಸಾಹ ನೀಡಿದ . ಜೊತೆಗೆ ತಂಗಿಯ ಬಳಿ ಮೈತ್ರಿ-ಶಂಕರರ ಮದುವೆಯ ವಿಷಯವನ್ನೂ ಪ್ರಸ್ತಾಪಿಸಿದ.  ಮೈತ್ರಿ ಸುಶೀಲೆ, ಮಗನಿಗೆ ಅನುರೂಪ ಜೋಡಿ ಎಂದು ಲಚ್ಚಿಗೆ ತಿಳಿದಿದ್ದರೂ ಸಹ, ಮಗನ ಮನಸ್ಸಿನಲ್ಲೇನಿದೆಯೋ  ತಿಳಿದುಕೊಳ್ಳೋಣ ಅಂದುಕೊಂಡು ಶಂಕರನನ್ನು ಕೇಳಿದಳು.  ಅವಳಾಸೆಯಂತೆ ಶಂಕರ ಒಪ್ಪಿದ. ಮೈತ್ರಿ ಮೊದಲಿಂದಲೂ ಬಲ್ಲ ಹುಡುಗಿ ಎಂಬುದು ಒಂದು ಕಾರಣವಾದರೆ, ವಿದೇಶದಲ್ಲಿನ ವ್ಯಾಸಂಗಕ್ಕೆ ಮಾವ ಸಹಾಯ ಮಾಡುತ್ತಾರೆ ಎಂಬ ಹಿರಿಯಾಸೆಯೂ ಇತ್ತು.  ಅಂತೂ ಎಲ್ಲರ ಆಸೆಯಂತೆ ಮದುವೆ ನಡೆದು, ಲಚ್ಚಿ ಅಡಿಗೆಗೆ ಸಹಾಯವಾಗುವುದೆಂದು ಕಟ್ಟಿಕೊಟ್ಟ ಎಲ್ಲ ವಿಧದ ಪುಡಿಗಳನ್ನು ತೆಗೆದುಕೊಂಡು ,  ನವ ವಧೂ ವರರು ಅಮೆರಿಕಾಗೆ ಹಾರಿ, ಕ್ಯಾಲಿಫೋರ್ನಿಯಾ ದಲ್ಲಿ ಸಂಸಾರ ಹೂಡಿದರು.  ಮೈತ್ರಿ ಶಂಕರನ ಓದಿಗೆ ಧಕ್ಕೆ ಬಾರದಂತೆ,  ಅಲ್ಲಿ ಇಲ್ಲಿ ಸುತ್ತಬೇಕೆಂದು ಅವನನ್ನು ಕಾಡದೆ ,  ಎಚ್ಚರಿಕೆ ವಹಿಸಿದಳು . ಪರಿಣಾಮವಾಗಿ ಅವನ ಹೆಚ್ಚಿನ ವ್ಯಾಸಂಗ ಉತ್ತಮವಾಗಿ ಮುಗಿದು, ಅವನಿಗೆ ಅಲ್ಲೇ ಒಳ್ಳೆಯ ಕೆಲಸವೂ ಸಿಕ್ಕಿತು.

   ಇದರೊಂದಿಗೆ ಲಚ್ಚಿಗೆ ಮಗ-ಸೊಸೆ ಹಿಂದಿರುಗಿ, ಹತ್ತಿರದಲ್ಲೇ ಎಲ್ಲಾದರೂ ಇರಬಹುದು ಅನ್ನೋ ತನ್ನ ಆಸೆ ಕೈಗೂಡುವ ಸಾಧ್ಯತೆ ಕಡಿಮೆಯೇನೋ ಅನಿಸತೊಡಗಿತು.  ಮೈತ್ರಿ ಗರ್ಭಿಣಿ ಎಂದು ತಿಳಿದಾಗ ಅವಳ ಜೊತೆ ಯಾರೂ ಇಲ್ಲವಲ್ಲ ಎಂದು ಚಡಪಡಿಸಿದಳು. . ಕಡೆಗೆ ಅತ್ತಿಗೆ ಹರಿಣಿ,  "ಅಕ್ಕ ನೀವ್ಯಾಕೆ ಒಂದೆರಡು ತಿಂಗಳ ಮಟ್ಟಿಗೆ ಅಲ್ಲಿ ಹೋಗಿ ಇರಬಾರದು ? ನಿಮಗೂ ಸಮಾಧಾನ, ಮೈತ್ರಿಗೂ ಅನುಕೂಲ " ಅಂದಳು . ಮನಸೊಪ್ಪದಿದ್ದರೂ, ಲಚ್ಚಿ ಅಣ್ಣನೊಂದಿಗೆ ಬೆಂಗಳೂರಿಗೆ ಹೊರಟು ನಿಂತಳು . ವಿಮಾನವಿರಲಿ, ಬೆಂಗಳೂರಿನ ರಸ್ತೆಗಳನ್ನೇ ನೋಡದ ಅವಳು ಮಗ-ಸೊಸೆಯನ್ನು ನೋಡುವ ಆಸೆಯಿಂದ ಎಲ್ಲಕ್ಕೂ ಸಿದ್ಧಳಾಗಿದ್ದಳು . ಅಣ್ಣ ಹೇಳಿದಂತೆ ಅವಳು ಅಮೇರಿಕಾದ ವಿಮಾನ ನಿಲ್ದಾಣದಲ್ಲಿ ಇಳಿದಾಗ , ಜನರ ಗುಂಪಿನಲ್ಲಿ ತನ್ನನ್ನು  ಎದುರುಗೊಳ್ಳಲು ಕಾಯುತ್ತಿರುವ ಶಂಕರನನ್ನು ಕಂಡಾಗ , ತಬ್ಬಿ, ಮುದ್ದಾಡಬೇಕು ಅನಿಸಿದರೂ, ಅವನ ಮುಖದಲ್ಲಿ ಯಾವ ಭಾವನೆಯೂ ಕಾಣಲಿಲ್ಲವಾದ್ದರಿಂದ  ತೆಪ್ಪಗಾದಳು.  ಮನೆ ಸೇರಿದ ನಂತರವೂ, ಶಂಕರ ಹೆಚ್ಚೇನೂ ಮಾತನಾಡಲು ಆಸಕ್ತಿ  ತೋರಿಸಲಿಲ್ಲ. ಮೈತ್ರಿಯನ್ನು ಕೇಳಿದಾಗ ಅವಳು "ಅಯ್ಯೋ ಅತ್ತೆ, ಅವರು ಇತ್ತೀಚಿಗೆ ಹಾಗೇ. ಏನೋ ಆಕಾಶ ತಲೆ ಮೇಲೆ ಬಿದ್ದವರಂತೆ ಆಡ್ತಾರೆ. ಮೇಲಧಿಕಾರಿ ಅಮೇರಿಕಾದವರು . ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರೂ ಏನಾದರು ಕೊಂಕು ಹುಡುಕುತ್ತಾರೆ.  ಅದೂ ಅಲ್ಲದೆ, ಈ ದೇಶದಲ್ಲಿ ನಾವು ಭಾರತೀಯರು ಎಷ್ಟೇ ಬುದ್ಧಿವಂತರಾದರೂ , ಉನ್ನತ ಹುದ್ದೆಗಳಿಗೆ ನಮಗೆ ಬಡ್ತಿ ಸಿಗುವುದಿಲ್ಲ.  ಇಲ್ಲಿಯ ವ್ಯವಸ್ಥೆ ಎಷ್ಟು ಕೆಟ್ಟದ್ದೆಂದರೆ , ನಮ್ಮಂಥವರಿಗೆ ಪ್ರತಿಯೊಂದಕ್ಕೂ ಸಾಲ ಕೊಟ್ಟು, ಕಂತಿನಲ್ಲಿ ಸಾಲ ತೀರಿಸುವಂತೆ ಮಾಡಿ, ಒಟ್ಟಿನಲ್ಲಿ, ನಮ್ಮನ್ನು ಶಾಶ್ವತ ಸಾಲಗಾರರನ್ನಾಗಿ ಮಾಡುತ್ತದೆ. ಅದೂ ಅಲ್ಲದೆ , ನಮ್ಮ ಸಂಸ್ಕೃತಿಯನ್ನು ಇವರು ಮೆಚ್ಚುವ ಸೋಗು ಹಾಕಿದರೂ, ನಮ್ಮನ್ನು ಸದಾ ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಯೇ ನೋಡುತ್ತಾರೆ.  ಇದರಿಂದ ತಪ್ಪಿಸಿಕೊಳ್ಳಲು ನಮ್ಮವರು ಅವರಂತೆಯೇ ವೇಷ-ಭೂಷಣ, ಕಡೆಗೆ ಅವರಂತೆಯೇ ಆಚಾರ-ವಿಚಾರಗಳನ್ನು ರೂಢಿಸಿಕೊಳ್ಳುತ್ತಾರೆ. ಇದರಿಂದ ನಮ್ಮ ಕುರಿತು ಅವರ ಅಭಿಪ್ರಾಯ ಬದಲಾಗದಿದ್ದರೂ, ನಮ್ಮವರಿಗೊಂದು ರೀತಿಯ ಭ್ರಾಂತು"  ಅಂದಳು .  ಲಚ್ಚಿ " ಮತ್ತೆ ಇಲ್ಯಾಕೆ ಇರಬೇಕು? ನಡೀರಿ ಬೆಂಗಳೂರಿಗೆ ಹೋಗಿ ಒಂದು ಕೆಲಸ ಹುಡುಕಿ. ಎಲ್ಲರೂ ಆರಾಮವಾಗಿರಬಹುದು" ಅಂದಳು . ಹೇಗೋ ಒಂದೂವರೆ  ತಿಂಗಳಿದ್ದ ಲಚ್ಚಿಗೆ ಬೇಸರವಾಗತೊಡಗಿತು. ಮಗನೊಂದಿಗೆ  ಹೇಳಿದಾಗ "ಆಯ್ತಮ್ಮ. ವ್ಯವಸ್ಥೆ ಮಾಡ್ತೀನಿ " ಅಂದನೆ  ಹೊರತು, ಮತ್ತೇನೂ ಮಾತಾಡಲಿಲ್ಲ . ಅವಳು ಮಗನನ್ನು ಕೂರಿಸಿಕೊಂಡು , ಕಕ್ಕುಲತೆಯಿಂದ "ಏನೋ ಶಂಕರ ನಿನ್ನ ಅವಸ್ಥೆ? ನಡಿ ಎಲ್ಲರೂ ವಾಪಸ್ ಹೋಗೋಣ" ಅಂದಾಗ , ಅವನು "ಸಮಯ ಬಂದಾಗ ನಾವೂ ಬರ್ತೇವಿ. ಈಗ ನೀವು ಹೊರಡಿ " ಅಂದ ..

  ಅಮೇರಿಕಾದಿಂದ ಹಿಂದಿರುಗಿದ ಮೇಲೆ,  ಫೋನಿನಲ್ಲಿ ಮಾತಾಡುತ್ತಿದ್ದರೂ, ಲಚ್ಚಿಗೆ ಸಮಾಧಾನವಿರಲಿಲ್ಲ. ಬರುಬರುತ್ತಾ ಶಂಕರನ ಫೋನ್ ಬರುವುದೂ ಸಹ ಕಡಿಮೆಯಾಯಿತು. ಲಚ್ಚಿಗೆ ಮನೋರೋಗ ಹತ್ತಿತು. ಮಗ-ಸೊಸೆ ಹತ್ತಿರ ಇರಬೇಕೆಂಬ ಹಂಬಲ ಹೆಚ್ಚಾಯಿತು.  ಹೀಗಿರುವಾಗ, ಲಚ್ಚಿ ಬಚ್ಚಲಲ್ಲಿ ಜಾರಿ ಬಿದ್ದುದೇ ನೆಪವಾಗಿ, ಹಾಸಿಗೆ ಹಿಡಿದಳು. ಶಂಕರನಿಗೆ ಅಣ್ಣ ವಿಷಯ ತಿಳಿಸಿದರು.  ಶಂಕರ ಲಚ್ಚಿಗೆ ಫೋನ್ ಮಾಡಿ, "ಅಮ್ಮ ನೀವು ಡಾಕ್ಟರು ಹೇಗೆ ಹೇಳ್ತಾರೋ ಹಾಗೆ ಸರಿಯಾಗಿ ಔಷಧಿ ತೊಗೊಬೇಕು. ಚೆನ್ನಾಗಿ ಊಟ ಮಾಡಿ " ಎಂದು ಉಪಚಾರದ ಮಾತಾಡಿದ . ಅವಳಿಗೆ ಬೇಕಾದ್ದು ಮಗನ ಸಾಮೀಪ್ಯ ಎಂದು ಅವನಿಗೆ ಅರ್ಥ ಮಾಡಿಸುವುದಾದರೂ ಹೇಗೆ ? ತೀರಾ ಹಂಬಲಿಸಲು ಶುರು ಮಾಡಿದಾಗ , ಅಣ್ಣ ಶಂಕರನಿಗೆ ಫೋನ್ ಮಾಡಿ ಒಂದು ವಾರದ ಮಟ್ಟಿಗಾದರೂ ಸರಿ ಬಂದು ಹೋಗಲು ತಿಳಿಸಿದ . ಅವನಿಗೂ ವೀಸಾ  ಅವಧಿ ವಿಸ್ತರಿಸಬೇಕಾಗಿತ್ತು. "ವಾರದ ಮಟ್ಟಿಗೆ ಬರುತ್ತೇನೆ . ಆದರೆ ೨-೩ ದಿನ ಚೆನ್ನೈಗೆ ಹೋಗಬೇಕಾಗುತ್ತೆ ವೀಸಾಗೆ . ಮತ್ತೆ ಬೆಂಗಳೂರಿನ ಆಫೀಸಿನಲ್ಲೂ ಕೆಲಸ ಇದೆ. ನೋಡುವ ಹೇಗಾಗುತ್ತೆ ಅಂತ " ಅಂದ . ಲಚ್ಚಿಗೆ  ರಾತ್ರಿಯಷ್ಟೇ ತಿಳಿದಿದ್ದು ಮಗ ಬರುತ್ತಾನೆ ಅಂತ .

   ತನ್ನ ಯೋಚನಾಲಹರಿಯಿಂದ ಹೊರಬಂದ ಲಚ್ಚಿ ಅಡಿಗೆಮನೆಯ ತಯಾರಿ ನೋಡಲು ಹೋದಳು. ಒಗ್ಗರಣೆ ಘಾಟಿಗೆ ಕೆಮ್ಮುವಂತಾಗಿ , ನೀರು ಕುಡಿದು, ಸೆಕೆ ತಾಳಲಾರೆನೆಂದು ನೆಲದ ಮೇಲೆ ಚಾಪೆ, ದಿಂಬು ಹಾಕಿಕೊಂಡು ಉರುಳಿಕೊಂಡಳು . ಊಟವನ್ನೂ ಮಾಡದೆ ಕಾಯುತ್ತಿದ್ದ ಲಚ್ಚಿಗೆ ಮುಸ್ಸಂಜೆಯಾಗಿದ್ದು ತಿಳಿದಿದ್ದು ಗಂಗೆ-ಗೌರಿ ಮನೆಗೆ ಹಿಂದಿರುಗಿದಾಗಲೇ . ಕಣ್ಣಲ್ಲಿ ನೀರಾಡಿದರೂ , ಏನೂ ಮಾತಾಡದೆ ಮುಂಬಾಗಿಲನ್ನು ನೋಡುತ್ತಾ ಸುಮ್ಮನೆ ಮಲಗಿದ್ದಳು ಲಚ್ಚಿ. ಕತ್ತಲಾಗುವ ಸಮಯದಲ್ಲಿ ಹೊರಗೆ ಕಾರು ನಿಂತ ಸದ್ದು ಕೇಳಿತು . ಶಂಕರ ಚಾಲಕನಿಗೆ "ನೀನು ಮುಂದೆ ಹೋಗಿ , ಗಾಡಿ ತಿರುಗಿಸಿಕೊಂಡು ಬಾ. ಅಷ್ಟರಲ್ಲಿ ನಾನು ಎಲ್ಲರನ್ನೂ ಮಾತಾಡಿಸಿ ಬರ್ತೀನಿ . ಪುನಃ ಬೆಂಗಳೂರಿಗೆ ಹೋಗೋದಿದೆ " ಅಂತ ಹೇಳಿ ಅವಸರದಲ್ಲಿ ಎಲ್ಲರನ್ನು ಕೂಗುತ್ತಾ ಒಳ ಬಂದ . ಎಲ್ಲರೂ ಬಂದು ಎದುರಿಗೆ ನಿಂತರೂ , ಲಚ್ಚಿ ಮಾತ್ರ ಮಲಗಿದ್ದಲ್ಲಿಂದ ಏಳಲಿಲ್ಲ .  ಶಾಂತಾ ಹತ್ತಿರ ಬಂದು ಅವಳನ್ನು ಎಬ್ಬಿಸಲು ಪ್ರಯತ್ನಿಸಿದಾಗ ಕಂಡಿದ್ದು ಮುಂಬಾಗಿಲ ಕಡೆಗೇ ಕಣ್ಣು ನೆಟ್ಟು ಪ್ರಾಣ ಬಿಟ್ಟಿದ್ದ ಲಚ್ಚಿ. ಶಂಕರನಿಗೆ ಅಮ್ಮ ತಾನು ಬರುವ ಮೊದಲೇ ಪ್ರಾಣ ಬಿಟ್ಟಿದ್ದಳೊ ಅಥವಾ ಚಾಲಕನೊಂದಿಗಿನ ತನ್ನ ಸಂಭಾಷಣೆ ಕೇಳಿ ಆಘಾತವಾಗಿ ಪ್ರಾಣ ಬಿಟ್ಟಳೋ  ಎಂಬುದು ಪ್ರಶ್ನೆಯಾಗಿ ಕಾಡತೊಡಗಿತು.

- ತಾರಾ ಶೈಲೇಂದ್ರ 

Thursday, April 17, 2014

ಅನುಗಾಲದ ನೆನಪು (poem)


ನೀನಿದ್ದೆ ಜೊತೆಯಲ್ಲಿ
ಕಣ್ಣಾಮುಚ್ಚಾಲೆ ಆಡುವಾಗ
ಹೊಳೆಯಲ್ಲಿ ನೀರಾಟವಾಡುವಾಗ
ಕಪ್ಪೆಚಿಪ್ಪು, ಕಲ್ಲುಗಳನ್ನು ಆರಿಸುವಾಗ .

ನೀನಿದ್ದೆ ಜೊತೆಯಲ್ಲಿ
ಶಾಲೆಗ ನಡೆದು ಹೋಗುವಾಗ
ಗೆಳತಿಯರು ಜಡೆ ಎಳೆಯುವಾಗ
ಪುಸ್ತಕದ ರಾಶಿ ಹೊತ್ತೊಯ್ಯುವಾಗ .

ನೀನಿದ್ದೆ ಜೊತೆಯಲ್ಲಿ
ಬೇಲಿ ಮುಳ್ಳು ಹೊಕ್ಕಾಗ
ಸೈಕಲ್ ತುಳಿಯುತ್ತ ಬಿದ್ದು
ಮಂಡಿಯಲ್ಲಿ ನೆತ್ತರೊಸರಿದಾಗ .

ನೀನಿದ್ದೆ ಜೊತೆಯಲ್ಲಿ
ವಧುಪರೀಕ್ಷೆ ಸಾಗುವಾಗ
ಕೆನ್ನೆಯುಬ್ಬಿಸಿ ಕೆಂಪಾದಾಗ
ಕೀಟಲೆ ಮಾಡಿ ನಗಿಸುವಾಗ .

ನೀನಿದ್ದೆ ಜೊತೆಯಲ್ಲಿ
ನನ್ನವರೊಡನೆ ಸಪ್ತಪದಿ ತುಳಿಯುವಾಗ
ಕಣ್ಣೀರಧಾರೆ ಹರಿಯುವಾಗ
ಹನಿಗಣ್ಣಿಂದ  ಬೀಳ್ಕೊಡುವಾಗ .

ನೀನಿದ್ದೆ ಜೊತೆಯಲ್ಲಿ
ಸಂಸಾರದ ನಾವೆ ತೇಲುತ್ತಿರುವಾಗ
ಮುದ್ದು ಕಂದ  ಅಳುವಾಗ
ಸಂತಸದಿಂದಿರು ಎಂದು ಹರಸಿದಾಗ .

ಈಗಲೂ ನೀನಿರುವೆ ಹೃದಯದಲ್ಲಿ
ವ್ಯತ್ಯಾಸವಿಷ್ಟೇ ......
ಆಗ ಸದಾ ಎದುರಲ್ಲಿ
ಈಗ ಬರೀ ನೆನಪಿನಲ್ಲಿ .

---  ತಾರಾ ಶೈಲೇಂದ್ರ 

ಸಮಾನಾಂತರ ರೇಖೆ (poem)

 
 
ನಾವಿಬ್ಬರೂ ಸೇರಿ ಕಂಡ
ಬಣ್ಣಬಣ್ಣದ ಕನಸುಗಳನ್ನು ನನಸಾಗಿಸದೆ
ನುಚ್ಚು ನೂರು ಮಾಡಿದ ನಿನಗೆ
ನನ್ನ ಹೃದಯದ ವೇದನೆಯನ್ನು
ಹೇಳಲಾಗದ ತೊಳಲಾಟ
ತಿಳಿಯದೆ ಗೆಳತಿ?
ಬಹುಶಃ ತಪ್ಪು ನನ್ನದೇನೋ
ನಾಣ್ಯಕ್ಕೆ ಎರಡು ಮುಖಗಳಿದ್ದರೂ
ಒಂದೇ ಎಂದು ಭ್ರಮಿಸಿದೆ
ಎಲ್ಲಿಯಾದರೂ ಸುಖದಿಂದಿರು
ಕಾಡಬಹುದೆಂಬ ಸಂಶಯ ಬಿಡು
ನನ್ನ ಹೃದಯವ
ನಾನೇ ನೋಯಿಸಬಲ್ಲೆನೆ ?
ನೀ ಹೇಳೇ ಗೆಳತಿ .
ಆದರೂ ಕೇಳುವೆ ನಾನು
ಬಾಳಸಂಗಾತಿ ಆಗುವೆನೆಂದು ಹೇಳಿ
ಸವಿಮಾತಿನಿಂದ ಮನಗೆದ್ದ ನೀನು
ನನ್ನೊಂದಿಗೆ ಸೇರಿ ಸರಳರೇಖೆಯಾಗದೆ
ಸಮಾನಾಂತರ ರೇಖೆ
ಆದುದೇಕೆ ಗೆಳತಿ?

- ತಾರಾ ಶೈಲೇಂದ್ರ





 

ಮರಳಿ ಬಾರದ ಬಾಲ್ಯ (poem)



ಬಾಲ್ಯವೆಂಬುದೆಷ್ಟು ಸುಂದರ
ಮುದ್ದು ಮಾತು ಮುಗ್ಧ ನಗುವಿನ ಹಂದರ
ಯಾರ ಅಂಕೆ ಇಲ್ಲದೆ
ಬೇಡಿದ್ದನ್ನೆಲ್ಲ ತರಿಸಿ,
ಬೇಡದ್ದನ್ನೆಲ್ಲ ಒಗೆದಾಗ ,
"ಅಯ್ಯೋ ಮಗು" ಎನ್ನುವರು.

ಆಡಿ ಹಾಡಿ
ಕುಣಿದು ನಲಿದು
ಎಲ್ಲರ ಮನರಂಜಿಸಿದ
ಸುದ್ದಿಯೇನೊ ಕೇಳಿ ತಿಳಿದೆ
ಈಗ ಅನಿಸುತ್ತದೆ
ನಾನೂ ಹಾಗೆ ಇದ್ದೆನೆ ?

ಆದರೀಗ ನಾನೇ ತಾಯಿ
ನಾ ಮಗನ ಹಿಂದೆಯೋ
ಅವನು ನನ್ನ ಬೆನ್ನಿಗೋ
ತಿಳಿಯದಾಗಿ, ಅವನೊಂದಿಗೆ
ಆಡುತ್ತಾ ಹಗಲು
ರಾತ್ರಿಯಾಗುವುದೆಷ್ಟು ಹೊತ್ತು ?

ಬಲು ತುಂಟ ಮಹರಾಯ
ಅವನ ತಾಳಕೆ
ನಾ ಕುಣಿಯಬೇಕು
ಥಕ ಥೈಯ್ಯ
ಪಾಪ , ಅವನಿಗೇನು ಗೊತ್ತು
ಅಮ್ಮನೇನು ಎಳೆ ಹುಡುಗಿಯಾ?

ಆವ ಕುಣಿದಾಗ ನಾನೂ ಕುಣಿಯಬೇಕು
ತಾ ಮಲಗಿದಾಗ , ಜಗವೇ ಮಲಗಬೇಕು
ಒಳ-ಹೊರಗೆ ದುಡಿಯುವ
ನನಗೂ ಆರಾಮ ಬೇಕು
ಅದರ ಚಿಂತೆ
ಅವನಿಗೇಕೆ ಬೇಕು?

ಒಮ್ಮೊಮ್ಮೆ ಅನಿಸುವುದುಂಟು
ನಾನೂ ನನ್ನಮ್ಮನನ್ನು
ಹೀಗೆಯೇ ಕಾಡಿರಬಹುದೆ?
ಏನಾದರೇನು
ಆ ಬಾಲ್ಯ
ಮರಳಿ ಬರಬಹುದೇ?

- ತಾರಾ ಶೈಲೇಂದ್ರ 

Monday, April 14, 2014

ಹೀಗೊಂದು ಗಣೇಶೋತ್ಸವ (short story)

 

                                      



 ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಬಡಾವಣೆಯ ಮಕ್ಕಳು ಗಣೇಶೋತ್ಸವ ನಡೆಸಲು ಉತ್ಸುಕರಾಗಿದ್ದರು . ಅದಕ್ಕಾಗಿಯೇ ಖಾಲಿ ಬಿದ್ದಿದ್ದ ನಿವೇಶನವೊಂದನ್ನು ಹಸನು ಮಾಡಿದ್ದರು. ವಿಶೇಷ ಎಂದರೆ ಇವರ ಗಣೇಶೋತ್ಸವದ ಸಿದ್ಧತೆಗೆ ಯಾವುದೇ ಹಿರಿಯರ ಬೆಂಬಲವಾಗಲಿ, ಒತ್ತಾಸೆಯಾಗಲಿ ಇಲ್ಲ. ಏನೋ ಹುಡುಗರು ಆಸೆಗೆ ಮಾಡಿಕೊಳ್ತವೆ ಎಂಬ ಉಡಾಫೆ .
 
     ಮಕ್ಕಳೂ ಸಹ ಚಂದಾ ವಸೂಲಿ ಮಾಡಲು ಮನೆಮನೆಗೆ ತಾವೇ ಗುಂಪು ಕಟ್ಟಿಕೊಂಡು ಹೋಗುತ್ತಿದ್ದವು. ಹಾಗೆಯೇ ಈ ಬಾರಿ ಗುಂಪಿನ ಪ್ರತಿ ಸದಸ್ಯರೂ ತಲಾ ಕನಿಷ್ಠ ೨೦೦ ರೂಪಾಯಿಗಳನ್ನು ಪೋಷಕರಿಂದ ವಸೂಲಿ ಮಾಡಿ ಚಂದಾ ನೀಡುವುದೆಂದು ನಿರ್ಧಾರ ಮಾಡಿದ್ದವು. ಹಾಗಾಗಿ, ಈ ಬಾರಿ ಸ್ವಲ್ಪ ಹೆಚ್ಚು ಹಣ ಸಂಗ್ರಹವಾಗಿತ್ತು. ಮಕ್ಕಳಿಗೆ ಈ ಬಾರಿ ಸ್ವಲ್ಪ ಜೋರಾಗಿ ಗಣೇಶೋತ್ಸವ ಮಾಡಬೇಕು , ಏನಾದರೂ ಕಾರ್ಯಕ್ರಮ ನಡೆಸಬೇಕು ಎಂಬ ಇರಾದೆ.  ಈ ಹಂತದಲ್ಲಿ ಪೋಷಕರ ಸಲಹೆ ಕೇಳಿದಾಗ , ಕೆಲವು ದೊಡ್ಡ ತಲೆಗಳು ಮಕ್ಕಳ ಗುಂಪಿನೊಂದಿಗೆ ಸೇರಿ ಸಮಾಲೋಚನೆ ನಡೆಸಲಾರಂಭಿಸಿದವು  . ಕಾರ್ಯಕ್ರಮ ನಡೆಸುವ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು .  ಮಕ್ಕಳಿಗೆ ತಾವೇ , ತಮ್ಮದೇ ಸಾಂಸ್ಕೃತಿಕ  ಕಾರ್ಯಕ್ರಮ ಆಯೋಜಿಸಬೇಕೆಂಬ ಆಸೆ. ದೊಡ್ಡವರಿಗೆ ಜನರನ್ನು ಆಕರ್ಷಿಸಲು ಸಂಗೀತ ಸಂಜೆ, ನೃತ್ಯ ಕಾರ್ಯಕ್ರಮ ಇತ್ಯಾದಿಗಳ ಕಡೆ ಒಲವು.  ಆದರೆ ಅವಕ್ಕೆಲ್ಲಾ ಬೇಕಾದ ಹಣ? ಅದಕ್ಕಾಗಿ ಇನ್ನಷ್ಟು ಚಂದಾ ವಸೂಲಿ ಮಾಡಬೇಕು. ನಂತರ ಚರ್ಚೆಗೆ ಬಂದ  ವಿಷಯ ಅತಿಥಿಗಳು ಯಾರು ಎಂಬುದು . ಒಬ್ಬರು ಸಿನಿಮಾ ತಾರೆಯೆಂದರೆ, ಮತ್ತೊಬ್ಬರು ಕ್ರಿಕೆಟಿಗರನ್ನು ಕರೆಸೋಣ ಎಂದರು . ರಾಜಕೀಯ ಪ್ರವೇಶ ಮಾಡಲು ಹವಣಿಸುತ್ತಿದ್ದವರೊಬ್ಬರು ರಾಜಕಾರಣಿಗಳನ್ನು ಕರೆಸಿದರೆ , ಬಡಾವಣೆಯ ಅಭಿವೃದ್ಧಿಗೆ ಸಹಾಯಕವಾಗುವುದೆಂದರು .  ಮಕ್ಕಳಿಗೋ , ಯಾಕಾದರೂ ಇವರನ್ನು ಮಧ್ಯೆ ಪ್ರವೇಶಿಸಲು ಬಿಟ್ಟೆವೋ ಎಂಬಂತಾಗಿತ್ತು .
 
     ಅಂದು ಯಾವ ನಿರ್ಧಾರಕ್ಕೂ ಬರಲಾಗದ್ದರಿಂದ , ಮುಂದಿನ ಭಾನುವಾರ ಸಭೆ ಸೇರುವುದೆಂದು ತೀರ್ಮಾನಿಸಿ, ಹಿರಿಯರೆಲ್ಲ ತಮ್ಮ ತಮ್ಮ ಕೆಲಸಕ್ಕೆ ತೆರಳಿದರು. ಮಕ್ಕಳಿಗೆ ಸಮಾಧಾನವಿಲ್ಲ. ಇರುವ ಹಣದಲ್ಲೇ ವಿಭಿನ್ನ ಕಾರ್ಯಕ್ರಮ ರೂಪಿಸಬೇಕು ಎಂಬುದು ಅವರ ಆಶಯ .  ಯಾವ ದೊಡ್ಡವರ ಸಹವಾಸವೂ ಬೇಡ . ಯಾರೂ ಸಹ ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮನೆಯಲ್ಲಿ   ಬಹಿರಂಗಗೊಳಿಸಬಾರದು ಎಂದು ಎಲ್ಲರೂ ಒಪ್ಪಿಕೊಂಡರು .  ಈಗ ಪುಟ್ಟ ತಲೆಗಳೆಲ್ಲ ಒಂದುಗೂಡಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡವು. ಕಾರ್ಯಕ್ರಮದ ವಿವರವನ್ನು ಗೌಪ್ಯವಾಗಿ ಇಡಬೇಕು ಎಂದು ಎಲ್ಲರೂ ಮಾತನಾಡಿಕೊಂಡರು.  ದೊಡ್ಡವರಿಗೆ 'ಬೇರೆ ಕಾರ್ಯಕ್ರಮ ಎನಿಲ್ಲ. ನಾವು ಒಂದು ಕಿರುನಾಟಕ ಆಡುತ್ತೇವೆ ಅಷ್ಟೆ ' ಎಂದು ತಿಳಿಸಿದರು. 
 
     ಗಣೇಶ ಚತುರ್ಥಿಯ ಬೆಳಿಗ್ಗೆ ಮಕ್ಕಳೆಲ್ಲ ಹೋಗಿ ಪುಟ್ಟದಾದ ಮಣ್ಣಿನ ಗಣಪತಿಯ ಮೂರ್ತಿಯನ್ನು  ತಂದು ಪ್ರತಿಷ್ಟಾಪಿಸಿ, ಪೂಜೆಯನ್ನೂ ಮಾಡಿದರು.  ಅಮ್ಮಂದಿರನ್ನು ಪುಸಲಾಯಿಸಿ , ಗೊಜ್ಜವಲಕ್ಕಿ, ರಸಾಯನ ಮಾಡಿಸಿ , ಪ್ರಸಾದ ವಿನಿಯೋಗವನ್ನು ಮಾಡಿದರು. ಸಂಜೆ ೬.೩೦ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿಕೊಂಡರು.  ಹಿರಿಯರೆಲ್ಲ 'ಏನೋ , ಹುಡುಗು ಬುದ್ಧಿ, ಏನು ಕಾರ್ಯಕ್ರಮ ಮಾಡ್ತವೋ ನೋಡೋಣ ' ಎಂದು ಚದುರಿದರು.  ಮಕ್ಕಳು ಕಾರ್ಯಪ್ರವೃತ್ತರಾದರು. 
 
    ಸಂಜೆ ೬. ೩೦ಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಕ್ಕಳು ತಮ್ಮ ಪೋಷಕರಿಗೆ ಅಪ್ಪಣೆ ಮಾಡಿದ್ದರಿಂದ ಎಲ್ಲರೂ ಸಮಯಕ್ಕೆ ಸರಿಯಾಗಿ ನೆರೆದರು. ಕೂರಲು ಹಾಕಿದ ಖುರ್ಚಿಗಳ ಮುಂದೆ ಖಾಲಿ ಇದ್ದ ಜಾಗವೇ ವೇದಿಕೆ. ಪುಟಾಣಿ ಲಿಖಿತ ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದಳು.  ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟಿದರು.  ಮುಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಲು ವಿಪಿನ್ ಎದ್ದು ನಿಂತ . "ಈ ಸಂಜೆಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಸ್ವಾಗತ. ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಒಬ್ಬರನ್ನೋ , ಇಬ್ಬರನ್ನೋ ಅತಿಥಿಗಳಾಗಿ ಆಹ್ವಾನಿಸುವುದು ವಾಡಿಕೆ . ಆದರೆ ಇಂದು ನಮ್ಮೊಂದಿಗಿರುವ ಗಣ್ಯರು ೨೦ ಮಂದಿ" ಎಂದಾಗ ಎಲ್ಲರಿಗೂ ಆಶ್ಚರ್ಯ.  ವೇದಿಕೆಯಿಲ್ಲ, ಹಾಗಾದರೆ ಗಣ್ಯರೆಲ್ಲಿ ? ಆಗ ವಿಪಿನ್ "ನಮ್ಮ ಕಾರ್ಯಕ್ರಮಕ್ಕೆ ಯಾವುದೋ ತಾರೆಯರು ಅಥವಾ ರಾಜಕಾರಣಿಗಳನ್ನು ಆಹ್ವಾನಿಸುವುದಕ್ಕಿಂತ , "ಜೀವನ ಸಂಧ್ಯಾ " ವೃದ್ಧಾಶ್ರಮದ ಹಿರಿಯ ಚೇತನಗಳಾದ ಇವರನ್ನು ಆಹ್ವಾನಿಸುವುದು ಸೂಕ್ತ ಎನಿಸಿತು. ತಮ್ಮ ಇಳಿವಯಸ್ಸಿನಲ್ಲಿ ತಮ್ಮವರಿಂದ ದೂರವಿರುವ ಇವರೆಲ್ಲರಿಗೂ , ನಮ್ಮೊಡನೆ ಸ್ವಲ್ಪ ಸಮಯ ಕಳೆಯುವುದರಿಂದ ಸಂತೋಷ ಸಿಗುವುದೆಂದು ನಮಗೆಲ್ಲ ಅನಿಸಿತು. ಅವರೂ ಸಹ ಯಾವುದೇ ಹಮ್ಮು-ಭಿಮ್ಮುಗಳಿಲ್ಲದೆ ಬರಲು ಒಪ್ಪಿಗೆ ನೀಡಿದರು .  ಅವರಿಗೆಲ್ಲ ನಿಮ್ಮ ಹಾಗೂ ನಮ್ಮೆಲ್ಲರ ಪರವಾಗಿ ಸ್ವಾಗತ . ಹಾಗೆಯೇ ಪ್ರಖ್ಯಾತರನ್ನು ಸನ್ಮಾನಿಸುವುದು ನಾವೆಲ್ಲರೂ ಬಲ್ಲೆವು. ಆದರೆ, ಸದ್ದಿಲ್ಲದೇ ಸರಿಯುವ ಇರುವೆ ಹೆಗ್ಗೆಲಸ  ಮಾಡುವಂತೆ , ನಮ್ಮೆಲ್ಲರ ನಿತ್ಯಜೀವನದಲ್ಲಿ ನಮಗೆ ಸಹಾಯಕರಾದ , ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೆ , ತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸುವ 'ಅಂಚೆಯ ನಾಗಕ್ಕ' ಇಂದಿನ ಕಾರ್ಯಕ್ರಮದ ಶೋಭೆ" ಎಂದನು .  ಅದೇ ಸಮಯಕ್ಕೆ ಸರಿಯಾಗಿ ಮುಂದಿನ ಖುರ್ಚಿಗಳಲ್ಲಿ ಆಸೀನರಾಗಿದ್ದ ೨೦ ಮಂದಿ ವೃದ್ಧರೂ , ಅಂಚೆಯ ನಾಗಕ್ಕನೂ ಎದ್ದು ನಿಂತು, ಸಭಿಕರ ಕಡೆಗೆ ತಿರುಗಿ , ನಮಸ್ಕಾರ ಮಾಡಿದರು. ನಂತರ 'ಜೀವನ ಸಂಧ್ಯಾ' ದ ಹಿರಿಯ ಸದಸ್ಯೆ ಮಕ್ಕಳು ನೀಡಿದ ಶಾಲನ್ನು ನಾಗಕ್ಕನಿಗೆ ಹೊದಿಸಿ, ಹಣ್ಣಿನ ಬುಟ್ಟಿ ನೀಡುವಾಗ , ನಾಗಕ್ಕನ ಮುಖದಲ್ಲಿ ಧನ್ಯತಾಭಾವ. 
 
     ನಂತರ ಶುರುವಾಯ್ತು ಮಕ್ಕಳ ಲಘು ನಾಟಕ.  ಎಲ್ಲರ ಮನರಂಜಿಸಿದ ಮಕ್ಕಳನ್ನು 'ಜೀವನ ಸಂಧ್ಯಾ' ದ ಹಿರಿಯರು ತಬ್ಬಿ ಹರಸಿದರು. "ಇಷ್ಟು ಚಿಕ್ಕ ವಯಸ್ಸಿಗೇ ಇಂಥ ಉದಾತ್ತ ಮನೋಭಾವ ಬೆಳೆಸಿಕೊಂಡಿರುವ ನಿಮ್ಮನ್ನು ಹೆತ್ತವರು ಪುಣ್ಯವಂತರು"  ಎನ್ನುವಾಗ ಪೋಷಕರ ಕಣ್ಣುಗಳಲ್ಲಿ ನೀರಾಡಿತು .  ಈ ಬಾರಿಯ ಗಣೇಶೋತ್ಸವ ಸಾರ್ಥಕವಾಯ್ತು ಎಂಬ ಭಾವನೆ ಎಲ್ಲರಲ್ಲೂ ಮೂಡಿತ್ತು .  

---  ತಾರಾ ಶೈಲೇಂದ್ರ 
 
 

Wednesday, April 9, 2014

ಹೇಗೆ? (poem)

                 

















 ಹೃದಯದಲಿ ಹೆಪ್ಪು ಕಟ್ಟಿರೆ
 ನಿಟ್ಟುಸಿರು, ನೋವು
 ಬಾಹ್ಯದ ಆಡಂಬರ ತಂದೀತೆ
 ಸಂತಸ , ನಲಿವು ?
 ಮನಗಳ ಬೆಸೆಯುವ
 ನಿಸ್ತಂತು ಸೇತು , ತಾನೇ
 ಕದಡಿದರೆ ಭಾವನೆಗಳ ,
 ಸಂಬಂಧಗಳು ಉಳಿಯುವುದೆಂತು  ?                                   

   -  ತಾರಾ ಶೈಲೇಂದ್ರ
                

ಕಾರಣ (poem)



               ಹೇಳಿ ಹೋಗು  ಹುಡುಗಿ   ಕಾರಣ
               ಅದರಲಿ ಇರಲಿ ಒಪ್ಪ ಓರಣ 
               ತೊರೆವಾಗ ನನ್ನ ಬಾರದಾಯ್ತೆ ಕರುಣ
               ಬಾಡಿದೆ ಗೆಳತಿ  ಮನದ   ತೋರಣ .

               ಉಷೆ ಬಿಡುವ ಮೊದಲು ಕಣ್ಣ
               ಬಾನು ಚೆಲ್ಲೊ ಮೊದಲು ಬಣ್ಣ
               ಸೂರ್ಯ ರಶ್ಮಿ ತಾಗಿ ಮಣ್ಣ
               ಪಕ್ಷಿ ಧ್ವನಿ ಕೇಳಿ ಸಣ್ಣ ||ಹೇಳಿ ಹೋಗು ||

               ಹಕ್ಕಿ ಗೂಡು ಸೇರೋ ಸಮಯ
               ಆಲಿಸಿ ಗಂಗೆ-ಗೌರಿಯ ಕರೆಯ
               ರವಿ ಮುಳುಗಿ ಸೇರಿ ಧರೆಯ
               ಮನೆಯ ದೀಪ ನುಂಗಿ ತಮೆಯ ||ಹೇಳಿ ಹೋಗು ||

               ರಜನಿ ಜಾರಿ ಹೋಗೊ ಮುನ್ನ
               ಶಶಿ ಸುರಿವಾಗ ಜೇನ ಜೊನ್ನ
                ಚುಕ್ಕಿ ತಾರೆ ಬೆಳಗಿ ಹೊನ್ನ
                ಕಣ್ಣ ಹನಿಯು ಜಾರೋ ಮುನ್ನ||ಹೇಳಿ ಹೋಗು ||


                - ತಾರಾ ಶೈಲೇಂದ್ರ