ಹೇಳಿ ಹೋಗು ಹುಡುಗಿ ಕಾರಣ
ಅದರಲಿ ಇರಲಿ ಒಪ್ಪ ಓರಣ
ತೊರೆವಾಗ ನನ್ನ ಬಾರದಾಯ್ತೆ ಕರುಣ
ಬಾಡಿದೆ ಗೆಳತಿ ಮನದ ತೋರಣ .
ಉಷೆ ಬಿಡುವ ಮೊದಲು ಕಣ್ಣ
ಬಾನು ಚೆಲ್ಲೊ ಮೊದಲು ಬಣ್ಣ
ಸೂರ್ಯ ರಶ್ಮಿ ತಾಗಿ ಮಣ್ಣ
ಪಕ್ಷಿ ಧ್ವನಿ ಕೇಳಿ ಸಣ್ಣ ||ಹೇಳಿ ಹೋಗು ||
ಹಕ್ಕಿ ಗೂಡು ಸೇರೋ ಸಮಯ
ಆಲಿಸಿ ಗಂಗೆ-ಗೌರಿಯ ಕರೆಯ
ರವಿ ಮುಳುಗಿ ಸೇರಿ ಧರೆಯ
ಮನೆಯ ದೀಪ ನುಂಗಿ ತಮೆಯ ||ಹೇಳಿ ಹೋಗು ||
ರಜನಿ ಜಾರಿ ಹೋಗೊ ಮುನ್ನ
ಶಶಿ ಸುರಿವಾಗ ಜೇನ ಜೊನ್ನ
ಚುಕ್ಕಿ ತಾರೆ ಬೆಳಗಿ ಹೊನ್ನ
ಕಣ್ಣ ಹನಿಯು ಜಾರೋ ಮುನ್ನ||ಹೇಳಿ ಹೋಗು ||
- ತಾರಾ ಶೈಲೇಂದ್ರ
No comments:
Post a Comment