Saturday, April 5, 2014

ಮಗಳಿಗೊಂದು ಪತ್ರ (short story)




  ಮುದ್ದಿನ ಮಗಳೇ ,

      ನಿನ್ನ ಪತ್ರ ತಲುಪಿತು. ಸ್ವಲ್ಪ ಆಶ್ಚರ್ಯವೂ ಆಯಿತು. ನನ್ನ ಬಿಟ್ಟು ಇರಲಾರೆನೆಂದು ಅಳುತ್ತಿದ್ದವಳು ಹಾಸ್ಟೆಲ್ ಜೀವನಕ್ಕೆ ಒಗ್ಗಿಕೊಂಡಿರುವುದು ಸಂತೋಷದ ವಿಷಯ . ೧೪ ವರ್ಷಗಳ ವೈವಾಹಿಕ ಜೀವನದ ನಂತರ , ಬಹುಶ : ನಾನೆಂದೂ ತಾಯಿಯಾಗಲಾರೆನೇನೊ ಎಂದು ಹತಾಶಳಾಗಿದ್ದ ನನ್ನ ಬಾಳಲ್ಲಿ ಬಂದ ಬೆಳಕಿನ ಕಿರಣ, ನನ್ನ ಭಾಗ್ಯನಿಧಿ ನೀನು . ಅದಕ್ಕೆಂದೇ ನಿನಗೆ "ಸಿರಿ " ಎಂದು ನಾಮಕರಣ ಮಾಡಿದೆ. ಅಂದಿನಿಂದ ಇಂದಿನವರೆಗೂ ನೀನು ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನ ಕಣ್ರೆಪ್ಪೆಯಂತೆ ಕಾದಿದ್ದೇನೆ.

     
       ಅದೆಲ್ಲ ಇರಲಿ. ನನ್ನ ಮೆಚ್ಚಿನ ಗಂಗೋತ್ರಿಯ ವಾತಾವರಣ ನಿನಗೆ ಹೇಗನಿಸಿತು? ಚಿಕ್ಕಂದಿನಲ್ಲಿ ಆ ಕುಕ್ಕರಹಳ್ಳಿ ಕೆರೆಯ ಏರಿಯ ಮೇಲೆ ಅಡ್ಡಾಡುವುದೇ ಒಂದು ಖುಷಿ ನಮಗೆ.  ಆ ಬಯಲು ರಂಗಮಂದಿರ ಇದೆಯಲ್ಲ, ಅಲ್ಲಿ ಎಷ್ಟೋ ನಾಟಕಗಳ ತಾಲೀಮು ನಡೆಯುವುದನ್ನು ನೋಡಿದ್ದೇವೆ. ಆ ಮೆಟ್ಟಿಲುಗಳನ್ನು ಹತ್ತಿ , ಇಳಿಯುತ್ತಾ , ವ್ಯಾಯಾಮ ಮಾಡುವವರನ್ನು ನೋಡುತ್ತಾ, ನಾವೂ ಸಹ ಇವನ್ನೆಲ್ಲ ಮಾಡಬೇಕೆಂಬ ಆಸೆಯಾಗುತ್ತಿತ್ತು.

      ಮನಸಿಟ್ಟು ಓದಲು ಗಂಗೋತ್ರಿಗಿಂತಲೂ ಪ್ರಶಸ್ತವಾದ ಸ್ಥಳ ಬೇರೊಂದಿಲ್ಲ ಎಂದು ನನ್ನ ಭಾವನೆ. ಅಂದ ಹಾಗೆ ಮೌನಗೌರಿಯಾಗಿದ್ದ ನೀನು ಇಷ್ಟೊಂದು ಸ್ನೇಹಿತರನ್ನು ಸಂಪಾದಿಸಿದ್ದು ಯಾವಾಗ? ಆದರೆ ಬರೆದಿರುವ ಹೆಸರುಗಳೆಲ್ಲ ಹುಡುಗಿಯರದೇ.  ಯಾಕೆ? ಯಾವ ಹುಡುಗರೂ  ಸ್ನೇಹಿತರಾಗಲಿಲ್ಲವಾ? ಅಥವಾ ನನ್ನೊಂದಿಗೆ ಹೇಳಲು ಭಯವಾ? ಹೆದರುವ ಅವಶ್ಯಕತೆಯಿಲ್ಲ. ನಿರ್ಮಲವಾದ ಸ್ನೇಹಕ್ಕೆ ಗಂಡು-ಹೆಣ್ಣೆಂಬ ಭೇದವಿಲ್ಲ. ಆದರೆ ಸ್ನೇಹಿತರ ಆಯ್ಕೆಯಲ್ಲಿ ಹುಷಾರು. ಸಹಪಾಠಿಗಳಲ್ಲಿ ಸ್ನೇಹವಿರಲಿ, ಸಲಿಗೆ ಬೇಡ, ಕಾಲೇಜಿಗೆ ಬರುವುದು ಬರೀ ಮೋಜು ಮಾಡಲಿಕ್ಕೆ ಎನ್ನುವವರ ನೆರಳೂ  ಸಹ ನಿನ್ನ ಬಳಿ ಸುಳಿಯುವುದು  ಬೇಡ. ಸಿನಿಮಾ , ಹೋಟೆಲ್ , ಪಾರ್ಕ್, ಪ್ರೀತಿ, ಪ್ರೇಮ ಇವೆಲ್ಲ ಜೀವನದಲ್ಲಿ ಮುಂದೆ ಇದ್ದದ್ದೇ.  ಆದರೆ ಒಮ್ಮೆ ವಿದ್ಯಾರ್ಥಿ ಜೀವನದಲ್ಲಿ ಎಡವಿದರೆ , ಮತ್ತೆ ಮೇಲೇಳುವುದು ಕಷ್ಟ. ನಿನ್ನ ಲಕ್ಷ್ಯವೆಲ್ಲ ನಿನ್ನ ಉನ್ನತ ವ್ಯಾಸಂಗದ ಕಡೆಗಿರಲಿ.

       ನಿನಗೆ ನೆನಪಿದೆಯಾ ಚಿನ್ನು? ನೀನು ೯ನೇ ತರಗತಿಯಲ್ಲಿರುವಾಗ ಅಜಯ್ ನೊಂದಿಗೆ ಮನೆಯ ಹೊರಗೆ ನಿಂತು ಗಂಟೆಗಟ್ಟಲೆ ಹರಟಿದ್ದಕ್ಕೆ ನಾನು ಆಕ್ಷೇಪಿಸಿದ್ದು?  ನೀನು ಅದನ್ನು ಅವಮಾನವೆಂದು ಭಾವಿಸಿ , ಅಪ್ಪನ ಬಳಿ ನಿನ್ನನ್ನು ಕಂಡರೆ ನನಗೆ ಹೊಟ್ಟೆಕಿಚ್ಚು ಎಂದು ದೂರಿದ್ದು? ನನ್ನನ್ನು ಪರಮಶತ್ರುವಿನಂತೆ ಕಾಣುತ್ತಿದ್ದುದು? ಆದರೆ , ನನಗೆಂದೂ ನೀನು ನನ್ನ ಮುದ್ದಿನ ಮಗುವೆ. ಆಗ ನಾನು ನಿನಗೆ ತಿಳಿ ಹೇಳಿದ್ದರೆ , ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ನಿನಗಿರಲಿಲ್ಲ. ಬಹುಶಃ ನಿನಗೆ ಈಗ ಅನಿಸುತಿರಬಹುದು ಅಮ್ಮ ಇಷ್ಟೊಂದು ಆಪ್ತಳಾಗಿ ಹೇಗೆ ಬದಲಾದಳೆಂದು .

      ನಿನಗೆ ತಿಳಿದಿರದ ವಿಷಯವೊಂದಿದೆ . ಅದೇನೆಂದರೆ ನಾನೂ ಆ ವಯಸ್ಸಿನವಳಾಗಿದ್ದಾಗ ನನ್ನಮ್ಮ ಅಂದರೆ ನಿನ್ನ ಅಜ್ಜಿಯನ್ನು ಹಾಗೇ ಅಪಾರ್ಥ  ಮಾಡಿಕೊಂಡಿದ್ದೆ. ಅಮ್ಮ ಪ್ರತಿಯೊಂದರಲ್ಲೂ ನನಗೆ ಪ್ರತಿಸ್ಪರ್ಧಿ ಎಂದುಕೊಂಡಿದ್ದೆ . ಓದಲು ಕುಳಿತಾಗ  ಕೆಲಸಕ್ಕೆ ಕರೆದರೆ ಸಿಡಿಮಿಡಿಗೊಳ್ಳುತ್ತಿದ್ದೆ . ಮನೆಗೆಲಸವನ್ನು ಮಾಡುವಾಗಲ್ಲೆಲ್ಲ ಓದಿನಲ್ಲಿ ಕಳೆಯಬೇಕಾದ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇನೆ ಎಂದುಕೊಳ್ಳುತ್ತಿದ್ದೆ . ಊರಿನಿಂದ ಅಕ್ಕ, ಭಾವ ಬಂದಾಗ ಭಾವನೊಡನೆ ಮುಖ ಕೊಟ್ಟು ಮಾತನಾಡಲು ಬಿಡದಿದ್ದುದ್ದಕ್ಕೆ ಶಪಿಸಿದ್ದೆ. ಅಷ್ಟೆಲ್ಲಾ ಆದರೂ ಅಮ್ಮನ ವಿರುದ್ಧ ಪ್ರತಿಭಟಿಸಲಾರದ ನನ್ನ  ಅಸಹಾಯಕತೆಗೆ ಚಡಪಡಿಸಿದ್ದೆ. ಎಷ್ಟಾದರೂ , ಹಿರಿಯರೆಂದು ಸಹನೆ  ತಂದುಕೊಳ್ಳುತ್ತಿದ್ದೆ . ನಂತರ ಮದುವೆಯಾಗಿ ಅತ್ತೆಯ ಮನೆಗೆ ಕಾಲಿಟ್ಟಾಗ , ಪೇಟೆಯಲ್ಲಿ ಬೆಳೆದ ಹುಡುಗಿ ಹೇಗೋ ಏನೋ ಎಂದು ಅನುಮಾನಿಸಿದವರು ಅಲ್ಪ ಸಮಯದಲ್ಲೇ ಹಳೆಯ ನಂಟೇನೋ ಎಂಬಂತೆ ನನ್ನನ್ನು ಪರಿಗಣಿಸಿದಾಗ, ಹೊಂದಾಣಿಕೆ, ಸಹನೆಯ ಪಾಠ ಕಲಿಸಿದ ಅಮ್ಮನ್ನನ್ನು ನೆನೆದು, ಅವಳಿಗೆ ಮನದಲ್ಲೇ ವಂದಿಸಿದ್ದೆ . 

        ಆದರೆ ವಿಪರೀತ ಕಟ್ಟುಪಾಡುಗಳಿಂದ  ಬೇಸತ್ತಿದ್ದ ನಾನು , ನನಗೊಂದು ಹೆಣ್ಣುಮಗುವಾದರೆ , ಅದನ್ನು ಹೇಗೆ ಬೆಳೆಸಬೇಕೆಂಬ ಕಲ್ಪನೆಯನ್ನು ಆಗಲೇ ಮಾಡಿದ್ದೆ. ಆದ್ದರಿಂದಲೇ ನೀನು ಇಷ್ಟಪಟ್ಟ ಭರತನಾಟ್ಯ, ಟ್ರೆಕ್ಕಿಂಗ್  ಇತ್ಯಾದಿಗಳಲ್ಲಿನ ಆಸಕ್ತಿಗೆ ನೀರೆರೆದು ಒತ್ತಾಸೆಯಾಗಿ ನಿಂತಿದ್ದು .  ಕಡೆಗೆ ಸ್ನಾತಕೋತ್ತರ ಪದವಿಗಾಗಿ ಮಾನಸಗಂಗೋತ್ರಿಗೆ ಹೋಗಲೆಬೇಕೆಂದಾಗ  , ಹುಟ್ಟಿದಾರಭ್ಯ ನಿನ್ನನ್ನು ಅಗಲದೆ ಇದ್ದ ನಾನು ನಿನ್ನನ್ನು ಕಳಿಸಲು ಒಪ್ಪಿದ್ದು. ಈಗ ನೀನು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವಳಾಗಿರುವೆ. ಹಾಗಾಗಿ ಇದೆಲ್ಲವನ್ನೂ  ಹೇಳಿಕೊಳ್ಳುತ್ತಿದ್ದೇನೆ .

        ಯಾವುದೇ ಅವಕಾಶವಿರಲಿ, ಹೆಣ್ಣೆಂಬ ಒಂದೇ ಕಾರಣಕ್ಕೆ ಸೌಲಭ್ಯ, ಸವಲತ್ತುಗಳು ಬೇಕೆಂದು ಆಶಿಸಬೇಡ . ನಿನ್ನ ಪ್ರತಿಭೆಯಿಂದಲೇ ನೀನು ಜೀವನದಲ್ಲಿ ಏನನ್ನಾದರೂ  ಸಾಧಿಸಬೇಕೆಂಬ ಆಸೆ ನನಗೆ . ಶೋಷಣೆ ಎಲ್ಲೇ ಇದ್ದರೂ , ಅದನ್ನು ಖಂಡಿಸಿ, ತಡೆಯುವುದು ನಿನ್ನ ಧರ್ಮ. ನೊಂದವರನ್ನು ಸಂತೈಸುವ ಅವಕಾಶವಿದ್ದಲ್ಲಿ ಕಳೆದುಕೊಳ್ಳಬೇಡ . ವಿದ್ಯಾಭ್ಯಾಸವೆಂದರೆ ಬರೀ ಪುಸ್ತಕ ಜ್ಞಾನ ಅಲ್ಲ, ಜೀವನವನ್ನು ಒಳ್ಳೆಯ ದೃಷ್ಟಿಯಿಂದ ನೋಡುವುದೂ ಒಂದು ವಿದ್ಯೆಯೇ. ಅದನ್ನು ಮೈಗೂಡಿಸಿಕೊ . ನಿನ್ನ ಒಳಿತು ಕೆಡುಕುಗಳು ನಿನ್ನ ಕೈಯಲ್ಲೇ ಇವೆ.   ಪಾಠ ಪ್ರವಚನಗಳನ್ನು ಗಮನವಿಟ್ಟು ಕೇಳು. ಮನವೆಂಬ ಮರ್ಕಟವನ್ನು ಕಟ್ಟಿ ಹಾಕು. ನಿನಗೆ ಕೊಟ್ಟಿರುವ ಸ್ವಾತಂತ್ರ್ಯ ಸ್ವೇಚ್ಛೆಯಾಗದಿರಲಿ. ಮನಸ್ಸನ್ನು ಪ್ರಶಾಂತವಾಗಿರಿಸಲು  ಪ್ರತಿ ದಿನ ಸ್ವಲ್ಪ ಹೊತ್ತು ಧ್ಯಾನ ಮಾಡುವುದನ್ನು ಮರೆಯಬೇಡ .

         ಅರೆರೆ ಇದೇನು? ಅಮ್ಮ ಇಷ್ಟೊಂದು ಕೊರೆಯುತ್ತಿದ್ದಾಳೆ ಎಂದುಕೊಳ್ಳಬೇಡ . ಬಹುಶಃ ನಿನ್ನ ಮಗಳು ಪ್ರಾಪ್ತ
ವಯಸ್ಕಳಾಗುವ ಸಮಯಕ್ಕೆ ನೀನೂ ನನ್ನಂತೆಯೇ ಯೋಚನೆ ಮಾಡುವೆಯೇನೊ. ಊಟ , ತಿಂಡಿ ಹೊತ್ತಿಗೆ ಸರಿಯಾಗಿ ಮಾಡು. ಆರೋಗ್ಯ ಚೆನ್ನಾಗಿ ನೋಡಿಕೋ . ಬೆಳಿಗ್ಗೆ ಅಪ್ಪನ ಜೊತೆ ಮಾತನಾಡಿದೆಯಲ್ಲ. ಅವರಿಗೆ ನಿನ್ನನ್ನು ನೋಡುವಂತಾಗಿದೆ . ತಿಂಗಳ ಕೊನೆಗೆ ಬರಬಹುದು ಇಬ್ಬರೂ ನಿನ್ನನ್ನು ನೋಡಲು. ಇದಿಷ್ಟನ್ನೂ  ಫೋನ್ ನಲ್ಲೇ ಹೇಳಬಹುದಿತ್ತು. ಆದರೆ ಮನದ ಭಾವನೆಗಳನ್ನು ಹಂಚಿಕೊಳ್ಳಲು ಪತ್ರಗಳೇ ಪ್ರಬಲ ಮಾಧ್ಯಮ ಎಂದು ನಂಬಿದವರಲ್ಲಿ ನಾನೂ ಸಹ ಒಬ್ಬಳು. ಅದಕ್ಕೆಂದೇ ಈ ಪತ್ರ. ಕೂಡಲೇ ಉತ್ತರಿಸು. ನಾವೆಲ್ಲರೂ ಒಟ್ಟಾಗಿ ಸೇರುವ ದಿನವನ್ನು ಎದುರು ನೋಡುತ್ತಿದ್ದೇನೆ .

                                                                                                                      ಇತಿ ,
                                                                                                                    
                                                                                                                   ನಿನ್ನ ಪ್ರೀತಿಯ ಅಮ್ಮ 

4 comments:

  1. Wow nimma
    Baravanige yalli jaadhu idhe
    Odhuvavara manasannu seleyuva aalavaadha arthavidhe
    Taayi manassu
    Magalige snehethe yanthe
    Amoghavaagidhe
    Magaligondhu pathra
    Nammindha
    Nimage dhanyavaadhagala surimale

    ReplyDelete
  2. Nimma abhimaanakke dhanyavaadagalu

    ReplyDelete
  3. very nice article-loved this-all the best

    ReplyDelete