ಧಡಧಡನೆ ಮೆಟ್ಟಿಲೇರಿ ತನ್ನ ಬಟ್ಟೆಗಳನ್ನು ಸೂಟ್ ಕೇಸ್ ಗೆ ತುಂಬುತ್ತಿದ್ದ ಸುರಭಿಗೆ ತನ್ನ ಕೆನ್ನೆ ತೋಯಿಸುತ್ತಿದ್ದ ಕಣ್ಣೀರನ್ನು ತೊಡೆಯುವತ್ತಲೂ ಗಮನವಿರಲಿಲ್ಲ. ತಲೆಯಲ್ಲಿ ಇದ್ದದ್ದು ಒಂದೇ ಯೋಚನೆ " ನಾನೆಲ್ಲಿ ಎಡವಿದೆ ?". ಇದು ಮೊದಲ ಬಾರಿಯೇನಲ್ಲ . ಹಿಂದೆಯೂ ಸಾಕಷ್ಟು ಬಾರಿ ಅನಿಸಿದ್ದುಂಟು . ಆದರೆ ಈ ಮುಂಜಾನೆ ನಡೆದ ಘಟನೆ ಅವಳಿಗೆ ಬೇಸರವೆನಿಸಿತ್ತು . ಗಂಡ-ಹೆಂಡಿರ ನಡುವಿನ ಮಾಮೂಲಿ ಜಗಳವೆಂದು ಕೊಂಡದ್ದು ಅವಳ ತಂದೆ ತಾಯಿಯನ್ನು ಮೂದಲಿಸುವ ಕಡೆಗೆ ತಿರುಗಿದಾಗ ಅವಳು ತನ್ನ ತಾಳ್ಮೆ ಕಳೆದುಕೊಂಡಿದ್ದು, "ನನ್ನಪ್ಪ ಅಮ್ಮನ ಬಗ್ಗೆ ಮಾತನಾಡುವ ಹಕ್ಕು ನಿನಗಿಲ್ಲ " ಎಂದಾಗ ಗಂಡ ಎನಿಸಿಕೊಂಡವನು ಅಬ್ಬರಿಸಿದ್ದ "ಹಾಗಿದ್ದರೆ ಅಲ್ಲೇ ಹೋಗಿರು. ನಾನಿಲ್ಲಿ ನೆಮ್ಮದಿಯಾಗಿ ಇರುತ್ತೀನಿ ". ತಾನೂ "ನಿನ್ನ ಹಂಗಿನಲ್ಲಿ ನಾನೇನು ಬಾಳಬೇಕಿಲ್ಲ . ನನಗೂ ಒಂದು ಉದ್ಯೋಗ ಇದೆ. ಖಂಡಿತ ಹೋಗ್ತೀನಿ " ಎಂದು ಪ್ರತಿವಾದಿಸಿದಾಗ , ರಪ್ಪನೆ ಬಾಗಿಲು ಹಾಕಿಕೊಂಡು ಅವನು ಆಫೀಸಿಗೆ ಹೋಗಿದ್ದ.
ಸುರಭಿಗೆ ಆಶ್ಚರ್ಯವಾಗಿತ್ತು . ಸುಹಾಸ ಇಷ್ಟೊಂದು ಬದಲಾಗಿದ್ದು ಯಾವಾಗ ? ತಾಯ್ತಂದೆಯ ಮಾತನ್ನೂ , ಅವರ ಆಸೆಗಳನ್ನೂ ಧಿಕ್ಕರಿಸಿ , ಮೆಚ್ಚಿದ ಸುಹಾಸನ ಕೈ ಹಿಡಿದಾಗ ಸ್ವರ್ಗಕ್ಕೆ ಮೂರೇ ಗೇಣೆನಿಸಿತ್ತು . ಇಷ್ಟವಿಲ್ಲದ ಸೊಸೆಯೆಂದು ಅತ್ತೆ ಎಲ್ಲ ರೀತಿಯ ಕಷ್ಟ ಕೊಟ್ಟಾಗಲೂ , ಅವನ್ನೆಲ್ಲ ಗಂಡನ ಬಳಿ ಹೇಳಿ ಅವನ ಮನಸ್ಸನ್ನು ರಾಡಿಗೊಳಿಸುವುದು ಸರಿಯಲ್ಲ ಎಂದು ಸುಮ್ಮನಿದ್ದಳು. ಪ್ರೀತಿಸುವ ಗಂಡನಿದ್ದರೆ ಸಾಕು, ಯಾವುದೇ ಸಂಕಷ್ಟ ಎದುರಿಸಲು ಸಿದ್ಧ ಎಂದುಕೊಂಡಿದ್ದಳು . ತನ್ನನ್ನು ಹೆತ್ತವರು ಪಾರ್ಟಿ , ಕ್ಲಬ್ ಎಂದು ಸುತ್ತುವಾಗ , ಅಕ್ಕರೆ ತೋರುವವರಿಲ್ಲದ ಮನೆಯಲ್ಲಿ ಸಿಕ್ಕ ಅಜ್ಜಿಯ ಪ್ರೀತಿಯೇ ಅವಳಿಗೆ ಆಸರೆಯಾಗಿತ್ತು. ಅಜ್ಜಿ ತೀರಿಕೊಂಡ ನಂತರ ಅದೂ ತಪ್ಪಿಹೋಗಿತ್ತು. ಹಾಗಾಗಿ, ಅತ್ತೆಯ ಮನೆಯಲ್ಲಿಯಾದರೂ ತಾನು ಬಯಸಿದ ಪ್ರೀತಿ ಸಿಗಬಹುದೆಂದು ಆಶಿಸಿದ್ದಳು. ಇದ್ದ ನಾದಿನಿಯೂ ಮದುವೆಯಾಗಿ ದೂರದೂರಿಗೆ ಹೊರಟಾಗ , ಸುಹಾಸನನ್ನು ಬಿಟ್ಟರೆ ಬೇರಾರೂ ತನಗಿಲ್ಲವೆಂದು ಕೊರಗುತ್ತಿದ್ದಳು. ತಾನು ಕಳೆದುಕೊಂಡ ಬಾಲ್ಯ, ದಕ್ಕದ ವಾತ್ಸಲ್ಯವನ್ನು ಸುಹಾಸ ನೀಡಿ ಮಗುವಿನಂತೆ ನೋಡಿಕೊಂಡಿದ್ದ ಮದುವೆಯಾದ ಹೊಸತರಲ್ಲಿ.
ಅವರ ಇಷ್ಟಕ್ಕೆ ವಿರುದ್ಧವಾಗಿ ಸುಹಾಸನನ್ನು ಮದುವೆಯಾದಾಗ ಸಿಟ್ಟಾಗಿದ್ದ ಅಪ್ಪ-ಅಮ್ಮ ಚೊಚ್ಚಿಲ ಬಾಣಂತನ ಮಾಡಲೂ ಕರೆಯದಿದ್ದಾಗ ಸುಹಾಸ ನೊಂದು , ತನ್ನ ಸೋದರತ್ತೆಯನ್ನು ಕರೆಸಿ ಬಾಣಂತನ ಮಾಡಿಸಿದ್ದ . ಅತ್ತೆಯಂತೂ ಮಗ ಮಾತ್ರ ನನ್ನವನು, ಸೊಸೆ-ಮೊಮ್ಮಗ ತನಗೆ ಯಾರೂ ಅಲ್ಲವೇನೊ ಎಂಬಂತೆ ಇದ್ದುಬಿಟ್ಟರು . ಮಗು ಅಳುತ್ತಿದ್ದರೆ "ರಾಕ್ಷಸನ ಹಾಗೆ ಅರಚುತ್ತಾನೆ " ಎಂದು ಬಯ್ಯುತ್ತಿದ್ದರು. ಸೊಸೆ ಬೇಡ ಎನ್ನುತ್ತಿದ್ದವರು ಮಗಳ ಮದುವೆಗೆ ಹಣ ಬೇಕಾದಾಗ ಸಾಲ ತೆಗೆದುಕೊಡು ಎಂದು ಒತ್ತಾಯಿಸಿದ್ದರು. ವರದಕ್ಷಿಣೆಯ ಹಣ ಹೀಗಾದರೂ ಸಂದಾಯವಾಗಲೆಂಬ ಅಭಿಪ್ರಾಯ ಅವರದು. ಆದರೆ ಸುರಭಿ ತನ್ನ ನಾದಿನಿಯ ಮದುವೆ ಎಂದು ಭವಿಷ್ಯ ನಿಧಿಯಿಂದ ಸಾಲವನ್ನು ಸಂತೋಷದಿಂದಲೇ ತೆಗೆದುಕೊಟ್ಟಿದ್ದಳು . ಆರ್ಥಿಕ ಮುಗ್ಗಟ್ಟಿನಿಂದ ಮನೆಗೆಲಸದವಳನ್ನು ಬಿಡಿಸಿದ್ದಳು. ಕೈಮಗುವನ್ನು ಇಟ್ಟುಕೊಂಡು ಮನೆಕೆಲಸ, ಆಫೀಸಿನ ಕೆಲಸ, ಮಗುವಿನ ಕೆಲಸ ಎನ್ನುವಷ್ಟರಲ್ಲಿ ಇಡೀ ದಿನವೇ ಕಳೆದುಹೋಗಿರುತ್ತಿತ್ತು . ಈ ಮಗು ಯಾವಾಗ ದೊಡ್ಡದಾಗುತ್ತದೋ ಎನ್ನುವಷ್ಟರ ಮಟ್ಟಿಗೆ ಸಾಕಾಗಿತ್ತು. ಬೆಳಿಗ್ಗೆ ೫ ಗಂಟೆಗೆ ಎದ್ದರೆ, ತಿಂಡಿ, ಅಡಿಗೆ, ಮಗನನ್ನು ಕ್ರೆಷ್ ಗೆ ಬಿಡಲು ಅವನ ತಿಂಡಿ, ಓಟದ ಡಬ್ಬಿ ಹಾಕಿಕೊಂಡು ಸುಹಾಸನೊಂದಿಗೆ ಬೈಕ್ ನಲ್ಲಿ ಹೋಗಿ, ಮಗುವನ್ನು ಬಿಟ್ಟು, ನಂತರ ಆಫೀಸಿಗೆ ಹೋಗುತ್ತಿದ್ದಳು.
ಬೆಳಿಗ್ಗೆ ಏನೋ ಸುಹಾಸ ಆಫೀಸಿನ ಬಳಿ ಬಿಡುತ್ತಿದ್ದ. ಆದರೆ ಸಂಜೆ ಅವನು ಸಿಗುತ್ತಿರಲಿಲ್ಲ . ಇವಳು ಬಸ್ ಹಿಡಿದು, ಮಗುವನ್ನು ಕರೆದುಕೊಂಡು ಬಂದು, ರಚ್ಚೆ ಹಿಡಿಯುತ್ತಿದ್ದ ಅವನನ್ನು ರಮಿಸಿ, ತಿಂಡಿ ತಿನ್ನಿಸುವುದರೊಳಗೆ, ಹೈರಾಣಾಗಿರುತ್ತಿತ್ತು ಅವಳ ಜೇವ. ಇಷ್ಟಾದರೂ , ಅತ್ತೆ ಎನಿಸಿಕೊಂಡವರು ಸಹಾಯ ಮಾಡುವುದಿರಲಿ, "ಈಗ ಬಂದ್ಯಾ?" ಎಂತಲೂ ಕೇಳುತ್ತಿರಲಿಲ್ಲ .
ಮಗ ಸ್ಕಂದ ಒಬ್ಬನೇ ಅವಳ ಬಾಳಿನಲ್ಲಿ ಬಂದ ಆಶಾಕಿರಣವಾಗಿದ್ದ. ಅವನು ಬೆಳೆದು ಶಾಲೆಗ ಹೋಗಲಾರಂ ಭಿಸಿದಾಗ , ಸುರಭಿಗೆ ಅವನ ವಿದ್ಯಾಭ್ಯಾಸದ ಜವಾಬ್ದಾರಿ ಹೆಗಲಿಗೇರಿತು. ಸುಹಾಸ ಈ ಮೊದಲೇ ಕೈ ಕೊಡವಿಬಿಟ್ಟಿದ್ದ , "ನಾನಂತೂ ಮಗುವಿನ ಓದಿನ ಕಡೆ ಗಮನ ಕೊಡಲಾರೆ. ನಂಗೆ ಅಷ್ಟು ತಾಳ್ಮೆ ಇಲ್ಲ " ಎಂದು. ಈಗೀಗ ಸಂಜೆ ಅಡಿಗೆ ಕೆಲಸ, ಮಾರನೆಯ ದಿನದ ವೈಭವಕ್ಕೆ ತಯಾರಿ, ಕಸ ಮುಸುರೆ, ಜೊತೆಗೆ ಮಗುವಿನ ಓದಿನಿಂದ ಅವಳಿಗೆ ಸಾಕು ಸಾಕಾಗಿತ್ತು. ಅಪರೂಪಕ್ಕೊಮ್ಮೆಯಾದರೂ ಸಹಾಯ ಮಾಡುತ್ತಿದ್ದ ಸುಹಾಸ , ಅತ್ತೆ " ನೀನೇನು ಮನೆಗೆಲಸದವನೇನೊ ಅವೆಲ್ಲ ಕೆಲಸ ಮಾಡಲಿಕ್ಕೆ " ಎಂದಾಗ ಅದನ್ನೂ ನಿಲ್ಲಿಸಿದ್ದ . "ಮನೆಗೆಲಸ ಹೆಂಗಸರಿಗೇ ಸೇರಿದ್ದು . ಯಾರೂ ಮಾಡದಂಥ ಕೆಲಸ ನೀನೇನು ಮಾಡ್ತೀಯ? ನನ್ನ ಲೇಡಿ ಕಲೀಗ್ಸ್ ಇಲ್ವಾ? ಅವರೂ ನಿನ್ನಂತೆ ಎರದು ಕಡೆ ಕೆಲಸ ಮಾಡಲ್ವಾ?" ಎಂದಿದ್ದ
ಆದರೆ ಇತ್ತೀಚಿಗೆ ಮಗನೆದುರು ಜಗಳವಾಡಿದರೆ , ಬೆಳೆಯುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಆಗಬಹುದೆಂದು ಹೆದರಿ, ಸುರಭಿ ತುಟಿ ಹೊಲಿದುಕೊಂಡಿದ್ದಷ್ಟೂ , ಸುಹಾಸನ ದರ್ಪ ಹೆಚ್ಚಾಗುತ್ತಿತ್ತು. ಒಮ್ಮೆಯಂತೂ ಯಾವುದೋ ಹಣ ಬಂತೆಂದು ಕಿಟಕಿ ಬಾಗಿಲುಗಳಿಗೆ ಹೊಸ ಪರದೆಗಳನ್ನು ಕೊಂಡು ತಂದಾಗ, ಹಣವನ್ನು ಅವನ ಕೈಗೆ ಕೊಡಬೇಕಿತ್ತೆಂದು ಹಾರಾಡಿದ. "ಹೆಣ್ಣಿಗೆ ಸ್ವಾತಂತ್ರ್ಯ ಕೊಟ್ಟರೆ ಹೀಗೇ ಆಗುವುದು" ಎಂದು ಅತ್ತೆ ಒಗ್ಗರಣೆ ಹಾಕಿದರು. ತನ್ನ ಸ್ವಂತಕ್ಕಾಗಿ ಏನಾದರೂ ಕೊಳ್ಳುವ ಬದಲು ಮನೆಗಾಗಿ ಕೊಂಡು ತಂದಿದ್ದಕ್ಕೆ ಸುರಭಿಗಾಗಿ ಪಶ್ಚಾತ್ತಾಪವಾಗಿತ್ತು . ತಾನೂ ಎಲ್ಲ ಸ್ನೇಹಿತೆಯರಂತೆ ಹೋಟೆಲ್, ಸಿನಿಮಾ ಎಂದು ಸುತ್ತಿದ್ದರೆ ಚೆನ್ನಾಗಿತ್ತು. ನಾಲ್ಕು ಕಾಸು ಉಳಿದರೆ ಅನುಕೂಲವೆಂದು ತನ್ನಾಸೆಗಳನ್ನು ಕೊಂದು ಬದುಕುತ್ತಿದ್ದರೂ , ಇವರ ಮಾತಿನ ವೈಖರಿ ಹೀಗಿದೆಯಲ್ಲ ಎಂಬ ಸಂಕಟ ಬಯಲಿನಲ್ಲಿ ಚೆಲ್ಲಿದ ನೀರಿನಂತಾಗಿತ್ತು .
ನಿತ್ಯ ಮುಂಜಾನೆಯಂತೆಯೇ ಅಂದೂ ಕೂಡ . ಏನೇನೂ ಬದಲಾಗಿಲ್ಲ. ಆದರೆ ಅಂಗಿಯ ಗುಂಡಿ ಕಿತ್ತು ಹೋಗಿದೆ , ಹಾಕಿಲ್ಲವೆಂದು ಜಗಳ ತೆಗೆದಿದ್ದ ಸುಹಾಸ, "ಸುಮ್ಮನೆ ಯಾವುದಾದರೂ ಹಳ್ಳಿ ಹುಡುಗಿಯನ್ನು ಮದುವೆಯಾಗಿದ್ದರೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು" ಎಂದು ಅವನು ಗೊಣಗಾಡುವುದನ್ನು ಕೇಳಿ ಸುರಭಿ ಸಿಟ್ಟಿಗೆದ್ದಿದ್ದಳು . "ನಾನೂ ಅಷ್ಟೇ . ನೀನು ಬೇರೆ ಗಂಡಸರಂತಲ್ಲ . ನನ್ನ ಭಾವನೆಗಳಿಗೆ ಸ್ಪಂದಿಸಿ, ಗೌರವಿಸಿ, ನಿನ್ನ ಮನಸಲ್ಲಿ, ಹೃದಯದಲ್ಲಿ ನನಗೊಂದು ಉನ್ನತ ಸ್ಥಾನ ಕೊಡುತ್ತೀಯ ಅಂತ ಅಂದುಕೊಂಡಿದ್ದೆ . ಆದರೆ ನೀನೂ ಬೇರೆ ಗಂಡಸರಂತೆ ಹೊರಗೆ ದುಡಿಯುವ ಹೆಂಡತಿ ಮನೆಯಲ್ಲಿ ನಿನ್ನ ಸೇವೆಯನ್ನು ಚಾಚೂ ತಪ್ಪದೆ ಮಾಡಬೇಕು ಎಂಬ ಆಸೆಯುಳ್ಳವನು" ಎಂದಿದ್ದಳು . ಅದಕ್ಕೆ ಅವನು ಬಿಟ್ಟಗಣ್ಣುಗಳಿಂದ ಕೆಂಡ ಕಾರಿ, ಸುಡುವವನಂತೆಯೇ ನೋಡಿದ್ದ . ಸುರಭಿಗೆ ದಿನೇ ದಿನೇ ತನ್ನ ಜೀವನದಲ್ಲಿ ಪಾತಾಳಕ್ಕೆ ಕುಸಿಯುತ್ತಿದ್ದೇನೇನೊ ಅನಿಸುತ್ತಿತ್ತು . ಅಲ್ಲೇ ಇದ್ದ ಹಾಸಿಗೆಗೆ ಒರಗಿದಾಗ ತಲೆ ಸಿಡಿಯುತ್ತಿತ್ತು . ಒಂದು ಲೋಟ ಕಾಫಿಯನ್ನಾದರೂ ಮಾಡಿಕೊಂಡು ಕುಡಿಯೋಣವೆಂದರೆ ಮುಂಜಾವಿನಿಂದ ಪುರುಸೊತ್ತಿರಲಿಲ್ಲ . ಹಾಗೇ ಯೋಚಿಸುತ್ತಿದ್ದವಳಿಗೆ "ಸುರಭಿ, ತಗೋಮ್ಮಾ ಬಿಸಿ ಕಾಫಿ ಕುಡಿದು ಸುಧಾರಿಸಿಕೋ . ಇವತ್ತು ಬರಲ್ಲ ಅಂತ ಆಫೀಸಿಗೆ ಫೋನೆ ಮಾಡಿ ಹೇಳಿಬಿಡು . ನಿನ್ನ ಜೊತೆ ಸ್ವಲ್ಪ ಮಾತಾಡೋದಿದೆ " ಎನ್ನುತ್ತಾ ಮಾವ ಕಾಫಿ ಲೋಟ ಕೈಗಿತ್ತರು. ಇವಳಿಗೋ ಆಶ್ಚರ್ಯ . ಮನೆಯಲ್ಲಿ ಯಾವತ್ತೂ ಬಾಯಿ ಬಿಚ್ಚದ ಮಾವ ನನಗೆ ಕಾಫಿ ತಂದುಕೊಡುವುದೇ? "ನೀವ್ಯಾಕೆ ಮಾಡೋಕೆ ಹೋದ್ರಿ ಮಾವ? ನಾನು ಮಾಡಿಕೊಳ್ತಿದ್ದೆ " ಎನ್ನುತ್ತಾ ಕಣ್ಣೊರೆಸಿಕೊಂಡಳು.
ಮಾವ "ನಾನು ಹೀಗೆ ಹೇಳ್ತೀನಿ ಅಂತ ಬೇಸರ ಮಾಡಿಕೊಳ್ಳಬೇಡಮ್ಮ. ಈ ಜಗಳದಿಂದ ಯಾರಿಗೂ ಪ್ರಯೋಜನವಿಲ್ಲ. ನೀನು ಈ ಮನೆಯ ಮಹಾಲಕ್ಷ್ಮಿ. ಸದಾ ನಗುನಗುತ್ತಾ ಇರಬೇಕು. ಅದೇ ನನ್ನಾಸೆ. ನಾನು ಹೇಳಿದ ಹಾಗೆ ಕೇಳು. ಇನ್ನು ಮೇಲೆ ಮನೆಕೆಲಸದಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡ್ತೀನಿ . ಸೊಪ್ಪು , ತರಕಾರಿ ಕೆಲಸ ನಾನು ನೋಡ್ಕೋತೀನಿ . ನೀನು ಇಷ್ಟು ವರ್ಷ ಎಲ್ಲರಿಗಾಗಿ ಬದುಕಿದ್ದು ಸಾಕು. ಇನ್ನು ಮೇಲೆ ನಿನಗಾಗಿ ಬದುಕು. ನೀನ್ಯಾಕೆ ಸುಹಾಸ ಹೇಳಿದ್ದಕ್ಕೆಲ್ಲಾ ಕೋಲೆ ಬಸವನ ಹಾಗೆ ತಲೆ ಆಡಿಸ್ತೀಯ? ನಿನ್ನ ಅಭಿಪ್ರಾಯವನ್ನೂ ತಿಳಿಸು. ಅವನ ಯಾವುದೇ ಮಾತು ನಿನಗೆ ಹಿಡಿಸದಿದ್ದರೆ ಕೂಡಲೇ ಅದನ್ನು ಹೇಳಿಬಿಡು . ಇಷ್ಟು ವರ್ಷಗಳಾದರೂ ಅವನ ಇಷ್ತಾನಿಷ್ಟಗಳಂತೆ ನಡೆಯುತ್ತಿದ್ದೆಯಲ್ಲ ? ಅವನು ನಿನ್ನ ಭಾವನೆಗಳಿಗೆ ಕೊಟ್ಟ ಬೆಲೆ ಏನು? ನಿನಗೆ ಸ್ವಂತ ಆಸೆಗಳೇ ಇಲ್ವಾಮ್ಮಾ? ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ಎಲ್ಲವನ್ನೂ ಸಹಿಸಿಕೊಳ್ಳುತ್ತೀಯಲ್ಲ , ಅದರಿಂದಾಗುವ ಅನಾಹುತ ಗೊತ್ತಾಮ್ಮಾ? ನಿನ್ನ ಮಗ ಅಪ್ಪ ಮಾಡುತ್ತಿರುವುದು ಸರಿ ಎಂದು ತಿಳಿದು, ಮುಂದೆ ಮತ್ತೊಬ್ಬ ಸುಹಾಸ ಆಗುತ್ತಾನೆ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಅವನು ಕಲಿಯೋದಿಲ್ಲ. ನೋಡು ಇನ್ನು ಮೇಲೆ ನೀನೂ ಆಗಾಗ ಸ್ನೇಹಿತೆಯರೊಂದಿಗೆ ಹೊರಗೆ ಹೋಗಿ ಬಾ. ಸ್ವಲ್ಪ ವ್ಯವಹಾರ ಜ್ಞಾನ ಬೆಳೆಸಿಕೋ ತಾಯಿ . ಸಂಬಳ ಪೂರಾ ತಂದುಕೊಟ್ಟು ಖರ್ಚಿಗೆಂದು ಅವನ ಮುಂದೆ ನಿಲ್ಲುವ ಬದಲು, ನಿನ್ನ ಖರ್ಚಿಗೆಂದು ಸ್ವಲ್ಪ ಉಳಿಸು. ಸುಹಾಸ ನನ್ನ ಮಗನೇ ಇರಬಹುದು. ಆದರೆ ನೀನು ಸ್ವಲ್ಪ ಹುಷಾರಾಗಿದ್ದಿದ್ರೆ , ಅವನು ನಿನ್ನನ್ನು ಇಷ್ಟೊಂದು ಏಮಾರಿಸಲು ಆಗ್ತಿರಲಿಲ್ಲ . ನಿನ್ನ ಬ್ಯಾಂಕ್ ಖಾತೆಯಲ್ಲೂ ಅಷ್ಟಿಷ್ಟು ಹಣ ಇರ್ತಿತ್ತು , ಈಗ ನೀನು ತವರು ಮನೆಗೆ ಹೋಗಿ ಏನು ಸಾಧಿಸಿದಂತಾಗುತ್ತೆ ? ಮೆಚ್ಚಿ ಮದುವೆಯಾದವರು ನೇವು. ಈಗ ಒಬ್ಬರನ್ನೊಬ್ಬರು ನೋಡಿದರೆ ಬೆಚ್ಚಿ ಬೀಳುತ್ತೀರಲ್ಲ . ನಾನು ಹೇಳಿದ್ದನ್ನು ಯೋಚನೆ ಮಾಡು. ನನ್ನ ಪಾಲಿಗೆ ನೀನು ಈ ಮನೆ ಸೊಸೆ ಅಲ್ಲ, ಮಗಳು" ಅನ್ನುತ್ತಾ ಹೊರಗೆ ಹೋದರು. ಸುರಭಿಗೆ ಮಾವನವರ ಮಾತಿನಲ್ಲಿ ಸತ್ವವಿದೆ ಎಂದು ಅರಿವಾಯಿತು.
"ಹೌದು . ಈ ಸಮಾಜದಲ್ಲಿ ಬಾಳಬೇಕೆಂದರೆ ಕೊಂಚವಾದರೂ ಸ್ವಾರ್ಥಿಯಾಗಬೇಕು. ಮಾವ ಹೇಳಿದ್ದು ನಿಜ. ಇಲ್ಲದಿದ್ದರೆ ಬಗ್ಗಿರುವ ಬೆನ್ನಿಗೆ ಗುದ್ದೊಂದರಂತೆ ಬೀಳುತ್ತಲೇ ಇರುತ್ತವೆ. ಜೀವನ ಎಂದರೆ ಬರೀ ಗಂಡ-ಮನೆ-ಮಕ್ಕಳು ಅಷ್ಟೇ ಅಲ್ಲ. ನನಗಾಗಿ, ಕೇವಲ ನನಗಾಗಿ ಕೆಲ ಸಮಯ ನಿಗದಿ ಪಡಿಸಿಕೊಳ್ಳಬೇಕು. ಮರೆತಂತಾಗಿರುವ ನನ್ನ ಹವ್ಯಾಸಗಳಿಗೆ ಮರುಜೀವ ಕೊಡಬೇಕು. ನಾನು ಬದಲಾಗಬೇಕು. ಬದಲಾಗಲೇ ಬೇಕು " ಹೀಗೆ ಸುರಭಿಯ ಯೋಚನಾಲಹರಿ ಸಾಗಿತ್ತು. ಇವೆಲ್ಲ ವಾಸ್ತವಕ್ಕೆ ಒಮ್ಮೆ ಹೌದೆನಿಸಿದರೆ ಮತ್ತೊಮ್ಮೆ ಬೇಡವೆನಿಸುತ್ತಿತ್ತು. ಆಫೀಸಿಗೆ ಫೋನಾಯಿಸಿ ೨ ಗಂಟೆ ತಡವಾಗಿ ಬರುತ್ತೇನೆ ಎಂದು ತಿಳಿಸಿದಳು. ಸ್ಕಂದನ್ನನ್ನು ಕ್ರೆಷ್ ಗೆ ಬಿಟ್ಟು ಆಫೀಸಿನ ದಾರಿ ಹಿಡಿದಳು. ನಿತ್ಯವೂ ನೀರು ಸೋಸಿದಂತೆ ನಡೆಯುತ್ತಿದ್ದ ಕೆಲಸವಿಂದು ವೇಗವಾಗಿ ಸಾಗಲಿಲ್ಲ. ಸಂಜೆ ಹೊರಡುವ ಸಮಯವಾದರೂ ಕೆಲಸ ಮುಗಿಯಲಿಲ್ಲ. ಸುಹಾಸನಿಗೆ ಫೋನ್ ಮಾಡಿ "ಸಂಜೆ ಮೀಟಿಂಗ್ ಇದೆ. ಮಗನನ್ನು ಕ್ರೆಷ್ ನಿಂದ ಮನೆಗೆ ಕರೆದುಕೊಂಡು ಹೋಗಿ " ಎಂದಷ್ಟೇ ಹೇಳಿ , ಅವನ ಪ್ರತಿಕ್ರಿಯೆಗೂ ಕಾಯದೆ ಫೋನ್ ಇಟ್ಟಳು. ಮತ್ತೆ ಸುಹಾಸ ಎಷ್ಟೇ ಬಾರಿ ಫೋನ್ ಮಾಡಿದರೂ ಅಟೆಂಡರ್ ರಾಮಯ್ಯ "ಮೇಡಂ ಮೀಟಿಂಗ್ ನಲ್ಲಿದ್ದಾರೆ " ಎಂಬ ಉತ್ತರ ಕೊಟ್ಟರು.
ಸುಹಾಸ "ಏನೋ ಬದಲಾಗಿದೆ" ಎಂದುಕೊಂಡು, ತನ್ನ ಸಂಜೆಯ ಸುತ್ತಾಟವನ್ನು ಮೊಟಕುಗೊಳಿಸಿ, ಮಗನನ್ನು ಕರೆದುಕೊಂಡು ಬರಲು ಅನುವಾದ. ಸುರಭಿ ಎಲ್ಲರಿಂದ ಮಾನಸಿಕವಾಗಿ ದೂರಾಗಿ ನಿರ್ಲಿಪ್ತಳಾಗಿದ್ದಳು - ತಾವರೆ ಎಳೆಯ ಮೇಲಿನ ನೀರಿನ ಹನಿಯನ್ತೆ. ಮನಸ್ಸಿನ ಮೇಲೆ ಹರಡಿದ್ದ ಮಸಕು ಹರಿಯತೊಡಗಿತ್ತು. ಆಫೀಸಿನಿಂದ ಹೊರ ಬಂದಾಗ ಸಂಜೆಯ ಸೊಬಗು ಅವಳ ಮನಸ್ಸನ್ನು ಸಂಪೂರ್ಣವಾಗಿ ಸೆರೆ ಹಿಡಿದಿತ್ತು.
- ತಾರಾ ಶೈಲೇಂದ್ರ